ಭಾರತದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಒಂದು ಮಹತ್ವದ ಕ್ಷಣ ಎಂದು ವಿವರಿಸಬಹುದಾದ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೆಗೆದುಕೊಂಡಿದ್ದಾರೆ. ದೇಶಾದ್ಯಂತದ ಜನರಿಂದ ಸಲಹೆಗಳನ್ನು ಪಡೆದು, ಐಪಿಸಿ ಮತ್ತು ಸಿ.ಆರ್.ಪಿ.ಸಿ ಯ ವಿವಿಧ ನಿಬಂಧನೆಗಳನ್ನು ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (ಬಿಪಿಆರ್ ಮತ್ತು ಡಿ) ಕೆಲಸ ಮಾಡಬೇಕು ಎಂದು ಅವರು ಸೂಚನೆಯನ್ನು ನೀಡಿದ್ದಾರೆ. ವರದಿಗಳ ಪ್ರಕಾರ, ಭಾರತೀಯ ದಂಡ ಸಂಹಿತೆಯನ್ನು ಪುನಃಶ್ಚೇತನ ಮಾಡುವುದು ಅಗತ್ಯವಾಗಿದೆ, ಯಾಕೆಂದರೆ ಬ್ರಿಟಿಷರು ಪರಿಚಯಿಸಿದ ಸಂಹಿತೆಯು ಪ್ರಾಥಮಿಕವಾಗಿ ಮಾಲೀಕ ಮತ್ತು ಗುಲಾಮ ಮನೋಭಾವದಲ್ಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಐಪಿಸಿಯಲ್ಲಿರುವ ಮಾಲೀಕ ಮತ್ತು ಗುಲಾಮ ಪರಿಕಲ್ಪನೆಯು ಬದಲಾಗಬೇಕು ಎಂಬುದು ಕೂಲಂಕುಷ ಪರಿಶೀಲನೆಯ ಹಿಂದಿನ ಆಲೋಚನೆಯಾಗಿದೆ. ಐಪಿಸಿಯು ರೂಪುಗೊಂಡು ಬಳಿಕ ಒಂದು ಬಾರಿಯೂ ತಿದ್ದುಪಡಿಗೆ ಒಳಗಾಗಿಲ್ಲ. ಕೆಲವು ಸೇರ್ಪಡೆ ಮತ್ತು ಅಳಿಸುವಿಕೆಗಳನ್ನು ಮಾಡಲಾಗಿದೆ ಅಷ್ಟೇ” ಎಂದು ಅಧಿಕಾರಿ ಹೇಳಿದ್ದಾರೆ.
ಪ್ರಸ್ತುತ ಗೃಹ ಸಚಿವಾಲಯವು ದೇಶದ ಅಪರಾಧ ನ್ಯಾಯವ್ಯವಸ್ಥೆಯಲ್ಲಿ ಬಹುನಿರೀಕ್ಷಿತ ಮತ್ತು ಹೆಚ್ಚು ಅಗತ್ಯವಿರುವ ಬದಲಾವಣೆಯನ್ನು ತರಲು ಸಜ್ಜಾಗಿದೆ. ಬ್ರಿಟಿಷ್ ರಾಜ್ನ ಹಿತಾಸಕ್ತಿಗಳ ಪರವಾಗಿ ತರಲಾದ ನಿಬಂಧನೆಗಳನ್ನು ಐಪಿಸಿ ಹೊಂದಿದೆ, ಅದರ ಕೆಲವು ನಿಬಂಧನೆಗಳು ವಿಕ್ಟೋರಿಯ ನೈತಿಕತೆಯ ಸಂಕೇತಗಳಾಗಿವೆ, ಇದನ್ನು ನಾವು ಇನ್ನು ಮುಂದೆ ನಮ್ಮ ಕಾನೂನು ಪುಸ್ತಕಗಳಲ್ಲಿ ಓದಬೇಕಾದ ಅಗತ್ಯ ಬೀಳುವುದಿಲ್ಲ ಎಂಬುದು ಸಕಾರಾತ್ಮಕ ಸಂಗತಿ. ಐಪಿಸಿಯ ಸೆಕ್ಷನ್ 377 ರಲ್ಲಿರುವ ನಿಬಂಧನೆಯನ್ನು ಸುಪ್ರೀಂ ಇತ್ತೀಚಿಗೆ ತೆಗೆದು ಹಾಕಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ. ವ್ಯಕ್ತಿಯ ಸ್ವಾತಂತ್ರ್ಯವನ್ನು ನಾಗರಿಕರ ಮೂಲಭೂತ ಹಕ್ಕುಗಳಿಂದ, ವಿಶೇಷವಾಗಿ ಸಂವಿಧಾನದ 14 ಮತ್ತು 21 ನೇ ವಿಧಿಯಿಂದ ರಕ್ಷಿಸಲಾಗಿರುವ ಇಂದಿನ ಕಾಲದಲ್ಲಿ ಈ ನಿಬಂಧನೆಯು ನಿಜವಾಗಿಯೂ ಯಾವುದೇ ಪ್ರಸ್ತುತತೆಯನ್ನು ಹೊಂದಿಲ್ಲ ಮತ್ತು ಬ್ರಿಟಿಷ್ ಆಡಳಿತ ಭಾರತೀಯ ಪ್ರಜೆಗಳ ಮೇಲೆ ಹೇರಲ್ಪಟ್ಟಿದ್ದ ನಿಬಂಧನೆ ಇದಾಗಿತ್ತು.
ಬ್ರಿಟಿಷ್ ಆಡಳಿತದ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳನ್ನೂ ಪರಿಚಯಿಸಲಾಯಿತು. ಇದು ಕೂಡ ಬದಲಾಗುವ ನಿಟ್ಟಿನಲ್ಲಿ ಪರಿಶೀಲನೆಗೊಳಪಡುತ್ತಿದೆ. ಮಾನನಷ್ಟವನ್ನು ಕೇವಲ ಸಿವಿಲ್ ಮೊಕದ್ದಮೆಯನ್ನಾಗಿ ಮಾಡಿ, ಅಪರಾಧ ಮೊಕದ್ದಮೆ ಬೇಡ ಎಂದು ರಾಜ್ಯಸಭಾ ಸಂಸದರೊಬ್ಬರು ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿಯನ್ನೂ ಮಾಡಿಕೊಂಡಿದ್ದಾರೆ. ಬ್ರಿಟಿಷರು ತಮ್ಮ ಹಿತವನ್ನು ಕಾಪಾಡಲು ಮಾನನಷ್ಟವನ್ನು ಅಪರಾಧ ಪ್ರಕರಣವನ್ನಾಗಿಸಿಕೊಂಡಿದ್ದರು.
ಆ ಸಮಯದಲ್ಲಿ ಬ್ರಿಟಿಷ್ ಆಡಳಿತದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಐಪಿಸಿಯ ನಿಬಂಧನೆಗಳನ್ನು ಜಾರಿಗೆ ತರಲಾಗಿದೆ. ಆದ್ದರಿಂದ, ಕೇವಲ ನ್ಯಾಯಾಂಗ ಮಧ್ಯಸ್ಥಿಕೆಗಳು ಮತ್ತು ಶಾಸಕಾಂಗದ ಮಧ್ಯಸ್ಥಿಕೆಗಳು, ತಿದ್ದುಪಡಿಗಳ ರೂಪದಲ್ಲಿ ಅದನ್ನು ಸಂದರ್ಭದೊಂದಿಗೆ ಹೊಂದಾಣಿಕೆ ಮಾಡುವ ಉದ್ದೇಶವನ್ನು ನಿಜವಾಗಿಯೂ ಪೂರೈಸಲು ಸಾಧ್ಯವಿಲ್ಲ. ದಂಡ ಸಂಹಿತೆಯನ್ನು ಪ್ರಸ್ತುತಪಡಿಸುವ ಸಲುವಾಗಿ, ಗೃಹ ಸಚಿವಾಲಯ ಸೂಚಿಸಿದಂತೆ ಕೋಡ್ ಅನ್ನು ಪರಿಷ್ಕರಿಸುವ ಅವಶ್ಯಕತೆಯಿದೆ.
ಐಪಿಸಿಯ ಸಮಸ್ಯೆ ಅದು ಹೊಂದಿದ ವಸಾಹತುಶಾಹಿ ನಿಲುವುಗಳಿಗೆ ಮಾತ್ರ ಸೀಮಿತವಾಗಿಲ್ಲ. 1860ರಲ್ಲಿ ಅದು ಪರಿಚಯವಾದಾಗಿನಿಂದ ಇದು ಬದಲಾಗದೆ ಇರುವುದರಿಂದ ಅದರ ಪರಿಣಾಮಕಾರಿತ್ವದ ಕೊರತೆಯಿಂದಾಗಿ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಭಯೋತ್ಪಾದನೆ, ಮಾದಕವಸ್ತು ಅಪರಾಧಗಳು, ಸೈಬರ್ ಅಪರಾಧಗಳು ಮುಂತಾದ ವರ್ಗಗಳ ಅಪರಾಧಗಳನ್ನು ಎದುರಿಸಲು ಶಾಸಕಾಂಗವು ಸ್ಥಳೀಯ ಮತ್ತು ವಿಶೇಷ ಕಾನೂನುಗಳನ್ನು ಆಶ್ರಯಿಸಿದೆ ಎಂಬುದು ಸತ್ಯ. ಐಪಿಸಿ ದೇಶದ ದಂಡ ಸಂಹಿತೆಯಾಗಿದೆ ಮತ್ತು ಇತರ ಯಾವುದೇ “ಕೋಡ್” ಗಳಂತೆ, ಇದು ಸಂಪೂರ್ಣ ಕಾನೂನು ಮತ್ತು ಸ್ವತಃ ಸಮಗ್ರವಾಗಿರಬೇಕು. ವಿಶೇಷ ವರ್ಗದ ಅಪರಾಧಗಳು ಮತ್ತು ಅಪೂರ್ಣ ದಂಡ ಸಂಹಿತೆಯೊಂದಿಗೆ ವ್ಯವಹರಿಸುವ ಇತರ ಕಾನೂನುಗಳ ಜಾರಿಗೊಳಿಸುವಿಕೆಯು ಯಾವುದೇ ನೈಜ ಉದ್ದೇಶವನ್ನು ಪೂರೈಸುವುದಿಲ್ಲ. ಆದ್ದರಿಂದ ಅಮಿತ್ ಶಾ ನೇತೃತ್ವದ ಗೃಹ ಸಚಿವಾಲಯವು ಅಂತಿಮವಾಗಿ ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆ ಇಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.