2010-2019ರ ನಡುವೆ ಭಾರತದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಸುಮಾರು 2 ಶತಕೋಟಿ ಜನರ ಮತದಾನದೊಂದಿಗೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎರಡು ಚುನಾವಣೆಗಳನ್ನು ಕಂಡಿತು. ಹಲವಾರು ವಿಧಾನಸಭಾ, ಸ್ಥಳಿಯಾಡಳಿತ ಚುನಾವಣೆಗಳು ನಡೆದವು. ಬಾಹ್ಯಾಕಾಶ ಕ್ಷೇತ್ರದಲ್ಲಿ ದೈತ್ಯ ಮುನ್ನಡೆಯನ್ನು ನಾವು ಕಂಡೆವು. ಸ್ವಾತಂತ್ರ್ಯದ ನಂತರದ ಕೆಲವು ದೊಡ್ಡ ಮತ್ತು ಮಹತ್ವದ ಸುಧಾರಣೆಗಳು, ರಕ್ಷಣಾ ಮತ್ತು ವಿದೇಶಿ ನೀತಿಗಳಲ್ಲಿನ ಕಾರ್ಯತಂತ್ರದ ಬದಲಾವಣೆಗಳು, ಸುಪ್ರೀಂ ಕೋರ್ಟ್ನ ಕೆಲವು ಹೆಗ್ಗುರುತು ತೀರ್ಪುಗಳು, ರೈಲ್ವೆಯ ಪುನರುಜ್ಜೀವನ, ಹಿಂದೆಂದೂ ಕಂಡಿರಿಯದ ವೇಗದಲ್ಲಿ ಹೆದ್ದಾರಿಗಳ ನಿರ್ಮಾಣ, ಬೃಹತ್ ಮೂಲಸೌಕರ್ಯಗಳು, ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ , ವಿಶ್ವಕಪ್ ಗೆಲುವು ಮತ್ತು ಮಹಾತ್ಮ ಗಾಂಧಿಯವರ ದೃಷ್ಟಿಕೋನವನ್ನು ನನಸಾಗಿಸಲು ಪ್ರಯತ್ನ ಇತ್ಯಾದಿಗಳಿಗೆ ಭಾರತ ಸಾಕ್ಷಿಯಾಗಿದೆ.
ಈ ದಶಕದಲ್ಲಿ ನಡೆದ 10 ಪ್ರಮುಖ ಸುದ್ದಿಗಳ ಒಂದು ವಿಸ್ತೃತ ನೋಟ ಇಲ್ಲಿದೆ
1. ನರೇಂದ್ರ ಮೋದಿ ಮತ್ತು 2014 ಮತ್ತು 2019ರ ಲೋಕಸಭಾ ಚುನಾವಣೆ
ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತ 2014 ಮತ್ತು 2019ರಲ್ಲಿ ಎರಡು ಲೋಕಸಭಾ ಚುನಾವಣೆಯನ್ನು ಕಂಡಿದೆ. ಈ ಎರಡೂ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವನ್ನು ಕಂಡಿದೆ. ಗುಜರಾತ್ ಮುಖ್ಯಮಂತ್ರಿಯಾಗಿ ಸಾಕಷ್ಟು ಹೆಸರು ಮಾಡಿದ್ದ ಮೋದಿ ತಮ್ಮ ಗುಜರಾತ್ ಮಾದರಿಯನ್ನು ಇಟ್ಟುಕೊಂಡು ದೇಶದ ಚುಕ್ಕಾಣಿಯನ್ನು ಹಿಡಿದರು. “ಅಬ್ ಕಿ ಬಾರ್, ಮೋದಿ ಸರ್ಕಾರ್”ಎಂಬ ಘೋಷಣೆಯೊಂದಿಗೆ ಬಿರುಸಿನ ಪ್ರಚಾರ ನಡೆಸಿದ ಬಿಜೆಪಿಯು ನರೇಂದ್ರ ಮೋದಿ ಅವರು ಸಿಎಂ ಆಗಿ ನೀಡಿದ ಧೈರ್ಯಶಾಲಿ ಮತ್ತು ಪರಿಣಾಮಕಾರಿ ಆಡಳಿತವನ್ನು ಜನತೆಗೆ ಮನದಟ್ಟು ಮಾಡಿಕೊಂಡಿತ್ತು. ಮೋದಿ ವರ್ಚಸ್ಸಿಗೆ ತಲೆದೂಗಿ ಜನ ಅವರನ್ನೇ ಪ್ರಧಾನಿಯಾಗಿ ಆಯ್ಕೆ ಮಾಡಿದರು. 5 ವರ್ಷದ ಅವರ ಆಡಳಿತ ಜನರನ್ನು ತೀವ್ರವಾಗಿ ಆಕರ್ಷಿಸಿತ್ತು, ಅದೇ ಕಾರಣದಿಂದ ಅವರು 2019ರ ಅವಧಿಯಲ್ಲಿ ಇನ್ನಷ್ಟು ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರದ ಗದ್ದುಗೆಗಳನ್ನು ಏರಿದರು. ಈ ಎರಡೂ ಲೋಕಸಭಾ ಚುನಾವಣೆ ಮತ್ತು ಮೋದಿಯವರ ಅಭೂತಪೂರ್ವ ಗೆಲುವು 2010-19ರ ದಶಕದ ಅತೀದೊಡ್ಡ ಸುದ್ದಿಗಳಾದವು ಮತ್ತು ಭಾರತವನ್ನು ವಿಶ್ವವೇ ತಿರುಗಿ ನೋಡಿದಂತೆ ಮಾಡಿದವು.
2. ಭಾರತದ ಬಾಹ್ಯಾಕಾಶ ಯಾತ್ರೆಗಳು
2010-2019ರ ಸಾಲಿನಲ್ಲಿ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅತೀ ಎತ್ತರದ ಮೈಲಿಗಲ್ಲನ್ನು ಸಾಧಿಸಿದೆ. ಇಸ್ರೋ ಇಡೀ ಜಗತ್ತನ್ನೇ ನಿಬ್ಬೆರಗಾಗಿಸಿದೆ. ಮಂಗಳ, ಚಂದ್ರ ಮತ್ತು ಇನ್ನಷ್ಟು ಮಿಷನ್ಗಳು ಭಾರತದ ಬಾಹ್ಯಾಕಾಶ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುವಂತಹ ಸಾಧನೆಗಳು. ಸೆಪ್ಟೆಂಬರ್ 2014 ರಲ್ಲಿ ಇಸ್ರೋ ತನ್ನ ಮೊದಲ ಪ್ರಯತ್ನದಲ್ಲಿ ಮಂಗಳ ಗ್ರಹವನ್ನು ತಲುಪಿದ ವಿಶ್ವದ ಮೊದಲ ರಾಷ್ಟ್ರವಾದಾಗಿ ಇತಿಹಾಸ ನಿರ್ಮಿಸಿತು. ಇದು ಭಾರತದ ವಿಜ್ಞಾನಿಗಳ ಗಮನಾರ್ಹ ಸಾಧನೆ. ಫೆಬ್ರವರಿ 2017 ರಲ್ಲಿ, 104 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ-ಸಿ 37 ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್ನಿಂದ ಉಡಾವಣೆ ಮಾಡಲಾಯಿತು. ಸುಮಾರು 18 ನಿಮಿಷಗಳಲ್ಲಿ, ಎಲ್ಲಾ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ತಲುಪಿಸಲಾಯಿತು. ಭಾರತದ ನಡೆಸಿದ ಚಂದ್ರಯಾನ-2 ಕೂಡ ವಿಶ್ವದ ಪ್ರಶಂಸೆಯನ್ನು ಗಳಿಸಿತು. ಈ ಯೋಜನೆ ಭಾಗಶಃ ಮಾತ್ರ ಸಫಲವಾದಾಗ ಇಡೀ ದೇಶವೇ ಇಸ್ರೋಗೆ ಬೆಂಬಲವಾಗಿ ನಿಂತದ್ದು ಈ ದಶಕ ಕಂಡ ಅತ್ಯಂತ ಭಾವನಾತ್ಮಕ ಕ್ಷಣ ಎಂದರೆ ಅತಿಶಯೋಕ್ತಿಯಲ್ಲ. 2022ರಲ್ಲಿ ಬಾಹ್ಯಾಕಾಶಕ್ಕೆ ಭಾರತದ ಮೊದಲ ಸ್ಥಳೀಯ ಮಾನವಸಹಿತ ಮಿಷನ್ ಸೇರಿದಂತೆ ಭವಿಷ್ಯದ ಕಾರ್ಯಾಚರಣೆಯ ಯೋಜನೆಗಳನ್ನು ಇಸ್ರೋ ಈಗಾಗಲೇ ಘೋಷಿಸಿದೆ. ಮಿಷನ್ಗೆ ‘ಗಗನಯಾನ’ ಎಂದು ಹೆಸರಿಸಲಾಗಿದೆ. ಒಟ್ಟಿನಲ್ಲಿ ಈ ದಶಕ ನಮ್ಮ ಬಾಹ್ಯಾಕಾಶ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿತು.
3. ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)
2010-2019ರ ದಶಕದಲ್ಲಿ ಭಾರತ ಅತೀದೊಡ್ಡ ತೆರಿಗೆ ಸುಧಾರಣೆಗೆ ಸಾಕ್ಷಿಯಾಯಿತು. ತೆರಿಗೆ ಸುಧಾರಣಾ ಕ್ರಮವಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯು ಜುಲೈ1ರ, 2017 ಮಧ್ಯರಾತ್ರಿಯಿಂದಲೇ ದೇಶದಾದ್ಯಂತ ಜಾರಿಗೆ ಬಂದಿತು. 3-8-2016 ರಂದು ಅಂದಿನ ಕೇಂದ್ರ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಜಿಎಸ್ ಟಿ ಮಸೂದೆ ಮಂಡಿಸಿದ ನಂತರ ರಾತ್ರಿ 9ರ ತನಕ ಸುದೀರ್ಘ ಚರ್ಚೆ ನಡೆಯಿತು. ಆರಂಭದಿಂದಲೇ ಜಿಎಸ್ಟಿಯನ್ನು ವಿರೋಧಿಸುತ್ತಿರುವ ಎಐಎಡಿಎಂಕೆ ಸಭಾತ್ಯಾಗ ನಡೆಸುವ ಮೂಲಕ ಮತದಾನದಿಂದ ದೂರ ಉಳಿಯಿತು. ಇತರ ಎಲ್ಲ ಪಕ್ಷಗಳು ಮಸೂದೆಯನ್ನು ಬೆಂಬಲಿಸಿದವು. ಹಾಗಾಗಿ ಸಂವಿಧಾನ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಅವಿರೋಧ ಅಂಗೀಕಾರ ನೀಡಿತು. ಸದನದಲ್ಲಿ ಹಾಜರಿದ್ದ ಎಲ್ಲ 203 ಸದಸ್ಯರು ಮಸೂದೆಯ ಪರ ಮತ ಹಾಕಿದವು. ಬಳಿಕ ಮಸೂದೆ ಕಾಯ್ದೆಯಾಗಿ ಪರಿವರ್ತನೆಗೊಂಡು ಜಿಎಸ್ ಟಿ ರಾಷ್ಟ್ರವ್ಯಾಪಿ ಜಾರಿಯಾಯಿತು. ಜಿಎಸ್ಟಿ ಜಾರಿಗೆ ಬರುವುದರೊಂದಿಗೆ ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ, ಸೇವಾ ತೆರಿಗೆ, ಐಷಾರಾಮ ತೆರಿಗೆ ಮತ್ತು ಆಕ್ಟ್ರಾಯ್ ಸೇರಿದಂತೆ ಎಲ್ಲ ಪರೋಕ್ಷ ತೆರಿಗೆಗಳು ರದ್ದಾಗಿವೆ. ಇದು ಈ ದಶಕ ಕಂಡ ಅತೀದೊಡ್ಡ ಸುಧಾರಣೆಯಾಗಿದೆ.
4. ಅಪನಗದೀಕರಣ
ಭಾರತ ಸರ್ಕಾರ 9 ನವೆಂಬರ್ 2016ರಂದು ಎಲ್ಲಾ ರೂ. 500 ಮತ್ತು ರೂ. 1000 ಬ್ಯಾಂಕ್-ನೋಟುಗಳ ಅಮಾನ್ಯೀಕರಣವನ್ನು ಘೋಷಣೆ ಮಾಡಿತು. 8 ನವೆಂಬರ್ 2016ರಂದು ನರೇಂದ್ರ ಮೋದಿಯವರು ಈ ಬಗ್ಗೆ ದೇಶವನ್ನುದ್ದೇಶಿಸಿ ಮಾತನಾಡಿದ ವೇಳೆ ಘೋಷಣೆ ಮಾಡಿದ್ದರು. ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು, ಭಯೋತ್ಪಾದನೆ ತಡೆಗೆ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ಬಳಿಕ 2000 ಮುಖ ಬೆಲೆಯ ಗುಲಾಬಿ ನೋಟುಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಅದಾದ ಬಳಿಕ ಹಲವು ಮುಖಬೆಲೆಯ ಹೊಸ ನೋಟುಗಳನ್ನು ಸರ್ಕಾರ ಚಲಾವಣೆಗೆ ಬಿಟ್ಟಿದೆ. ಇದು ಈ ದಶಕ ಕಂಡ ಮಹಾನ್ ಬದಲಾವಣೆಗಳಲ್ಲಿ ಒಂದಾಗಿದೆ.
5. ನಿರ್ಭಯಾ ಗ್ಯಾಂಗ್ ರೇಪ್
ಡಿಸೆಂಬರ್ 16, 2012ರಂದು ಭಾರತದ ರಾಜಧಾನಿ ದೆಹಲಿಯಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಚಲಿಸುತ್ತಿದ್ದ ಬಸ್ಸಿನಲ್ಲಿ ಆರು ಮಂದಿ ದುಷ್ಕರ್ಮಿಗಳು ಕಬ್ಬಿಣದ ಸರಳಿನಿದ ಹಲ್ಲೆ ನಡೆಸುವ ಮೂಲಕ ದಾರುಣವಾಗಿ ಅತ್ಯಾಚಾರ ಮಾಡಿದ್ದರು. ಈ ಪೈಶಾಚಿಕ ಘಟನೆಯಲ್ಲಿ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ಯುವತಿ 12 ದಿನಗಳ ಕಾಲ ಸಾವು ಬದುಕಿನೊಂದಿಗೆ ಹೋರಾಡಿ 29 ಡಿಸೆಂಬರ್ರಂದು ಕೊನೆಯುಸಿರೆಳೆದಳು. ಈ ಘಟನೆ ಇಡೀ ಭಾರತವನ್ನು ಶೋಕ ಸಾಗರಕ್ಕೆ ತಳ್ಳಿತ್ತು. ಈ ಘಟನೆಯ ಬಳಿಕ ಭಾರತದಲ್ಲಿ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಘಟನೆಗಳ ವಿರುದ್ಧ ಜನಾಕ್ರೋಶ ಸೃಷ್ಟಿಯಾಯಿತು. ಜನ ಜಾಗೃತಿಗಳು ಮೂಡಿದವು. ಸರ್ಕಾರ ನಿರ್ಭಯಾ ಫಂಡ್ ಆರಂಭಿಸಿತು. ರೈಲು, ಬಸ್ಸುಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸಿಸಿಟಿವಿ ಅಳವಡಿಸುವ ಕಾರ್ಯಗಳು ಚುರುಕು ಪಡೆಯಿತು. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದಲ್ಲಿ ಕ್ರಾಂತಿ ಎಬ್ಬಿಸಿದ ಪ್ರಕರಣ ಇದಾಗಿತ್ತು. ಅಪರಾಧಿಗಳಿಗೆ ಗಲ್ಲು ಶಿಕ್ಷೆಯೂ ಘೋಷಣೆಯಾಗಿದೆ.
6. ಭಾರತದ ವಿಶ್ವಕಪ್ ಗೆಲುವು
ಮುಂಬೈನ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ಶ್ರೀಲಂಕಾವನ್ನು ಸೋಲಿಸಿದ ಭಾರತ ತವರಿನಲ್ಲಿ ವಿಶ್ವಕಪ್ ಗೆದ್ದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕ್ರಿಕೆಟ್ನ ಲೋಕದ ಅಗ್ರಗಣ್ಯ ತಾರೆ ಸಚಿನ್ ತೆಂಡೂಲ್ಕರ್ ಅವರ ಅಂತಿಮ ಪ್ರದರ್ಶನವಾದ್ದರಿಂದ ಇದು ಭಾರತಕ್ಕೆ ಒಂದು ಭಾವನಾತ್ಮಕ ಪ್ರಯಾಣವಾಗಿತ್ತು. ಬರೋಬ್ಬರಿ 28 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಕಪ್ ಪ್ರಾಪ್ತಿಯಾಗಿತ್ತು.
7. ಸರ್ಜಿಕಲ್ ಸ್ಟ್ರೈಕ್-ಬಾಲಕೋಟ್ ಮತ್ತು ದೋಕ್ಲಾಂ
ಈ ದಶಕದಲ್ಲಿ ಭಾರತದ ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳು ಸಂಭವಿಸಿತು. ಪಾಕಿಸ್ಥಾನದ ಕುಚೋದ್ಯಕ್ಕೆ ಭಾರತ ತಕ್ಕ ಪಾಠವನ್ನು ಕಲಿಸಿತು. ಉರಿ ಮೇಲೆ ದಾಳಿಯನ್ನು ನಡೆಸಿ ಭಾರತೀಯ ಸೈನಿಕರನ್ನು ಕೊಂದಿದ್ದ ಪಾಕಿಸ್ಥಾನಕ್ಕೆ ಪ್ರತಿಕಾರ ಎಂಬಂತೆ ಭಾರತ ಸರ್ಜಿಕಲ್ ಸ್ಟ್ರೈಕ್ ಅನ್ನು ನಡೆಸಿ ಪಾಕಿಸ್ಥಾನದಲ್ಲಿದ್ದ ಉಗ್ರ ಶಿಬಿರಗಳನ್ನು ನಾಶ ಪಡಿಸಿತು. ಮಾತ್ರವಲ್ಲದೇ, ಪುಲ್ವಾಮ ದಾಳಿಯ ಬಳಿಕ ಏರ್ ಸ್ಟ್ರೈಕ್ ಅನ್ನು ಮಾಡಿ ಬಾಲಕೋಟಿನಲ್ಲಿದ್ದ ಅಪಾರ ಪ್ರಮಾಣದ ಭಯೋತ್ಪಾದಕ ನೆಲೆಗಳನ್ನು ಭಾರತ ನಾಶಪಡಿಸಿತು. ಇದು ಭಾರತದ ಇತಿಹಾಸ ಕಂಡು ಕೇಳರಿಯದ ಅತೀದೊಡ್ಡ ಪ್ರತಿಕಾರ ಕಾರ್ಯಾಚರಣೆಗಳಾಗಿವೆ. ಭಾರತದ ಶಕ್ತಿ ಏನೆಂಬುದನ್ನು ಪಾಕಿಸ್ಥಾನಕ್ಕೆ ಈ ಕಾರ್ಯಾಚರಣೆಗಳ ಮೂಲಕ ತೋರಿಸಲಾಗಿದೆ.
8. ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು
2010-2019ರ ದಶಕದಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಹಲವು ಐತಿಹಾಸಿಕ ತೀರ್ಪುಗಳನ್ನು ಪ್ರಕಟಿಸಿದೆ. ಅವೆಂದರೆ, ಶಬರಿಮಲೆ ತೀರ್ಪು, ತ್ರಿವಳಿ ತಲಾಖ್ ತೀರ್ಪು, ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಬಗೆಗಿನ ತೀರ್ಪು. 370ನೇ ವಿಧಿಯ ಬಗೆಗಿನ ತೀರ್ಪು. ಈ ತೀರ್ಪುಗಳು ದೇಶದಲ್ಲಿ ಹಲವಾರು ಬಗೆಗಿನ ಚರ್ಚೆಗಳನ್ನು ಹುಟ್ಟು ಹಾಕಿವೆ ಮತ್ತು ಹಲವು ವಿವಾದಗಳಿಗೆ ತೆರೆಯನ್ನು ಎಳೆದುಬಿಟ್ಟಿವೆ.
9. ಅಯೋಧ್ಯೆ ಇನ್ನು ಮುಂದೆ ವಿವಾದಿತ ಕೇಂದ್ರವಲ್ಲ
2010-2019ರ ದಶಕ ಕಂಡ ಮಹತ್ವದ ಬೆಳವಣಿಗೆಯೆಂದರೆ ಅಯೋಧ್ಯೆ ವಿವಾದ ಮುಕ್ತವಾಗಿದ್ದು. ಶತಮಾನಗಳಿಂದ ವಿವಾದಕ್ಕೆ ಒಳಗಾಗಿದ್ದ, ದಶಕಗಳ ಕಾಲ ಕಾನೂನು ಹೋರಾಟಕ್ಕೆ ಸಾಕ್ಷಿಯಾಗಿದ್ದ ಹಿಂದೂಗಳ ಆರಾಧ್ಯ ದೇವರು ಶ್ರೀರಾಮನ ಜನ್ಮ ಭೂಮಿ ವಿವಾದಿಂದ ಮುಕ್ತವಾಗಿದೆ. ಅಲ್ಲಿ ರಾಮ ಮಂದಿರ ಕಟ್ಟಲು ಸುಪ್ರೀಂಕೋರ್ಟ್ ಅನುಮತಿ ಸಿಕ್ಕಿದೆ. ಮುಸ್ಲಿಮರಿಗೆ ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ಭೂಮಿಯನ್ನು ನೀಡಲಾಗುತ್ತಿದೆ. ಹೀಗಾಗಿ ಅಯೋಧ್ಯೆ ಇನ್ನು ಮುಂದೆ ಶ್ರದ್ಧಾ ಭಕ್ತಿಯ ಕೇಂದ್ರವೇ ಹೊರತು ವಿವಾದಿತ ಕೇಂದ್ರವಲ್ಲ.
10. ಜಮ್ಮ ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶ
ಸಂವಿಧಾನದ 370 ಮತ್ತು 35 9ಎ ವಿಧಿಯನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಸರ್ಕಾರ 2010-19ರ ದಶಕದಲ್ಲಿ ಕೈಗೊಂಡಿತ್ತು. ಅತ್ಯಂತ ಶಾಂತಿಯುತವಾಗಿ ವಿಧಿಯನ್ನು ರದ್ದುಗೊಳಿಸಿದ್ದು ಮಾತ್ರವಲ್ಲ ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಯಿತು. ಜಮ್ಮು-ಕಾಶ್ಮೀರ ವಿಧಾನಸಭೆ ಇರುವ ಮತ್ತು ಲಡಾಖ್ ವಿಧಾನಸಭೆ ಇಲ್ಲದ ಕೇಂದ್ರಾಡಳಿತವಾಗಿ ಹೊರಹೊಮ್ಮಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.