ಯಾರೇ ಆಗಲಿ ತಾವು ಕಲಿತ ವಿದ್ಯೆಗೆ ತಕ್ಕ ಕೆಲಸ ಮಾಡಬೇಕು, ಕೈ ತುಂಬ ಹಣ ಸಂಪಾದನೆ ಮಾಡಬೇಕು ಎಂಬ ಕನಸನ್ನು ಇಟ್ಟುಕೊಳ್ಳುವುದು ಸಹಜ. ತಮ್ಮ ವಿದ್ಯೆಗೆ ಸರಿಯಾದ ಕೆಲಸ ಸಿಗದಿದ್ದಾಗ ಬದುಕು ನಡೆಸಲು ಪರ್ಯಾಯ ಮಾರ್ಗಗಳನ್ನು ಹುಡುಕುವ ಬದಲು ನಿರುದ್ಯೋಗಿಗಳಾಗಿಯೇ, ಸರ್ಕಾರವನ್ನು ದೂಷಿಸುತ್ತಾ ಕಾಲ ಹರಣ ಮಾಡುವುದನ್ನೂ ಅಲ್ಲಗಳೆಯುವಂತಿಲ್ಲ. ಬೇಕಾದ ಕೆಲಸ ಸಿಗದೇ ಹೋದರೆ, ಸಿಕ್ಕ ಕೆಲಸವನ್ನಾದರೂ ಮಾಡುತ್ತೇನೆ ಎನ್ನುವ ಮನೋಭಾವ ಹೊಂದಿರುವವರ ಸಂಖ್ಯೆ ನಮ್ಮಲ್ಲಿ ಕಡಿಮೆ ಎನ್ನಬಹುದೇನೋ. ಅದು ನಮ್ಮ ಸ್ಟೇಟಸ್ ಅನ್ನು ಕಡಿಮೆ ಮಾಡುತ್ತದೆ ಎನ್ನುವ ಭಾವ ಕೆಲವರನ್ನು ನಿರುದ್ಯೋಗಿಗಳಾಗಿಯೇ ಇರುವಂತೆ ಮಾಡುತ್ತದೆ. ಪ್ರಪಂಚವೇ ಹೀಗಿರುವಾಗ ಗೋವಾದ ಈ ಹುಡುಗನ ಸಾಧನೆ ಮಾತ್ರ ನಮ್ಮನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಏನು ಸಾಧನೆ ಎಂದಿರಾ. ಅದಕ್ಕೆ ಇಲ್ಲಿದೆ ಉತ್ತರ.
ಹೆಸರು ನಿತೇಶ್ ಬೋರ್ಕರ್. 28 ವರ್ಷದ ಯುವಕ. ಗೋವಾದ ಮಧ್ಯಮ ವರ್ಗದ ರೈತ ಕುಟುಂಬಕ್ಕೆ ಸೇರಿದವರು. ಓದಿದ್ದು ಇಂಜಿನಿಯರಿಂಗ್. ಆ ಕ್ಷೇತ್ರದಲ್ಲಿ ಕೆಲಸವನ್ನೂ ಗಿಟ್ಟಿಸಿಕೊಳ್ಳುತ್ತಾರೆ. ಸಂಪಾದನೆಗೇನೂ ಕೊರತೆ ಇಲ್ಲ ಎಂಬಾಗಲೇ ಅವರೊಳಗೆ ತಾವೂ ಕೃಷಿಕನಾಗಬೇಕು ಎನ್ನುವ ಛಲ ಹುಟ್ಟಿದ್ದು. ಮನಸ್ಸು ಪರಿವರ್ತನೆ ಬಯಸಿದ ಕೂಡಲೇ ವೃತ್ತಿಯನ್ನು ಬಿಟ್ಟು, ಪ್ರವೃತ್ತಿಯನ್ನೇ ವೃತ್ತಿಯನ್ನಾಗಿಸುವಲ್ಲಿ ಪಣ ತೊಟ್ಟು, ಆ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಆ ಮೂಲಕ ಕೆಲಸವಿಲ್ಲದೆ ಕೈಕಟ್ಟಿ ಕೂರುವ, ನಿರುದ್ಯೋಗದ ಬಿಸಿಗೆ ಬೆಂದಿರುವ ಯುವಕರಿಗೆ ಹೀಗೂ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅಂದ ಹಾಗೆ ಇವರು ಬರಡು ನೆಲದಲ್ಲಿ ಹಳದಿ ಕಲ್ಲಂಗಡಿ ಬೆಳೆಯುವ ಮೂಲಕ ತಮ್ಮ ಸುತ್ತಮುತ್ತಲಿನ ಪ್ರಗತಿಪರ ಕೃಷಿಕರಿಗೂ ಅಚ್ಚರಿ ಮೂಡಿಸಿದ್ದಾರೆ.
ಕೃಷಿಯಲ್ಲಿನ ಆಸಕ್ತಿಯಿಂದ ಕೆಲಸ ಬಿಟ್ಟ ಇವರು ಆರಂಭದಲ್ಲಿ ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಜಾಗದಲ್ಲಿಯೇ ತರಕಾರಿ, ಅಕ್ಕಿ ಬೆಳೆಸುವುದಕ್ಕೆ ಮುಂದಾಗುತ್ತಾರೆ. ಆದರೆ ಇವರ ಮನೆಯ ಹತ್ತಿರವೇ ಸಮುದ್ರವಿದ್ದು, ಉಪ್ಪು ನೀರಿನ ಕಾರಣ ಇವರಿಗೆ ಈ ಕೃಷಿ ಕೈ ಕೊಡುತ್ತದೆ. ಆದರೂ ಎದೆಗುಂದದ ಇವರು ಏನಾದರೂ ಹೊಸತನವನ್ನು ಪ್ರಯತ್ನಿಸುವ ನಿಟ್ಟಿನಲ್ಲಿ ಯೋಚನೆ ಮಾಡುತ್ತಾರೆ. ಆಗ ಅವರ ಗೆಳೆಯರೊಬ್ಬರು ಅವರಿಗೆ ಹಳದಿ ಕಲ್ಲಂಗಡಿ ಹಣ್ಣಿನ ಕೃಷಿಯ ಬಗ್ಗೆ ಮಾಹಿತಿ ನೀಡುತ್ತಾರೆ. ಉಪ್ಪು ನೀರಿನ ಕಾರಣದಿಂದಾಗಿ ತಮ್ಮ ಜಾಗದಲ್ಲಿಯೇ ಅದನ್ನು ಬೆಳೆಯುವಂತಿಲ್ಲ. ಅದಕ್ಕಾಗಿ ತಮ್ಮ ಮನೆಗಿಂತ ಕೊಂಚ ದೂರದಲ್ಲಿಯೇ ಒಬ್ಬರಿಂದ ಸ್ವಲ್ಪ ಖಾಲಿ ಜಾಗವನ್ನು ಲೀಸ್ಗೆ ಪಡೆದು ಅಲ್ಲಿ ಕೃಷಿ ಆರಂಭಿಸುತ್ತಾರೆ. ಆದರೆ ಅದರಲ್ಲಿ ಸುಮಾರು 40 ಸಾವಿರದಷ್ಟು ನಷ್ಟವನ್ನು ಅನುಭವಿಸುತ್ತಾರೆ. ಆದರೂ ಎದೆಗುಂದದ ಇವರು ಮತ್ತೆ ತಮ್ಮ ಜಾಗದಲ್ಲಿಯೇ ಕಲ್ಲಂಗಡಿ ಬೆಳೆಯುವುದಕ್ಕೆ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ.
ತಮ್ಮ ಮನೆಯ ಮೇಲಿನ ಗೇರು ತೋಟದಲ್ಲಿಯೇ ಕಲ್ಲಂಗಡಿ ಬೆಳೆಸುವುದಕ್ಕೆ ಮುಂದಾಗುತ್ತಾರೆ. ಅದರ ಬೀಜಗಳನ್ನು ಗುಡ್ಡದ ಮಣ್ಣಿನಲ್ಲಿಯೇ ಬಿತ್ತುವುದಿಲ್ಲ. ಬದಲಾಗಿ ಸುಮಾರು 50 ಚೀಲಗಳಲ್ಲಿ ಮಣ್ಣು ತುಂಬಿ, ಅದಕ್ಕೆ ದನದ ಸೆಗಣಿ, ಮರದ ಎಲೆಗಳನ್ನು ಹಾಕಿ ಸಂಪೂರ್ಣ ಸಾವಯವ ರೀತಿಯಲ್ಲಿಯೇ ಬೆಳೆ ಬೆಳೆಯುವುದಕ್ಕೆ ಕಾರ್ಯ ಯೋಜನೆಗಳನ್ನು ರೂಪಿಸುತ್ತಾರೆ. ಹೀಗೆ ಮಣ್ಣಿನ ಫಲವತ್ತತೆಗೆ ಬೇಕಾದ ಕ್ರಮ ಕೈಗೊಂಡು ನಂತರ ಆ ಬ್ಯಾಗ್ಗಳಲ್ಲಿಯೇ ಬೀಜಗಳನ್ನು ಬಿತ್ತುತ್ತಾರೆ. ಸೋಡಾ ಬಾಟಲಿಗಳನ್ನು ಬಳಸಿ ಹನಿ ನೀರಾವರಿ ವ್ಯವಸ್ಥೆ ಮಾಡಿ ಮಣ್ಣಿನ ತೇವಾಂಶ ಕಾಪಾಡುವುದಕ್ಕೂ ಕ್ರಮಗಳನ್ನು ಕೈಗೊಳ್ಳುತ್ತಾರೆ. ಇವರ ಈ ಕೆಲಸವನ್ನು ನೋಡಿ ಅಕ್ಕಪಕ್ಕದ ರೈತರೆಲ್ಲರೂ ಇವನಿಗೇನು ಹುಚ್ಚು ಎಂದು ಆಡಿಕೊಳ್ಳುತ್ತಾರೆ. ಇದ್ಯಾವುದಕ್ಕೂ ಎದೆಗುಂದದ ನಿತೇಶ್ ಕಾಯಕವೇ ಕೈಲಾಸ ಎಂಬಂತೆ ಕೆಲಸ ಮಾಡುತ್ತಾರೆ.
ಇದಕ್ಕೆ ಪ್ರತಿಫಲ ಎಂಬಂತೆ ಚೆನ್ನಾಗಿ ಬೆಳೆಯೂ ಬರುತ್ತದೆ. ಇನ್ನು ಇದನ್ನು ಕಾಡು ಪ್ರಾಣಿಗಳು, ಪಕ್ಷಿ, ಕೀಟಗಳಿಂದ ಕಾಪಾಡುವ ಕೆಲಸ. ಅದನ್ನೂ ಸಮರ್ಥವಾಗಿ ನಿಭಾಯಿಸುತ್ತಾರೆ. ಕಾಡು ಪ್ರಾಣಿಗಳು ಸುಳಿಯದಂತೆ ಕೃಷಿಗೆ ಬಳಸಿದ ಜಾಗದ ಸುತ್ತಲೂ ಬೂದಿ ಹಾಕುತ್ತಾರೆ. ಅದರೊಂದಿಗೆ ಪಕ್ಷಿಗಳ ಹಾವಳಿ ತಪ್ಪಿಸಲು ಧೂಳು ಮಿಶ್ರಿತ ಮರದ ಹುಡಿಗಳನ್ನು ಸ್ಪಿಂಕ್ಲರ್ ಮೂಲಕ ಹಾಯಿಸುತ್ತಾರೆ. ಇದೇ ವೇಳೆ ಅಕ್ಕ ಪಕ್ಕದ ರೈತರ ಕೃಷಿ ತೋಟ ಪ್ರಾಣಿ, ಪಕ್ಷಿಗಳ ಹಾವಳಿಯಿಂದ ಹಾಳಾಗುತ್ತದೆ. ತದನಂತರದಲ್ಲಿ ಇವರ ಈ ಸಾಧನೆ ನೋಡಿ ಅವರನ್ನು ವ್ಯಂಗ್ಯವಾಡಿದ್ದ ಕೃಷಿಕರೂ ಇವರ ತೋಟಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳುತ್ತಿದ್ದಾರಂತೆ. ಇನ್ನು ಇವರು 4000 ರೂ ಗಳನ್ನಷ್ಟೇ ಖರ್ಚು ಮಾಡಿ ಈ ಹಣ್ಣು ಬೆಳೆದಿದ್ದಾರೆ, ಆದರೆ ಸುಮಾರು 30,000 ರೂ ಪಾಯಿಗಳವರೆಗೆ ಲಾಭ ಗಳಿಸಿದ್ದಾರೆ. ಆ ಮೂಲಕ ಹೀಗೂ ಸಾಧನೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇನ್ನು ಈ ಹಣ್ಣುಗಳ ಬಗ್ಗೆ ಹೇಳುವುದಾದರೆ ಜೇನು ಮತ್ತು ಸಕ್ಕರೆಯಂತೆ ಸಿಹಿ ಇದೆ. ಕೆಂಪು ಕಲ್ಲಂಗಡಿ ಹಣ್ಣಿಗಿಂತ ಹೆಚ್ಚು ರುಚಿ ಇದೆ. ಹೊರ ಮೈ ಮಾಮೂಲಿ ಕಲ್ಲಂಗಡಿಯಂತೆಯೇ ಇದ್ದರೂ ಇದರ ರುಚಿಗೆ ಮನ ಸೋಲದವರೇ ಇಲ್ಲ.
ಇನ್ನು ಇವರ ಈ ಸಾಧನೆಯನ್ನು ಗಮನಿಸಿ ಈವರೆಗೆ ಸುಮಾರು 2000 ಅಧಿಕ ಮಂದಿ ಇವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ನಾರ್ಥ್ ಗೋವಾದ ಅಗ್ರಿಕಲ್ಚರ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಏಜೆನ್ಸಿ, ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸೋರ್ಸಸ್, ಎಟಿಎಂಎ ಕೂಡ ಇವರನ್ನು ಸಂಪರ್ಕಿಸಿ ಈ ಕುರಿತಾದ ಡೆಮೋ ಪ್ರದರ್ಶಿಸುವಂತೆಯೂ ಮನವಿ ಮಾಡಿದೆ.
ಕೃಷಿಯ ಬಗ್ಗೆ ಯಾವುದೇ ವಿಶ್ವ ವಿದ್ಯಾಲಯದಲ್ಲಿ ಅದ್ಯಯನ ಮಾಡದೆ ಇದ್ದರೂ ಇವರಿಗೆ ಪ್ರಕೃತಿಯೇ ದೊಡ್ಡ ಗುರು. ಆ ಗುರುವನ್ನು ಒಪ್ಪಿಕೊಂಡರೆ ಎಲ್ಲವನ್ನೂ ಸಾಧಿಸುವುದು ಸಾಧ್ಯ. ಜೊತೆಗೆ ಪ್ರಕೃತಿಯ ಜೊತೆಗೆ ಬೆಳೆಯುತ್ತಾ, ಬೆರೆಯುತ್ತಾ ಹೋದಂತೆ ಅದೇ ನಮ್ಮನ್ನು ಪರಿಪಕ್ವವನ್ನಾಗಿ ಮಾಡುವುದಾಗಿ ಇವರು ತಿಳಿಸಿದ್ದಾರೆ. ಇವರಿಂದಾಗಿ ಗೋವಾದ ಅನೇಕ ಮಂದಿ ಕೃಷಿ ಮಾಡುವತ್ತ ಉತ್ಸಾಹ ತೋರಿದ್ದಾರೆ. ಏನೇ ಇರಲಿ ಮನಸ್ಸಿದ್ದರೆ ಮಾರ್ಗವಿದೆ. ಕಷ್ಟಪಟ್ಟು ಕೆಲಸ ಮಾಡುವ ಮನಸ್ಸಿದ್ದವನಿಗೆ ಸಾಧನೆಯ ಹಾದಿ ಸುಗಮ ಎಂಬುದನ್ನು ತೋರಿಸಿಕೊಟ್ಟ ನಿತೇಶ್ ಯುವ ಜನಾಂಗಕ್ಕೆ ಮಾದರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.