ಏನನ್ನೋ ಸಾಧಿಸಬೇಕು ಎನ್ನುವ ಅದಮ್ಯ ಬಯಕೆ, ಅದಕ್ಕೆ ಬೇಕಾದ ಛಲ ನಮ್ಮೊಳಗಿದ್ದರೆ ಇಲ್ಲಿ ಯಾವುದೂ ಅಸಾಧ್ಯವಲ್ಲ. ಮನಸ್ಸಿದ್ದರೆ ಮಾರ್ಗವಿದೆ ಎನ್ನುವುದಕ್ಕೆ ಉದಾಹರಣೆ ಹೈದರಾಬಾದ್ನ ಈ ಸ್ನೇಹಿತೆಯರು. ಚಿಕ್ಕ ಬಂಡವಾಳವನ್ನಿಟ್ಟುಕೊಂಡು ಶಿಲ್ಪಿ ಮತ್ತು ಸತ್ಯಾ ಆರಂಭಿಸಿದ ಸಾಂಪ್ರದಾಯಿಕ ಶೈಲಿಯ, ಐದು ವರ್ಷದೊಳಗಿನ ಮಕ್ಕಳ ಉಡುಪು ತಯಾರಿಕೆ ಉದ್ಯಮ ಇಂದು ನೂರಕ್ಕೂ ಅಧಿಕ ಕುಶಲಕರ್ಮಿಗಳ ಬದುಕಿಗೆ ನಂದಾದೀಪವಾಗಿದೆ. ಅದರೊಂದಿಗೆ ಮಕ್ಕಳ ದೈಹಿಕ ಆರೋಗ್ಯದ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರದಂತೆ ನೈಸರ್ಗಿಕವಾಗಿ ಸಿಗುವ ಕಚ್ಛಾ ವಸ್ತುಗಳನ್ನು ಬಳಸಿ ಉಡುಗೆಗಳನ್ನು ತಯಾರು ಮಾಡುತ್ತಿದ್ದಾರೆ ಎಂಬುದೂ ಗಮನಾರ್ಹ.
ಇವರು ಈ ಉದ್ಯಮವನ್ನು ಯಾತಕ್ಕಾಗಿ ಆರಂಭಿಸಿದರು ಎಂಬುದರ ಹಿಂದೆ ಒಂದು ಆಸಕ್ತಿಕರ ವಿಚಾರವಿದೆ. ಶಿಲ್ಪಿ ಅವರು 2013-14ರ ವರೆಗೂ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದವರು. ಅವರು ಮಗನಿಗಾಗಿ ಬಟ್ಟೆ ಕೊಳ್ಳುವುದಕ್ಕೆ ಮಳಿಗೆಗಳಿಗೆ ತೆರಳಿದರೆ ಅಲ್ಲಿ ಸುಂದರವಾಗಿ ಮನಸ್ಸಿಗೆ ಒಪ್ಪುವಂತಹ ಉಡುಗೆಗಳನ್ನು ಆಯ್ಕೆ ಮಾಡುವಲ್ಲಿ ವಿಫಲರಾಗುತ್ತಿದ್ದರು. ಹಾಗಾಗಿ ತಾನೇಕೆ ಐದು ವರ್ಷದ ಒಳಗಿನ ಮಕ್ಕಳಿಗೆ ಬಟ್ಟೆ ತಯಾರಿಕೆಯ ಉದ್ಯಮದಲ್ಲಿ ತೊಡಗಿಕೊಳ್ಳಬಾರದು ಎಂಬುದಾಗಿ ಯೋಚಿಸುತ್ತಾರೆ. ತಮ್ಮ ಆಪ್ತ ಗೆಳತಿ ಸತ್ಯಾ ನಾಗರಾಜ್ ಅವರ ಜೊತೆಗೆ ಚರ್ಚಿಸಿ ಕೇವಲ ರೂ. 25,000 ಬಂಡವಾಳದಲ್ಲಿ ಸ್ವಂತ ಉದ್ಯಮವನ್ನು ಆರಂಭಿಸುತ್ತಾರೆ. ಇದಕ್ಕಾಗಿ ಕೆಲವು ಸ್ವಯಂ ಸೇವಾ ಸಂಸ್ಥೆಗಳ ನೆರವನ್ನೂ ಪಡೆದುಕೊಳ್ಳುತ್ತಾರೆ. ಹೀಗೆ ಆರಂಭವಾದ ಉದ್ಯಮ ಇಂದು ಸುಮಾರು 100 ಕ್ಕೂ ಅಧಿಕ ಜನರಿಗೆ ಅನ್ನ ನೀಡುವ ಸಂಸ್ಥೆಯಾಗಿ ಬೆಳೆದಿದೆ.
ಅಂದ ಹಾಗೆ 2016ರಲ್ಲಿ ಪರಿಚಯಿಸಲಾದ ಈ ಸಂಸ್ಥೆಯ ಹೆಸರು ಐಪಿಎಸ್ (ಇಂಡೀ ಪ್ರೊಜೆಕ್ಟ್ ಸ್ಟೋರ್). ಆರಂಭದಲ್ಲಿಯೇ ತಾವು ಹಾಕಿಕೊಂಡ ನಿಬಂಧನೆಗಳಿಗೆ ಯಾವುದೇ ಚ್ಯುತಿ ಬಾರದಂತೆ, ಗುಣಮಟ್ಟದ ವಿಚಾರದಲ್ಲಿಯೂ ಯಾವುದೇ ರಾಜಿ ಮಾಡಿಕೊಳ್ಳದೆ ಇಂದು ಈ ಉದ್ಯಮ ಯಶಸ್ಸಿನತ್ತ ಹೆಜ್ಜೆ ಇಡುತ್ತಿದೆ. ಜೊತೆಗೆ ಇದಕ್ಕೆ ಬೇಕಾದ ವಸ್ತುಗಳನ್ನೂ ಇವರು ಸಣ್ಣ ಪ್ರಮಾಣದ ವ್ಯಾಪಾರಸ್ಥರಿಂದಲೇ ಖರೀದಿ ಮಾಡುತ್ತಿದ್ದಾರೆ. ತಯಾರಿಕೆಗೂ ಯಾವುದೇ ಯಂತ್ರೋದ್ಯಮಗಳ ಮೊರೆ ಹೋಗಿಲ್ಲ. ಬದಲಾಗಿ ಸಾಂಪ್ರದಾಯಿಕ ಮತ್ತು ಹಳೆಯ ಕಾಲದ ದರ್ಜಿಗಳ ಮೂಲಕವೇ ತಮ್ಮ ಕನಸಿಗೆ ಸುಂದರ ರೂಪ ಕೊಡುವ ಕಾಯಕದಲ್ಲಿ ನಿರತರಾಗಿದ್ದಾರೆ.
ಈಗಾಗಲೇ ಸುಮಾರು 170ಕ್ಕೂ ಅಧಿಕ ಹೊಸ ಹೊಸ ಶೈಲಿಗಳನ್ನು ಮಾರುಕಟ್ಟೆಗೆ ಸ್ಪರ್ಧಾತ್ಮಕ ದರದಲ್ಲಿ ಪರಿಚಯಿಸಿದ ಖ್ಯಾತಿ ಇವರದ್ದು. ಈವರೆಗೆ ಸುಮಾರು 3000ಕ್ಕೂ ಅಧಿಕ ಜನರ ಬೇಡಿಕೆಗಳನ್ನು ಪೂರೈಸಿ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದ್ದಾರೆ. ಅದರೊಂದಿಗೆ ಮನೆಯಲ್ಲಿಯೇ ಕುಳಿತು ಬದುಕು ಕಟ್ಟಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುವ ಮಹಿಳೆಯರಿಗೂ ಬಟ್ಟೆ ಹೊಲಿಯುವ ಉದ್ಯೋಗ ನೀಡಿದ್ದಾರೆ.
ಉದ್ಯಮ ಆರಂಭಿಸುವುದೇನೋ ಸುಲಭ. ಆದರೆ ಅದಕ್ಕೆ ಸೂಕ್ತ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುವುದು ಮಾತ್ರ ಕಷ್ಟದ ಕೆಲಸ. ಏಕೆಂದರೆ ಜನಸಾಮಾನ್ಯರನ್ನು ತಲುಪುವುದು ಸುಲಭದ ಕೆಲಸವಲ್ಲ ನೋಡಿ. ಈ ವಿಚಾರಕ್ಕೆ ತಲೆಕೆಡಿಸಿಕೊಂಡ ಈ ಗೆಳತಿಯರು ಕೊನೆಗೆ ಆರಿಸಿಕೊಂಡದ್ದು ಫೇಸ್ಬುಕ್ನಂತಹ ಸಾಮಜಿಕ ಜಾಲತಾಣಗಳನ್ನು. ಇವುಗಳ ಸಹಾಯದಿಂದಲೇ ವಸ್ತುಗಳನ್ನು ಜನರಿಗೆ ತಲುಪುವಂತೆ ಮಾಡಿ ಗ್ರಾಹಕರನ್ನು ತಮ್ಮತ್ತ ಆಕರ್ಷಿಸಿಕೊಂಡಿದ್ದಾರೆ. ನಂತರ 2017 ರ ಸೆಪ್ಟೆಂಬರ್ನಲ್ಲಿ ತಮ್ಮದೇ ಆದ ವೆಬ್ಸೈಟ್ ರಚಿಸಿ ನಂತರ ಆ ಮೂಲಕವೇ ಜನರ ಬೇಡಿಕೆಗೆ ಸ್ಪಂದಿಸಲು ಆರಂಭಿಸಿದ್ದಾರೆ. ಆ ಮೂಲಕ ಮೇಡ್ ಇನ್ ಇಂಡಿಯಾ ಗುಣಮಟ್ಟದ ಮಕ್ಕಳ ವಸ್ತ್ರಗಳನ್ನು ನೀಡುವಲ್ಲಿಯೂ ಯಶಸ್ವಿಯಾಗಿದ್ದಾರೆ, ಹೊಸ ಉದ್ಯಮ ಆರಂಭಿಸುವ ಕನಸು ಹೊತ್ತವರಿಗೆ ಮಾದರಿಗಳಾಗಿದ್ದಾರೆ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.