ಬಂಟ್ವಾಳ : ನೇತ್ರಾವತಿ ನದಿ ಸೇತುವೆ ಆಸುಪಾಸಿನಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಮರಳುಗಾರಿಕೆಗೆ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಬುಧವಾರ ಜಂಟಿ ದಾಳಿ ನಡೆಸಿದರು. ಕಾರ್ಯಾಚರಣೆಯ ಸಂದರ್ಭ ಸ್ಥಳದಲ್ಲಿ ಯಾವುದೇ ವಾಹನ ಹಾಗೂ ಬೋಟುಗಳು ಪತ್ತೆಯಾಗಿಲ್ಲ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ವಾಸ್ತವ್ಯ ಹೊಂದಿರುವ ಕಾರ್ಮಿಕರನ್ನು ತೆರವುಗೊಳಿಸಿದ ಪೊಲೀಸರು ಕಾರ್ಮಿಕರ ಡೇರೆಗಳನ್ನು ಕೆಡವಿ ಹಾಕಿದರು.
ಹೆದ್ದಾರಿ ಹಾಗೂ ರೈಲ್ವೇ ಸೇತುವೆಯ 100 ಮೀಟರ್ ಅಂತರದಲ್ಲಿ ಕೆಲವೊಂದು ತಿಂಗಳಿನಿಂದ ಅಕ್ರಮವಾಗಿ ನಡೆಯುತ್ತಿರುವ ಮರಳುಗಾರಿಕೆಯ ಬಗ್ಗೆ ಸ್ಥಳೀಯ ನಿವಾಸಿಗಳು ದೂರು ನೀಡಿದ್ದರು. ಮಂಗಳೂರು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಎಸ್ಪಿ ಡಾ.ಶರಣಪ್ಪ ಅವರ ಮಾರ್ಗದರ್ಶನದಲ್ಲಿ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಪೊಲೀಸ್ ಹಾಗೂ ಕಂದಾಯ ಇಲಾಖಾಧಿಕಾರಿಗಳೊಂದಿಗೆ ದಾಳಿ ನಡೆಸಿದರು.
ದಾಳಿ ಸುದ್ದಿ ತಿಳಿದು ಉದ್ಯಮಿಗಳು ಸ್ಥಳದಲ್ಲಿದ್ದ ಲಾರಿ, ಬೋಟು ಹಾಗೂ ಇನ್ನಿತರ ವಾಹನಗಳನ್ನು ಸ್ಥಳಾಂತರಗೊಳಿಸಿದ್ದಾರೆ. ಹಾಗಾಗಿ ಅಧಿಕಾರಿಗಳು ಬರಿಗೈಯಲ್ಲಿ ವಾಪಾಸಾಗಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಎಸಿ ಡಾ.ಅಶೋಕ್ ಅವರ ನೇತೃತ್ವದ ತಂಡ ದಾಳಿ ನಡೆಸಿ 1.60 ಲಕ್ಷ ದಂಡ ವಿಧಿಸಿದ್ದರು.
ಸೇತುವೆ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸಬಾರದೆಂದು ಎಚ್ಚರಿಸಿದ ಮೇಲೂ ಮರಳು ಸಾಗಾಟ ನಿಂತಿರಲಿಲ್ಲ. ಪ್ರತೀ ದಿನ ಮುಂಜಾನೆಯಿಂದ ರಾತ್ರಿ ತನಕವೂ ಮರಳುಗಾರಿಕೆ ನಡೆಯುತ್ತಿದ್ದು, ರಸ್ತೆಗೆ ಹಾನಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಉಪತಹಸೀಲ್ದಾರ್ ರೋಹಿನಾಥ್, ರೆವಿನ್ಯೂ ಇನ್ಸ್ಪೆಕ್ಟರ್ ಸಾಧು, ಎಎಸ್ಐ ಗಂಗಾಧರ್, ಗ್ರಾಮಲೆಕ್ಕಾಧಿಕಾರಿ ತೌಫೀಕ್, ಸಿಬ್ಬಂದಿ ನವೀನ್ ಕಾರ್ಯಾಚರಣೆಯಲ್ಲಿದ್ದರು.
ಮರಳಿಗೆ ದುಬಾರಿ ಬೆಲೆ!
ಸ್ಥಳೀಯವಾಗಿ ಲಾರಿಯೊಂದಕ್ಕೆ ಮರಳಿಗೆ 3000 ರೂ.ಗಳಿದ್ದರೂ, ಇತ್ತೀಚಿನ ಕೆಲವು ದಿನಗಳಿಂದ ದುಬಾರಿ ಬೆಲೆ ಕೊಟ್ಟರೂ ಮರಳು ಲಭ್ಯವಾಗುತ್ತಿಲ್ಲ. ಬೆಂಗಳೂರು ಹಾಗೂ ಮಡಿಕೇರಿನಲ್ಲಿ 25 ರಿಂದ 30 ಸಾವಿರಗಳಿದ್ದು, ಸ್ಥಳೀಯ ನಿವಾಸಿಗಳ ಉಪಯೋಗಕ್ಕೆ ಮರಳು ಕೈಗೆಡುಕದ ಸರಕಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.