ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ನಿರಂತರ ದೌರ್ಜನ್ಯಗಳ ನಡುವೆಯೇ ಸಂತೋಷಕರ ಸುದ್ದಿಯೊಂದು ಹೊರಹೊಮ್ಮಿದೆ. ಸ್ವಾತಂತ್ರ್ಯ ಬಂದು 70 ದಶಕಗಳ ಬಳಿಕ ಬಲೂಚಿಸ್ಥಾನದ ಖೆಟ್ಟಾದಿಂದ 330 ಕಿಮೀ ದೂರದಲ್ಲಿರುವ ಝೋಬ್ನಲ್ಲಿರುವ 200 ವರ್ಷಗಳ ಹಳೆಯ ಹಿಂದೂ ದೇಗುಲವನ್ನು ಹಿಂದೂಗಳಿಗೆ ಹಸ್ತಾಂತರ ಮಾಡಲಾಗಿದೆ.
ಈ ದೇಗುಲದಲ್ಲಿ ಹಲವು ವರ್ಷಗಳಿಂದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ನಡೆಸುತ್ತಾ ಬರಲಾಗುತ್ತಿತ್ತು, ಇದೀಗ ಶಾಲೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಿ ದೇಗುಲವನ್ನು ಹಿಂದೂಗಳಿಗೆ ಬಿಟ್ಟು ಕೊಡಲಾಗಿದೆ. ಕಳೆದ ಬುಧವಾರ ನಡೆದ ಸಮಾರಂಭದಲ್ಲಿ ದೇಗುಲದ ಬೀಗವನ್ನು ಝೋಬ್ ಡೆಪ್ಯೂಟಿ ಕಮಿಷನರ್ ತಹ ಸಲೀಂ ಅವರ ಸಮ್ಮುಖದಲ್ಲಿ ಸ್ಥಳಿಯ ಹಿಂದೂ ಮುಖಂಡರಿಗೆ ಹಸ್ತಾಂತರ ಮಾಡಲಾಗಿದೆ.
ಈ ವೇಳೆ ಮಾತನಾಡಿದ ಸಲೀಂ ಅವರು, “ಇಂದು ಬಲೂಚಿಸ್ಥಾನದ ಇತಿಹಾಸದಲ್ಲಿ ಅತ್ಯಂತ ಮಹತ್ವಪೂರ್ಣವಾದ ದಿನ. ಇದು ಧಾರ್ಮಿಕ ಸೌಹಾರ್ದತೆಗೆ ಒಂದು ಉತ್ತಮ ಉದಾಹರಣೆಯಾಗಿದೆ. ದೇಗುಲವನ್ನು ಹಸ್ತಾಂತರಿಸುವ ನಿರ್ಧಾರಕ್ಕೆ ಜಮಾ ಮಸೀದಿಯ ಖತೀಬ್ ಮೌಲನಾ ಅಬ್ದುಲ್ಲಾ ಅವರು ಬೆಂಬಲಿಸಿದ್ದು ಮಾತ್ರವಲ್ಲ, ಹಸ್ತಾಂತರ ಸಮಾರಂಭದಲ್ಲಿ ಭಾಗಿಯೂ ಆಗಿದ್ದಾರೆ. ನಮ್ಮ ಧಾರ್ಮಿಕ ಮುಖಂಡರು ಅಲ್ಪಸಂಖ್ಯಾತ ಸಮುದಾಯವನ್ನು ಯಾವ ರೀತಿಯಲ್ಲಿ ಬೆಸೆಯುತ್ತಿದ್ದಾರೆ ಎಂಬುದನ್ನು ಇಂದು ಜಗತ್ತು ನೋಡಿದೆ” ಎಂದಿದ್ದಾರೆ.
”ಸುಮಾರು 30 ವರ್ಷಗಳ ಹಿಂದೆ ಈ ದೇಗುಲದಲ್ಲಿ ಶಾಲೆಯನ್ನು ಪ್ರಾರಂಭಿಸಲಾಯಿತು. ಇದೀಗ ಶಾಲೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಿ ದೇಗುಲವನ್ನು ಹಸ್ತಾಂತರಿಸಲಾಗಿದೆ. 70 ವರ್ಷಗಳ ಬಳಿಕ ಹಿಂದುಗಳು ತಮ್ಮ ದೇಗುಲಕ್ಕೆ ಮರಳಿದ್ದಾರೆ. ಈ ವಿಳಂಬಕ್ಕಾಗಿ ಹಿಂದೂ ಸಮುದಾಯದಲ್ಲಿ ಕ್ಷಮೆಯಾಚನೆ ಮಾಡುತ್ತೇವೆ” ಎಂದಿದ್ದಾರೆ.
ದೇಗುಲ ಹಸ್ತಾಂತರವಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ಅಲ್ಲಿ ಹಿಂದೂಗಳು ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ದೂರದೂರದ ಪ್ರದೇಶಗಳ ಹಿಂದೂಗಳು ಕೂಡ ಇಲ್ಲಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸುವ ನಿರೀಕ್ಷೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.