ಡಿ. ಸತ್ಯಪ್ರಕಾಶ್ ರವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ ಚಿತ್ರ ‘ಒಂದಲ್ಲಾ ಎರಡಲ್ಲಾ’. ವಾಸುಕಿ ವೈಭವ್ ಅವರ ಸಂಗೀತ ಹಾಗೂ ಲವಿತ್ ಅವರ ಛಾಯಾಗ್ರಹಣ ಈ ಸಿನಿಮಾಕ್ಕೆ ಇದೆ. ರೋಹಿತ್ ಪಾಂಡವಪುರ ಎಂಬ ಏಳು ವರ್ಷದ ಹುಡುಗ ಈ ಸಿನಿಮಾದ ಹೀರೋ. ಹಾಗಂತಾ ಇದು ಬರೀ ಮಕ್ಕಳ ಸಿನಿಮಾ ಅಲ್ಲ. ರೋಹಿತ್ ಪಾಂಡವಪುರ, ಸಾಯಿಕೃಷ್ಣ ಕುಡ್ಲ, ಎಂ.ಕೆ.ಮಠ್, ಆನಂದ್ ನೀನಾಸಂ, ಸಂಧ್ಯಾ ಅರಕೆರೆ, ಉಷಾ ರವಿಶಂಕತ್, ತ್ರಿವೇಣಿ ಎಂ. ವಸಿಷ್ಠ ಹಾಗೂ ಜಿ. ಎಸ್. ರಂಗನಾಥ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
“ರಾಮಾ ರಾಮಾ ರೇ” ಚಿತ್ರತಂಡದಿಂದ ತಯಾರಾಗುತ್ತಿರುವ ಸಿನಿಮಾ ಎಂದು ಗೊತ್ತಾದಾಗಲೇ, ಕನ್ನಡ ಚಿತ್ರಗಳ ಕ್ಲಾಸ್ ಪ್ರೇಕ್ಷಕರು “ಒಂದಲ್ಲಾ.. ಎರಡಲ್ಲಾ..” ಸಿನಿಮಾದ ಮೇಲೂ ಒಂದರ್ಥದಲ್ಲಿ ಅಷ್ಟೇ ಪ್ರೀತಿ ಹಾಗೂ ಕಾತರತೆಯಿಂದ ಸಿನಿಮಾ ಬಿಡುಗಡೆಗಾಗಿ ಕಾದಿದ್ದರು ಎಂದರೆ ತಪ್ಪಾಗಲಾರದು. ಆದರೆ ಆ ಸಿನಿಮಾಗಿಂತಲೂ ಹೆಚ್ಚಿನ ಶ್ರಮ, ಕಥಾ ನಿರೂಪಣೆ, ಹಿನ್ನೆಲೆ ಸಂಗೀತ, ಪಾತ್ರಗಳ ಅನಾವರಣ ಹೀಗೆ ಬಹುತೇಕ ವಿಷಯಗಳಲ್ಲಿ ಈ ಸಿನಿಮಾ “ರಾಮಾ ರಾಮಾ ರೇ” ಗಿಂತ ಮುಂದು.
ಕಥೆ:
ಒಬ್ಬ ಎತ್ತರದ ಹಾಗೂ ಧಡೂತಿ ವ್ಯಕ್ತಿ ತನ್ನ ಮಗನೊಂದಿಗೆ ಕ್ರಿಕೆಟ್ ಆಡುವ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ. ನೋಡಲು ಪರ್ವತದಂತೆ ಕಾಣುವ ಆತ ಹಿಮಾಲಯ ಪರ್ವತಕ್ಕಿಂತಲೂ ಹೆಚ್ಚು ಎತ್ತರದ ಪ್ರೀತಿಯನ್ನು ತನ್ನ ಹಿಡಿಯಷ್ಟು ಹೃದಯದಲಿ ಬಚ್ಚಿಟ್ಟುಕೊಂಡು 20 ವರ್ಷದ ಹಿಂದೆ ಮನೆಯ ಕಿಟಕಿ ಹಾರಿ, ಮನೆಬಿಟ್ಟುಹೋದ ಮಗನಿಗಾಗಿ ಕಾಯುತ್ತಿರುತ್ತಾನೆ. ಕಾದೂ ಕಾದೂ ಹುಚ್ಚನಂತಾಗಿರುತ್ತಾನೆ. ದಾರಿಯಲ್ಲಿ ಯಾವುದೇ ಗಂಡು ಮಗು ಒಂಟಿಯಾಗಿ ಕಂಡರೂ, ತನ್ನದೇ ಮಗನೆಂದು ಮನೆಗೆ ಕರೆತಂದು ಉಪಚರಿಸಿ, ಮಗುವನ್ನು ಖುಷಿಯಾಗಿರಿಸಲು ಪ್ರಯತ್ನಿಸುತ್ತಾನೆ. ಅವನದು ಅದೆಂಥಾ ನಿಷ್ಕಲ್ಮಶ ಪ್ರೀತಿ ಅಲ್ಲವೇ? ಮಗು ಕಳೆದುಕೊಂಡ ತಾಯಿಯೊಬ್ಬಳು, ಈತನ ಮನೆಯಲ್ಲಿ ತನ್ನ ಮಗು ಇದೆ ಎಂದು, ಹುಡುಕಿಕೊಂಡು ಬಂದಾಗ ಆಕೆ “ನನ್ನ ಮಗ 30 ನಿಮಿಷ ಕಾಣದೇ ಹೋಗಿದ್ದಕ್ಕೆ ಹುಚ್ಚಿಯಂತಾಗಿದ್ದೆ, ಅಂತಹುದರಲ್ಲಿ, ನೀವು 20 ವರ್ಷದಿಂದ ಮಗುವಿಗಾಗಿ ಕಾಯ್ತಾ ಇದೀರಾ..” ಅಂತಾ ಹೇಳುವಾಗ ತಾಯಿ ಪ್ರೀತಿಯಷ್ಟೇ ತೂಕ ಈ ತಂದೆಯ ಪ್ರೀತಿಗೂ ಸಿಗುತ್ತದೆ.
ಇನ್ನೊಂದು ಮುಸ್ಲಿಂ ಕುಟುಂಬ. ಬಹುತೇಕ ಮುಸ್ಲಿಮರಂತೆ ಆತ ಕೂಡ ಮೆಕಾನಿಕ್. ವಯಸ್ಸಾದ ತಂದೆಗೆ ಮೆಕ್ಕಾಗೆ ಹೋಗುವ ಆಸೆ, ಮತ್ತೊಬ್ಬ ಮಗಳಿಗೆ ಕಲಾ ಕಾಲೇಜು ಸೇರುವ ಬಯಕೆ. ಎಲ್ಲವನೂ ಸರಿದೂಗಿಸಲು ಸಾಧ್ಯವಾಗದ ಬಡತನ. ಆದರೂ ಇವರ ನಡುವೆಯ ಪ್ರೀತಿಗೆ ಕೊರತೆಯಿಲ್ಲ. ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ. ಇವರ ಮನೆಯಲ್ಲೊಂದು ಹಸು. ಆ ಹಸುವಿಗೆ ಪ್ರೀತಿಯಿಂದ ಇವರಿಟ್ಟ ಹೆಸರು “ಭಾನು”. ಇದುವರೆಗೂ ಹಸುವಿಗೆ ಗಂಗೆ, ಗೌರಿ ಎಂಬ ಹೆಸರುಗಳೇ ಕೇಳಿದ್ದು ಹೆಚ್ಚು. ಮನೆಯ ಪ್ರತಿಯೊಬ್ಬರಿಗೂ ಭಾನು ಎಂದರೆ ಪ್ರಾಣ. ಮನುಷ್ಯ ಪ್ರಾಣಿಗಿಂತಲೂ ಕಡೆಯಾಗಿ ಬದುಕು ಸಾಗಿಸುವ ಕಾಲದಲ್ಲಿ, ಪ್ರಾಣಿಯಲ್ಲೂ ಮನುಷ್ಯನನ್ನು ಕಾಣುವ ಕುಟುಂಬವೊಂದರ ಪರಿಚಯ ಮಾಡಿಸುತ್ತಾರೆ ಸಿನಿಮಾದ ಸೂತ್ರಧಾರ ಡಿ. ಸತ್ಯಪ್ರಕಾಶ್ ರವರು. ಭಾನು ಮೇಲಿನ ಪ್ರೀತಿಯು, ಮನೆಯ ಎಲ್ಲರಿಗಿಂತಲೂ ಹೆಚ್ಚಾಗಿ ಇರುವುದು ಈ ಮುಗ್ಧ, ನಿಷ್ಕಲ್ಮಶ ಹೃದಯದ ಸಮೀರನಿಗೆ. ಅಷ್ಟೇ ಅಲ್ಲ, ಈ ಕುಟುಂಬದೊಂದಿಗೆ ಮತ್ತೊಂದು ಹಿಂದೂ ಕುಟುಂಬ ಕೂಡ ಅಷ್ಟೇ ಅಭಿಮಾನ, ಪ್ರೀತಿ, ವಿಶ್ವಾಸ, ಅನ್ಯೋನತೆ, ನೋವು-ನಲಿವಿನಲ್ಲಿನ ಹೊಂದಾಣಿಕೆ, ನಿಸ್ವಾರ್ಥ ಪ್ರೇಮದೊಂದಿಗೆ ಇರುತ್ತದೆ. ಜಾತಿ ಮುಖ್ಯವಲ್ಲ, ಮನುಷ್ಯತ್ವವೊಂದೇ ಮುಖ್ಯ ಎಂದು ಸಾರುತ್ತಾರೆ ಸೂತ್ರಧಾರ.
ಇತ್ತೀಚಿನ ದಿನಗಳಲ್ಲಿ ಗೋರಕ್ಷಣೆ, ಗೋಹತ್ಯೇ ನಿಷೇಧ, ಗೋಮಾಂಸ ಭಕ್ಷಣೆ, ಇತ್ಯಾದಿ ಇತ್ಯಾದಿ ವಿಷಯಗಳಲ್ಲಿ ಮುಸ್ಲೀಮರನ್ನೇ ತಪ್ಪಿತಸ್ಥರೆಂದು ಅನೇಕ ಸಿನಿಮಾ, ಪತ್ರಿಕೆ, ನ್ಯೂಸ್ ಚಾನಲ್, ಸಾಮಾಜಿಕ ಜಾಲತಾಣ ಸೇರಿದಂತೆ ಅನೇಕಾನೇಕ ಮಾಧ್ಯಮಗಳು ಬಿಂಬಿಸಿದ್ದವು. ಕೆಲವು ಈಗಲೂ ಬಿಂಬಿಸುತ್ತಲೇ ಇದೆ. ಆದರೆ ಇಲ್ಲಿ, ಒಂದು ಮುಸ್ಲಿಂ ಕುಟುಂಬವು ಭಾನುವಿನ ಮೇಲಿಟ್ಟ ಪ್ರೀತಿ, ಅಕ್ಕರೆಯನ್ನು ತೆರೆ ಮೇಲೆ ಚಿತ್ರಿಸುವಾಗ ಆ ಎಲ್ಲಾ ಸತ್ ಭಾವನೆಗಳ ಭವ್ಯ ಮೆರವಣಿಗೆ ಮೂಲಕ ಮಾನವೀಯತೆಯ ಸತ್ಯದರ್ಶನ ಮಾಡಿಸುತ್ತಾರೆ. ಸಮಾಜದ ಶಾಂತಿ ಕದಡುತ್ತಿರುವ ಇಂಥಾ ಸಂಧರ್ಭದಲ್ಲಿ ಇಂಥ ಕಥೆಗಳ ಹಾಗೂ ಸಿನಿಮಾಗಳ ಅವಶ್ಯಕತೆ ಇದೆ. ಹಿಂದೂ ಮುಸ್ಲಿಂ ಸಾಮರಸ್ಯದ ಬದುಕನ್ನು ಪರಿಚಯಿಸುವ ಹಾಗೂ ಎಲ್ಲಾ ಮುಸ್ಲಿಂರ ಮೇಲಿರುವ ಗೋವಿನ ಬಗೆಗಿನ ಅಪವಾದ ಸುಳ್ಳಿರಬಹುದೆಂದು ನಿರೂಪಿಸಿದ ನಿರ್ದೇಶಕರಿಗೆ ಹ್ಯಾಟ್ಸಾಫ್.
ಅಷ್ಟೊಂದು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಭಾನು ಆಕಸ್ಮಿಕವಾಗಿ ಕಳೆದುಹೋಗುತ್ತದೆ. ಆಗ ಪ್ರತಿ ಸದಸ್ಯರೂ ಪಡುವ ಯಾತನೆ, ಮನಸಿನ ಕೊರಗನ್ನು ಇಲ್ಲಿ ಪದಗಳಲ್ಲಿ ಹಿಡಿದಿಡುವುದಕ್ಕಿಂತ ಥಿಯೇಟರ್ನಲ್ಲಿಯೇ ಕಣ್ ತುಂಬಿಕೊಳ್ಳುವುದೇ ಒಳಿತು. ಅವರ ನೋವಲ್ಲಿ, ನಾವೂ ಜೊತೆಯಾಗಿಬಿಟ್ಟೇವೇನೋ ಎಂಬಂತೆ ಭಾವನಾತ್ಮಕವಾಗಿ ಪ್ರತಿ ದೃಶ್ಯವೂ ನಿಮ್ಮ ಮನ ಮುಟ್ಟುತ್ತದೆ. ಆ ಭಾನುವನ್ನು ಹುಡುಕಿಕೊಂಡು ಬರುವ ಸಮೀರ, ಸಮೀರನನ್ನು ಹಾಗೂ ಭಾನುವನ್ನು ಹುಡುಕಿಕೊಂಡು ಬರುವ ಆ ಹಿಂದೂ-ಮುಸ್ಲಿಂ ಸಾಮರಸ್ಯದ ಕುಟುಂಬಗಳು, ಹುಡುಕುತ್ತಾ ಹುಡುಕುತ್ತಾ ಪಟ್ಟಣ ಸೇರುತ್ತವೆ. ಹುಲಿ ವೇಷದ ಪಾರ್ಟಿ ಒಂದಾದರೆ, ಹಸುವಿನ ವೇಷ ತೊಟ್ಟ ಪಾರ್ಟಿ ಮತ್ತೊಂದು ಕಡೆ. ಈ ಎರಡೂ ರಾಜಕೀಯ ಪಕ್ಷಗಳ ಹಣಾಹಣಿ ಬೇರೆ. ಈ ಮುಗ್ಧ ಮನಸುಗಳು ಈ ಚುನಾವಣಾ ಪಕ್ಷಗಳ ಜಂಜಾಟದ ನಡುವೆ ಸಿಲುಕಿ ಒದ್ದಾಡುವಾಗ, ಅಲ್ಲಿಗೆ ಬರುವ ಪೋಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಹಾಯದಿಂದ ಆಗುತ್ತಿದ್ದ ಜಗಳ ತಹಬದಿಗೆ ಬಂದು ಪರಿಸ್ಥಿತಿ ಶಾಂತವಾಗುತ್ತಾದೆ. ಹುಲಿವೇಷ ತೊಟ್ಟವನೇ ಈ ಹಸುವಿನಂತಿರೋ ಸಮೀರನನ್ನು ಕಾಪಾಡುತ್ತಾನೆ. ಸಮೀರನನ್ನು ಕಂಡ ಖುಷಿಯಲ್ಲಿ ಅವರಿರುವಾಗ, ಸಮೀರನ ಕಣ್ಣು ಮಾತ್ರ ಮಿಂಚು ಝಳಪಿಸುತ್ತಾ ತನ್ನ ಭಾನುವಿನ ಕಡೆ ಹಾಯುತ್ತದೆ. ಅದೇ ಮುಗ್ಧ ಪ್ರೀತಿ, ಅದೇ ಮಾನವೀಯತೆ. ಸಮೀರನ ಪಾತ್ರದಲ್ಲಿ ಆ ಹುಡುಗಾ ಎಲ್ಲರ ಹೃದಯ ಕದ್ದದಂತೂ ನಿಜ ಬಿಡಿ.
ಅಗ್ನಿಶಾಮಕ ದಳದಿಂದ ಜೋರಾಗಿ ಬೀಸಿದ ನೀರಿನ ರಭಸಕ್ಕೆ ಆ ಎರಡೂ ರಾಜಕೀಯ ಪಕ್ಷಗಳ ಬಾವುಟ, ಪಕ್ಷದ ಪೋಸ್ಟರ್ ಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಒಂದರ್ಥದಲ್ಲಿ “ರಾಜಕೀಯ ಕೊಳೆ” ಕೊಚ್ಚಿಕೊಂಡು ಹೋದಂತೆ ಭಾಸವಾಗುತ್ತದೆ. ನಮ್ಮ ನಾಡಲ್ಲೂ ಈ ತರಹದ ಕೆಟ್ಟ ರಾಜಕೀಯ ಕೊಳೆಯನ್ನು ತೊಲಗಿಸುವ ಸಮಯ ಬರಬೇಕಾಗಿದೆ.
ಮದುವೆಯಾಗಿ ನಾಲ್ಕೈದು ವರ್ಷವಾದರೂ ತಾಯಿಯಾಗದೇ, ಒಳಗೊಳಗೆ ನೋವು ಪಡುವ ಹೆಣ್ಣೊಬ್ಬಳು ಸಮೀರನನ್ನೇ ತನ್ನ ಮಗನಂತೆ ಕಂಡು, ತಾಯಿ ಹೃದಯದ ಅಂತರಾಳದ ದರ್ಶನ ಮಾಡಿಸುತ್ತಾಳೆ. ಮುಸ್ಲಿಂ ಹುಡುಗನಾದ ಸಮೀರನು, ಕಳೆದುಹೋದ ಭಾನು ಬೇಗನೆ ಸಿಗಲೆಂದು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದು ಪೂಜೆ ಹಾಗೂ ಅರ್ಚನೆ ಮಾಡಿಸಲು ಬಂದಾಗ, ಆ ಮುಗ್ಧ ಪ್ರೀತಿಗೆ “ನಿನ್ನ ಭಾನು ಬೇಗನೆ ಸಿಗಲಿ” ಎಂದು ಆಶೀರ್ವದಿಸುವ ಪೂಜಾರಿ ಕೂಡ ಇದ್ದಾನೆ.
ಮಗನ “ಮಿನಿ ಮಿನಿ ಹ್ಯಾಪೀ ಬರ್ತಡೇ” ಮಾಡುವ, ಊರಿಗೆಲ್ಲಾ ಸಾಲ ಕೊಡುವಾತ, ಆಗಾಗ ನಗಿಸುತ್ತಾನಾದರೂ, ಸಮೀರನ ತುಂಟತನ, ಚುರುಕುತನ ಮತ್ತೂ ಮತ್ತೂ ನಗೆಗಡಲಲ್ಲಿ ತೇಲಿಸುತ್ತದೆ. ತುಂಬಾ ಅರ್ಥಗರ್ಭಿತ ಸಾಲುಗಳುಳ್ಳ ಹಾಡುಗಳು ಇವೆಯಾದರೂ, ನೆನಪಿನಲ್ಲಿ ಉಳಿಯುವಂತಾ ಗೀತೆಗಳಿಲ್ಲ ಎಂಬುದೊಂದೇ ಈ ಸಿನಿಮಾದ ನ್ಯೂನತೆ ಎನ್ನಬಹುದು.
ಕುಟುಂಬ ಸಮೇತ ಇಂಥಹ ಸಿನಿಮಾಗಳನ್ನು ನೋಡಬೇಕು. ಸಮೀರನ ತುಂಟತನ ಮಕ್ಕಳಿಗಂತೂ ತುಂಬಾ ಇಷ್ಟವಾಗುತ್ತದೆ. ಹಿನ್ನೆಲೆ ಸಂಗೀತವೂ ಮಧುರ. ಕ್ಯಾಮರಾ ಕೆಲಸ ನಂಬರ್ ಒನ್. ಒಟ್ಟಾರೆ ಸೂತ್ರಧಾರನೇ ನಿಜ ಸರದಾರ. ಬಿಡುವು ಮಾಡಿಕೊಂಡು, ಈ ಸಿನಿಮಾ ನೋಡಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.