ಇಡೀ ವಿಶ್ವದಲ್ಲಿಯೇ ಭಾರತ ಅತೀ ಹೆಚ್ಚು ಹಾಲು ಉತ್ಪಾದಕ, ಸಂಗ್ರಹಕ ಮತ್ತು ವಿತರಕ ರಾಷ್ಟ್ರ. ದೇಶದ ಹಲವು ಮನೆಗಳಲ್ಲಿ ಹೈನುಗಾರಿಕೆಯೇ ಮುಖ್ಯ ಕಸುಬಾಗಿದ್ದು, ಹಾಲು ಮಾರಾಟದ ಮೂಲಕವೇ ಜೀವನ ಕಂಡುಕೊಂಡವರೂ ಅನೇಕರಿದ್ದಾರೆ. ಹಾಲು ಕೆಡುವುದು ಬೇಗ. ಸರಿಯಾದ ಶೀಥಲೀಕರಣ ಘಟಕವಿರದೇ ಹೋದರೆ ಕೆಡದಂತೆ ರಕ್ಷಿಸುವುದು ಹೇಗೆ? ಕ್ಷೀರಾಮೃತವನ್ನು ಹೆಚ್ಚು ಕಾಲ ಕೆಡದಂತೆ ಉಳಿಸಿಕೊಳ್ಳಬೇಕಾದರೆ ಏನು ಮಾಡಬೇಕು? ಎಂಬೆಲ್ಲಾ ಪ್ರಶ್ನೆಗಳು ಕಾಡುವುದು ಸಹಜ. ದೇಶದ ಪ್ರತಿ ಹಳ್ಳಿಯಲ್ಲಿಯೂ ಅಗತ್ಯವಿರುವಷ್ಟು ಶೀಥಲೀಕರಣಗಳಂತೂ ಲಭ್ಯವಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಗಮನಿಸಿದ ಬಿಹಾರದ 29 ವರ್ಷದ ಇಂಜಿನಿಯರ್ ರವಿ ಕುಮಾರ್ ಪರಿಹಾರವೊಂದನ್ನು ಕಂಡು ಹಿಡಿದಿದ್ದಾರೆ.
ಬಿಹಾರ್ನ ಚಂಪಾರಣ್ ಮೂಲದ ಈ ಯುವಕ ನ್ಯಾನೋ ದ್ರವ ಆಧಾರಿತ ಕಚ್ಛಾ ಹಾಲು ಶೀಥಲೀಕರಣ ಘಟಕವೊಂದನ್ನು ಅಭಿವೃದ್ಧಪಡಿಸಿದ್ದಾರೆ. ಈ ವ್ಯವಸ್ಥೆಯ ಮೂಲಕ ಹಾಲನ್ನು ಕೇವಲ 30 ನಿಮಿಷದಲ್ಲಿ 37ಡಿಗ್ರಿ ಸೆ. ಇಂದ, 7 ಡಿಗ್ರಿ ಸೆ. ವರೆಗೆ ತಣ್ಣಗಾಗಿಸುವುದು ಸಾಧ್ಯ. ಈ ವ್ಯವಸ್ಥೆಯನ್ನು ಚಂಪಾರಣ್ನ ಹಲವು ಹೈನುಗಾರಿಕಾ ಕುಟುಂಬಗಳಿಗೆ ಪರಿಚಯಿಸಿರುವ ರವಿ ಕುಮಾರ್, ಆ ಮೂಲಕ ತನ್ನ ಹಳ್ಳಿಗರ ಸಮಸ್ಯೆಗೆ ಒಂದು ಮಟ್ಟಿನ ಪರಿಹಾರವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟಕವನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ರವಿ ಅವರು ಮೂರು ವರ್ಷಗಳ ಕಾಲ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಇವರ ಈ ಅನ್ವೇಷಣೆಯ ಸಾಧನೆಗೆ 2019ರ ನವೆಂಬರ್ನಲ್ಲಿ ಬ್ರೆಜಿಲ್ನ ರಿಯೋ ದೆ ಜೆನೆರ್ಯೋ ದಲ್ಲಿ ನಡೆದ ಫೋರ್ತ್ ಬ್ರಿಕ್ಸ್ ಯಂಗ್ ಸೈಂಟಿಸ್ಟ್ ಫೋರಮ್” ನಿಂದ ಪ್ರಥಮ ಬಹುಮಾನ, 2500 ಡಾಲರ್ ಮೊತ್ತವೂ ಲಭಿಸಿದೆ.
ಬೆಂಗಳೂರಿನ ಐಸಿಎಆರ್ ನ ನ್ಯಾಷನಲ್ ಡೈರೀ ಇನ್ಸ್ಟಿಟ್ಯೂಟ್ನಲ್ಲಿ ರಿಸರ್ಚ್ ಸ್ಕಾಲರ್ ಆಗಿ ಪಿಎಚ್ಡಿ ಅಧ್ಯಯನ ನಡೆಸುತ್ತಿರುವ ರವಿ ಕುಮಾರ್, ತಮ್ಮ ತಂದೆ ಮತ್ತು ತಮ್ಮ ಹಳ್ಳಿಯ ಇತರರು ಅನುಭವಿಸುತ್ತಿದ್ದ ಸಮಸ್ಯೆಗಳಿಗೆ ಪರಿಹಾರವಾಗಿ ಈ ಸಾಧನೆಯನ್ನು ಮಾಡಿದ್ದಾರೆ. ತಮ್ಮ ತಂದೆ ಮತ್ತು ಹಳ್ಳಿಯ ಇತರ ಕೃಷಿ ಕುಟುಂಬಗಳು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದುದರಿಂದಲೇ ತಮಗೆ ಈ ಸಮಸ್ಯೆಯ ಗಂಭೀರತೆ ಅರಿವಾಯಿತು. ಚಿಕ್ಕ ವಯಸ್ಸಿನಲ್ಲಿ ನನಗಿದೆಲ್ಲಾ ಅರ್ಥವಾಗುತ್ತಿರಲಿಲ್ಲ. ಆದರೆ ಯೋಚನಾ ಲಹರಿ ಬೆಳೆದಂತೆ ಈ ಸಮಸ್ಯೆಗೆ ತಾನೇನಾದರೂ ಪರಿಹಾರ ಕಂಡು ಹಿಡಿಯಲೇ ಬೇಕೆನ್ನುವ ಅದಮ್ಯ ಬಯಕೆ ಮತ್ತು ಅದಕ್ಕಿದ್ದ ಉತ್ಸಾಹ ತಾನಿಂದು ಈ ಸಾಧನೆ ಮಾಡುವಂತೆ ಪ್ರೇರೇಪಿಸಿರುವುದಾಗಿ ಅವರು ಹೇಳುತ್ತಾರೆ.
ಹಳ್ಳಿಗಳಲ್ಲಿ ಹೈನುಗಾರರು ಬೆಳಗ್ಗೆ ಮತ್ತು ಸಂಜೆ ವೇಳೆ ಹಾಲು ಸಂಗ್ರಹಿಸಿ ಅದನ್ನು ಡೈರಿಗೆ ನೀಡುತ್ತಾರೆ. ಅಲ್ಲಿಂದ ಹಾಲು ಕೆಡದಂತೆ ನಿರ್ಮಿಸಲಾಗಿರುವ ಹಾಲಿನ ವಾಹನಗಳ ಮೂಲಕ ಹಾಲು ಶೀಥಲೀಕರಣ ಘಟಕಕ್ಕೆ ಕೊಂಡೊಯ್ಯಲಾಗುತ್ತದೆ. ಶೀಥಲೀಕರಣ ಘಟಕದಲ್ಲಿ ಹಾಲು ಕೇವಲ 5 ಗಂಟೆಗಳಷ್ಟು ಕಾಲವೇ ತಾಜಾ ಆಗಿ ಉಳಿಯುವುದಕ್ಕೆ ಸಾಧ್ಯ. ಅನಂತರ ಹಾಲು ಹಾಳಾಗಿ ಬಿಡುತ್ತದೆ. ಚಳಿಗಾಲದಲ್ಲಿ ಸ್ವಲ್ಪ ಹೆಚ್ಚು ಗಂಟೆಗಳ ಕಾಲ ಹಾಲು ಕೆಡದೇ ಉಳಿಯಬಹುದು. ಆದರೆ ಬೇಸಿಗೆಯಲ್ಲಿ ಹಾಳಾಗುವ ಹಾಲಿನ ಪ್ರಮಾಣ ಹೆಚ್ಚು. ಅದರೊಂದಿಗೆ ವಿದ್ಯುತ್ ಸಮಸ್ಯೆಯ ಬಗ್ಗೆಯೂ ಗಮನ ವಹಿಸುವುದು ತೀರಾ ಅಗತ್ಯವಾಗಿತ್ತು. ಹೀಗೆ ಹತ್ತು ಹಲವು ಸಮಸ್ಯೆಗಳಿರುವಾಗ ಅದನ್ನು ನಿವಾರಿಸಿಕೊಳ್ಳುವ ಸಲುವಾಗಿ ಯೋಚನೆಗಳನ್ನು ಮಾಡಬೇಕಾಗಿತ್ತು. ಈ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಘಟಕವನ್ನು ನಿರ್ಮಿಸಲಾಗಿದೆ.
ಇವರು ಚಾರ್ಜಿಂಗ್ ಪೈಲ್ ಅನ್ನು ಸಿದ್ಧ ಪಡಿಸಿ ಶೀಥಲೀಕರಣ ಘಟಕವನ್ನು ತಯಾರಿಸಿದ್ದಾರೆ. ಇದಕ್ಕಾಗಿ ಇವರು 10 ಲಕ್ಷ ರೂ ಗಳನ್ನು ವ್ಯಯಿಸಿದ್ದಾರೆ ಜೊತೆಗೆ ಎನ್ಡಿಆರ್ಐ ನಿಂದಲೂ ಆರ್ಥಿಕ ಸಹಕಾರವನ್ನು ಪಡೆದುಕೊಂಡಿದ್ದಾರೆ. ಈ ಘಟಕ ಸ್ಟೀಲ್ ಶೇಪ್ ಕಂಟೈನರ್ಗಳನನು ಹೊಂದಿದ್ದು ಪೈಲ್ ಮೂಲಕ ಚಾರ್ಜ್ ಆಗುತ್ತದೆ. ವಿದ್ಯುತ್ ಇಲ್ಲದೇ ಇರುವ ಸಂದರ್ಭದಲ್ಲಿ ಈ ಕಂಟೈನರ್ನಲ್ಲಿ ಶೇಖರಣೆಯಾಗಿರುವ ವಿದ್ಯುತ್, ಶೀಥಲೀಕರಣ ಘಟಕ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಆ ಮೂಲಕ ಹಾಲು ತಾಜಾ ಇರುವುದಕ್ಕೆ ಇದು ಸಹಾಯ ಮಾಡುತ್ತದೆ. ಇದನ್ನು ಖರೀದಿ ಮಾಡಲು ರೈತ ಒಂದು ಬಾರಿ ಹೂಡಿಕೆ ಮಾಡಿದರೆ ಸಾಕು, ಅಜೀವ ಪರ್ಯಂತ ಈ ತಂತ್ರಜ್ಞಾನ ಯಾವುದೇ ತೊಂದರೆ ಇಲ್ಲದಂತೆ ಕಾರ್ಯ ನಿರ್ವಹಿಸುವುದಾಗಿಯೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇವರ ಈ ಕಾರ್ಯಕ್ಕೆ ದ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ನ್ಯಾಷನಲ್, ಡೈರೀ ರಿಸರ್ಚ್ ಇನ್ಸ್ಟಿಟ್ಯೂಟ್ ಕೈ ಜೋಡಿಸಿದ್ದು, ಇದನ್ನು ದೇಶವ್ಯಾಪಿ ಪರಿಚಯಿಸುವುದಕ್ಕೂ ಯೋಜನೆಗಳನ್ನು ಹಾಕಿದೆ. ಪ್ರಸ್ತುತ ಈ ಪೈಲ್ 10000 ರೂ. ಮೌಲ್ಯವನ್ನು ಹೊಂದಿದ್ದು, ಮುಂದೆ ತಂತ್ರಜ್ಞಾನದಲ್ಲಿ ಬದಲಾವಣೆಗಳಾದಾಗ ಬೆಲೆ ಇಳಿಕೆಯ ಸಾಧ್ಯತೆಗಳಿರುವುದಾಗಿಯೂ ತಿಳಿಸಿದ್ದಾರೆ. ಸಾಧನೆಗೆ ಮನಸ್ಸು ಮುಖ್ಯ. ಮನಸ್ಸೊಂದಿದ್ದರೆ ಎಲ್ಲಾ ಮಾರ್ಗವೂ ತನ್ನಿಂದ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂಬುದಕ್ಕೆ ಇದೊಂದು ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.