ನವದೆಹಲಿ: ಸಿರಿಯಾ ಮತ್ತು ಅಫ್ಘಾನಿಸ್ಥಾನದಂತಹ ಸಂಘರ್ಷವನ್ನು ಹೊಂದಿರುವ ರಾಷ್ಟ್ರಗಳಿಗೆ ಮತ್ತು ವಿವಿಧ ಧಾರ್ಮಿಕ ಸಂಪ್ರದಾಯಗಳನ್ನು ಹೊಂದಿರುವ ದೇಶಗಳಿಗೆ ಉದಾಹರಣೆಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಭಾರತಕ್ಕೆ ಇದೆ ಎಂದು ಟಿಬೇಟಿಯನ್ ಧರ್ಮಗುರು ದಲೈಲಾಮ ಹೇಳಿದ್ದಾರೆ.
ಧಾರ್ಮಿಕ ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಭಾರತ ಹೆಚ್ಚು ಸಕ್ರಿಯ ಪಾತ್ರ ವಹಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ..
ಪಣಜಿಯಲ್ಲಿ ಗೋವಾ ವಿಶ್ವವಿದ್ಯಾಲಯ ಆಯೋಜಿಸಿದ್ದ ‘ನಮ್ಮ ಆಧುನಿಕ ಕಾಲದಲ್ಲಿ ಪ್ರಾಚೀನ ನಳಂದ ಬೋಧನೆಗಳ ಪ್ರಸ್ತುತತೆ’ ಕುರಿತು ಉಪನ್ಯಾಸವೊಂದರಲ್ಲಿ ಮಾತನಾಡಿದ ದಲೈಲಾಮಾ, ಭಾರತದಲ್ಲಿ ಇಸ್ಲಾಂ ಧರ್ಮದ ಸುನ್ನಿ ಮತ್ತು ಶಿಯಾ ಪಂಥಗಳ ನಡುವಿನ ಹಿಂಸಾಚಾರವನ್ನು ನಾವು ನೋಡಿಲ್ಲ, ಏಕೆಂದರೆ ಭಾರತೀಯ ಮುಸ್ಲಿಮರು ಇತರ ಇಸ್ಲಾಂ ದೇಶಗಳಂತಲ್ಲದೆ ಬಾಲ್ಯದಲ್ಲೇ ವಿಭಿನ್ನ ಧಾರ್ಮಿಕ ಅಸ್ತಿತ್ವದ ಬಗ್ಗೆ ತಿಳಿದುಕೊಂಡು ಬೆಳೆದಿದ್ದಾರೆ ಎಂದಿದ್ದಾರೆ.
ಅಧಿಕೃತವಾಗಿ ಇಸ್ಲಾಮಿಕ್ ರಾಷ್ಟ್ರಗಳು ಎನಿಸಿರುವ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳದಿಂದ ಪಲಾಯನ ಮಾಡುವ ಹಿಂದೂಗಳು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು, ಪಾರ್ಸಿಗಳು ಮತ್ತು ಜೈನರಿಗೆ ಆಶ್ರಯ ನೀಡುವ ಶಾಸನವನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ತರಲು ಪ್ರಯತ್ನಿಸಿದ ಸಂದರ್ಭದಲ್ಲಿ ದಲೈಲಾಮ ಅವರು ಈ ಹೇಳಿಕೆಯನ್ನು ನೀಡಿರುವುದು ವಿಶೇಷವಾಗಿದೆ.
“ಧಾರ್ಮಿಕ ಸಾಮರಸ್ಯವನ್ನು ಉತ್ತೇಜಿಸಲು, ವಿಭಿನ್ನ ಧಾರ್ಮಿಕ ಸಂಪ್ರದಾಯ ಮತ್ತು ಕೆಲವು ಸಂಘರ್ಷಗಳನ್ನು ಹೊಂದಿರುವ ದೇಶಗಳಿಗೆ ಉದಾಹರಣೆಯಾಗಲು ಭಾರತ ಹೆಚ್ಚು ಸಕ್ರಿಯ ಪಾತ್ರ ವಹಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ವಿವಿಧ ಧರ್ಮಗಳು, ವಿವಿಧ ಚಿಂತನೆಗಳು ಇದ್ದರೂ ಕೂಡ ಎಲ್ಲವೂ ಶಾಂತಿಯ ಸಂದೇಶವನ್ನು ಪ್ರೀತಿಯ ಸಂದೇಶವನ್ನು ರವಾನಿಸುತ್ತದೆ ಎಂದಿದ್ದಾರೆ.
ವಿವಿಧ ಧರ್ಮಗಳಿಗೆ ನೆಲೆಯಾಗಿರುವ ಹಲವಾರು ಸಾವಿರ ವರ್ಷಗಳ ಹಳೆಯ ಸಂಪ್ರದಾಯವನ್ನು ಹೊಂದಿರುವ ಭಾರತವನ್ನು ದಲೈಲಾಮ ಅವರು ಧಾರ್ಮಿಕ ಸಾಮರಸ್ಯದ ತವರು ಎಂದು ಶ್ಲಾಘಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.