ಜನವರಿ 15 ರಂದು ನಮ್ಮ ರಾಷ್ಟ್ರವು ಯೋಧರ ಶೌರ್ಯ ಮತ್ತು ಬಲಿದಾನವನ್ನು ಸ್ಮರಿಸುವ ಸಲುವಾಗಿ ಭಾರತೀಯ ಸೇನಾ ದಿನವನ್ನು ಆಚರಣೆ ಮಾಡುತ್ತದೆ.
1949 ರಂದು ಸೇನಾ ದಿನಾಚರಣೆಯು ಪ್ರಾರಂಭವಾಯಿತು, ಈ ಬಾರಿ 72 ನೇ ಸೇನಾ ದಿನವನ್ನು ಆಚರಣೆ ಮಾಡಲಾಗುತ್ತಿದೆ. ದೇಶದಾದ್ಯಂತ ಇರುವ ಸೇನಾ ನೆಲೆಗಳಲ್ಲಿ ಪೆರೇಡ್ಗಳನ್ನು ನಡೆಸುವ ಮೂಲಕ ಸೇನಾ ದಿನವನ್ನು ಆಚರಣೆ ಮಾಡಲಾಗುತ್ತದೆ.
ಇತಿಹಾಸ ಮತ್ತು ಮಹತ್ವ
ಪ್ರತಿವರ್ಷ ಜನವರಿ 15ರಂದು ಭಾರತೀಯ ಸೇನಾ ದಿವಸವನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಜನರಲ್ ಸರ್ ಫ್ರಾನ್ಸಿಸ್ ಬುಚರ್ ಭಾರತೀಯ ಸೇನೆಯನ್ನು ಲೆಫ್ಟಿನೆಂಟ್ ಜನರಲ್ ಕಾರಿಯಪ್ಪ ಅವರಿಗೆ ಹಸ್ತಾಂತರ ಮಾಡಿದ ದಿನ. ಹೀಗೆ ಸೇನಾ ದಿನವು ಸೇನಾಶಕ್ತಿಯು ಬ್ರಿಟಿಷರಿಂದ ಭಾರತೀಯರಿಗೆ ಹಸ್ತಾಂತರವಾದುದನ್ನು ಜ್ಞಾಪಿಸುತ್ತದೆ.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಯಾರು?
ಇವರು ಮೊದಲ ಭಾರತೀಯ ಸೇನೆಯ ಮಹಾದಂಡನಾಯಕ. ಕರ್ನಾಟಕದವರು. 1898 ರಲ್ಲಿ ಜನಿಸಿದ ಇವರು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಫೀಲ್ಡ್ ಮಾರ್ಷಲ್ ಆಫ್ ಇಂಡಿಯಾ ಎಂಬ ಬಿರುದನ್ನು ಪಡೆದ ಇಬ್ಬರಲ್ಲಿ ಇವರು ಒಬ್ಬರು. ಇನ್ನೊಬ್ಬರು ಸಾಮ್ ಮಾನೆಕ್ಷಾ.
ಈ ವರ್ಷದ ಸೇನಾ ದಿನದ ವಿಶೇಷತೆ ಏನು?
ಈ ಸಲದ ಸೇನಾ ದಿನಾಚರಣೆಯಂದು ನವದೆಹಲಿಯಲ್ಲಿ ನಡೆಯಲಿರುವ ಪರೇಡಿನಲ್ಲಿ ಕ್ಯಾಪ್ಟನ್ ತಾನಿಯಾ ಶೇರ್ಗಿಲ್ ಅವರು ಆಲ್ ಮೆನ್ ಕಂಟಿನ್ಜೆಂಟ್ ಅನ್ನು ಮುನ್ನಡೆಸಲಿದ್ದಾರೆ. ಸೇನಾ ದಿನದಂದು ಮಹಿಳೆಯೊಬ್ಬರು ಈ ಹೆಗ್ಗಳಿಕೆಗೆ ಪಾತ್ರರಾಗಿರುವುದು ಇದೇ ಮೊದಲು. ಕಳೆದ ವರ್ಷ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಕ್ಯಾಪ್ಟನ್ ಭಾವನಾ ಕಸ್ತೂರಿಯವರು ಆಲ್ ಮೆನ್ ಕಂಟಿನ್ಜೆಂಟ್ ಅನ್ನು ಮುನ್ನಡೆಸಿದ್ದರು.
ಸೇನೆ ಇದನ್ನು ಹೇಗೆ ಆಚರಿಸುತ್ತದೆ?
ಈ ದಿನ ಭಾರತದ ಮಿಲಿಟರಿ ಶಕ್ತಿಯ ಪ್ರದರ್ಶನ ಮಾಡಲಾಗುತ್ತದೆ. ಅರ್ಹ ಸೈನಿಕರಿಗೆ ಶೌರ್ಯ ಪ್ರಶಸ್ತಿಗಳನ್ನು ಮತ್ತಿತರ ಬಿರುದುಗಳನ್ನು ಇಂದು ಪ್ರದಾನಿಸಲಾಗುತ್ತದೆ. ದಿಲ್ಲಿ ಕಂಟೋನ್ಮೆಂಟ್ನಲ್ಲಿನ ಕಾರ್ಯಪ್ಪ ಪರೇಡ್ ಗ್ರೌಂಡ್ನಲ್ಲಿ ಮುಖ್ಯ ಸಮಾರಂಭ ಏರ್ಪಡುತ್ತದೆ.
ಈ ವರ್ಷದ ಸೇನಾ ಸಮಾರಂಭದಲ್ಲಿ ಭೂಸೇನೆ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಮುಖ್ಯ ಅತಿಥಿಯಾಗಿದ್ದಾರೆ. ಏರಿಯಲ್ ಸ್ಟಂಟ್, ಬೈಕ್ ಪಿರಾಮಿಡ್ ಮುಂತಾದ ಸಾಹಸ ಪ್ರದರ್ಶನಗಳನ್ನು ಯೋಧರು ಪ್ರದರ್ಶಿಸಲಿದ್ದಾರೆ.
2016ರಲ್ಲಿ ಡೆಲ್ಲಿ ಕಂಟೋನ್ಮೆಂಟ್ ಪರೆಡ್ ಗ್ರೌಂಡ್ ಅನ್ನು ಕಾರ್ಯಪ್ಪ ಪರೇಡ್ ಗ್ರೌಂಡ್ ಎಂದು ಮರುನಾಮಕರಣ ಮಾಡಲಾಗಿದೆ. ಈ ದಿನ ಇಂಡಿಯಾಗೇಟ್ ಸಮೀಪದಲ್ಲಿರುವ ‘ಅಮರ್ ಜ್ಯೋತಿ ಜವಾನ್’ನಲ್ಲಿ ಗೌರವಾರ್ಪಣೆಗಳನ್ನು ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.