ನೇತಾಜಿ ಬ್ರಿಗೇಡ್ ಮೂಡಬಿದ್ರೆ ಇವರ ನೇತೃತ್ವದಲ್ಲಿ ‘ನಿಹಾರಿಕ’ ಎಂಬ ಮಗುವಿನ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಯುವಕ ವಿಕ್ಕಿ ಶೆಟ್ಟಿ ಇವರು ವಿಭಿನ್ನ ರೀತಿಯಲ್ಲಿ ವೇಷಧರಿಸಿ ಶ್ರೀ ಕ್ಷೇತ್ರ ಕಟೀಲಿನಲ್ಲಿ ನಡೆದ ಬ್ರಹ್ಮಕಲಶೋತ್ಸವದಲ್ಲಿ ಹಣ ಸಂಗ್ರಹವನ್ನು ಮಾಡುತ್ತಿದ್ದಾರೆ. ಈ ಮೂಲಕ ಬಡವರ ಸೇವೆಗೈಯ್ಯುವ ಪುಣ್ಯಕಾರ್ಯದಲ್ಲಿ ತೊಡಗಿದ್ದಾರೆ. ಎಲ್ಲರೂ ತಮ್ಮ ಕೈಯಿಂದಾದ ಸಹಾಯವನ್ನು ನೀಡಿ ಅವರ ಈ ಮಹಾನ್ ಕಾರ್ಯಕ್ಕೆ ಕೈಜೋಡಿಸುತ್ತಿದ್ದಾರೆ.
ಮಹೇಶ ಮಡಿವಾಳ ಇವರ ಏಕೈಕ ಮುದ್ದು ಮಗಳು 5 ವರ್ಷ ಪ್ರಾಯದ ನಿಹಾರಿಕ ರಕ್ತದ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿದ್ದು ಕೆಲ ಸಮಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಇದೀಗ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ, ಸಂಪೂರ್ಣ ಗುಣಮುಖವಾಗಲು ಸುಮಾರು 2 ವರ್ಷದ ಚಿಕಿತ್ಸೆ ಪಡೆಯಬೇಕೆಂಬುದು ವೈದ್ಯರ ಅಭಿಪ್ರಾಯ, ಒಟ್ಟಾರೆ ಚಿಕಿತ್ಸೆ ವೆಚ್ಚ ಸುಮಾರು 10 ರಿಂದ 12 ಲಕ್ಷ ರೂಪಾಯಿ ಖರ್ಚು ಆಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ ದಿನ ಕೂಲಿ ಮಾಡಿ ಜೀವನ ನಡೆಸುತ್ತಿರುವ ತಂದೆ ತಾಯಿ ಚಿಕಿತ್ಸಾ ವೆಚ್ಚ ಭರಿಸಲು ಅಶಕ್ತರಾಗಿರುವುದರಿಂದ ಈ ಮುಗ್ಧ ಮಗುವಿನ ಚಿಕಿತ್ಸೆಗೆ ಇತರರ ಸಹಾಯದ ಅಗತ್ಯ ಸಾಕಷ್ಟಿದೆ.
ವಿಕ್ಕಿ ಶೆಟ್ಟಿ ಅವರು ಈ ಮಗುವಿಗೆ ಚಿಕಿತ್ಸೆಗೆ ಸಹಾಯವಾಗುವ ಉದ್ದೇಶದಿಂದ ಆಕೆಯ ಪೋಷಕರಿಗೆ ಹಣ ಸಂಗ್ರಹಿಸಿಕೊಡುವ ಮಹತ್ವದ ಕಾರ್ಯವನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ವಿಚಿತ್ರ ವೇಷಭೂಷಣವನ್ನು ತೊಟ್ಟು ಎಲ್ಲರನ್ನೂ ರಂಜಿಸಿದ್ದಾರೆ.
“ಬಡ ಮಕ್ಕಳ ಚಿಕಿತ್ಸೆಗೆ ಹಣ ಸಂಗ್ರಹ ಮಾಡಲು ನನಗೆ ಪ್ರೇರಣೆಯಾಗಿದ್ದು ರವಿ ಕಟಪಾಡಿ. ಮೂರನೇ ಬಾರಿಗೆ ನಾನು ಈ ಕಾರ್ಯವನ್ನು ಮಾಡುತ್ತಿದ್ದೇನೆ. ನಿಹಾರಿಕ ಎಂಬ ಪುಟ್ಟ ಬಾಲಕಿ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದು ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ಚಿಕಿತ್ಸೆಗೆ ಸಹಕರಿಸಲು ಕಟೀಲಿನಲ್ಲಿ ವೇಷಹಾಕಿದ್ದೇನೆ. ಆಳ್ವಾಸ್ ನುಡಿಸಿರಿಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಮಗುವಿನ ಚಿಕಿತ್ಸೆಗಾಗಿ 1 ಲಕ್ಷ ರೂಪಾಯಿ ಸಂಗ್ರಹ ಮಾಡಿದ್ದೆ, 2ನೇ ಬಾರಿ ಕಂಬಳದಲ್ಲಿ ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗವಿಗೆ 83 ಸಾವಿರ ರೂಪಾಯಿ ಸಂಗ್ರಹ ಮಾಡಿದ್ದೇನೆ. ಇದೀಗ ಕಟೀಲಿನಲ್ಲಿ ನಿಹಾರಿಕಾಳಿಗೆ ಧನ ಸಂಗ್ರಹ ಮಾಡಿ ಕೊಡುತ್ತಿದ್ದೇನೆ” ಎಂದಿದ್ದಾರೆ.
ತಾವು ಸಂಪಾದಿಸಿದರಲ್ಲಿ ಕಿಂಚಿತ್ತನ್ನು ಸಮಾಜಕ್ಕೆ ನೀಡಿದರೆ ಬಡ ಮಕ್ಕಳ ಕಣ್ಣೊರೆಸುವ ಕಾರ್ಯವನ್ನು ಮಾಡಬಹುದು. ಬಡಮಕ್ಕಳಿಗೆ ಸಹಾಯ ಮಾಡಬಹುದು, ಅವರ ತಂದೆತಾಯಿಗೆ ಸಾಂತ್ವನ ನೀಡಬಹುದು. ತಿಂಗಳಲ್ಲಿ ಒಂದಿಷ್ಟು ಸಮಯವನ್ನು ಯುವಕರು ಸಮಾಜದ ಸೇವೆಗೆ ಮುಡಿಪಾಗಿಡಬೇಕು ಎಂದು ಅವರು ಕರೆ ನೀಡಿದ್ದಾರೆ.
ಮುಖಕ್ಕೆ ಬಣ್ಣ ಹಚ್ಚುವಾಗ ತುಸು ಕಷ್ಟವಾಗುತ್ತದೆ, ವೇಷ ಹಾಕಿದ ನಂತರ ವಿಪರೀತ ಮೈ ಉರಿಯುತ್ತದೆ. ಆದರೆ ಸಮಾಜ ಸೇವೆ ಮಾಡುವಾಗ ಸಿಗುವ ಸಂತೃಪ್ತಿ ಎಲ್ಲವನ್ನೂ ಮರೆಸುತ್ತದೆ ಎಂದು ಅವರು ಹೇಳುತ್ತಾರೆ. ಅಮೃತ ಸಂಜೀವಿನಿ ಸಂಘಟನೆ ಮತ್ತು ನೇತಾಜೀ ಬ್ರಿಗೇಡ್ ಮೂಡುಬಿದಿರೆ ನನ್ನ ಈ ಕಾರ್ಯಕ್ಕೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದಿದ್ದಾರೆ.
ವಿಕ್ಕಿ ಶೆಟ್ಟಿ ಅವರ ಕಾರ್ಯಕ್ಕೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಅವರ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.