ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಭಾರತವು ಡಿಜಿಟಲೀಕರಣದಲ್ಲಿ ಹೆಚ್ಚಿನ ಮುನ್ನಡೆಯನ್ನು ಸಾಧಿಸಿದೆ. ಸ್ಮಾರ್ಟ್ಫೋನ್ ಬಳಕೆದಾರರ ಸಂಖ್ಯೆ ಕ್ಷಿಪ್ರ ವೇಗದಲ್ಲಿ ಬೆಳೆಯುತ್ತಿದೆ ಮತ್ತು ಡಾಟಾ ಬಳಕೆ, ಮೊಬೈಲ್ ಡೌನ್ಲೋಡ್ ವೇಗ, ಬ್ರಾಡ್ಬ್ಯಾಂಡ್ ಚಂದಾದಾರಿಕೆ ಗಮನಾರ್ಹ ಜಿಗಿತವನ್ನು ದಾಖಲಿಸಿದೆ. ಅತಿದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ ನಿರ್ವಹಣಾ ಸಲಹಾ ಸಂಸ್ಥೆಯಾದ McKinsey & ಕಂಪನಿ ಪ್ರಕಟಿಸಿದ ವರದಿಯು, ಭಾರತವನ್ನು ವಿಶ್ವದ ಎರಡನೇ ಅತಿ ವೇಗವಾಗಿ ಡಿಜಿಟಲೀಕರಣಗೊಳ್ಳುತ್ತಿರುವ ಆರ್ಥಿಕತೆ ಎಂದು ಘೋಷಿಸಿದೆ.
ಸ್ಥಳೀಯ ಭಾಷೆಗಳಲ್ಲಿ ಡಿಜಿಟಲ್ ವಿಷಯದ ಬಳಕೆಯನ್ನು ಉತ್ತೇಜಿಸುವ ಸಲುವಾಗಿ, ಸ್ಥಳೀಯ ಭಾಷೆಗಳಲ್ಲಿ ಹೆಚ್ಚು ಡಿಜಿಟಲ್ ವಿಷಯವನ್ನು ಮತ್ತು ಆನ್ಲೈನ್ ಅನುವಾದಕ್ಕಾಗಿ ಸಾಧನಗಳನ್ನು ರಚಿಸಲು ರಾಷ್ಟ್ರೀಯ ಮಿಷನ್ ಪ್ರಾರಂಭಿಸಲು ಮೋದಿ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ವರದಿಗಳು ತಿಳಿಸುತ್ತಿವೆ.
ಪ್ರಸ್ತುತ, ದೇಶದಲ್ಲಿ ಡಿಜಿಟಲ್ ವಿಷಯದ ತೀವ್ರ ಕೊರತೆಯಿದೆ. 10 ದಶಲಕ್ಷ ವೆಬ್ಸೈಟ್ಗಳ ಸಮೀಕ್ಷೆಯಲ್ಲಿ ಕೇವಲ 0.55 ರಷ್ಟು ಸೈಟ್ಗಳು ಮಾತ್ರ ಹಿಂದಿಯಲ್ಲಿ ಮತ್ತು ಇತರ ಭಾರತೀಯ ಭಾಷೆಯಲ್ಲಿ ವಿಷಯವನ್ನು ಹೊಂದಿವೆ ಎಂಬುದು ಬಹಿರಂಗಗೊಂಡಿದೆ. ಚೀನಾದ ನಂತರ ಭಾರತವು ಎರಡನೇ ಅತಿದೊಡ್ಡ ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ, ಆದರೆ, ಹಿಂದಿ ಅಥವಾ ಸ್ಥಳಿಯ ಭಾಷೆಯಲ್ಲಿನ ವಿಷಯದ ಕೊರತೆಯಿಂದಾಗಿ ಗ್ರಾಹಕರು ಇಂಗ್ಲಿಷ್ನಲ್ಲಿ ವಿಷಯವನ್ನು ಪಡೆಯುವುದು ಅನಿವಾರ್ಯವಾಗಿದೆ.
ವಿಶ್ವದ ಆರನೇ ಅತ್ಯಂತ ಜನಪ್ರಿಯ ವೆಬ್ಸೈಟ್ ಮತ್ತು ವಿಶ್ವದ ಅತಿದೊಡ್ಡ ಮಾಹಿತಿ ಸಂಪನ್ಮೂಲವಾದ ವಿಕಿಪೀಡಿಯಾ ಹಿಂದಿ ಮತ್ತು ಇತರ ಭಾರತೀಯ ಭಾಷೆಯಲ್ಲಿ ಬಹಳ ಕಡಿಮೆ ವಿಷಯವನ್ನು ಹೊಂದಿದೆ. ಆದ್ದರಿಂದ, ಜನರು ಇಂಗ್ಲಿಷಿನಲ್ಲಿ ವಿಷಯವನ್ನು ಓದುವುದಕ್ಕೆ ಅನಿವಾರ್ಯವಾಗಿ ಸಿಲುಕಿಕೊಳ್ಳುತ್ತಿದ್ದಾರೆ, ಆದರೆ ಹೆಚ್ಚಿನ ಇಂಟರ್ನೆಟ್ ಬಳಕೆದಾರರಿಗೆ ಇಂಗ್ಲೀಷ್ ಭಾಷೆ ಅಷ್ಟಾಗಿ ಕರಗತವಾಗಿಲ್ಲ.
ಮೋದಿ ಸರ್ಕಾರ ತರಲು ಉದ್ದೇಶಿಸಿರುವ ರಾಷ್ಟ್ರೀಯ ಮಿಷನ್ ಜನರಿಗೆ ಡಿಜಿಟಲ್ ವಿಷಯವನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ಸರ್ಕಾರಿ ವೆಬ್ಸೈಟ್ಗಳಿಗೆ. ಮಾಹಿತಿ ತಂತ್ರಜ್ಞಾನ ಸಚಿವಾಲಯದ ಟೆಕ್ನಾಲಜಿ ಡೆವಲಪ್ಮೆಂಟ್ ಫಾರ್ ಇಂಡಿಯನ್ ಲ್ಯಾಂಗ್ವೇಜಸ್ (ಟಿಡಿಐಎಲ್) ಕಾರ್ಯಕ್ರಮದ ಮುಖ್ಯಸ್ಥ ಎಸ್.ಕೆ. ಶ್ರೀವಾಸ್ತವ ಅವರು ಭಾರತೀಯ ಭಾಷೆಗಳಲ್ಲಿ ಡಿಜಿಟಲ್ ವಿಷಯದ ಕುರಿತ ರಾಷ್ಟ್ರೀಯ ಮಿಷನ್ ಅನ್ನು ಮುನ್ನಡೆಸುತ್ತಿದ್ದಾರೆ. ಗುರಿಯನ್ನು ಸಾಧಿಸಲು ಸರ್ಕಾರ 10 ವರ್ಷಗಳ ಕಾಲಮಿತಿಯನ್ನು ನಿಗದಿಪಡಿಸಿದೆ.
“ಅಂತರ್ಜಾಲದಲ್ಲಿನ ವಿಷಯವನ್ನು ಭಾರತೀಯ ಭಾಷೆಯಲ್ಲಿ ತಿಳಿದುಕೊಳ್ಳಲು ಉತ್ಸುಕರಾಗಿರುವವರ ಪ್ರಮಾಣದಲ್ಲಿ ಅದ್ಭುತ ಬೆಳವಣಿಗೆ ಕಂಡುಬಂದರೂ, ಹೆಚ್ಚುತ್ತಿರುವ ಬಳಕೆದಾರರನ್ನು ಬೆಂಬಲಿಸಲು ಅಂತರ್ಜಾಲದಲ್ಲಿ ಇಂಡಿಕ್ ವಿಷಯದ ಪ್ರಮಾಣವು ಅಷ್ಟಾಗಿ ಬೆಳೆದಿಲ್ಲ” ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಜಯ್ ಪ್ರಕಾಶ್ ಸಾವ್ಹನೆ ಹೇಳಿದ್ದಾರೆ. ಭಾರತೀಯ ಭಾಷಾ ಇಂಟರ್ನೆಟ್ ಒಕ್ಕೂಟ FICCI-ILIA ಆಯೋಜಿಸಿದ “Internet for All: Harnessing the Potential of Indian Languages to Tap the Next Half Billion Users” ಎಂಬ ಶೀರ್ಷಿಕೆಯ ಸಮಾವೇಶದಲ್ಲಿ ಅವರು ಈ ಮಾತನ್ನು ಆಡಿದ್ದಾರೆ.
ಇಂಟರ್ನೆಟ್ನಲ್ಲಿ ಬಳಸುವ ಭಾಷೆಗಳ ಕುರಿತ ವಿಕಿಪೀಡಿಯ ಲೇಖನದ ಪ್ರಕಾರ, ಇಂಟರ್ನೆಟ್ನಲ್ಲಿ ಹೆಚ್ಚು ಬಳಸುವ ಭಾಷೆಯ ಪಟ್ಟಿಯಲ್ಲಿ ಹಿಂದಿ 38 ನೇ ಸ್ಥಾನದಲ್ಲಿದೆ. ಇಂಟರ್ನೆಟ್ನಲ್ಲಿ ಅರ್ಧಕ್ಕಿಂತ ಹೆಚ್ಚು ವಿಷಯವು ಇಂಗ್ಲಿಷ್ನಲ್ಲಿದೆ, ನಂತರ ರಷ್ಯನ್, ಜರ್ಮನ್, ಸ್ಪ್ಯಾನಿಷ್, ಫ್ರೆಂಚ್ ಮತ್ತು ಜಪಾನೀಸ್ ಭಾಷೆಯಲ್ಲಿದೆ.
ತಮ್ಮ ಸ್ಥಳೀಯ ಭಾಷೆಯಲ್ಲಿ ವಿಷಯಗಳನ್ನು ತಿಳಿಯುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಸುಶಿಕ್ಷಿತ ಜನರು, ಭಾರತೀಯ ಭಾಷೆಗಳಲ್ಲಿನ ವಿಷಯದ ಕೊರತೆಯಿಂದಾಗಿ ಅಂತರ್ಜಾಲವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುವುತ್ತಿಲ್ಲ ಎಂಬುದು ದುರಾದೃಷ್ಟಕರವಾಗಿದೆ.
ಡಿಜಿಟಲೀಕರಣವನ್ನು ಉತ್ತೇಜಿಸಲು ಮೋದಿ ಸರ್ಕಾರ ಅಪಾರ ಪ್ರಯತ್ನಗಳನ್ನು ಮಾಡಿದೆ. ಆಧಾರ್ ಮೂಲಕ ಪ್ರತಿಯೊಬ್ಬ ನಾಗರಿಕರಿಗೂ ವಿಶಿಷ್ಟವಾದ ಗುರುತನ್ನು ನೀಡುವ ಸರ್ಕಾರದ ಪ್ರಯತ್ನವು ಡಿಜಿಟಲ್ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಲು ಆಧಾರವನ್ನು ಒದಗಿಸಿತು. 1.2 ಬಿಲಿಯನ್ ದಾಖಲಾತಿಗಳೊಂದಿಗೆ, ನಾಗರಿಕರಿಗೆ ವಿಶಿಷ್ಟ ಗುರುತನ್ನು ನೀಡುವ ದೃಷ್ಟಿಯಲ್ಲಿ ಭಾರತ ಜಾಗತಿಕವಾಗಿ ಪ್ರಥಮ ಸ್ಥಾನದಲ್ಲಿದೆ. ಒಟ್ಟು ಇಂಟರ್ನೆಟ್ ಬಳಕೆದಾರರ ವಿಷಯದಲ್ಲಿ, 56 ಕೋಟಿ ಬಳಕೆದಾರರನ್ನು ಹೊಂದಿರುವ ಭಾರತವು ಜಗತ್ತಿನಲ್ಲಿ 2ನೇ ಸ್ಥಾನದಲ್ಲಿದೆ, ಕೇವಲ ಚೀನಾಕ್ಕಿಂತ ಹಿಂದುಳಿದಿದೆ. ದೇಶದಲ್ಲಿ 35.4 ಕೋಟಿ ಸ್ಮಾರ್ಟ್ಫೋನ್ ಸಾಧನಗಳು ಮತ್ತು 29.4 ಕೋಟಿ ಸೋಷಿಯಲ್ ಮೀಡಿಯಾ ಬಳಕೆದಾರರಿದ್ದಾರೆ. ಡಿಸೆಂಬರ್ 2018ರ ವೇಳೆಯಲ್ಲಿ, ದೇಶದ ಜನಸಂಖ್ಯೆಯ ಶೇ.26.2ರಷ್ಟು ಜನರು ಸ್ಮಾರ್ಟ್ಫೋನ್ ಬಳಸುತ್ತಿದ್ದಾರೆ. 2014ರ ಡಿಸೆಂಬರ್ ತಿಂಗಳವರೆಗೆ ಈ ಪ್ರಮಾಣ ಶೇ.5.5ರಷ್ಟು ಮಾತ್ರ ಆಗಿತ್ತು. ಕಳೆದ ಐದು ವರ್ಷಗಳಲ್ಲಿ ಸ್ಮಾರ್ಟ್ಫೋನ್ ಬಳಕೆದಾರರ ಸಂಖ್ಯೆ 5 ಪಟ್ಟು ಹೆಚ್ಚಾಗಿದೆ.
ಐದು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಸರಾಸರಿ ಮೊಬೈಲ್ ಡಾಟಾ ಬಳಕೆ 92 ಪಟ್ಟು ಹೆಚ್ಚಾಗಿದೆ. ಜಿಯೋ ಪ್ರವೇಶದ ನಂತರ ಡಾಟಾ ಬೆಲೆಗಳು ಕುಸಿದವು ಮತ್ತು ದೇಶವು ವಿಶ್ವದ ಅಗ್ಗದ ಡಾಟಾ ಬೆಲೆಯನ್ನು ಹೊಂದಿದ ಕೀರ್ತಿಗೆ ಪಾತ್ರವಾಯಿತು. ಆದರೆ ಈ ಇಂಟರ್ನೆಟ್ ಕ್ರಾಂತಿಯು ಮಿಷನ್ನ ಮೊದಲ ಹೆಜ್ಜೆಯಾಗಿದೆ. ಹಿಂದಿ ಭಾಷೆ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಇಂಟರ್ನೆಟ್ ವಿಷಯಗಳು ಸಮರ್ಪಕವಾಗಿ ಲಭ್ಯವಾಗುವವರೆಗೂ ಈ ಕ್ರಾಂತಿ ಅಪೂರ್ಣವಾಗಿರುತ್ತದೆ.
ಮೋದಿ ಸರ್ಕಾರವು ‘ಪೀರ್ ರಿವೈವ್ಡ್ ಟ್ರಾನ್ಸ್ಲೇಷನ್’ ಲಭ್ಯತೆಯನ್ನು ಖಚಿತಪಡಿಸಲಿದೆ ಮತ್ತು ಗುರಿ ತಲುಪಲು ಹಣವನ್ನು ಖರ್ಚು ಮಾಡಲಿದೆ ಎಂದು ಸಾವ್ಹನೆ ಹೇಳಿದ್ದಾರೆ. ಈ ಕ್ಷೇತ್ರದಲ್ಲಿ ಗೂಗಲ್ ಮಾಡುತ್ತಿರುವ ಕೆಲಸವನ್ನು ಅವರು ಅತೀವವಾಗಿ ಶ್ಲಾಘಿಸಿದ್ದಾರೆ. “ಗೂಗಲ್ಗೆ ಏನು ಮಾಡಲು ಸಾಧ್ಯವಿದೆ ಅಥವಾ ಇತರ ಕಂಪನಿಗಳಿಗೆ ಏನು ಮಾಡಲು ಸಾಧ್ಯವಿದೆ ಎಂಬುದರ ಬಗ್ಗೆ ನಮಗೆ ಅಪಾರ ಮೆಚ್ಚುಗೆ ಇದೆ, ಆದರೆ ಎಲ್ಲವೂ ಅವರ ಕೈಯಿಂದ ಆಗಲು ಸಾಧ್ಯವಿಲ್ಲ” ಎಂದಿದ್ದಾರೆ.
ಇಂಟರ್ನೆಟ್ ಕ್ರಾಂತಿಯ ದೊಡ್ಡ ಹಾದಿಯು ಸಾರ್ವಜನಿಕರ ಜೊತೆಗೆ ಖಾಸಗಿ ವಲಯದ ಪ್ರಯತ್ನಗಳ ಫಲವೂ ಹೌಡು. ಸಂಯೋಜಿತ ಪ್ರಯತ್ನಗಳಿಂದ ಇಂಟರ್ನೆಟ್ ವಿಷಯಗಳ ಕ್ರಾಂತಿಯನ್ನು ಸಾಧಿಸಲು ಸಹ ಸಾಧ್ಯವಾಗುತ್ತದೆ. ಸ್ಥಳಿಯ ಭಾಷೆಗಳಲ್ಲಿ ಇಂಟರ್ನೆಟ್ ವಿಷಯಗಳು ಸಮರ್ಪಕವಾಗಿ ಲಭ್ಯವಾದಾಗ ಮಾತ್ರ ಭಾರತದಲ್ಲಿ ಇಂಟರ್ನೆಟ್ ಕ್ರಾಂತಿ ಪರಿಪೂರ್ಣಗೊಳ್ಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.