ಅವರು ಶ್ರೀ ಸಂಜೀವ್ ಕೊಹ್ಲಿ. ಭಾರತೀಯ ರೈಲ್ವೆಯಲ್ಲಿ ಅಧಿಕಾರಿಗಳಾಗಿದ್ದವರು. 1988ರಲ್ಲಷ್ಟೇ ಭಾರತೀಯ ವಿದೇಶ ಸೇವೆಗೆ (ಐ.ಎಫ್.ಎಸ್) ನಿಯುಕ್ತಿಗೊಂಡು ಭಾರತೀಯ ವಿದೇಶಾಂಗ ಇಲಾಖೆಯಲ್ಲಿ ಒಬ್ಬ ಅಧಿಕಾರಿಯಾಗಿ ದೆಹಲಿಯಲ್ಲಿ ಕುಳಿತರು. ಅವರ ಮಹತ್ತರ ಪಾತ್ರ ನಿರ್ವಹಣೆಗೆ ಇನ್ನೂ ಎರಡು ವರ್ಷ ಕಳೆಯಬೇಕಿತ್ತು.
ಅದು 1990ನೇ ಇಸವಿ. ಇರಾಕ್ ಕುವೈತ್ ಮೇಲೆ ಆಕ್ರಮಿಸಿ ತೈಲಬಾವಿಗಳನ್ನು ವಶಪಡಿಸಿಕೊಂಡಿತು. ಅದು ಬರೀ ತೈಲ ಬಾವಿಗಳ ಮೇಲಿನ ಒಡೆತನದ ಪ್ರಶ್ನೆ ಮಾತ್ರವಾಗಿರದೆ ಅಮೆರಿಕಾ ಮತ್ತು ಇರಾಕ್ ನಡುವಿನ ಸಮರವಾಗಿ, ಸದ್ದಾಂ ಮತ್ತು ಬುಷ್ ನಡುವಿನ ಕದನವಾಗಿ ಮಾರ್ಪಟ್ಟಿತು. ಸದ್ದಾಂ ಹುಸೇನ್ ಆಗ ಹದಿನಾರರಿಂದ ಹಿಡಿದು ಅರವತ್ತು ವರ್ಷಗಳವರೆಗಿನ ಸಿಕ್ಕ ಸಿಕ್ಕ ಗಂಡಸರ ಕೈಗೆ ಕೋವಿ ಕೊಟ್ಟು ಕುವೈತ್ ಗೆ ಕಳುಹಿಸಿದ್ದ. ಈ ಸೈನಿಕರು ಕುವೈತಿಗರ ಮೇಲೆ ರಣದ್ವೇಷವನ್ನೇ ಕಾರಿದರು. ಮೃಗಗಳಂತೆ ಅವರನ್ನು ಭೇಟಿಯಾಡತೊಡಗಿದರು. ಸುಟ್ಟುಬೂದಿಯಾದ ಲಂಕೆಯಂತೆ ಅಕ್ಷರಶಃ ಕುವೈತ್ ಉರಿಯತೊಡಗಿತು.
ಈ ಜಾಗತಿಕ ತೈಲಸಮರದಲ್ಲಿ ಸಿಕ್ಕಿಹಾಕಿಕೊಂಡು ವಿಲವಿಲ ಒದ್ದಾಡತೊಡಗಿದವರು ಅಲ್ಲಿದ್ದ ಸುಮಾರು 1,70,000 ಭಾರತೀಯರು. ಕೆಲವರು ಭಾರಿ ಉದ್ಯಮಗಳನ್ನು ನಡೆಸುತ್ತಾ ಆಗರ್ಭ ಶ್ರೀಮಂತರಾಗಿ ಕುವೈತಿ ಸರ್ಕಾರದಲ್ಲಿಯೂ ಪ್ರಭಾವಶಾಲಿಗಳಾಗಿದ್ದರೆ ಇನ್ನೊಂದಷ್ಟು ಮಂದಿ ಬಹುಕಾಲದಿಂದ ಉದ್ಯೋಗದಲ್ಲಿದ್ದು ಅಲ್ಲಿಯೇ ನೆಲೆಸಿ ಬದುಕು ಕಟ್ಟಿಕೊಂಡವರು. ಮತ್ತೂ ಕೆಲವರು ಕೆಲಸಮಯಕ್ಕೆಂದು ಮಾತ್ರ ಕುವೈತ್ ನಲ್ಲಿದ್ದು ಹೆಚ್ಚಿನ ಹಣಗಳಿಸಿ ಭಾರತಕ್ಕೆ ಕಳುಹಿಸುತ್ತಾ ತಮ್ಮನನ್ನು ಓದಿಸುವ, ತಂಗಿಗೆ ಮದುವೆ ಮಾಡುವ, ವಯಸ್ಸಾದ ತಂದೆತಾಯಿಯರಿಗೆಂದು ಊರಿನಲ್ಲೊಂದು ಮನೆ ಕಟ್ಟುವ ಸಲುವಾಗಿ ಬೆವರು ಹರಿಸುತ್ತಿದ್ದವರು.
ತನ್ನನ್ನು ತಾನು ರಕ್ಷಿಸಿಕೊಳ್ಳಲಾಗದ ಕುವೈತ್ ಬಹುದೂರದ ಮಾತಾಗಿದ್ದ ವಿಶ್ವಸಂಸ್ಥೆಯ ಸೇನಾಪಡೆಯ ಅರ್ಥಾತ್ ಅಮೆರಿಕಾ ಪಡೆಯ ಆಗಮನಕ್ಕಾಗಿ ಕಾದು ಕುಳಿತುಕೊಳ್ಳುವುದನ್ನು ಬಿಟ್ಟರೆ ಬೇರೇನೂ ಮಾಡಲಾಗಲಿಲ್ಲ. ಹತ್ತೋ ನೂರರ ಸಂಖ್ಯೆಯಲ್ಲಿದ್ದ ತಮ್ಮತಮ್ಮ ದೇಶಿಗರನ್ನು ಜಗತ್ತಿನ ವಿವಿಧ ದೇಶಗಳು ತುರ್ತಾಗಿ ವಾಪಸ್ ಕರೆಸಿಕೊಂಡು ಬಿಟ್ಟವು. ಭಾರತ ದೂತಾವಾಸದ ಬಹುಪಾಲು ಸಿಬ್ಬಂದಿಗಳು ಸಹ ಬೇಗನೆ ಜಾಗ ಖಾಲಿ ಮಾಡಿದರು. ಆದರೆ ಪ್ರಾಣಸಂಕಟಕ್ಕೆ ಸಿಲುಕಿದ್ದು ಬಹುಸಂಖ್ಯೆಯಲ್ಲಿದ್ದ ಸಾಮಾನ್ಯ ಭಾರತೀಯರು. ಆಗ ಭಾರತದೊಂದಿಗೆ ಸದ್ದಾಂನ ದ್ವೇಷವೇನೂ ಇರಲಿಲ್ಲ, ಆದರೂ ಆತನ ಹುಚ್ಚು ಸೈನಿಕರ ವರ್ತನೆಗೆ ಕಡಿವಾಣವೆಲ್ಲಿ. ಕ್ಷಣಕ್ಷಣವೂ ಆತಂಕವೇ.
ಸನ್ನಿವೇಶಕ್ಕೆ ತಕ್ಕಂತೆ ನಾಯಕತ್ವ ನಿರ್ಮಾಣವಾಗುತ್ತದೆ. ಹಾಗೆಯೇ ಆಗ ಮೇಲೆದ್ದು ನಿಂತದ್ದು ಶ್ರೀ ಮಾಥುನ್ನಿ ಮಾಥ್ಯೂ ಮತ್ತು ಶ್ರೀ ವೇದಿಯವರಂತಹ ಭಾರತೀಯ ಉದ್ಯಮಿಗಳು. ಸದ್ದಾಂನ ಇರಾಕ್ ನಲ್ಲಿಯೂ ತಾವು ಹೊಂದಿದ್ದ ಪ್ರಭಾವವನ್ನು ಬಳಸಿ ತಕ್ಕ ಮಟ್ಟಿಗೆ ಸುರಕ್ಷತೆಯ ವಾತಾವರಣವನ್ನು ಭಾರತೀಯರಿಗೆ ಒದಗಿಸಿದ್ದರು. ಎಲ್ಲರನ್ನೂ ಒಂದೆಡ ಸೇರಿಸಿ ಪರಿಹಾರ ಶಿಬಿರಗಳನ್ನು ನಡೆಸತೊಡಗಿದರು. ಯುದ್ಧಗ್ರಸ್ತ ದೇಶದ ಸ್ಥಿತಿ ಯಾವಾಗ ಏನು ಘಟಿಸುವುದೋ ಎಂದು ಹೇಗೆ ಹೇಳಲಾದೀತು?
ಶ್ರೀ ಸಂಜಿವ್ ಕೊಹ್ಲಿ. ಆಗಿನ್ನೂ ಅವರು ವಿದೇಶಾಂಗ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದರು (Joint Secretary). ಕುವೈತ್ ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರ ಪೋನ್ ಕರೆಯನ್ನು ಅಂದು ತನ್ನ ಕಚೇರಿಯಲ್ಲಿ ಆಕಸ್ಮಿಕವಾಗಿ ಸ್ವೀಕರಿಸಿದ ಕೊಹ್ಲಿ ಪ್ರಕರಣ ಗಂಭೀರತೆಯನ್ನು ಕೂಡಲೇ ಗ್ರಹಿಸಿದರು. ತಮ್ಮ ವಿಭಾಗದ್ದಲ್ಲದೇ ಇದ್ದರೂ ದುಸ್ಸಾಹಸವೇ ಎನಿಸಬಹುದಾದ ಕಾರ್ಯದ ಹಿಂದೆ ಬಿದ್ದರು. ನಿಧಾನಗತಿಗೆ ಹೆಸರಾಗಿದ್ದ ವ್ಯವಸ್ಥೆ – ನಿಯಮ, ಕಡತ, ಅನುಮೋದನೆ ಇತ್ಯಾದಿಗಳಲ್ಲೇ ಮುಳುಗಿ ಹೋಗಿದ್ದ ಆಗಿನ ವಿದೇಶಾಂಗ ಇಲಾಖೆಯಲ್ಲಿ ಸಂಚಲನ ಮೂಡಿಸಿದರು. ಸಂವೇದನಾ ರಹಿತವೂ, ಸಂಪರ್ಕಕ್ಕೆ ಅಲಭ್ಯವೂ ಆಗಿದ್ದ ವಿದೇಶ, ರಕ್ಷಣೆ, ಗೃಹ ಹೀಗೆ ವಿವಿಧ ಸಚಿವಾಲಯಗಳ ಹತ್ತಾರು ವಿಭಾಗಗಳ ಬೆನ್ನಿಗೆ ಬಿದ್ದರು.
ಆಗ ಭಾರತದ ರಾಜಕೀಯ ಪರಿಸ್ಥಿತಿಯೂ ಡೋಲಾಯ ಮಾನವಾಗಿತ್ತು. ವಿಪಿ ಸಿಂಗರ ನೇತೃತ್ವದ ಸರ್ಕಾರ ಯಾವುದೇ ಕ್ಷಣದಲ್ಲಿ ಪತನಗೊಳ್ಳುವ ವಾತಾವರಣ ನಿರ್ಮಾಣವಾಗಿತ್ತು. ಜನತಾದಳದಿಂದ ಸಿಡಿದು ಕಾಂಗ್ರೆಸ್ಸಿನ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚಿಸಿಸಲು ಚಂದ್ರಶೇಖರ್ ತಯಾರಿ ನಡೆಸಿದ್ದರು. ಒಟ್ಟಿನಲ್ಲಿ ಯಾವುದೇ ದೃಢ ನಿರ್ಧಾರ ಕೈಗೊಳ್ಳಲಾಗದೇ ಕಾಲ ತಳ್ಳಿದರೆ ಸಾಕೆಂಬ ಸ್ಥಿತಿ ಆಗಿತ್ತು.
ಇಂತಹುದರಲ್ಲಿ ಸಂಜಿವ್ ಕೊಹ್ಲಿ ಬೆಂಬಿಡದೇ ಕೇಂದ್ರದ ಮಂತ್ರಿಗಳ ಕಾಡಿದರು, ಈ ಬೃಹತ್ ಕಾರ್ಯಾಚರಣೆಯ ಸೂತ್ರಧಾರರೇ ಆಗಿಬಿಟ್ಟರು. ಎರಡು ತಿಂಗಳ ಕಾಲ ಇರಾಕ್ ಮತ್ತು ಜೋರ್ಡಾನ್ಗಳ ಗಡಿಯಲ್ಲಿ ಭಾರತೀಯರ ತೆರವು ಕಾರ್ಯಾಚರಣೆಗೆಂದೇ ವಿಶೇಷವಾಗಿ ನಿಯುಕ್ತಗೊಂಡರು. ಪಾಸ್ ಪೋರ್ಟ್, ವೀಸಾ, ಒಂದು ಗುರುತಿನ ಪತ್ರವೂ ಇಲ್ಲದೇ ಸರ್ವಸ್ವವನ್ನೂ ಕಳೆದುಕೊಂಡು ಆತಂಕದಲ್ಲಿದ್ದ ಭಾರತೀಯರ ಪಾಲಿಗೆ ಪರೋಕ್ಷವಾಗಿ ಆಪದ್ಭಾಂದವರೇ ಆದರು. ಜನಬಳಕೆಯಲ್ಲಿ ಇಮೇಲ್, ಮೊಬೈಲ್ಗಳಿಲ್ಲದ ಕಾಲ ಅದು. ಬಹು ಕಷ್ಟದಿಂದ ಕೇಂದ್ರ ಸರ್ಕಾರ ನಮ್ಮವರನ್ನು ಕರೆತರಲು ಹಡಗನ್ನು ಕಳುಹಿಸಲು ಒಪ್ಪಿದ್ದರೆ ವಿಶ್ವಸಂಸ್ಥೆ ಕುವೈತ್ ಬಂದರಿನ ಪ್ರವೇಶಕ್ಕೆ ನಿಷೇಧ ಹೇರಿತು. ಕುವೈತ್ಗೆ ವಿಮಾನ ಕಳಿಸಲು ಅವಕಾಶವಿರಲಿಲ್ಲ. ಆಗ ಜೋರ್ಡಾನ್ ದೇಶದೊಂದಿಗೆ ಮಾತುಕತೆ ನಡೆಸಿ ಅವರ ವಿಮಾನ ನಿಲ್ದಾಣವನ್ನು ಉಪಯೋಗಿಸಿ ಕೊಳ್ಳುವ ವ್ಯವಸ್ಥೆ ಮಾಡಲಾಯಿತು.
ಆದರೆ ಲಕ್ಷ ಜನರನ್ನು ವಿಮಾನದಲ್ಲಿ ಕರೆತರುವುದು ಸಾಮಾನ್ಯವೇ? ಯುದ್ಧಗ್ರಸ್ತ ಪ್ರದೇಶಕ್ಕೆ ವಿಮಾನ ಹಾರಿಸಲು ಹಿಂದೇಟು ಹಾಕುತ್ತಿದ್ದ ನಾಗರಿಕ ವಿಮಾನಯಾನದ ಪೈಲಟ್ಗಳನ್ನು ಆಗ ಮನವೊಲಿಸಲಾಯಿತು. ಕುವೈತ್ ನಿಂದ ಸಾವಿರದನೂರು ಕಿ.ಮಿ ದೂರ ದೇಶದ ಗಡಿ ದಾಟಿ ಜೋರ್ಡಾನಿನ ಅಮ್ಮನ್ಗೆ ಭಾರತೀಯರು ಬರುವ ವ್ಯವಸ್ಥೆ ಮಾಡಿದರು. ಅದೊಂದು ಮಹಾನ್ ಸಾಹಸವೇ ಆಗಿತ್ತು. ಒಟ್ಟಿನಲ್ಲಿ ಭಾರತ ಸರ್ಕಾರ ತನಗರಿವಿಲ್ಲದಂತೆ ಜಗತ್ತಿನ ಬೃಹತ್ ಕಾರ್ಯಾಚರಣೆಯೊಂದನ್ನು ನಡೆಸುವಂತೆ ಮಾಡಿಬಿಟ್ಟರು. ಅತ್ಯಂತ ಆತಂಕಕಾರಿಯೆನಿಸಿದ್ದ ಸಮಯವನ್ನು ಹಗಲುರಾತ್ರಿಯೆನ್ನದೆ ಅತ್ಯಂತ ಶಾಂತಚಿತ್ತದಿಂದ ನಿಭಾಯಿಸಿದರು.
ಜೋರ್ಡಾನಿನ ಅಮ್ಮನ್ ನಿಂದ ಮುಂಬೈವರೆಗೆ 4,117 ಕಿಮಿಗಳು. ಸುಮಾರು 1.11 ಲಕ್ಷ ಭಾರತೀಯರನ್ನು 488 ವಿಮಾನಗಳಲ್ಲಿ ಭಾರತಕ್ಕೆ ಕರೆ ತರಲಾಯಿತು. ಜಗತ್ತಿನ ಅತಿದೊಡ್ಡ ಸಮರಭೂಮಿಯ ಜನ ಸ್ಥಳಾಂತರ ಕಾರ್ಯಾಚರಣೆ ಎಂದು ಇದು ಹೆಸರು ಪಡೆಯಿತು. ನಿರಂತರ 59ದಿನಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಇಂಡಿಯನ್ ಏರ್ ಲೈನ್ಸ್ ಅಂದರೆ ನಾಗರಿಕ ಸೇವಾ ವಿಮಾನಗಳ ಪೈಲಟ್ ಗಳೂ ಸಹ ಪಾಲ್ಗೊಂಡರು.
ತಮ್ಮದೇ ದೇಶವಾಸಿಗರನ್ನು ಸಂಕಷ್ಟದಿಂದ ಪಾರು ಮಾಡಬೇಕೆನ್ನುವ ಛಲ ಕೊಹ್ಲಿಯವರಿಂದ ಇಷ್ಟೆಲ್ಲಾ ಸಾಹಸವನ್ನು ಮಾಡಿಸಿತು. ಇಲ್ಲದಿದ್ದರೆ ಕುವೈತ್ ನಲ್ಲಿದ್ದ ಭಾರತೀಯರನ್ನು ವಿಶ್ವಸಂಸ್ಥೆಯ ಮಡಿಲಿಗೆ ಹಾಕಿಯೋ ಅಥವಾ ಅಮೆರಿಕಾಕ್ಕೆ ಮನವಿಗಳನ್ನು ಮಾಡುತ್ತಲೋ ಆಗಿನ ಸರ್ಕಾರ ಸುಮ್ಮನಾಗಿಬಿಡುತ್ತಿತ್ತು.
ಇದೇ ಕೊಹ್ಲಿ ಆ ನಂತರ ಕುವೈತ್, ಇಜಿಪ್ಟ್, ಸೌದಿ ಅರೇಬಿಯಾ, ಒಮನ್, ರಶಿಯಾ ಮತ್ತು ಕತಾರ್ ಗಳ ಭಾರತೀಯ ದೂತವಾಸಗಳಲ್ಲಿ ಕಾರ್ಯ ನಿರ್ವಹಿಸಿದರು. ವಿದೇಶಾಂಗ ಇಲಾಖೆಯಲ್ಲಿ ಪಶ್ಚಿಮ ಆಫ್ರಿಕಾ ದೇಶಗಳ ವಿದ್ಯಮಾನಗಳನ್ನೂ ಗಮನಿಸುತ್ತಿದ್ದರು. ನ್ಯೂಜಿಲೆಂಡಿನಲ್ಲಿ ಭಾರತೀಯ ಹೈ ಕಮಿಷನರ್ ಆಗಿ ನೇಮಕಗೊಂಡರು.
ಈಗ ನಾನೇಕೆ ಇವರ ಬಗ್ಗೆ ಇಷ್ಟೊಂದು ಬರೆಯುತ್ತಿದ್ದೇನೆ? ಏಕೆಂದರೆ ಈ ದಿನಗಳಲ್ಲಿ ನಾನು ಕನಿಷ್ಟ ಪಕ್ಷ ವಾರಕ್ಕೆರಡು ಬಾರಿಯಾದರೂ ಅವರನ್ನು ಬೇಟಿಯಾಗುತ್ತಿರುತ್ತೇನೆ. ಅವರೊಂದಿಗೆ ಚರ್ಚಿಸುತ್ತೇನೆ. ಯಾವುದೇ ಸಮಸ್ಯೆಯನ್ನೂ ಲೀಲಾಜಾಲವಾಗಿ ಎದುರಿಸಬಲ್ಲ, ಸಮಚಿತ್ತವನ್ನೆಂದೂ ಕಳೆದುಕೊಳ್ಳದ ಅವರಿಂದ ಮಾರ್ಗದರ್ಶನ ಪಡೆಯುತ್ತಿರುತ್ತೇನೆ. ದೇಶವಿದೇಶಗಳ ಸರ್ಕಾರಗಳ ನೀತಿನಿಯಮ, ಸ್ವಭಾವ, ಆದ್ಯತೆಗಳನ್ನು ಬಲ್ಲ ಅವರ ಅನುಭವ ಜ್ಞಾನಕ್ಕೆ ಬೆರಗಾಗಿದ್ದೇನೆ. ಇಷ್ಟು ಮಹತ್ ಕಾರ್ಯವನ್ನೇ ಮಾಡಿದ್ದರೂ ಆ ಅಹಂಕಾರದ ಪಿತ್ತವನ್ನು ನೆತ್ತಿಗೇರಿಸಿಕೊಳ್ಳದೆ, ಯಾವುದೇ ಹಮ್ಮಬಿಮ್ಮು ಇಲ್ಲದೆ ಇಲ್ಲಿರುವ ಎಲ್ಲ ಭಾರತೀಯರೊಂದಿಗೆ ಬೆರೆತು ಮಾತನಾಡುವುದು ಕಂಡು ಸೋಜಿಗ ಪಟ್ಟಿದ್ದೇನೆ.
ಹೌದು ಅವರು ಶ್ರೀ ಸಂಜೀವ ಕೊಹ್ಲಿ, ಈಗ ತಾಂಜಾನಿಯಾದಲ್ಲಿ ಭಾರತದ ರಾಯಬಾರಿಯಾಗಿರುವ ಹಿಸ್ ಎಕ್ಸೆಲೆನ್ಸಿ ಶ್ರೀ ಸಂಜೀವ ಕೊಹ್ಲಿ. ಹೀಗೆ ದಂತಕತೆಗಳಾಗಿರುವವರ ಜೊತೆ ಕಾರ್ಯ ನಿರ್ವಹಿಸುವುದೂ ಸೌಭಾಗ್ಯವೇ ತಾನೆ?
(ಇವರ ಕಾರ್ಯ ವೈಖರಿಯ ಅನೇಕ ಪ್ರಸಂಗಗಳನ್ನು ಅಕ್ಷಯ್ ಕುಮಾರ್ ನಟಿಸಿರುವ Airlift -ಏರ್ ಲಿಫ್ಟ್ ಸಿನೆಮಾದಲ್ಲಿಯೂ ನೋಡಬಹುದು.)
✍ ಸಂತೋಷ್ ಜಿ ಆರ್
ನಿರ್ದೇಶಕರು, ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ,
ಡರ್ ಎಸ್ ಸಲಾಂ, ತಾಂಜಾನಿಯಾ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.