ಮಹಾರಾಷ್ಟ್ರದ ಮೊದಲ ಸಂಪೂರ್ಣ ಮಹಿಳಾ ಡೈರಿಯು ಒಂದೊಂದೇ ಹೆಜ್ಜೆಯನ್ನು ಮುಂದಿಡುತ್ತಾ ಮಹತ್ವದ ಮೈಲಿಗಲ್ಲನ್ನು ತಲುಪುತ್ತಿದೆ. ಮಹಿಳಾ ಸಬಲೀಕರಣದಲ್ಲಿ ಇದು ದಾಪುಗಾಲಿಡುತ್ತಿದೆ. ಪುಣೆಯ ಮಾವಲ್ನಲ್ಲಿ ಸ್ಥಾಪಿಸಲ್ಪಟ್ಟಿರುವ ಈ ಸಂಪೂರ್ಣ ಮಹಿಳಾ ಡೈರಿಗೆ ಟಾಟಾ ಪವರ್ ಹಣಕಾಸು ಸಹಾಯ ಮಾಡುತ್ತಿದೆ ಮತ್ತು ಅದರ ಉತ್ಪನ್ನಗಳನ್ನು ‘ಕ್ರೆಯೋ’ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ.
ಮಾವಲ್ ಡೈರಿ ಫಾರ್ಮರ್ ಸರ್ವೀಸಸ್ ಪ್ರೊಡ್ಯೂಸರ್ ಕಂ. ಲಿಮಿಟೆಡ್ (ಎಂಡಿಎಫ್ಎಸ್ಪಿಸಿಎಲ್) ಎಂದು ಕರೆಯಲ್ಪಡುವ ಈ ಡೈರಿಯು 2015ರಲ್ಲಿ ಕಾರ್ಯಾರಂಭ ಮಾಡಿತು. 2015ರಲ್ಲಿ 334 ಮಹಿಳಾ ಸದಸ್ಯರೊಂದಿಗೆ ಸಾಧಾರಣ ಮಟ್ಟದಲ್ಲಿ ಪ್ರಾರಂಭವಾಗಿದ್ದ ಈ ಡೈರಿ ಈಗ ಸುಮಾರು 1,200 ಮಹಿಳಾ ರೈತರನ್ನು ಒಳಗೊಂಡಿದೆ.
ಕಳೆದ ನಾಲ್ಕು ವರ್ಷಗಳಲ್ಲಿ 20 ಕೋಟಿ ರೂಪಾಯಿಗಳ ಉದ್ಯಮವನ್ನು ಮುನ್ನಡೆಸುತ್ತಿದೆ. ಈ ಡೈರಿಗೆ ಸುಮಾರು ಶೇ. 40 ರಷ್ಟು ಹಣಕಾಸು ಸಹಾಯವನ್ನು ಟಾಟಾ ಪವರ್ ಮಾಡಿದೆ. ಇಲ್ಲಿನ ಮಹಿಳೆಯರು ಅರೆಕಾಲಿಕ ರೈತರಿಂದ ಕೃಷಿ ಉದ್ಯಮಿಗಳಾಗಿ ಬೆಳೆದಿದ್ದಾರೆ ಮತ್ತು ಯೋಜನೆಯನ್ನು ಸಂಪೂರ್ಣವಾಗಿ ಅವರೇ ಮುನ್ನಡೆಸುತ್ತಿದ್ದಾರೆ ಮತ್ತು ನಿರ್ವಹಿಸುತ್ತಿದ್ದಾರೆ.
“ಈ ಡೈರಿಯಲ್ಲಿ, ಸಹಕಾರಿ ಮಾರ್ಗವನ್ನು ಅಳವಡಿಸಿಕೊಂಡ ಮಹಿಳೆಯರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿದ್ದಾರೆ. ಸಾಂಪ್ರದಾಯಿಕವಾಗಿ, ಡೈರಿ ಸಹಕಾರಿ ಸಂಸ್ಥೆಗಳು ಪುರುಷ ಪ್ರಾಬಲ್ಯವನ್ನು ಹೊಂದಿರುತ್ತವೆ, ಮಹಿಳೆಯರ ಪಾತ್ರವನ್ನು ಆರೈಕೆ-ಪೂರೈಕೆದಾರರಿಗೆ ಸೀಮಿತಗೊಳಿಸಲಾಗುತ್ತದೆ, ಪ್ರಾಣಿಗಳಿಗೆ ಆಹಾರ ಒದಗಿಸುವುದು ಮತ್ತು ಹಾಲುಕರೆಯುವುದಕ್ಕೆ ಮಹಿಳೆಯರು ಸೀಮಿತಗೊಂಡಿರುತ್ತಾರೆ. ಆದರೆ ಇಲ್ಲಿ ಮಹಿಳೆಯರು ಪ್ರಗತಿಪರರಾಗಿ ಬದಲಾವಣೆಯಾಗಿದ್ದಾರೆ. ಎಲ್ಲವನ್ನೂ ಅವರೇ ನಿರ್ವಹಿಸುತ್ತಿದ್ದಾರೆ ”ಎಂದು ಟಾಟಾ ಪವರ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರವೀರ್ ಸಿನ್ಹಾ ಹೇಳುತ್ತಾರೆ.
ಕಂಪನಿಯ ಹೆಡ್-ಹೈಡ್ರೋಸ್ ಅಶ್ವಿನ್ ಪಾಟೀಲ್ ಅವರು ಈ ಯೋಜನೆಯನ್ನು ಪ್ರಾರಂಭಿಸುವ ಹಿಂದಿನ ಉದ್ದೇಶದ ಬಗ್ಗೆ ಮಾತನಾಡಿ, “ಗ್ರಾಮೀಣ ಮಹಿಳೆಯರಿಗೆ ಎಂಡಿಎಫ್ಎಸ್ಪಿಸಿಎಲ್ ಕಾರ್ಯವನ್ನು ಸಂಪೂರ್ಣವಾಗಿ ನಡೆಸಲು ಮತ್ತು ನಿರ್ವಹಿಸಲು ಒಂದು ವೇದಿಕೆಯನ್ನು ನೀಡುವ ಮೂಲಕ ಅವರಿಗೆ ಅಧಿಕಾರ ನೀಡುವುದು ನಮ್ಮ ಉದ್ದೇಶವಾಗಿದೆ” ಎಂದಿದ್ದಾರೆ.
“ನಾಯಕತ್ವದ ಪಾತ್ರಗಳನ್ನು ವಹಿಸಿಕೊಳ್ಳಲು ಅವರಿಗೆ ಅನುವು ಮಾಡಿಕೊಡಲು ನಾವು ಅವರಿಗೆ ಶುದ್ಧ ಹಾಲು ಉತ್ಪಾದನೆ ಮತ್ತು ಪ್ರಾಣಿಗಳ ನಿರ್ವಹಣೆ ಕುರಿತು ದೃಷ್ಟಿಕೋನ ತರಬೇತಿ ನೀಡಿದ್ದೇವೆ ಮತ್ತು ‘ಮಿನಿ ಡೈರಿ ಉದ್ಯಮಶೀಲತೆ’ ಪ್ರಮಾಣಪತ್ರಗಳನ್ನು ನೀಡಿದ್ದೇವೆ” ಎಂದು ಪಾಟೀಲ್ ಹೇಳಿದ್ದಾರೆ.
ಪ್ರಸ್ತುತ ಭಾರತದ ಹಾಲು ಉತ್ಪಾದನೆಯು ಪ್ರತಿದಿನ 176.40 ದಶಲಕ್ಷ ಟನ್ಗಳಷ್ಟಿದೆ ಎಂದು ವಕ್ತಾರರು ತಿಳಿಸಿದ್ದಾರೆ.ಅಲ್ಲದೇ, ಹಾಲು ಕರೆಯುವುದು, ಆಹಾರ ನೀಡುವುದು ಮತ್ತು ಮಾರಾಟ ಮಾಡುವಂತಹ ಪಶುಸಂಗೋಪನಾ ಕಾರ್ಯಗಳಲ್ಲಿ ಮಹಿಳೆಯರು ಶೇಕಡಾ 75 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದಾರೆ ಎಂದಿದ್ದಾರೆ.
ಎಂಡಿಎಫ್ಎಸ್ಪಿಸಿಎಲ್ ಯೋಜನೆಯು 26 ಹಳ್ಳಿಗಳನ್ನು ಒಳಗೊಂಡಂತೆ 15 ಸುಧಾರಿತ ಹಾಲು ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಿದೆ, ಇದು ವಿವಿಧ ಪಾಲುದಾರ ಗ್ರಾಮಗಳಿಂದ ಪ್ರತಿದಿನ ಆರು ಟನ್ ಹಾಲು ಸಂಗ್ರಹಿಸುತ್ತದೆ.
ಡೈರಿ ರೈತರು ತಮ್ಮ ಉತ್ಪನ್ನಗಳಿಗೆ ಸಮರ್ಪಕ ಬೆಲೆಯನ್ನು ಪಡೆಯುತ್ತಾರೆ ಮತ್ತು ಘಟಕದ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸಲು, ಎಂಡಿಎಫ್ಎಸ್ಪಿಸಿಎಲ್ 15 ಹೊಸ ಗ್ರಾಮಗಳನ್ನು ಇದರ ವ್ಯಾಪ್ತಿಗೆ ಸೇರಿಸಿದೆ.
ಕಳೆದ ನಾಲ್ಕು ವರ್ಷಗಳಲ್ಲಿ, 3,000 ರೈತ ಕುಟುಂಬಗಳನ್ನು ಒಳಗೊಂಡ ಸ್ಥಳೀಯ ಸಮುದಾಯಗಳು ಮಿನಿ ಡೈರಿಗಳು, ಪಶುವೈದ್ಯಕೀಯ ಸೇವೆಗಳು, ಡೈರಿ ಫಾರಂಗಳನ್ನು ನಿರ್ವಹಿಸುವ ತರಬೇತಿ ಪಡೆದುಕೊಂಡಿವೆ ಮತ್ತು ಉತ್ಪನ್ನ ಮಾರುಕಟ್ಟೆ ಮುಂತಾದ ಇತರ ಬೆಂಬಲ ಸೇವೆಗಳನ್ನು ಸಂಯೋಜಿಸಿವೆ.
ಯೋಜನೆಯನ್ನು ಮತ್ತಷ್ಟು ಹೆಚ್ಚಿಸಲು, ಈ ಸಂಪೂರ್ಣ ಮಹಿಳಾ ಡೈರಿಯು ಮುಂಬೈ, ಪುಣೆ ಮತ್ತು ಇತರ ನಗರಗಳಿಗೆ ಹಾಲು ಪೂರೈಸುವುದಲ್ಲದೆ, ಉತ್ತಮ ಗುಣಮಟ್ಟದ ಡೈರಿ ಉತ್ಪನ್ನಗಳಾದ ಕೆನೆ, ಬೆಣ್ಣೆ ಮತ್ತು ಕಾಟೇಜ್ ಚೀಸ್ ಪೂರೈಕೆಯಲ್ಲೂ ತೊಡಗಿವೆ.
ಈ ಸಂಪೂರ್ಣ ಮಹಿಳಾ ನಿರ್ವಹಣೆಯ ಡೈರಿಯು ಮಹಿಳಾ ಸಬಲೀಕರಣಕ್ಕೆ ಒಂದು ಉತ್ತಮ ಉದಾಹರಣೆಯಾಗಿ ಬೆಳೆದು ನಿಂತಿದೆ. ಮಹಿಳೆಯರ ಸಾಮರ್ಥ್ಯವನ್ನು ಇದು ಸಾರಿ ಸಾರಿ ಹೇಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.