ಭಾರತೀಯರಲ್ಲಿ ಲುಪ್ತಗೊಂಡಂತಿದ್ದ ಭಾರತೀಯತೆಯ ಭಾವ ಮತ್ತೆ ಪ್ರಕಾಶಮಾನಗೊಳ್ಳುತ್ತಿರುವುದನ್ನು ಇಂದು ದೇಶದೆಲ್ಲೆಡೆ ಕಾಣಬಹುದು. ಹಾಗೆಂದು ನಮ್ಮಲ್ಲಿ ಈ ಮೊದಲು ದೇಶಭಕ್ತಿಯ ಭಾವವಾಗಲೀ, ಭಾರತೀಯರೆನ್ನುವ ಭಾವವಾಗಲಿ ಇರಲಿಲ್ಲವೆಂದಲ್ಲ. ಸಾವಿರಾರು ವರ್ಷಗಳ ಪರಕೀಯ ದಬ್ಬಾಳಿಕೆಗೆ ಒಳಗಾಗಿ ತನ್ನ ಅಸ್ಮಿತೆಗೆ ವಿಸ್ಮೃತಿ ಕವಿದಿದ್ದ ದೇಶವಿಂದು ಮತ್ತೆ ತನ್ನತನದ ಅರಿವಿನಿಂದ ಮೈಕೊಡವಿ ಮೇಲೆದ್ದು ನಿಲ್ಲುತ್ತಿರುವಂತೆ ಭಾಸವಾಗುತ್ತಿದೆ. ಸ್ವಾಮಿ ವಿವೇಕಾನಂದರು, ಶ್ರೀ ಅರವಿಂದರು ಶತಮಾನಗಳ ಹಿಂದೆ ನುಡಿದಿದ್ದ ನುಡಿಗಳಿಂದು ನಿಜಗೊಳ್ಳುತ್ತಿದೆ. ಶತಮಾನಗಳ ಹಿಂದೆಯೇ ’ಮೈಮರೆವೆಯಿಂದ ಭಾರತ ಹೊರಬಂದು ಮೇಲೆದ್ದು ನಿಲ್ಲುತ್ತಿರುವ’ ಯಾವ ಕನಸನ್ನು ಅಂದು ಬಿತ್ತಿದ್ದರೋ ಆ ಕನಸಿಂದು ನನಸಾಗುತ್ತಿದೆ.
ಒಂದು ರಾಷ್ಟ್ರವಾಗಿ ಸಹಸ್ರಾರು ವರ್ಷಗಳ ಕಾಲ ಪರಕೀಯರಿಂದ ನಿಗ್ರಹಿಸಲ್ಪಟ್ಟಿದ್ದ ದೇಶವಿಂದು, ಪರಕೀಯ ದಬ್ಬಾಳಿಕೆಯ ಕತ್ತಿ ಕೋವಿಗಳಿಂದ ಮರೆಗೆ ಸರಿದಿದ್ದ ಭಾರತದ ಕ್ಷಾತ್ರ ತೇಜಸ್ಸು, ನಿರ್ಭೀತವಾಗಿ ಸ್ವಾಭಿಮಾನದಿಂದ ಮುಂದಡಿಯಿಡುತ್ತಿದೆ. ಮರೆತು ಹೋಗಿದ್ದ ತನ್ನ ಸಿಂಹ ಸದೃಶ ಪರಂಪರೆಯನ್ನು ಮರಳಿ ಕಂಡುಕೊಳ್ಳುವ ಛಾತಿಯನ್ನು ಭಾರತವಿಂದು ಪ್ರದರ್ಶಿಸುತ್ತಿದೆ. ಮೊಘಲ್ ಮಾನಸಿಕತೆ ಹಾಗೂ ಬ್ರಿಟಿಷ್ ಮಾನಸಿಕತೆಯಿಂದ ಬಿಡಿಸಿಕೊಂಡು ಭಾರತ ಋಷಿ ಪ್ರಣೀತ ವಿಶ್ವಮುಖಿ ಜ್ಞಾನವನ್ನು ಅಪ್ಪಿಕೊಂಡು ಮುನ್ನಡೆಯುತ್ತಿದೆ.
1947 ರಲ್ಲಿ ದೇಶ ಸ್ವಾತಂತ್ರ್ಯವನ್ನು ಪಡೆದಾಗ ಭೌತಿಕ ಸ್ವರೂಪದಲ್ಲಿ ಬ್ರಿಟೀಷರಿಂದ ಬಿಡುಗಡೆಗೊಂಡರೂ ಬೌದ್ಧಿಕವಾಗಿ ಪೂರ್ಣಪ್ರಮಾಣದಲ್ಲಿ ಬಿಡಿಸಿಕೊಂಡಿರಲಿಲ್ಲ. ಅದರ ಪರಿಣಾಮ ನಮ್ಮ ಶಿಕ್ಷಣ ನೀತಿ, ಇತಿಹಾಸ ನಿರೂಪಣೆ, ಸಂಸ್ಥೆಗಳ ನಿರ್ಮಾಣ, ಅಭಿವೃದ್ದಿ ಮಾನದಂಡಗಳ ಕುರಿತ ಪರಕೀಯ ಕಲ್ಪನೆಗಳೇ ನಮಗೆ ಬಳುವಳಿಯಾಗಿ ಬಂದಿತ್ತು. ಹೀಗಾಗಿ ಬ್ರಿಟಿಷರು ಭಾರತದಿಂದ ನಿರ್ಗಮಿಸಿದ ಬಳಿಕವೂ ಹಲವು ದಶಕಗಳ ಕಾಲ ಬ್ರಿಟಿಷ್ ಮಾನಸಿಕತೆಯೇ ನಮ್ಮನ್ನಾಳಿತು ಎಂದರೆ ಅತಿಶಯೋಕ್ತಿಯಲ್ಲ. ಇಂತಹ ಪರೋಕ್ಷ ಆಳ್ವಿಕೆಯ ಪರಿಣಾಮ ನಮ್ಮ ತರುಣ ಸಮಾಜ ಮಾನಸಿಕವಾಗಿ ತಮ್ಮನ್ನು ತಾವು ಒಂದು ಶ್ರೇಷ್ಠ ಪರಂಪರೆಗೆ, ನಾಗರಿಕತೆಗೆ ಸೇರಿದವರೆನ್ನುವ ಅನುಭವದಿಂದ ವಂಚಿತರಾದರು. ದೇಶವನ್ನಾಳಿದ ನಾಯಕರಿಗೂ ರಾಷ್ಟ್ರವನ್ನು ಮಾನಸಿಕ ಗುಲಾಮಿತನದಿಂದ ಬಿಡುಗಡೆಗೊಳಿಸುವ ತುರ್ತಿನ ಅನಿವಾರ್ಯತೆ ಅರ್ಥವಾಗಲಿಲ್ಲ. ಹೀಗಾಗಿ ದೇಶದ ಅನ್ನ, ನೀರು, ಗಾಳಿಯನ್ನು ಸ್ವೀಕರಿಸಿಯೂ ದೇಶಕ್ಕೆ ನಿಷ್ಠೆಯನ್ನು ತೋರಿಸಲೇಬೇಕಾಗಿಲ್ಲ ಎನ್ನುವ ವಿಕೃತಿಯ ಭಾವನೆ ಬೆಳೆಯಲಾರಂಭಿಸಿತು. ಸ್ವಂತ ದೇಶವನ್ನೇ, ಸ್ವಂತ ಪರಂಪರೆಯನ್ನೇ ಜರೆಯುವುದನ್ನು ವಿಚಾರವಾದ, ವೈಚಾರಿಕತೆಯ ಹೆಸರಿನಲ್ಲಿ ಸಮರ್ಥನೆ ನೀಡುತ್ತಾ ಬರಲಾಯಿತು. ಪರಿಣಾಮವಾಗಿ ನಮ್ಮ ದೇಶದಲ್ಲಿ ವಿದ್ವಾಂಸರೆನ್ನಿಸಿಕೊಂಡವರು ವೈಚಾರಿಕವಾಗಿ ಪಶ್ಚಿಮ ದೇಶದ ಭಾರತ ನಿಂದಕರಿಗೆ ಬೇಕಾದ ಸುಳ್ಳು ಸಂಪನ್ಮೂಲವನ್ನು ಸೃಷ್ಟಿಸಿಕೊಡುವ ಏಜೆಂಟರಾಗಿ ಕಾರ್ಯನಿರ್ವಹಿಸತೊಡಗಿದರು. ಈ ಮನಸ್ಥಿತಿ ಎಷ್ಟು ವ್ಯಾಪಕವಾಗಿ ಬೆಳೆಯಿತೆಂದರೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ರಾಷ್ಟ್ರೀಯ ಅಧ್ಯಯನ ಸಂಸ್ಥೆಗಳಲ್ಲಿ ಕುಳಿತವರು ಭಾರತದ ಪರಂಪರೆ , ದರ್ಶನ, ಸಂಸ್ಕೃತಿಯ ಕುರಿತು ಅಭಿಮಾನದಿಂದ ಮಾತನಾಡುವುದನ್ನು, ಈ ಕುರಿತು ಸಂಶೋಧನೆಯನ್ನು ನಡೆಸುವುದನ್ನು ಒಂದು ಬಗೆಯ ಕೀಳುಗುಣಮಟ್ಟದ ಚಟುವಟಿಕೆ ಎನ್ನುವಂತೆ ಬಿಂಬಿಸುತ್ತಾ, ವೈಚಾರಿಕತೆ ಎಂದರೆ ಪಶ್ಚಿಮ ಜಗತ್ತಿನ ಭಾರತ ಭಂಜನೆಯ ಯೋಜನೆಗೆ ಬೇಕಾದ ಸರಕುಗಳನ್ನು ಪೂರೈಸುವುದು ಎನ್ನುವಲ್ಲಿಗೆ ಬಂದು ನಿಂತಿತ್ತು.
ಆದರೆ ಕಳೆದ ಒಂದೆರಡು ದಶಕಗಳಲ್ಲಿ ವೈಚಾರಿಕ ಕ್ಷೇತ್ರಕ್ಕೆ ಕವಿದಿದ್ದ ಈ ಗ್ರಹಣ ಮುಕ್ತಿಗಾಗಿ ಅನೇಕ ವಿದ್ವಾಂಸರು ಧೈರ್ಯವಾಗಿ ಮುಂದೆ ಬಂದು ಕಾರ್ಯನಿರ್ವಹಿಸಿದ ಪರಿಣಾಮವಾಗಿ ದೇಶದ ವೈಚಾರಿಕ ವಲಯದಲ್ಲಿ ಒಂದು ಹೊಸ ಸಂಚಲನವೇ ಸೃಷ್ಟಿಯಾದಂತಾಯಿತು. ರಾಷ್ಟ್ರೀಯ ಭಾವನೆಯ, ಭಾರತೀಯ ಪರಂಪರೆ, ಸಂಸ್ಕೃತಿಯ ಬಗ್ಗೆ ಗೌರವವಿದ್ದ ಈ ಹೊಸ ಬೌದ್ಧಿಕ ಕ್ಷತ್ರಿಯರ ಹೋರಾಟಕ್ಕೆ ಇಂದು ಜಾಗತಿಕ ಸ್ವೀಕಾರಾರ್ಹತೆಯು ಒದಗಿ ಬಂದಿದೆ. ಪರಿಣಾಮವಾಗಿ ಪಶ್ಚಿಮದ ಪೂರ್ವ್ರಾಗ್ರಹ ರಹಿತ ಸ್ವತಂತ್ರ ಚಿಂತಕರು ಇಂದು ಭಾರತವನ್ನು ನೋಡುವ ದೃಷ್ಟಿಯಲ್ಲಿ ವ್ಯತ್ಯಾಸವಾಗಿದೆ. ಅನೇಕ ಪಶ್ಚಿಮ ಮೂಲದ ಚಿಂತಕರು ಭಾರತಾಧ್ಯಯನಕ್ಕಾಗಿ ಭಾರತದಲ್ಲೇ ಉಳಿದು ಭಾರತವನ್ನು ಅರ್ಥೈಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ಮೊದಲು ಭಾರತಾಧ್ಯಯನದ ಹೆಸರಿನಲ್ಲಿ, ಭಾರತವನ್ನೇ ನೋಡದವರು ಭಾರತೀಯ ಏಜೆಂಟರು ಕೊಟ್ಟ ಸುಳ್ಳು ಮಾಹಿತಿಗಳ ಆಧಾರದಲ್ಲಿ ನಡೆಯುತ್ತಿದ್ದ ಚರ್ಚೆಗಳು ತನ್ನ ಮೌಲ್ಯವನ್ನು ಕಳೆದುಕೊಳ್ಳತೊಡಗಿದೆ.
ಭಾರತೀಯ ವಿದ್ವತ್ ವಲಯ ಇಂದು ಬೌದ್ಧಿಕವಾಗಿ ಭಾರತೀಯಗೊಳ್ಳುತ್ತಿರುವುದರ ಒಟ್ಟು ಪರಿಣಾಮ ನಮ್ಮ ಸಮಾಜದ ಮೇಲಾಗುತ್ತಿದೆ. ಕೇವಲ ಸಂಶೋಧನ ನಿಯತಕಾಲಿಕಗಳಲ್ಲಿ ನಿಗೂಢವಾಗಿ ಉಳಿಯುತ್ತಿದ್ದ ಚರ್ಚೆಗಳು ಇಂದು ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಪತ್ರಿಕೆಗಳ ಅಂಕಣ ರೂಪದಲ್ಲೂ ಪ್ರಕಟಗೊಳ್ಳುತ್ತಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಯುವಜನರನ್ನು ತಲುಪುತ್ತಿದೆ. ಹೀಗಾಗಿ ನಮ್ಮ ಯುವಜನರು ಹಿಂದೆಂದಿಗಿಂತಲೂ ಚಿಂತನಾಪರರಾಗುತ್ತಿದ್ದಾರೆ. ವೈಚಾರಿಕ ಚರ್ಚೆಯನ್ನು ವೈಚಾರಿಕವಾಗಿಯೇ ಮುನ್ನಡೆಸುವಷ್ಟು ಶಕ್ತರಾಗುತ್ತಿದ್ದಾರೆ. ಯಾವ ಜ್ಞಾನಕ್ಕೆ ಪರದೆಯನ್ನು ಹಾಕಿ ಮರೆಮಾಡಲಾಗಿತ್ತೋ ಅಂತಹ ಮರೆಗೆ ಸರಿಸಲ್ಪಟ್ಟ ವಿಚಾರಗಳು ಇಂದು ನಮ್ಮ ಯುವ ಸಮುದಾಯವನ್ನು ತಲುಪಲು ಶಕ್ತವಾದ ಪರಿಣಾಮವಾಗಿ ಅವರು ಈ ಮೊದಲಿನಂತೆ ಪರಕೀಯ ದಾಸ್ಯದಲ್ಲಿ ಉಳಿಯಬಯಸುತ್ತಿಲ್ಲ. ಅವರು ತನ್ನ ದೇಶವನ್ನು, ತನ್ನ ನಾಗರಿಕತೆಯನ್ನು, ತನ್ನ ನೆಲದ ಮೇಲೆ, ಸಂಸ್ಕೃತಿಯ ಮೇಲೆ ಸಾವಿರಾರು ವರ್ಷಗಳ ಕಾಲ ನಡೆದ ದಾಳಿಯನ್ನೂ ಹಾಗೂ ಸ್ವಾತಂತ್ರ್ಯಾನಂತರ ನಮ್ಮ ಪರಕೀಯ ಮೆದುಳಿನ ವಿದ್ವಾಂಸರು ವ್ಯವಸ್ಥಿತವಾಗಿ ಮುಚ್ಚಿಟ್ಟು ಭಾರತೀಯರನ್ನು ತಮ್ಮ ನೆಲದ ಪರಂಪರೆ, ಸಂಸ್ಕೃತಿ ಹಾಗೂ ತಮ್ಮ ಪೂರ್ವಜರ ಸಾಹಸ ಸಾಧನೆಗೆ ಅಪರಿಚಿತರನ್ನಾಗಿಸಿದ ಗ್ಗೆ ಆಕ್ರೋಶದ ಜತೆಗೆ, ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಇದೇ ಮಾದರಿಯ ನಡವಳಿಕೆಗಳ ಬಗ್ಗೆ ತೀವ್ರವಾದ ಪ್ರತಿರೋಧದ ಧ್ವನಿಯನ್ನು ತೋರಿಸುತ್ತಿದ್ದಾರೆ. ಮೇಲ್ನೋಟಕ್ಕೆ ರಾಷ್ಟ್ರೀಯತೆಯ ವಿರೋಧದ ದ್ವನಿಯೇ ಪ್ರಬಲವಾಗಿದೆ ಎಂಬಂತೆ ಮುಖ್ಯ ಶ್ರೇಣಿಯ ಮಾದ್ಯಮಗಳಲ್ಲಿ, ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮುಂಭಾಗದಲ್ಲಿ ನಡೆಯುವ ಪ್ರತಿಭಟನೆಗಳಲ್ಲಿ ಕಾಣಿಸುತ್ತಿದೆಯಾದರೂ ದೇಶದ ಮೂಲೆ ಮೂಲೆಗಳಲ್ಲಿ ಇಂದು ಪ್ರಬಲವಾಗಿ ಮೊಳಗುತ್ತಿರುವ ಯುವಧ್ವನಿ ರಾಷ್ಟ್ರೀಯತೆಯ ದ್ವನಿಯೇ ಆಗಿದೆ. ವೈಚಾರಿಕತೆಯ ಮುಖವಾಡ ತೊಟ್ಟುಕೊಂಡ ನಕಲಿ ವಿದ್ವಾಂಸರು ರಾಷ್ಟ್ರೀಯತೆಯ ಧ್ವನಿಯನ್ನು ಅಪಾಯಕಾರಿಯಾಗಿ, ಫ್ಯಾಸಿಸಂನ ಬೆಳವಣಿಗೆ ಎಂಬುದಾಗಿ ದೊಡ್ಡ ಕಂಠದಲ್ಲಿ ಬೊಬ್ಬಿರಿದರೂ ದೇಶದ ಯುವಜನರು ಇಂದು ರಾಷ್ಟ್ರೀಯತೆಯ ನೆಲೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವುದರಲ್ಲಿ ಸಂಭ್ರಮಿಸುತ್ತಿದ್ದಾರೆ. ಹೀಗಾಗಿ ದೇಶದೊಳಗಿನ ಕೆಲವು ವಿಶ್ವವಿದ್ಯಾಲಯಗಳಲ್ಲಿ ದೇಶವಿರೋಧಿ ಶಕ್ತಿಗಳಿಂದ ಅಪಾಯಕಾರಿ ಪ್ರಚಾರದ ಅಬ್ಬರ ನಡೆದರೂ ದೇಶದ ಭವಿಷ್ಯಕ್ಕಾಗಿ ಈ ಎಲ್ಲಾ ಅಪಪ್ರಚಾರಗಳನ್ನು ಮೆಟ್ಟಿನಿಂತು ’ಭಾರತ್ ಮಾತಾ ಕೀ ಜಯ್’, ’ವಂದೇ ಮಾತಂರಂ’ನ ಘೋಷಣೆಯೊಂದಿಗೆ ತಿರಂಗದ ಗೌರವನ್ನು ಎತ್ತಿಹಿಡಿದು ಸ್ವಾರ್ಥಿಗಳ ಸುಳ್ಳಿನ ಕಥನಗಳನ್ನು ಮುರಿಯುತ್ತಿದ್ದಾರೆ. ಉದಾಹರಣೆಗೆ ಇತ್ತೀಚೆಗೆ ಪೌರತ್ವ ತಿದ್ದುಪಡಿ ಕಾಯ್ದೆ ೨೦೧೯ನ್ನು ವಿರೋಧಿಸುವ ನೆಪದಲ್ಲಿ ದೇಶದ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಮಾಡಿ, ರಕ್ಷಣಾ ವ್ಯವಸ್ಥೆಯ ಪೊಲಿಸ್, ಸೈನಿಕರೊಂದಿಗೆ ಅನುಚಿತವಾಗಿ ವರ್ತಿಸಿ ದೇಶವಿರೋಧಿಗಳ ಹಾಗೆ ನಡೆದುಕೊಂಡ ಘಟನೆಗೆ ಪ್ರತಿಯಾಗಿ ದೇಶದಲ್ಲಿ ಸಾವಿರಾರು ಕಾಲೇಜುಗಳ ಪರಿಸರದಲ್ಲಿ ತ್ರಿವರ್ಣ ದ್ವಜವನ್ನು ಹಿಡಿದುಕೊಂಡು ಕಿಲೋಮೀಟರ್ಗಳಷ್ಟು ದೂರ ಮಾಡಿದ ಮೆರವಣಿಗೆ, ಯುವಜನರು ಈ ಕಾಯ್ದೆಯನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಬೆಂಬಲದ ಪೋಸ್ಟರ್ಗಳನ್ನು ಹಾಕಿಕೊಂಡದ್ದು ಯಾವುದೋ ನಶೆಯಲ್ಲಿ ಅಲ್ಲ. ಅವರೊಳಗಿನ ರಾಷ್ಟ್ರೀಯತೆಯ ಕಿಚ್ಚು ಪ್ರಜ್ವಲಿಸಲಾರಂಭಿಸಿದ ಲಕ್ಷಣವಿದು. ಇದು ಸಾಂಕೇತಿಕ ಆರಂಭವೂ ಹೌದು. ಶತಮಾನಗಳ ಹಿಂದೆ ರಾಷ್ಟ್ರವನ್ನು ಬಂಧಮುಕ್ತಗೊಳಿಸಲು ನಡೆಸಿದ ಹೋರಾಟದ ರಣಾಂಗಣಕ್ಕೆ ಹೇಗೆ ಸ್ವಯಂ ಪ್ರೇರಿತರಾಗಿ ಸಾವಿರಾರು ಯುವಜನರು ದುಮ್ಮಿಕ್ಕಿದ್ದರೋ ಅದೇ ಮಾದರಿಯಲ್ಲಿಂದು ಯುವಜನರು ರಾಷ್ಟ್ರ- ರಾಷ್ಟ್ರೀಯತೆಗೆ ಒಳಗಿನ ಶತ್ರುಗಳಿಂದಲೇ ಬಂದಿರುವ ಆಪತ್ತನ್ನು ಅರಿತುಕೊಂಡು ತಾವೇ ಉತ್ತರಿಸಲಾರಂಭಿಸಿದ್ದಾರೆ. ಇದೊಂದು ಬಗೆಯ ಹೊಸ ಪರಿವರ್ತನೆ. ರಾಷ್ಟ್ರದ ನಿಜವಾದ ಸ್ವಾತಂತ್ರ್ಯದ ಸಂಭ್ರಮವೂ ಹೌದು.
ಸ್ವಾತಂತ್ರ್ಯ ದೊರಕಿದ 70 ವರ್ಷಗಳ ಬಳಿಕವಾದರೂ ದೇಶದಲ್ಲಿ ನೈಜ ಸ್ವಾತಂತ್ರ್ಯದ ಬೆಳಕು ಕಾಣಿಸಿಕೊಳ್ಳಲಾರಂಭಿಸಿದೆ. ನಮ್ಮ ಮೆದುಳುಗಳಲ್ಲಿ ಮಾನೆಮಾಡಿದ್ದ ಮೆಕಾಲೆ ಆತ್ಮಕ್ಕೆ ಬಿಡುಗಡೆ ಸಿಗಲಾರಂಬಿಸಿದೆ. ಯಾರು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಏಳು ದಶಕಗಳ ಕಾಲ ಮೇಕಾಲೆ ಪ್ರೇತಾತ್ಮವನ್ನು ಪೋಷಿಸುತ್ತಾ ಬಂದಿದ್ದರೋ, ಹಾಗೆ ಪೋಷಿಸುವ ತಾವೇ ಮೆಕಾಲೆ ಮಾನಸಪುತ್ರರೆಂದು ಸಂಭ್ರಮಿಸಿಕೊಳ್ಳುತ್ತಿದ್ದರೋ ಅಂತಹ ದಾಸ್ಯಬುದ್ದಿಗಳು ಇಂದು ನರಳತೊಡಗಿದೆ. ಆ ನರಳುವಿಕೆಯೇ ರಾಷ್ಟ್ರೀಯ ಹಿತಾಸಕ್ತಿಯನ್ನು ವಿರೋಧಿಸುವ ರೂಪದಲ್ಲಿ ಪ್ರಕಟಗೊಳ್ಳುತ್ತಿರುವುದು. ಅದು ಕೆಲವೊಮ್ಮೆ ಪ್ರತಿಭಟನೆಯಾಗಿ, ಕೆಲವೊಮ್ಮೆ ಅಸಹಿಷ್ಣು ಅಬ್ಬರಿಸುವಿಕೆಯಲ್ಲಿ ವ್ಯಕ್ತವಾಗುತ್ತಿದೆ. ದಶಕಗಳಿಂದ ಕಟ್ಟಿದ ಸುಳ್ಳಿನ ಸೌಧ ಕುಸಿಯುತ್ತಿರುವಾಗ ತಮ್ಮ ಸ್ವಯಂ ರಕ್ಷಣೆಗಾಗಿ ಸೆಕ್ಯುಲರಿಸಂ, ಬಹುತ್ವ ಭಾರತ, ಫ್ಯಾಸಿಸಂ, ಸಂವಿಧಾನ ಮೊದಲಾದ ಗುರಾಣಿಗಳನ್ನು ಮುಂದೊಡ್ಡುತ್ತಾ ತಮ್ಮನ್ನು ಕಾಪಾಡಿಕೊಳ್ಳಲು ಹವಣಿಸುತ್ತಿದ್ದಾರೆ. ಆದರೆ ಯುವ ಭಾರತ ಈ ಕಪಟಕ್ಕೆ ಸೋಲದೆ ಮೇಲೆದ್ದು ನಿಲ್ಲುತ್ತಿದೆ. ವಿಭಜನೆಯ, ಭಾರತ ಭಂಜನೆಯ ವಾದ-ಚರ್ಚೆಗಳನ್ನು ಆಧಾರಗಳ ಸಮೇತ ಭಗ್ನಗೊಳಿಸುತ್ತಾ ವಿಚಾರಪಥದಲ್ಲಿ ಸಾಗುತ್ತಿದ್ದಾರೆ. ಹೀಗಾಗಿ ಅಂಬೇಡ್ಕರ್ ಹೆಸರಿನಲ್ಲಿ, ಸಂವಿಧಾನದ ಹೆಸರಿನಲ್ಲಿ ತಮ್ಮ ಕುಯುಕ್ತಿಗಳಿಗೆ ರಕ್ಷಣೆಯ ತಡೆಗಳನ್ನು ನಿರ್ಮಿಸುತ್ತಿದ್ದವರ ಪೊಳ್ಳುತನ ಬಯಲಾಗುತ್ತಿದೆ. ದೇಶಕ್ಕೆ ಬೆಂಕಿ ಹಚ್ಚುವ ದುರುಳರನ್ನು ಸಾಕಿಕೊಳ್ಳುತ್ತಾ ಬಂದವರ ಬಂಡವಾಳ ಬಯಲಾದ ಪರಿಣಾಮ ಲಕ್ಷಾಂತರ ಯುವಜನರು ತಾವೇ ರಾಷ್ಟ್ರವನ್ನು ಬೆಳಗುವ ಹಣತೆಗಳಾಗಲು ಮುಂದೆ ನಿಂತಿದ್ದಾರೆ. ಈ ಬೆಳವಣಿಗೆ ರಾಜಕೀಯ ಪ್ರೇರಿತ ಅಲ್ಲ. ತುರ್ತುಪರಿಸ್ಥಿತಿಯ ವಿರುದ್ಧ ಈ ದೇಶದಲ್ಲಿ ಮೊಳಗಿದಂತಹ ಯುವ ದ್ವನಿಯೇ ಇಂದು ರಾಷ್ಟ್ರೀಯ ಹಿತದ ಪರ ಮೊಳಗುತ್ತಿರುವುದು. ಕಾಶ್ಮೀರವನ್ನು ಪ್ರತ್ಯೇಕವಾಗಿರಿಸಿದ್ದ 370ನೇ ವಿಧಿ ರದ್ದಾದಾಗ, ದೇಶದ ಸೈನಿಕ ನೆಲೆಗಳ ಮೇಲೆ ನಡೆದ ಭಯೋತ್ಪಾದಕರ ದಾಳಿಗೆ ಪ್ರತ್ಯುತ್ತರವಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ಮತ್ತು ಅಕ್ರಮ ವಲಸಿಗರಿಂದ ದೇಶವನ್ನು ಕಾಪಾಡಲು ದೇಶ ಒಂದು ಹೆಜ್ಜೆ ಮುಂದಿಟ್ಟಾಗ ಲಕ್ಷಾಂತರ ಯುವ ಜನರ ಹೃದಯತುಂಬಿ ಮೊಳಗಿದ ಭಾರತ ಮಾತೆಯ ಜಯಕಾರ ತುಟಿಯಿಂದ ಹೊಮ್ಮಿದ್ದಲ್ಲ, ಅದು ಹೃದಯದ ಮೊರೆತ. ಹೆಮ್ಮೆಯ ದ್ವನಿ. ಇಂತಹ ದೇಶವನ್ನು ಯಾರೋ ಕೆಲವು ದುಷ್ಟ ಬುಧ್ಧಿಯ ವಿಚಾರವಾದಿಗಳು, ರಾಜಕೀಯ ಲಾಭ ನಿರೀಕ್ಷೆಯ ರಾಜಕಾರಣಿಗಳು ದಾರಿತಪ್ಪಿಸಲು ಯತ್ನಿಸಿದರೂ ಅದು ಸಾದ್ಯವಾಗಲಾರದು. ಸಾವಿರಾರು ವರ್ಷಗಳ ನಿದ್ರೆಯನ್ನು ತೊರೆದು ಭಾರತ ಮಾತೆ ಮೈಕೊಡವಿ ಎದ್ದು ನಿಂತಿದ್ದಾಳೆ. ಇನ್ನು ಆಕೆಯನ್ನು ತಡೆಯು ಶಕ್ತಿ ಯಾವುದೂ ಇಲ್ಲ ಎನ್ನುವ ವಿವೇಕವಾಣಿ ನಿಜವಾಗುತ್ತಿದೆ. ರಾಷ್ಟ್ರೀಯತೆಯ ಧ್ವನಿ ಗಟ್ಟಿಯಾಗಿ ಮೊಳಗಲಿ. ಭಾರತವಿರೋಧಿಗಳ ಅಟ್ಟಹಾಸವನ್ನು ಮಟ್ಟಹಾಕುವ ಅನಿವಾರ್ಯತೆಯೂ ಇಂದಿದೆ. ಸುಳ್ಳು ಹೇಳುತ್ತಾ ಅಮಾಯಕರನ್ನು ದಾರಿತಪ್ಪಿಸಿ ದೇಶಕ್ಕೆ ಕೊಳ್ಳಿ ಇಟ್ಟವರ ನಿಜ ಮುಖವನ್ನು ರಾಷ್ಟ್ರದ ಜನರ ಮುಂದೆ ತೋರಿಸಬೇಕಾಗಿದೆ.
✍ ಡಾ. ರೋಹಿಣಾಕ್ಷ ಶಿರ್ಲಾಲು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.