ವಿಶ್ವದ ಮೂಲೆ ಮೂಲೆಯಲ್ಲಿಯೂ ಆರ್ಎಸ್ಎಸ್ ಸಂಘಟನೆ ಬೇರು ಬಿಟ್ಟಿದೆ. ದೇಶದೆಲ್ಲೆಡೆ 70000 ಶಾಖೆಗಳು ಪ್ರತಿನಿತ್ಯವೂ ಕೆಲಸ ದೇಶ ಕಟ್ಟುವ ಕೈಂಕರ್ಯದಲ್ಲಿ ತೊಡಗಿವೆ. ಸುಮಾರು 4000 ದಷ್ಟು ಪ್ರಚಾರಕರು ದೇಶವನ್ನೇ ಮನೆಯೆಂದು ಸ್ವೀಕರಿಸಿ, ಸಂಘವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಪ್ರತಿಯೊಂದು ಮೂಲೆಯಲ್ಲಿಯೂ ಅದೆಷ್ಟೋ ಸಂಘದ ಕಾರ್ಯಕರ್ತರು ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಒಟ್ಟಿನಲ್ಲಿ ದೇಶ ಸೇವೆಯಲ್ಲಿ ಹೊಳೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ಹೆಮ್ಮರವಾಗಿ ಬೆಳೆದಿದೆ. ಈ ಮರದ ಬೆಳವಣಿಗೆಗೆ ಕಾರಣರಾದ, ಸಂಘದ ಎರಡನೇ ಸರಸಂಘಚಾಲಕ, ಗುರೂಜೀ ಎಂದೇ ಪ್ರಖ್ಯಾತರಾಗಿರುವ ಮಾಧವ ಸದಾಶಿವ ಗೊಳ್ವಲ್ಕರ್ ಅವರ 114ನೇ ಜನುಮ ದಿನ ಇಂದು.
1906 ರ ಫೆಬ್ರವರಿ 19 ರಂದು ಮಹಾರಾಷ್ಟ್ರದ ರಾಮ್ಟೇಕ್ ನಲ್ಲಿ ಜನಿಸಿದ ಗುರೂಜಿ 1940 ರಲ್ಲಿ ಆರ್ಎಸ್ಎಸ್ನ ಮುಖ್ಯಸ್ಥರಾಗಿ ಜವಾಬ್ದಾರಿ ತೆಗೆದುಕೊಂಡು ತಮ್ಮ ಮರಣದ ವರೆಗೂ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 1930 ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿನ ವಿದ್ಯಾರ್ಥಿಗಳು ಅವರನ್ನು ಗುರೂಜಿ ಎಂದೇ ಕರೆಯುತ್ತಿದ್ದು, ಆ ಹೆಸರು ಇಂದಿಗೂ ಹಸಿರಾಗಿ ಸಂಘದ ಯುವ ಮನಗಳಲ್ಲಿ ಪೂಜೆಗೊಳಪಡುತ್ತಿದೆ. ಈ ಸಂದರ್ಭದಲ್ಲಿಯೇ ಆರ್ಎಸ್ಎಸ್ನ ಪ್ರಥಮ ಶಾಖೆಯನ್ನು ಆರಂಭಿಸಿದ್ದು. ಈ ವೇಳೆ ಇವರಿಗೆ ಸಹಕರಿಸಿದ ಇನ್ನೊಬ್ಬ ವ್ಯಕ್ತಿ ಭೈಯ್ಯಾಜಿ ದಾಣೆ, ನಂತರ 1940 ರಲ್ಲಿ ಗುರೂಜಿ ಅವರೇ ಆರ್ಎಸ್ಎಸ್ನ ಕಾರ್ಯಗಳನ್ನು ನೋಡಿಕೊಳ್ಳುವುದಕ್ಕೆ ತೊಡಗಿಸಿಕೊಂಡಾಗ ಸಂಘದ ಸಹಕಾರ್ಯವಾಹ (ಜನರಲ್ ಸೆಕ್ರೇಟರಿ) ಆಗಿ ಜವಾಬ್ದಾರಿ ತೆಗೆದುಕೊಂಡಿದ್ದರು. ನಂತರದ ದಿನಗಳಲ್ಲಿ ಸಂಘದ ಕುರಿತ ಪ್ರಚಾರ ಕಾರ್ಯಕ್ಕಾಗಿ 1934ರಲ್ಲಿ ಹೆಡ್ಗೇವಾರ್ ಅವರ ಸೂಚನೆಯಂತೆ ಮುಂಬೈಗೆ ತೆರಳಿದರು.
ನಂತರ 1935 ರಲ್ಲಿ ಮಹಾರಾಷ್ಟ್ರದ ಅಕೋಲದಲ್ಲಿ ಸಂಘದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. 1939 ರ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಹೆಡ್ಗೇವಾರ್ ಅವರು ಇವರನ್ನು ಸಂಘದ ಜನರಲ್ ಸೆಕ್ರೆಟರಿಯಾಗಿ ನೇಮಿಸಿರುವುದಾಗಿ ತಿಳಿಸುತ್ತಾರೆ. ಈ ಸಮಯದಲ್ಲಿ ಕೇವಲ ಹತ್ತು ತಿಂಗಳುಗಳಲ್ಲಿಯೇ ಸಂಘ ಮಧ್ಯಪ್ರದೇಶ, ಪಂಜಾಬ್, ದೆಹಲಿ, ಕರಾಚಿ, ಮಹಾರಾಷ್ಟ್ರ, ಪಟ್ನಾ ಸೇರಿದಂತೆ ಇನ್ನೂ ಕೆಲವೆಡೆ ಬೆಳಕಿಗೆ ಬರುತ್ತದೆ. ಹೆಡ್ಗೇವಾರ್ ನಿಧನದ ನಂತರ ಇವರ ಈ ಕಾರ್ಯವೈಖರಿಗೆ ಮೆಚ್ಚಿ ಸಂಘದ ಹಿರಿಯರೆಲ್ಲರೂ ಸಂಘದ ಎರಡನೇ ಸರಸಂಘಚಾಲಕ್ ಆಗಿ ಇವರನ್ನು ನೇಮಿಸುತ್ತಾರೆ. ಹಿರಿಯರ ಆಕಾಂಕ್ಷೆಯಂತೆಯೇ ಸಂಘವನ್ನು ಕಟ್ಟಿ ಬೆಳೆಸಿದ ಇವರು ಇಂದಿಗೂ ಆರ್ಎಸ್ಎಸ್ನ ಪೂಜನೀಯರಾಗಿ ಗುರುತಿಸಲ್ಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಚಾರಕ್ ಆಗಿ ದೇಶಾದ್ಯಂತ ಸಂಚರಿಸಿ ಯುವ ಮನಗಳನ್ನು ಕಟ್ಟಿದ್ದಾರೆ. ಅಲ್ಲದೆ ಸಂಘಗಳ ಬಲವರ್ಧನೆಗಾಗಿ ಯುವಕರನ್ನೂ ಪ್ರಚಾರಕರನ್ನಾಗಿ ನೇಮಿಸಿಕೊಳ್ಳುವ ಕಾರ್ಯವನ್ನು ಮಾಡಿದ್ದಾರೆ. ಆ ಮೂಲಕ ಸಂಘವನ್ನು ಇನ್ನಷ್ಟು ಬಲಪಡಿಸುವ, ಮತ್ತಷ್ಟು ವ್ಯಾಪಿಸುವಂತೆ ಮಾಡುವಲ್ಲಿಯೂ ಇವರನ್ನು ನಾವು ನೆನಪಿಸಿಕೊಳ್ಳಲೇ ಬೇಕು.
ಇವರ ಪರಿಶ್ರಮದಿಂದ 1942 ರಲ್ಲಿ ಸುಮಾರು 48 ಯುವಕರು ಪ್ರಚಾರಕರಾಗಿ ಸೇರಿಕೊಂಡಿದ್ದರು. ಇವರಲ್ಲಿ ಹೆಚ್ಚಿನವರು ವಿದ್ಯಾವಂತರೇ ಎಂಬುದು ಮತ್ತೊಂದು ವಿಶೇಷ. 52 ಮಂದಿ ಪ್ರಚಾರಕರಾಗಿ ಅಮೃತಸರದಲ್ಲಿ ಸಂಘಕ್ಕೆ ಕೈ ಜೋಡಿಸಿದ್ದಾರೆ. ಭಾರತ ಬ್ರಿಟಿಷರ ವಶದಲ್ಲಿರುವಾಗಲೇ ದೇಶದ ಹಳ್ಳಿ ಹಳ್ಳಿಗಳಿಗೂ ಸಂಘವನ್ನು ಪರಿಚಯಿಸಿದ ಮತ್ತು ಯುವಕರು ಇದರಲ್ಲಿ ಪ್ರೇರಿತರಾಗುವಂತೆ ಮಾಡಿದ ವ್ಯಕ್ತಿ ಶಕ್ತಿಯಾಗಿಯೂ ಗುರೂಜಿ ಮಾನ್ಯರು. ಇಂದು ಆರ್ಎಸ್ಎಸ್ನ ಎಲ್ಲಾ ನಾಯಕರೂ ದೇಶಾದ್ಯಂತ ಪ್ರವಾಸ ಮಾಡಿ ಸಂಘದ ಆಗುಹೋಗುಗಳನ್ನು ಗಮನಿಸಿಕೊಳ್ಳುತ್ತಿದ್ದಾರೆ ಎಂದರೆ, ಅದಕ್ಕೆ ತಳಪಾಯವನ್ನು ಹಾಕಿಕೊಟ್ಟವರೂ ಗುರೂಜಿ. ಭಾರತ ವಿಭಜನೆಯ ಸಂದರ್ಭದಲ್ಲಿ ಪಂಜಾಬ್ ಅನ್ನು ಭಾರತದಲ್ಲಿಯೇ ಉಳಿದುಕೊಳ್ಳುವಂತೆ ಮಾಡುವಲ್ಲಿಯೂ ಸಂಘದ ಪಾತ್ರ ಅಪಾರ.
ಇನ್ನು ಮಹಾತ್ಮಾ ಗಾಂಧಿಯವರ ಮರಣದ ದಿನದಂದು ಎಲ್ಲಾ ಶಾಖೆಗಳಿಂದಲೂ ಅವರಿಗೆ ಗೌರವ ನಮನಗಳನ್ನು ಸಲ್ಲಿಸುವಂತೆ ಗುರೂಜಿ ಸೂಚಿಸಿದ್ದರು. ಅಲ್ಲದೆ 13 ದಿನಗಳ ಕಾಲ ಸಂಘ ಯಾವೂದೇ ಕಾರ್ಯಕ್ರಮಗಳನ್ನು ನಡೆಸದಂತೆಯೂ ಸೂಚನೆಗಳನ್ನು ನೀಡುವ ಮೂಲಕ ಗಾಂಧೀಜಿ ಅವರಿಗೆ ಶ್ರದ್ಧಾಂಜಲಿ ಅರ್ಪಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಗುರೂಜಿ ಅವರನ್ನು ಕೇಂದ್ರ ಸರಕಾರದ ಅದೇಶದಂತೆ ಫೆಬ್ರವರಿ 2 ರಂದು ಬಂಧಿಸಲಾಯಿತು. ಫೆ.4 ರಂದು ಸುಮಾರು 20000 ಸ್ವಯಂಸೇವಕರ ಬಂಧನವೂ ನಡೆಯಿತು. ನಂತರ ಆಗಸ್ಟ್ 6 ರಂದು ಅವರನ್ನು ನಾಗ್ಪುರದಲ್ಲಿ ಕಾರ್ಯಚಟುವಟಿಕೆಗಳನ್ನು ನಡೆಸದಂತೆ ಷರತ್ತುಗಳನ್ನು ವಿಧಿಸಿ ಬಿಡುಗಡೆ ಮಾಡಲಾಯಿತು. ನಂತರ ನವೆಂಬರ್ 12, 1948 ರಂದು ದೆಹಲಿಯಲ್ಲಿ ಮತ್ತೆ ಬಂಧಿಸಲಾಯಿತು. ಈ ಸಂದರ್ಭದಲ್ಲಿಯೇ ಗುರೂಜಿ 45 ದಿನಗಳ ಸತ್ಯಾಗ್ರಹಕ್ಕೆ ಕರೆ ನೀಡುತ್ತಾರೆ. ಈ ವೇಳೆ 77000ದಷ್ಟು ಸ್ವಯಂಸೇವಕರನ್ನು ಬಂಧಿಸಿ ಸೆರೆಮನೆಗೆ ಕಳುಹಿಸಲಾಯಿತು. 1949 ರ ಜುಲೈ 11 ರ ಮಧ್ಯರಾತ್ರಿ ಆರ್ಎಸ್ಎಸ್ ಮೇಲಿನ ನಿಷೇಧವನ್ನು ತೆಗೆದು ಹಾಕಲಾಯಿತು. 13 ರಂದು ಗುರೂಜಿ ಅವರನ್ನು ಬಿಡುಗಡೆಗೊಳಿಸಲಾಯಿತು.
ಇದಾದ ನಂತರದಲ್ಲಿ ಪೂರ್ವ ಪಾಕಿಸ್ಥಾನದ ಹಿಂದೂ ನಿರಾಶ್ರಿತರ ಸಮಸ್ಯೆ ಪರಿಹರಿಸುವುದು ಮತ್ತು ಅವರಿಗೆ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವಲ್ಲಿಯೂ ಆರ್ಎಸ್ಎಸ್ ಶ್ರಮ ವಹಿಸುತ್ತದೆ. ನಾನಾಜೀ ದೇಶ್ಮುಖ್ ಅವರ ನಾಯಕತ್ವದಲ್ಲಿ ಗೋರಖ್ಪುರದಲ್ಲಿ ಆರಂಭವಾದ ಸರಸ್ವತಿ ಶಿಶು ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ ಗುರೂಜಿ ಅವರು ಶಿಕ್ಷಣದ ವಿಚಾರದಲ್ಲಿಯೂ ದಿಟ್ಟ ಹೋರಾಟಗಳನ್ನು ನಡೆಸಿದ್ದಾರೆ. ಜತೆಗೆ ಗೋ ರಕ್ಷಣೆಯ ವಿಚಾರದಲ್ಲಿಯೂ ಮಹೋನ್ನತ ಕ್ರಮಗಳನ್ನು ತೆಗೆದುಕೊಂಡು, ಹಸುಗಳ ಅಕ್ರಮ ಸಾಗಾಣಿಕೆಯ ವಿರುದ್ಧವೂ ದನಿ ಎತ್ತಿದ್ದಾರೆ.
ನೆಹರೂ ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ ಪಕ್ಷದಿಂದ ಬೇಸತ್ತ ಸಚಿವ ಡಾ. ಶ್ಯಾಂ ಪ್ರಸಾದ್ ಮುಖರ್ಜಿ ಅವರು ಭಾರತೀಯ ಜನ ಸಂಘವನ್ನು ಸ್ಥಾಪಿಸುತ್ತಾರೆ. ಅದಕ್ಕಾಗಿ ಆರ್ಎಸ್ಎಸ್ನ ನೆರವನ್ನು ಕೇಳುತ್ತಾರೆ. ಆದರೆ ಗುರೂಜಿ ಸಂಘವನ್ನು ನೇರವಾಗಿ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದಕ್ಕೆ ಒಪ್ಪಿಕೊಳ್ಳದೆ, ಪ್ರಚಾರಕರನ್ನು ಸಹಾಯಕ್ಕಾಗಿ ನೀಡುತ್ತದೆ. ದೀನ್ ದಯಾಳ್ ಉಪಾಧ್ಯಾಯ, ಅಟಲ್ ಜೀ ಮೊದಲಾದವರು ಪಕ್ಷದ ಬಲವರ್ಧನೆಗಾಗಿ ದುಡಿದ ಮುಖ್ಯ ಪ್ರಚಾರಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವವರು. 1960 ರಲ್ಲಿ ವಿದೇಶೀ ಆಕ್ರಮಣದ ಬಗ್ಗೆ ಸರ್ಕಾರದ ಗಮನಕ್ಕೂ ತಂದಿತ್ತು ಸಂಘ. 1962 ರಲ್ಲಿ ಭಾರತ ಮತ್ತು ಚೀನಾ ನಡುವಿನ ಕಲಹದ ಸಂದರ್ಭದಲ್ಲಿ ಗುರೂಜಿ ನೇತೃತ್ವದ ಸಂಘ ಕೇಂದ್ರ ಸರಕಾರದ ಜೊತೆ ಕೈಗೂಡಸಿ ರಾಷ್ಟ್ರ ಸೇವೆಗೆ ಸದಾ ಸಿದ್ಧ ಎಂಬುದನ್ನು ನಿರೂಪಿಸಿದೆ. ಇವರ ಸೇವೆಯನ್ನು ಕಂಡ ನೆಹರೂ ಮುಂದಿನ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವುದಕ್ಕೆ ಆಮಂತ್ರಣವನ್ನೂ ನೀಡಿತ್ತು. ಸುಮಾರು 3500 ಸ್ವಯಂಸೇವಕರು ಈ ಪರೇಡ್ನಲ್ಲಿ ಭಾಗವಹಿಸಿದ್ದರು. 1965 ರ ಪಾಕ್ ಜೊತೆಗಿನ ಯುದ್ಧದಲ್ಲಿಯೂ ಕಾಂಗ್ರೆಸ್ ಗೆ ಆರ್ಎಸ್ಎಸ್ ಸಹಕಾರವನ್ನು ನೀಡಿತ್ತು. 1970 ರ ಹೊತ್ತಿಗೆ ಮಹಾಮಾರಿ ಕ್ಯಾನ್ಸರ್ ಗುರೂಜಿ ಅವರನ್ನು ಆವರಿಸಿತ್ತು. 5 ಜುಲೈ 1973 ರಂದು ಗುರೂಜಿ ರೋಗ ಉಲ್ಬಣಗೊಂಡು ನಿಧನರಾದರು. ಇಂದು ಅವರಿಲ್ಲದಿದ್ದರೂ ಅವರ ಕನಸು ಭಾರತದಲ್ಲಿ ತನ್ನ ಕಂಪನ್ನು ಸೂಸಿದೆ. ಅನೇಕ ಯುವ ಮನಗಳು ಸಂಘ ಸೇರಿ ದೇಶ ಕಟ್ಟುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕೇಶವ್ ಬಲಿರಾಮ್ ಹೆಡ್ಗೇವಾರ್ ಅವರ ಮಾರ್ಗದರ್ಶನದಲ್ಲಿ ನೆಟ್ಟ ಸಸಿ, ಗೊಳ್ವಲ್ಕರ್ ಅವರ ನಾಯಕತ್ವದಲ್ಲಿ ಬೆಳೆದು ಬಂದ ಸಂಘ ಇಂದು ಅನೇಕ ಕಾರ್ಯಕರ್ತರನ್ನು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. 1940 ರಿಂದ 1973ರ ಕಾಲಘಟ್ಟದಲ್ಲಿ ಸಂಘವನ್ನು ದೇಶದೆಲ್ಲೆಡೆ ವ್ಯಾಪಕವಾಗಿ ಹಬ್ಬಿಸಿದ ಕೀರ್ತಿ ಈ ಮಹಾನುಭಾವರಿಗೆ ಸಲ್ಲುತ್ತದೆ. ಕಠಿಣ ಪರಿಸ್ಥಿತಿಯಲ್ಲಿಯೂ ಸಂಘವನ್ನು ಮುನ್ನಡೆಸಿ ದಡ ಮುಟ್ಟಿಸಿದ ಮಹನೀಯರನ್ನು ನಾವಿಂದು ಸ್ಮರಿಸಲೇ ಬೇಕು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ, ಗಾಂಧೀಜಿಯವರ ಹತ್ಯೆ ನಡೆದ ಸಂದರ್ಭದಲ್ಲಿ ಸಂಘಟನೆಯ ಮೇಲೆ ನಿಷೇಧವನ್ನು ಹೆರಿದ ಸಂದರ್ಭದಲ್ಲಿಯೂ ಎದೆಗುಂದದೆ ದೇಶಕ್ಕೆ ಪೂರಕವಾದ ಸಿದ್ಧಾಂತದ ಮೂಲಕ ಸಂಘವನ್ನು ಬಲವರ್ಧನೆ ಮಾಡಿದ ಗುರೂಜಿ ನಮ್ಮೆಲ್ಲರ ಮನದಲ್ಲಿಯೂ ನೆಲೆಸಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.