ಜಗತ್ತು ಸುತ್ತುವ ಚಾರಣಿಗರು ನೀವಾಗಿದ್ದೀರಾ? ಹಾಗಾದರೆ ತ್ರಿಪುರಾದಲ್ಲಿನ ಉನಕೋಟಿ ಖಂಡಿತವಾಗಿಯೂ ನಿಮ್ಮ ಪಟ್ಟಿಯಲ್ಲಿ ಇರಲೇ ಬೇಕು. ಶಿವ, ದುರ್ಗಾ, ಗಣೇಶ ಮುಂತಾದ ಹಿಂದೂ ದೇವರುಗಳ ಆಳೆತ್ತರದ ಮೂರ್ತಿಗಳು, ದೈತ್ಯಾಕಾರದ ಕೆತ್ತನೆಗಳಿಂದ ಕೂಡಿದ ಇಲ್ಲಿನ ದೊಡ್ಡ ದೊಡ್ಡ ಬಂಡೆಗಳು, ಅಭೂತಪೂರ್ವ ಶಿಲ್ಪಕಲೆ ಈ ಪ್ರದೇಶವನ್ನು ಅಲೌಕಿಕವಾಗಿಸಿದೆ. ಶಿಲ್ಪಗಳನ್ನು ಸಮೃದ್ಧವಾಗಿ ಹೊಂದಿರುವ ಪ್ರದೇಶವನ್ನು ಮುಕ್ತ ಮನಸ್ಸಿನಿಂದ ನೋಡಿದರೆ, ಅದು ದೊಡ್ಡ ಆಧ್ಯಾತ್ಮಿಕ ಮಹತ್ವದ ಕೇಂದ್ರವಾಗಿ ಗೋಚರಿಸುತ್ತದೆ. ಈ ಪ್ರದೇಶದಲ್ಲಿ ಒಂದು ವಿಸ್ಮಯ ಲೋಕವೇ ಇದೆ. ಉನಕೋಟಿ 99,99,999 ಶಿಲ್ಪಗಳನ್ನು ಹೊಂದಿದೆ ಎಂಬುದು ವಿಸ್ಮಯವಲ್ಲದೆ ಮತ್ತೇನು! ಹೌದು, ಪೂರ್ವ ರಾಜ್ಯವಾದ ತ್ರಿಪುರದಲ್ಲಿನ ಈ ಸ್ಥಳವು ಹೆಚ್ಚು ಪ್ರಚಾರವನ್ನು ಪಡೆದುಕೊಂಡಿಲ್ಲ, ಆದರೆ ಇದು ಅನೇಕ ಪ್ರತಿಮೆಗಳ ನೆಲೆಯಾಗಿದೆ. ‘ಉನಕೋಟಿ’ ಎಂಬ ಹೆಸರೇ ಇದನ್ನು ಸೂಚಿಸುತ್ತದೆ. ಉನಕೋಟಿ ಎಂದರೆ ಒಂದು ಕೋಟಿಗಿಂತ ಒಂದು ಕಡಿಮೆ ಎಂಬುದು.
ಉನಕೋಟಿಯೊಂದಿಗೆ ಬೆಸೆದುಕೊಂಡಿರುವ ಪುರಾಣ ಕಥೆಗಳು
ಸ್ಥಳಿಯ ನಂಬಿಕೆಯ ಪ್ರಕಾರ, ಶಿವ ತನ್ನ ಭಕ್ತರೊಂದಿಗೆ ಕಾಶಿಗೆ ತೆರಳುತ್ತಿದ್ದ. ಮೈಲಿಗಟ್ಟಲೆ ನಡೆದು ಬಂದ ಹಿನ್ನಲೆಯಲ್ಲಿ ಭಕ್ತನೊಬ್ಬ ತುಸು ಹೊತ್ತು ವಿರಮಿಸಲು ಅನುವು ಮಾಡಿಕೊಡುವಂತೆ ಶಿವನಲ್ಲಿ ಅನುಮತಿ ಕೇಳಿದ. ಕತ್ತಲು ಆವರಿಸಿದ ಹಿನ್ನಲೆಯಲ್ಲಿ ಶಿವ ಇದಕ್ಕೆ ಒಪ್ಪಿಕೊಂಡ, ಆದರೆ ಬೆಳಗ್ಗೆ ಬೇಗ ಏಳಬೇಕು ಎಂಬ ಷರತ್ತನ್ನು ವಿಧಿಸಿದ. ಆದರೆ ಮರುದಿನ ಎಲ್ಲರೂ ಬೇಗ ಏಳಲು ವಿಫಲರಾದರು. ಇದು ಶಿವನ ಕೋಪಕ್ಕೆ ಕಾರಣವಾಯಿತು, ಎಲ್ಲರೂ ಅಲ್ಲೇ ಕಲ್ಲಾಗುವಂತೆ ಶಿವ ಶಾಪವನ್ನು ನೀಡಿದ.
ಮತ್ತೊಂದು ಕಥೆಯ ಪ್ರಕಾರ, ಶಿಲ್ಪಿಯೊಬ್ಬ 1 ಕೋಟಿ ಶಿಲ್ಪಗಳನ್ನು ಒಂದು ರಾತ್ರಿಯೊಳಗೆ ಕೆತ್ತಿ ಶಿವ ಮತ್ತು ಪಾರ್ವತಿಯನ್ನು ಓಲೈಸಲು ಮುಂದಾಗಿದ್ದ. ಆದರೆ ಅದು ಸಾಧ್ಯವಾಗಲಿಲ್ಲ, ಹೀಗಾಗಿ ಆತ 99,99,999 ಶಿಲ್ಪಗಳನ್ನು ರಚನೆ ಮಾಡಿದ.
ಉನಕೋಟಿ ಶಿಲ್ಪಗಳು ಎಷ್ಟು ಹಳೆಯವು?
7 ರಿಂದ 9 ನೇ ಶತಮಾನದ ನಡುವೆ ಉನಕೋಟಿಯನ್ನು ಸ್ಥಾಪಿಸಲಾಯಿತು ಎಂದು ನಂಬಲಾಗಿದೆ. ಅದೇನೇ ಇದ್ದರೂ, ಉನಕೋಟೀಶ್ವರ ಕಾಳ ಭೈರವ, ನಂದಿ, ದುರ್ಗಾ ಮತ್ತು ಗಂಗಾ ಮಾತೆಯ ಶಿಲ್ಪಗಳ ಭವ್ಯತೆಯು ಇಲ್ಲಿಗೆ ಭೇಟಿ ನೀಡುವವರನ್ನು ಮಂತ್ರಮುಗ್ಧಗೊಳಿಸುತ್ತದೆ. ಈ ಸ್ಥಳವು ಪ್ರಯಾಣಿಕರನ್ನು ವಾಸ್ತವಿಕವಾಗಿ ಮತ್ತೊಂದು ಜಗತ್ತಿಗೆ ತೆಗೆದುಕೊಂಡು ಹೋಗುವ ನಂಬಲಾಗದ ಶಕ್ತಿಯನ್ನು ಹೊಂದಿದೆ.
ತ್ರಿಪುರದ ಈಶಾನ್ಯ ಭಾಗದಲ್ಲಿ ಇರುವ ಉನಕೋಟಿ ಅಗರ್ತಲಾದಿಂದ 180 ಕಿಲೋಮೀಟರ್ ದೂರದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.