1949ರ ನವೆಂಬರ್ 26ರಂದು ಭಾರತೀಯ ಸಂವಿಧಾನವನ್ನು ಸ್ವೀಕರಿಸಲಾಗಿದೆ. ಇದು ಸ್ವತಂತ್ರ, ಸಾರ್ವಭೌಮ ರಾಷ್ಟ್ರವಾಗಿ ಭಾರತದ ಪಯಣದಲ್ಲಿ ಒಂದು ಮಹತ್ವಪೂರ್ಣವಾದ ಹೆಜ್ಜೆಯಾಗಿದೆ. 1950 ರ ಜನವರಿ 26 ರಂದು ಸಂವಿಧಾನ ಅನುಷ್ಠಾನಗೊಳಿಸಲಾಯಿತು. ಸಂವಿಧಾನ ದಿನವನ್ನು ಮೊತ್ತಮೊದಲ ಬಾರಿಗೆ 2015 ರಂದು ನಾಲ್ಕು ವರ್ಷಗಳ ಹಿಂದೆ ಆಚರಿಸಲು ಪ್ರಾರಂಭಿಸಲಾಯಿತು. ಸಂವಿಧಾನದ ರಚನೆಯಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವಾರ್ಪಣೆ ಮಾಡುವ ಸಲುವಾಗಿ ಈ ದಿನವನ್ನು ಆಚರಣೆಗೆ ತರಲಾಯಿತು.
1947ರಲ್ಲಿ ಭಾರತ ಸ್ವಾತಂತ್ರ್ಯವನ್ನು ಪಡೆದ ಬಳಿಕ, ಕಾಂಗ್ರೆಸ್ ನೇತೃತ್ವದ ಸರಕಾರವು ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ದೇಶದ ಮೊದಲ ಕಾನೂನು ಸಚಿವರಾಗಿ ಸೇವೆ ಸಲ್ಲಿಸುವಂತೆ ಆಹ್ವಾನಿಸಿತು. ಆ. 29 ರಂದು ಅವರನ್ನು ಸಂವಿಧಾನ ರಚನಾ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು ಮತ್ತು ಅವರನ್ನು ಭಾರತದ ಹೊಸ ಸಂವಿಧಾನವನ್ನು ಬರೆಯಲು ಸಂವಿಧಾನ ಸಭೆಯ ನೇಮಕ ಮಾಡಿತು.
ಅಂಬೇಡ್ಕರ್ ನೇತೃತ್ವದ ಸಮಿತಿಯು ಸಂವಿಧಾನವನ್ನು ರಚನೆ ಮಾಡಿತ್ತು, ಮೇಧಾವಿ, ವಕೀಲ, ತಜ್ಞರಾಗಿದ್ದ ಅಂಬೇಡ್ಕರ್ ಅವರು ದೇಶದ ಹಿಂದುಳಿದ ವರ್ಗದವರಿಗೆ, ನ್ಯಾಯ ವಂಚಿತರಿಗೆ ಸಂವಿಧಾನದ ಮೂಲಕ ನ್ಯಾಯವನ್ನು ಒದಗಿಸುವ ಕಾರ್ಯವನ್ನು ಮಾಡಿದರು. ನವೆಂಬರ್ 26 ನ್ನು ಪ್ರತಿವರ್ಷ ರಾಷ್ಟ್ರೀಯ ಕಾನೂನು ದಿನವನ್ನಾಗಿ ಆಚರಣೆ ಮಾಡಲಾಗುತ್ತಿತ್ತು. 1979ರ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್ ಪ್ರಸ್ತಾವನೆಯ ಬಳಿಕ ದಿನಾಚರಣೆಗೆ ತರಲಾಗಿತ್ತು.
ಸಂವಿಧಾನದ ತಜ್ಞ ಅಂಬೇಡ್ಕರವರು 60 ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿದ್ದರು. ಅವರು ರಚನೆ ಮಾಡಿದ ಬರಹ ಸಾಂವಿಧಾನಿಕ ಖಾತ್ರಿಯನ್ನು ನೀಡಿತ್ತು, ಇದರಲ್ಲಿ ಧಾರ್ಮಿಕ ಸ್ವಾತಂತ್ರ್ಯ, ಅಸ್ಪೃಶ್ಯತೆ ನಿವಾರಣೆ, ಅಸಮಾನತೆ ನಿವಾರಣೆಯ ನಾಗರಿಕ ಹಕ್ಕುಗಳನ್ನು ಭದ್ರಪಡಿಸಿತು.
ಮಹಿಳೆಯರಿಗೆ ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳನ್ನು ಅಂಬೇಡ್ಕರ್ ಪ್ರತಿಪಾದಿಸಿದರು. ಉದ್ಯೋಗದಲ್ಲಿ, ನಾಗರಿಕ ಸೇವೆಗಳಲ್ಲಿ, ಶಾಲೆ ಮತ್ತು ಕಾಲೇಜುಗಳಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಅವರು ನೀಡಿದರು. ಈ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಶ್ರೇಯೋಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿಕೊಟ್ಟರು.
90000 ಪದಗಳನ್ನು ಹೊಂದಿರುವ ಭಾರತೀಯ ಸಂವಿಧಾನವು 271 ಜನರ ಶ್ರಮದ ಫಲವಾಗಿದೆ. ಇವರೆಲ್ಲರು ಸಂವಿಧಾನ ಸಭೆಯ ಭಾಗವಾಗಿದ್ದರು. ಸಂವಿಧಾನದ ಆಶಯದ ಫಲವಾಗಿ ಭಾರತದಲ್ಲಿ ಆಳವಾಗಿ ಬೇರೂರಿದ್ದ ಅಸ್ಪೃಶ್ಯತೆ, ಆರ್ಥಿಕ ಮತ್ತು ರಾಜಕೀಯ ಅಸಮಾನತೆ ಸಾಕಷ್ಟು ಪ್ರಮಾಣದಲ್ಲಿ ನಿರ್ಮೂಲನೆಯಾಗಿದೆ.
ಸಂವಿಧಾನವು ಪ್ರತಿಯೊಬ್ಬ ಭಾರತೀಯರ ಹಕ್ಕುಗಳನ್ನು ಎತ್ತಿಹಿಡಿದಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದೃಢಪಡಿಸಿದೆ. ನಮ್ಮ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಸ್ಪಷ್ಟವಾಗಿ ನಮಗೆ ತಿಳಿಸಿಕೊಟ್ಟಿದೆ. ಸಂವಿಧಾನದ ಘನತೆ ಮತ್ತು ಗೌರವಕ್ಕೆ ಧಕ್ಕೆ ಬಾರದಂತೆ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತಾ ಬದುಕುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವೂ ಹೌದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.