ಶ್ರೀನಗರ: 370ನೇ ವಿಧಿಯನ್ನು ರದ್ದುಗೊಳಿಸಿದ ಹಿನ್ನಲೆಯಲ್ಲಿ ಭದ್ರತಾ ಕಾರಣಗಳಿಂದಾಗಿ ಕಾಶ್ಮೀರದಲ್ಲಿ ಮೂರು ತಿಂಗಳುಗಳ ಕಾಲ ಅಮಾನತುಗೊಂಡಿದ್ದ ರೈಲು ಸೇವೆಗಳನ್ನು ಮಂಗಳವಾರ ಪುನರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ, ಈಗಾಗಲೇ ಅಲ್ಲಿ ಕೇಂದ್ರ ನಗರದ ಮೂಲಕ ಬಟ್ವಾರಾ-ಬಟಮಾಲೂ ಮಾರ್ಗದಲ್ಲಿ ಕೆಲವು ಮಿನಿ ಬಸ್ಸುಗಳು ಕೂಡ ಸಂಚರಿಸುತ್ತಿವೆ. ಜಿಲ್ಲೆ ಮತ್ತು ಕಣಿವೆಯ ಇತರೆಡೆ ಅಂತರ್ ಜಿಲ್ಲಾ ಕ್ಯಾಬ್ಗಳು ಮತ್ತು ಆಟೋ ರಿಕ್ಷಾಗಳು ಕೂಡ ಓಡಾಟ ನಡೆಸುತ್ತಿವೆ. ಖಾಸಗಿ ಸಾರಿಗೆ ಯಾವುದೇ ಅಡೆತಡೆಯಿಲ್ಲದೆ ಸಂಚಾರ ನಡೆಸುತ್ತಿದೆ.
ಇಂದು ಬೆಳಿಗ್ಗೆ ಬಾರಾಮುಲ್ಲಾ ಮತ್ತು ಶ್ರೀನಗರ ನಡುವೆ ರೈಲು ಸಂಚಾರ ನಡೆಸಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರ ನಡುವೆ ರೈಲುಗಳನ್ನು ಓಡಿಸುವಂತೆ ಅಧಿಕಾರಿಗಳು ರೈಲ್ವೆಗೆ ನಿರ್ದೇಶನ ನೀಡಿದ್ದರಿಂದ ರೈಲು ಬಾರಾಮುಲ್ಲಾ-ಶ್ರೀನಗರದಲ್ಲಿ ಕೇವಲ ಎರಡು ಪ್ರಯಾಣಗಳನ್ನು ಮಾಡಿದೆ ಎಂದು ಅವರು ಹೇಳಿದರು.
ಕಣಿವೆಯಲ್ಲಿ ಅಘೋಷಿತ ಸ್ಥಗಿತದ ನಂತರ ಮೂರು ತಿಂಗಳಲ್ಲಿ ಮೊದಲ ಬಾರಿಗೆ ರೈಲ್ವೆಯು ಸೇವೆಯ ಪ್ರಯೋಗವನ್ನು ಸೋಮವಾರ ನಡೆಸಿದೆ. ಹಳಿಗಳ ಸುರಕ್ಷತೆಯನ್ನು ಪರಿಶೀಲಿಸಿದ ನಂತರ ಮತ್ತು ಟ್ರಯಲ್ ರನ್ಗಳನ್ನು ನಡೆಸಿದ ಕೆಲವೇ ದಿನಗಳಲ್ಲಿ ಶ್ರೀನಗರ-ಬನಿಹಾಲ್ ರೈಲ್ವೆ ಮಾರ್ಗದಲ್ಲಿ ಸಂಚಾರವು ಪುನರಾರಂಭಗೊಳ್ಳಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ನಿರ್ಧಾರವನ್ನು ಕೇಂದ್ರ ಪ್ರಕಟಿಸುವ ಮೊದಲು ಆಗಸ್ಟ್ 5ರ ಬೆಳಿಗ್ಗೆ ಕಣಿವೆಯಲ್ಲಿನ ರೈಲು ಸೇವೆಯನ್ನು ಭದ್ರತಾ ಕಾರಣಗಳಿಂದ ಸ್ಥಗಿತಗೊಳಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.