ಬೆಂಗಳೂರು: ಹಿಂಸಾತ್ಮಕ ಪ್ರತಿಭಟನೆಯನ್ನು ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಯನ್ನು ನಷ್ಟ ಮಾಡುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದೆ. ಉತ್ತರಪ್ರದೇಶದ ಮಾದರಿಯಲ್ಲೇ ಗಲಭೆಕೋರರಿಂದ ಆಸ್ತಿಪಾಸ್ತಿಗಳಿಗೆ ಆದ ನಷ್ಟವನ್ನು ಭರಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಹೇಳಿದ್ದಾರೆ.
“ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ. ಮಂಗಳೂರಿನಲ್ಲಿ ನಡೆದ ಗಲಭೆಯ ಸಂದರ್ಭದಲ್ಲೂ ಆಸ್ತಿಪಾಸ್ತಿ ನಾಶ ಮಾಡಿದವರನ್ನು ಗುರುತಿಸಲಾಗಿದೆ. ಅವರಿಂದಲೇ ನಷ್ಟವನ್ನು ಭರಿಸುತ್ತೇವೆ. ರಾಜ್ಯ ಸರ್ಕಾರ ಗಲಭೆಯನ್ನು ಹತೋಟಿಗೆ ತರುವಲ್ಲಿ ಸಮರ್ಪಕ ಕಾರ್ಯ ಮಾಡಿದೆ. ಪೊಲೀಸರು ಪಟ್ಟ ಶ್ರಮ ಶ್ಲಾಘನೀಯವಾದುದು” ಎಂದಿದ್ದಾರೆ.
“ತ್ರಿವಳಿ ತಲಾಖೆ ಕಾಯ್ದೆಯ ವೇಳೆ, 370ನೇ ವಿಧಿ ರದ್ಧತಿಯ ವೇಳೆ ರಕ್ತದೋಕುಳಿ ಹರಿಯುತ್ತದೆ ಎಂದು ಕಾಂಗ್ರೆಸ ಮುಖಂಡರು ಹೇಳಿಕೊಂಡಿದ್ದರು. ಆದರೆ ಹಾಗೇನೂ ಆಗಿರಲಿಲ್ಲ. ಹೀಗಾಗಿ ಸಿಎಎ ಹೆಸರಿನಲ್ಲಿ ರಕ್ತ ಹರಿಯುವಂತೆ ಮಾಡಿದ್ದಾರೆ” ಎಂದು ಸಿ. ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಕಂದಾಯ ಸಚಿವ ಆರ್. ಅಶೋಕ್ ಅವರೂ, ಮುಂಬರುವ ದಿನಗಳಲ್ಲಿ ಹಿಂಸೆ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟು ಮಾಡುವವರಿಂದಲೇ ನಷ್ಟ ಸರಿದೂಗಿಸುವುದಾಗಿ ಹೇಳಿಕೊಂಡಿದ್ದಾರೆ.
ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರೂ, ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟು ಮಾಡಿದವರನ್ನು ಗುರುತಿಸಿ ಅವರಿಂದಲೇ ನಷ್ಟ ಭರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಿಎಎ ಪ್ರತಿಭಟನೆ ಕಳೆದ ವಾರ ರಾಜ್ಯದಲ್ಲಿ ತೀವ್ರವಾಗಿ ಇತ್ತು, ಅದರಲ್ಲೂ ಮಂಗಳೂರಿನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಪೊಲೀಸರ ಗೋಲಿಬಾರಿಗೆ ಮೃತಪಟ್ಟಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.