ನವದೆಹಲಿ: ಹೊಸ ವರ್ಷದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ಥಾನವನ್ನು ಹೊರತುಪಡಿಸಿ ನೆರೆಯ ರಾಷ್ಟ್ರಗಳ ಮುಖಂಡರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ, ಶುಭಾಶಯವನ್ನು ತಿಳಿಸಿದ್ದಾರೆ.
ಬುಧವಾರ ಭೂತಾನ್ ರಾಜ ಜಿಗ್ಮೆ ಖೇಸರ್ ನಂಗೆಲ್ ವಾಂಗ್ಚಕ್ ಮತ್ತು ಭೂತಾನ್ ಪ್ರಧಾನಿ ಲಿಯೊನ್ಚೆನ್ ಲೋಟೇ ತ್ಸೆರಿಂಗ್ ಅವರೊಂದಿಗೆ, ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಷೆ ಮತ್ತು ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೊಂದಿಗೆ, ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್, ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಮತ್ತು ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.
ಪ್ರಧಾನಿ ಮೋದಿ ಅವರು ಭಾರತದ ಜನರ ಪರವಾಗಿ ಮತ್ತು ತಮ್ಮ ಪರವಾಗಿ ಈ ಮುಖಂಡರುಗಳಿಗೆ ಹೊಸ ವರ್ಷದ ಶುಭಾಶಯಗಳನ್ನು, ಶುಭ ಹಾರೈಕೆಗಳನ್ನು ತಿಳಿಸಿದರು. ‘ನೆರೆಹೊರೆ ಪ್ರಥಮ’ ನೀತಿಗೆ ಭಾರತದ ಬದ್ಧತೆ ಮತ್ತು ಪರಸ್ಪರ ಶಾಂತಿ, ಸುರಕ್ಷತೆ, ಸಮೃದ್ಧಿ ಮತ್ತು ಪ್ರಗತಿಯ ದೃಷ್ಟಿಕೋನವನ್ನು ಅವರು ಈ ವೇಳೆ ಪ್ರತಿಪಾದಿಸಿದ್ದಾರೆ.
ಭೂತಾನ್ ರಾಜನೊಂದಿಗಿನ ಸಂಭಾಷಣೆಯಲ್ಲಿ ಪ್ರಧಾನಿ ಅವರು, ಕಳೆದ ವರ್ಷದ ಪ್ರಮುಖ ಸಾಧನೆಗಳನ್ನು ಎತ್ತಿ ತೋರಿಸಿದರು, ಇದು ಭಾರತ ಮತ್ತು ಭೂತಾನ್ ನಡುವಿನ ವಿಶೇಷ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಕಾರಣವಾಯಿತು ಎಂಬುದಾಗಿ ತಿಳಿಸಿದರು. ಪ್ರಧಾನಿ ತನ್ನ ಕೊನೆಯ ಭೂತಾನ್ ಅ ಭೇಟಿ ಮತ್ತು ಅಲ್ಲಿನ ಜನರಿಂದ ಪಡೆದ ಪ್ರೀತಿ ಮತ್ತು ವಾತ್ಸಲ್ಯವನ್ನು ಪ್ರೀತಿಯಿಂದ ನೆನಪಿಸಿಕೊಂಡರು. ಉಭಯ ದೇಶಗಳ ನಡುವೆ ಯುವ ವಿನಿಮಯ ಕಾರ್ಯಕ್ರಮಗಳನ್ನು ಹೆಚ್ಚಿಸುವ ಅಗತ್ಯತೆಯನ್ನೂ ಅವರು ಒತ್ತಿ ಹೇಳಿದರು. ರಾಜನ ಮುಂಬರುವ ಭಾರತ ಭೇಟಿಯನ್ನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಉಲ್ಲೇಖಿಸಿದ್ದಾರೆ.
ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಷೆ ಅವರು ಪ್ರಧಾನಮಂತ್ರಿಯವರ ಶುಭಾಶಯಗಳನ್ನು ಆತ್ಮೀಯವಾಗಿ ಸ್ವೀಕರಿಸಿದರು ಮತ್ತು ಭಾರತ ಮತ್ತು ಶ್ರೀಲಂಕಾ 2020 ರಲ್ಲಿ ತಮ್ಮ ಸ್ನೇಹ ಸಂಬಂಧವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಉಭಯ ನಾಯಕರು ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿದರು.
ಅಭಿವೃದ್ಧಿಯ ಎಲ್ಲಾ ಪ್ರಯತ್ನಗಳಲ್ಲಿ ಮಾಲ್ಡೀವ್ಸ್ ಜನರು ಯಶಸ್ವಿಯಾಗಬೇಕೆಂದು ಪ್ರಧಾನಿ ಮೋದಿ ಹಾರೈಸಿದರು. ಅಧ್ಯಕ್ಷ ಸೋಲಿಹ್ ಅವರು ಪ್ರಧಾನಮಂತ್ರಿಯವರ ಆಶಯಗಳನ್ನು ಪ್ರೀತಿಯಿಂದ ಒಪ್ಪಿಕೊಂಡರು ಮತ್ತು ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಮೂಲಕ ಮತ್ತು ಒಟ್ಟಾಗಿ ಕೆಲಸ ಮಾಡಲು ಹೊಸ ಪ್ರದೇಶಗಳನ್ನು ಅನ್ವೇಷಿಸುವ ಮೂಲಕ ಭಾರತದೊಂದಿಗಿನ ಸಂಬಂಧಗಳನ್ನು ಇನ್ನಷ್ಟು ಗಾಢ ವಾಗಿಸಲು ಮತ್ತು ಬಲಪಡಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು.
ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಮಾತನಾಡಿದ ಪ್ರಧಾನ ಮಂತ್ರಿ, ಮುಂದಿನ ಮೂರು ವರ್ಷಗಳ ಕಾಲ ಅವಾಮಿ ಲೀಗ್ನ ಅಧ್ಯಕ್ಷರಾಗಿ ಮತ್ತೆ ಆಯ್ಕೆಯಾಗಿರುವುದನ್ನು ಅಭಿನಂದಿಸಿದರು. ಮಾಜಿ ಬಾಂಗ್ಲಾದೇಶದ ಹೈಕಮಿಷನರ್ ಸೈಯದ್ ಮುವಾಝೆಂ ಅಲಿ ಅವರ ಅಕಾಲಿಕ ನಿಧನದ ಬಗ್ಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. 2019 ರಲ್ಲಿ ಭಾರತ-ಬಾಂಗ್ಲಾದೇಶ ಸಂಬಂಧದಲ್ಲಿ ಸಾಧಿಸಿದ ಪ್ರಗತಿಯನ್ನು ಅವರು ಉಲ್ಲೇಖಿಸಿದರು.
ಪ್ರಧಾನಿ ಒಲಿ ಅವರೊಂದಿಗಿನ ಸಂವಾದದಲ್ಲಿ ಪ್ರಧಾನಿ ಮೋದಿ ಅವರು 2019 ರಲ್ಲಿ ಭಾರತ-ನೇಪಾಳ ಸಂಬಂಧದ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.