ನವದೆಹಲಿ: ಆಯುಷ್ಮಾನ್ ಯೋಜನೆಯ ಬಳಿಕ ಇದೀಗ ಕೇಂದ್ರ ಸರ್ಕಾರವು ಮಧ್ಯಮ ವರ್ಗದವರಿಗೆ ಮತ್ತೊಂದು ಆರೋಗ್ಯ ಯೋಜನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಸಿದ್ಧವಾಗಿದೆ. ಈ ಯೋಜನೆಯು ‘ಆಯುಷ್ಮಾನ್ ಭಾರತ್’ನಂತೆಯೇ ಇರಲಿದೆ ಎಂದು ಮೂಲಗಳು ತಿಳಿಸಿವೆ.
ನೀತಿ ಅಯೋಗ ಈಗಾಗಲೇ ‘ಹೊಸ ಭಾರತಕ್ಕಾಗಿ ಆರೋಗ್ಯ ವ್ಯವಸ್ಥೆ’ ಎಂದು ಕರೆಯುವ ಯೋಜನೆಯ ವರದಿಯನ್ನು ಅಭಿವೃದ್ಧಿಪಡಿಸುತ್ತಿದೆ. ಆಯೋಗದ ಪ್ರಕಾರ, ದೇಶದಲ್ಲಿ ಮಧ್ಯಮ ವರ್ಗದವರಿಗೆ ಅಂತಹ ಯಾವುದೇ ಆರೋಗ್ಯ ಯೋಜನೆ ಇಲ್ಲ, ಇದೇ ಕಾರಣಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ಹೊಸ ಯೋಜನೆಯನ್ನು ತರಲು ಬಯಸುತ್ತಿದೆ.
ಈ ಯೋಜನೆಯು ದೇಶದ ಮಧ್ಯಮ ವರ್ಗದ ಕನಿಷ್ಠ 50% ಜನರನ್ನು ತಲುಪುವ ಗುರಿ ಹೊಂದಿದೆ. ಇದಲ್ಲದೆ, ಯೋಜನೆಯು ಯಶಸ್ವಿಯಾಗಿ ಜಾರಿಗೊಂಡರೆ, ಫಲಾನುಭವಿಗಳು ಕೇವಲ 200-300 ರೂ.ಗಳ ಪ್ರೀಮಿಯಂ ಪಾವತಿಸುವ ಮೂಲಕ ಅತ್ಯುತ್ತಮ ಆರೋಗ್ಯ ಸೇವೆಗಳನ್ನು ಪಡೆಯಬಹುದು.
ಈ ಯೋಜನೆಯಿಂದಾಗಿ ಮಧ್ಯಮ ವರ್ಗಕ್ಕೆ ಸೇರಿದ ಜನರು ತಮ್ಮ ಆರೋಗ್ಯ ವೆಚ್ಚವನ್ನು ಸುಲಭವಾಗಿ ಭರಿಸಬಹುದು ಎಂದು ನೀತಿ ಆಯೋಗ ವರದಿಯಲ್ಲಿ ತಿಳಿಸಿದೆ. ಆಯುಷ್ಮಾನ್ ಭಾರತ ಅಡಿಯಲ್ಲಿ ಸುಮಾರು 40% ಬಡವರು ಈಗಾಗಲೇ ಆರೋಗ್ಯ ಯೋಜನೆಗೆ ಒಳಪಟ್ಟಿದ್ದಾರೆ. ಈ ಯೋಜನೆಯಡಿ, 2022 ರ ವೇಳೆಗೆ 1.5 ಲಕ್ಷ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ತೆರೆಯಲು ಸರ್ಕಾರ ಯೋಜಿಸಿದೆ. ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಮತ್ತು ವೃದ್ಧಾಪ್ಯದ ಕಾಯಿಲೆಗಳು ಸೇರಿದಂತೆ ಹಲವಾರು ರೋಗಗಳಿಗೆ ಚಿಕಿತ್ಸೆ ನೀಡಲು ಈ ಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತಿದೆ.
ಸೋಮವಾರ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು, ‘Health System for a New India: Building Blocks-Potential Pathways to Reform.’ ಎಂಬ ವರದಿಯನ್ನು ಬಿಡುಗಡೆ ಮಾಡಿದರು. ವರದಿಯ ಬಗ್ಗೆ ಪ್ರತಿಕ್ರಿಯಿಸಿದ ನೀತಿ ಆಯೋಗದ ಆರೋಗ್ಯ ಸಲಹೆಗಾರ ಅಲೋಕ್ ಕುಮಾರ್, ಮಧ್ಯಮ ವರ್ಗದವರಿಗೆ ಆರೋಗ್ಯ ವ್ಯವಸ್ಥೆಯನ್ನು ಸ್ಥಾಪಿಸಲು ಮಾರ್ಗಸೂಚಿಯನ್ನು ರೂಪಿಸುವ ಗುರಿಯೊಂದಿಗೆ ಇದನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು. ಇದರಿಂದ, ಸುಮಾರು 50% ರಷ್ಟು ಇನ್ನೂ ಯಾವುದೇ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ವ್ಯಾಪ್ತಿಗೆ ಬಂದಿಲ್ಲದ ಜನರನ್ನು ಒಳಪಡಿಸಲಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.