ವಾಷಿಂಗ್ಟನ್: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ರಭಸದಿಂದ ಅಪ್ಪಳಿಸಿದ್ದ ಕಾರಣ ಭಾರಿ ಹಿನ್ನಡೆಯುಂಟಾಗಿತ್ತು. ಇದೀಗ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಭಾರತೀಯ ಇಂಜಿನಿಯರ್ ಸಹಾಯದಿಂದ ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್ ಅವಶೇಷಗಳನ್ನು ಪತ್ತೆಹಚ್ಚಿದೆ.
ಸೆಪ್ಟೆಂಬರ್ 7ರಂದು ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿಸಲು ಪ್ರಯತ್ನಗಳನ್ನು ನಡೆಸಿದ ಸಂದರ್ಭ ಚಂದ್ರನ ಮೇಲ್ಮೈಯಿಂದ ಸುಮಾರು 2.1 ಮೀಟರ್ ದೂರದಲ್ಲಿರುವಾಗಲೇ ಲ್ಯಾಂಡರ್ ಸಂಪರ್ಕವನ್ನು ಕಳೆದುಕೊಂಡಿತ್ತು.
ವಿಕ್ರಮ್ ಲ್ಯಾಂಡರ್ ಸಂಪೂರ್ಣ ಅವಶೇಷಗಳಾಗಿ ಪರಿವರ್ತನೆಗೊಂಡಿದ್ದು, ಇದು ಧ್ವಂಸಗೊಂಡ ಪ್ರದೇಶವನ್ನು ನಾಸಾ ಪತ್ತೆಹಚ್ಚಿದೆ. ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ‘ದಿ ಲೂನಾರ್ ರಿಕಾನೈಸೆನ್ಸ್ ಆರ್ಬಿಟರ್ ಉಪಗ್ರಹವು ಸೆರೆಹಿಡಿದಿರುವ ಚಿತ್ರದಲ್ಲಿ ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಅವಶೇಷಗಳು ಇರುವುದು ಪತ್ತೆಯಾಗಿದೆ.
ಭಾರತದ ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಷಣ್ಮುಗ ಸುಬ್ರಮಣ್ಯಂ ಎಂಬುವವರು ಅವಶೇಷಗಳನ್ನು ಪತ್ತೆಹಚ್ಚಿದ್ದಾರೆ. Lunar Reconnaissance Orbital Camera (LROC) ಪ್ರಾಜೆಕ್ಟ್ ಮೂಲಕ ವಿಕ್ರಮ್ ಲ್ಯಾಂಡರ್ ಅವಶೇಷಗಳನ್ನು ತೋರಿಸಿಕೊಟ್ಟಿದ್ದಾರೆ. ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಇಳಿಯುವುದಕ್ಕೆ ಮುನ್ನ ಮತ್ತು ಅದರ ನಂತರದ ಫೋಟೋಗಳನ್ನು ತುಲನೆ ಮಾಡಿ ನೋಡಿ ಬಳಿಕ ಅವರು ಅವಶೇಷಗಳನ್ನು ದೃಢಪಡಿಸಿದ್ದಾರೆ. ಈ ಬಗ್ಗೆ ನಾಸಾ ಮತ್ತು ಅರಿಜೋನ ಸ್ಟೇಟ್ ಯುನಿವರ್ಸಿಟಿ ಸೋಮವಾರ ಅಧಿಕೃತ ಮಾಹಿತಿಯನ್ನು ನೀಡಿದೆ.
ಲ್ಯಾಂಡರ್ ಅಪ್ಪಳಿಸಿರುವ ಪ್ರದೇಶದ ವಾಯುವ್ಯ ದಿಕ್ಕಿನಲ್ಲಿ 750 ಮೀಟರ್ ದೂರದಲ್ಲಿ ಲ್ಯಾಂಡರ್ ಅವಶೇಷ ಇದೆ ಎಂದು ಷಣ್ಮುಗ ಸುಬ್ರಮಣ್ಯಂ ತೋರಿಸಿಕೊಟ್ಟಿದ್ದಾರೆ. LROC ಪ್ರಾಜೆಕ್ಟ್ ತಂಡಕ್ಕೆ ಅವಶೇಷಗಳು ಓರೆ ಓರೆಯಾಗಿ ಪತ್ತೆಯಾಗಿದೆ.
ಚಂದ್ರನ ತೀರಾ ಸನಿಹಕ್ಕೆ ಲ್ಯಾಂಡರ್ ಅನ್ನು ಕೊಂಡೊಯ್ಯಲು ಯಶಸ್ವಿಯಾದ ಇಸ್ರೋವನ್ನು ನಾಸಾ ಶ್ಲಾಘಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.