ಆಜ್ತಕ್ ಸುದ್ದಿ ವಾಹಿನಿಗೆ ಸಂದರ್ಶನವನ್ನು ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಐಪಿಸಿ ಮತ್ತು ಸಿಆರ್ಪಿಸಿ ಅನ್ನು ತಿದ್ದುಪಡಿ ಮಾಡುವುದು ಗೃಹ ಸಚಿವಾಲಯದ ಆದ್ಯತೆಗಳಲ್ಲಿ ಒಂದಾಗಿದೆ ಎಂಬುದಾಗಿ ಹೇಳಿದ್ದಾರೆ.
ಅಮಿತ್ ಶಾ ಅವರು ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಸಿಆರ್ಪಿಸಿ (ಅಪರಾಧ ಪ್ರಕ್ರಿಯೆ ಸಂಹಿತೆ) ಯನ್ನು ತಿದ್ದುಪಡಿ ಮಾಡುವುದಾಗಿ ಹೇಳುವ ಮೂಲಕ ಅದನ್ನು ಹೆಚ್ಚು ಪರಿಣಾಮಕಾರಿ ಮತ್ತು ಜನಸ್ನೇಹಿಗೊಳಿಸುವ ತಮ್ಮ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಭಾರತೀಯ ಪೊಲೀಸ್ ಸೇವೆಯ ಹಲವಾರು ಅಧಿಕಾರಿಗಳು ಸೇರಿದಂತೆ ಅನೇಕರು ಅಪರಾಧ ಕಾನೂನುಗಳಲ್ಲಿ ಕೆಲವು ಬದಲಾವಣೆಗಳನ್ನು ತರುವಂತೆ ಮತ್ತು ಭಾರತೀಯ ಸಮಾಜಕ್ಕೆ ಅದನ್ನು ಹೆಚ್ಚು ಪೂರಕವಾಗಿಸುವಂತೆ ಒತ್ತಾಯಿಸಿದ್ದರು.
ಗಮನಾರ್ಹವೆಂದರೆ, ಗುಂಪು ಹತ್ಯೆ ನಿಗ್ರಹಿಸಲು ಪ್ರತ್ಯೇಕ ಕಾನೂನು ಬೇಕು ಎಂದು ಸದಸ್ಯರ ಬೇಡಿಕೆಯ ನಡುವೆಯೂ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯಲ್ಲಿ ಅಗತ್ಯ ತಿದ್ದುಪಡಿಗಳನ್ನು ಸೂಚಿಸಲು ಸಮಿತಿಯನ್ನು ರಚಿಸಿರುವುದಾಗಿ ಹೇಳಿದ್ದಾರೆ.
ಅನುಭವಿ ತನಿಖಾ ಅಧಿಕಾರಿಗಳು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ಗಳೊಂದಿಗೆ ಸಮಾಲೋಚಿಸಿದ ನಂತರ ಐಪಿಸಿ ಮತ್ತು ಸಿಆರ್ಪಿಸಿಯಲ್ಲಿ ಬದಲಾವಣೆಗಳನ್ನು ಮಾಡುವ ಬಗ್ಗೆ ಶಿಫಾರಸುಗಳನ್ನು ಕಳುಹಿಸುವಂತೆ ಎಲ್ಲಾ ರಾಜ್ಯ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರಿಗೆ ಪತ್ರ ಬರೆದಿರುವುದಾಗಿ ಶಾ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುವ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (ಬಿಪಿಆರ್ ಮತ್ತು ಡಿ)ಯು ಐಪಿಸಿ ಮತ್ತು ಸಿ.ಆರ್.ಪಿ.ಸಿ ಯ ವಿವಿಧ ನಿಬಂಧನೆಗಳನ್ನು ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಅಮಿತ್ ಶಾ ಘೋಷಿಸಿದ್ದರು. ದೇಶಾದ್ಯಂತದ ಜನರಿಂದ ಸಲಹೆಗಳನ್ನು ಪಡೆದ ನಂತರ ಈ ಕಾರ್ಯ ಮಾಡಬೇಕು ಎಂದು ಸ್ಪಷ್ಟವಾದ ಸೂಚನೆಯನ್ನು ನೀಡಿದ್ದಾರೆ. ವರದಿಗಳ ಪ್ರಕಾರ, ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಭಾರತೀಯ ದಂಡ ಸಂಹಿತೆಯನ್ನು ಪರಿಷ್ಕರಣೆ ಮಾಡುವುದು ಈ ಸಮಯದ ಅಗತ್ಯವೆಂದು ಹೇಳಿದ್ದಾರೆ. ಏಕೆಂದರೆ ಬ್ರಿಟಿಷರು ಪರಿಚಯಿಸಿದ ಈ ಸಂಹಿತೆಯು ಪ್ರಾಥಮಿಕವಾಗಿ “ಒಡೆಯ ಮತ್ತು ಸೇವಕ” ಮನೋಭಾವದಲ್ಲಿದೆ.
ತನ್ನ ಕಾರ್ಯದ ಮೂಲಕ ಗೃಹ ಸಚಿವಾಲಯವು ದೇಶದ ಅಪರಾಧ ನ್ಯಾಯದಲ್ಲಿ ಬಹುನಿರೀಕ್ಷಿತ ಮತ್ತು ಅಗತ್ಯವಾದ ಬದಲಾವಣೆಯನ್ನು ತರಲಿದೆ. ಐತಿಹಾಸಿಕ ಸನ್ನಿವೇಶದಲ್ಲಿ ಬ್ರಿಟಿಷ್ ರಾಜ್ನ ಹಿತಾಸಕ್ತಿಗಳಿಗಾಗಿ ಜಾರಿಗೊಳಿಸಲಾದ ನಿಬಂಧನೆಗಳೊಂದಿಗೆ ಐಪಿಸಿ ತುಂಬಿದೆ ಎಂಬ ಅಂಶವು ಸತ್ಯವಾದುದು, ಇದರ ಕೆಲವು ನಿಬಂಧನೆಗಳು ವಿಕ್ಟೋರಿಯನ್ ನೈತಿಕತೆಯ ಸಂಕೇತಗಳಾಗಿವೆ, ಅದನ್ನು ನಾವು ಇನ್ನು ಮುಂದೆ ನಮ್ಮ ಕಾನೂನು ಪುಸ್ತಕಗಳಲ್ಲಿ ಓದಬೇಕಾಗಿಲ್ಲ ಎಂಬುದು ಸಂತೋಷದ ಸುದ್ದಿಯಾಗಿದೆ. ಹಲವು ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ಐಪಿಸಿ ಮತ್ತು CrPCಯ ಹಲವು ಹಳೆಯ ಸೆಕ್ಷನ್ಗಳನ್ನು ರದ್ದುಗೊಳಿಸಿದೆ, ಇದೀಗ ಈ ಸಂಹಿತೆಗಳನ್ನು ತಿದ್ದುಪಡಿ ಮಾಡುವುದರಿಂದ ದೇಶದಲ್ಲಿ ಪೊಲೀಸ್ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ವರದಾನವಾಗಲಿದೆ.
ಪೋಲಿಸ್, ಎನ್ಜಿಒಗಳು ಮತ್ತು ನ್ಯಾಯಾಲಯಗಳು ದೇಶದಲ್ಲಿ ಅಪರಾಧ ಕಾನೂನುಗಳ ತಿದ್ದುಪಡಿಯ ಅಗತ್ಯತೆಯ ಬಗ್ಗೆ ಹಲವಾರು ಸಂದರ್ಭಗಳಲ್ಲಿ ಒತ್ತಿ ಹೇಳಿವೆ. ಅತ್ಯಾಚಾರ ಮತ್ತು ಕೊಲೆ ಘಟನೆಗಳು ವೇಗವಾಗಿ ಹೆಚ್ಚುತ್ತಿರುವ ಸನ್ನಿವೇಶದಲ್ಲಿ ಈ ಕಾನೂನುಗಳನ್ನು ತಿದ್ದುಪಡಿ ಮಾಡಲು ಸರ್ಕಾರಕ್ಕೆ ಇದು ಸರಿಯಾದ ಸಮಯ. ಅಪರಾಧ ಕಾನೂನುಗಳ ಬಳಕೆಯಲ್ಲಿಲ್ಲದ ವಿವಿಧ ನಿಬಂಧನೆಗಳಿಂದಾಗಿ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಾಕಷ್ಟು ಕಷ್ಟವಾಗುತ್ತಿದೆ ಎಂದು ಕಂಡುಬಂದಿದೆ, ಇದು ಕೆಲವು ಸಮಯ ಅಪರಾಧಿಗಳ ಪರವಾಗಿ ಇರುತ್ತದೆ ಎಂಬುದು ದುರಾದೃಷ್ಟ. ಹೀಗಾಗಿ ಅಪರಾಧ ದಂಡ ಸಂಹಿತೆ ಮತ್ತು ಅಪರಾಧ ಪ್ರಕ್ರಿಯೆ ಸಂಹಿತೆಗಳಿಗೆ ತಿದ್ದುಪಡಿ ತರುವುದು ಅವಶ್ಯಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.