ತಂದೆ ತಾಯಿಯ ಗುಣಗಳನ್ನೇ ಮಕ್ಕಳು ಕೂಡ ಅನುಸರಿಸುತ್ತಾರೆ ಎಂಬುದಕ್ಕೆ 6 ವರ್ಷದ ನಾಗ್ಪುರದ ಬಾಲಕಿ ತುನಿಶಾಳೇ ಉದಾಹರಣೆ. ಬಡ ಮಕ್ಕಳಿಗೆ ತನ್ನ ತಂದೆ ಆಹಾರ ಬಟ್ಟೆ ಬರೆಗಳನ್ನು ಕೊಡುತ್ತಿದ್ದುದ್ದನ್ನು ನೋಡಿರುವ ಈಕೆ ಇದೀಗ ತಾನು ಶಾಲಾ ಬ್ಯಾಗುಗಳನ್ನು ಅಗತ್ಯವಿರುವ ಮಕ್ಕಳಿಗೆ ನೀಡುತ್ತಿದ್ದಾಳೆ.
ತುನಿಶಾ ಖುಶ್ರೂ ಪೋಚಾ ಯಾವಾಗಲೂ ತನ್ನ ತಂದೆ ಖುಶ್ರೂ ತನ್ನ ಎನ್ ಜಿಓ ಸೇವಾ ಕಿಚನ್ ಮೂಲಕ ಬಡವರಿಗೆ ಸಹಾಯ ಮಾಡುವುದನ್ನು ನೋಡುತ್ತಿದ್ದಳು. ಆಹಾರ, ಬಟ್ಟೆಗಳನ್ನು ಅವರು ನೀಡುತ್ತಿದ್ದನ್ನು ಗಮನಿಸಿದ್ದಳು. ಹೀಗಾಗಿ “ಮಕ್ಕಳಿಗೆ ನೀವು ಆಹಾರ, ಬಟ್ಟೆಗಳನ್ನು ನೀಡುತ್ತಿದ್ದೀರಿ, ಆದರೆ ಪುಸ್ತಕ, ಬ್ಯಾಗು, ಪೆನ್ಗಳು ಇಲ್ಲದೇ ಅವರು ಹೇಗೆ ಶಾಲೆಗೆ ಹೋಗುತ್ತಾರೆ?” ಎಂಬ ಪ್ರಶ್ನೆಯನ್ನು ತುನಿಶಾ ತನ್ನ ತಂದೆ ಕೇಳಿದ್ದಳು.
“ಇದು ನನ್ನ ಕಡೆಯಿಂದ ಒಂದು ಸಣ್ಣ ಸಹಾಯವಷ್ಟೇ ಎಂದು ನಾನು ಅವಳಿಗೆ ಹೇಳಿದೆ ಮತ್ತು ಸ್ವತಃ ನೀನೆ ಏನನ್ನಾದರೂ ಮಾಡು ಎಂದು ನಾನು ಅವಳನ್ನು ಒತ್ತಾಯಿಸಿದೆ. ಅವಳು ಈ ಬಗ್ಗೆ ಯೋಚಿಸಿದಳು ಮತ್ತು ಎಲ್ಲರಿಗೂ ಶಾಲಾ ಬ್ಯಾಗ್ ಅನ್ನು ದಾನ ಮಾಡುವುದಾಗಿ ಹೇಳಿದಳು” ಎಂದು ಖುಶ್ರೂ ತನ್ನ ಮಗಳನ್ನು ತಾನು ಉತ್ತೇಜಿಸಿದ ಪರಿಯನ್ನು ವಿವರಿಸಿದರು.
“ನನ್ನ ತಂದೆ ಆಹಾರ ಸಾಮಾಗ್ರಿ ಮತ್ತು ಬಟ್ಟೆಗಳನ್ನು ಅವರಿಗೆ ಕೊಡುತ್ತಿದ್ದರು. ಹೀಗಾಗಿ ನಾನು ಅವರಿಗೆ ಶಾಲಾ ಚೀಲಗಳನ್ನು ಯಾಕೆ ಕೊಡಬಾರದು ಎಂದು ಯೋಚಿಸಿದೆ”ಎಂದು ಮುದ್ದಾದ ನಗುವಿನೊಂದಿಗೆ ತುನಿಶಾ ಹೇಳುತ್ತಾಳೆ.
ತುನಿಶಾ ತನ್ನ ತಂದೆಯ ಸಹಾಯದೊಂದಿಗೆ ಇದುವರೆಗೆ ಸಾವಿರಾರು ಬ್ಯಾಗುಗಳನ್ನು ಎನ್ಜಿಓ ಗೂಂಜ್ಗೆ ಕಳುಹಿಸಿಕೊಟ್ಟಿದ್ದಾರೆ. ಕಡಿಮೆ ಆದಾಯದ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಈ ಬ್ಯಾಗುಗಳನ್ನು ಹಂಚಿಕೆ ಮಾಡಲಾಗುತ್ತದೆ. ನಾಗ್ಪುರದ ಶಾಲೆಗಳು ಸುಮಾರು 1800 ಬ್ಯಾಗುಗಳನ್ನು ಸ್ವೀಕರಿಸಿವೆ. ಮೆಲ್ಗಾಟ್ ಪ್ರದೇಶದ ರೈತರ ಮಕ್ಕಳು 2 ಸಾವಿರ ಬ್ಯಾಗುಗಳನ್ನು ಸ್ವೀಕರಿಸಿದ್ದಾರೆ.
ತುನಿಶಾ ತನ್ನಲ್ಲಿರುವ ವಸ್ತುಗಳಲ್ಲೇ ಇತರ ಮಕ್ಕಳ ಬಳಿಯೂ ಇರಬೇಕು ಎಂದು ಬಯಸುತ್ತಾಳೆ. ಆಕೆಯ ಮಾವ ಆಕೆಗೆ ಮ್ಯಾಜಿಕ್ ಸ್ಲೇಟ್ ಅನ್ನು ಉಡುಗೊರೆಯಾಗಿ ನೀಡಿದ್ದರು, ತುನಿಶಾ ಇದೇ ತರನಾದ ಮ್ಯಾಜಿಕ್ ಸ್ಲೇಟುಗಳನ್ನು ದಾನ ಮಾಡುವ ಎಂದು ತಂದೆಯ ಬಳಿ ಹೇಳಿಕೊಂಡಿದ್ದಳು.
ಆದರೆ ಅಪಾರ ಸಂಖ್ಯೆಯಲ್ಲಿ ಮ್ಯಾಜಿಕ್ ಸ್ಲೇಟ್ ಅನ್ನು ವಿತರಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಂದೆ ಹೇಳಿದಾಗ, ಬೇರೆ ಮಕ್ಕಳಿಗೆ ಸಹಾಯ ಮಾಡುವ ಇತರ ಮಾರ್ಗಗಳನ್ನು ಆಕೆ ಯೋಚಿಸತೊಡಗಿದಳು. ‘ದಿ ಬ್ಯಾಗ್ಸ್ ಆಫ್ ಕೈಂಡ್ನೆಸ್’ ಕಾರ್ಯವನ್ನು ಆಕೆ ಆರಂಭಿಸಿದಳು. ಈ ಕಾರ್ಯಕ್ರಮದಡಿ ಖುಶ್ರೂ ಅವರ ವಿಳಾಸಕ್ಕೆ ಜನರು ಆನ್ಲೈನ್ ಮೂಲಕ ಬ್ಯಾಗ್ ಕಳುಹಿಸಿಕೊಡುತ್ತಾರೆ. ಇದನ್ನು ಸಂಗ್ರಹಿಸಿ ಅವರು ಮಕ್ಕಳಿಗೆ ವಿತರಿಸುತ್ತಾರೆ.
2 ಅಕ್ಟೋಬರ್ 2019 ರಿಂದ ಈ ಕಾರ್ಯಕ್ರಮ ಪ್ರಾರಂಭವಾಯಿತು. ಈ ಸಮಯ ಇದು ದಾನ್ ಉತ್ಸವ್ ಅಥವಾ ಜಾಯ್ ಆಫ್ ಗಿವಿಂಗ್ ವೀಕ್ನ ಪ್ರಾರಂಭವನ್ನು ಸೂಚಿಸುತ್ತದೆ. ಪುಟ್ಟ ತುನಿಶಾಳ ದೊಡ್ಡ ಪ್ರಮಾಣದ ಪ್ರಯತ್ನ ಕಾರ್ಯವನ್ನು ಯಶಸ್ಸುಗೊಳಿಸಿತು ಮತ್ತು ಇನ್ನಷ್ಟು ಮುಂದಕ್ಕೆ ತೆಗೆದುಕೊಂಡು ಹೋಗಲು ಪ್ರೇರೇಪಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.