ಪರಿಸರ ಸ್ನೇಹಿಯಾಗುವ, ಇಂಧನ ಉಳಿತಾಯ ಮಾಡುವ ನಿಟ್ಟಿನಲ್ಲಿ ಮಹಾರಾಷ್ಟ್ರದ ವಸತಿ ಸಂಕೀರ್ಣವೊಂದು ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಝೀರೋ ಎನರ್ಜಿ ಸೊಸೈಟಿ ಎಂದು ಕರೆಸಿಕೊಳ್ಳುತ್ತಿರುವ ಅದು, ವಿದ್ಯುತ್ ಬದಲು ಸೌರಶಕ್ತಿಯನ್ನು ಬಳಕೆ ಮಾಡುತ್ತಿದೆ, ವಿದ್ಯುತ್ ಬಿಲ್ ಉಳಿತಾಯ ಮಾಡುತ್ತಿದೆ. ಮಾತ್ರವಲ್ಲ ಎಲೆಕ್ಟ್ರಿಕ್ ವೆಹ್ಹಿಕಲ್ ಚಾರ್ಜಿಂಗ್ ಸ್ಟೇಶನ್ ಅನ್ನೂ ಸ್ಥಾಪನೆ ಮಾಡಿದೆ.
ನವೀ ಮುಂಬಯಿಯ ಸಾನ್ಪಾಡಾ ಪ್ರದೇಶದಲ್ಲಿರುವ ವಸತಿ ಸಂಕೀರ್ಣವಾದ ಷಾ ಕಾಂಪ್ಲೆಕ್ಸ್ IV 2019ರ ಫೆಬ್ರವರಿಯಲ್ಲಿ ತನ್ನ ಆವರಣದಲ್ಲಿ 16 ಕಿಲೋವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ನಿರ್ಮಿಸಿದೆ. ಕಳೆದ ಏಪ್ರಿಲ್ನಲ್ಲಿ ಮೂರು ಸೌರಶಕ್ತಿ ಚಾಲಿತ ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಕೂಡ ಇದು ಸ್ಥಾಪನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನವೀಕರಿಸಬಹುದಾದ ಇಂಧನ ಪರಿಹಾರಗಳು ಮತ್ತು ಎಲೆಕ್ಟ್ರಿಕ್ ವೆಹಿಕಲ್ ಮೊಬಿಲಿಟಿ ಮೂಲಸೌಕರ್ಯಗಳನ್ನು ಸ್ಥಾಪಿಸುವಲ್ಲಿ ದಿಗ್ಗಜನಾಗಿರುವ ಮುಂಬಯಿ ಮೂಲದ ಮೆಜೆಂತಾ ಪವರ್ ಈ ಕೇಂದ್ರಗಳನ್ನು ಇಲ್ಲಿ ಸ್ಥಾಪನೆ ಮಾಡಿದೆ. ಶಕ್ತಿ-ಪರಿಣಾಮಕಾರಿ ಮತ್ತು ವೆಚ್ಚ-ಪರಿಣಾಮಕಾರಿ ಫ್ಯಾನ್ ಗಳನ್ನು ಇಲ್ಲಿ ಅಳವಡಿಸಲಾಗಿದ್ದು, ಇದು ನಿವಾಸಿಗಳನ್ನು ತಂಪಾಗಿರಿಸುವುದಲ್ಲದೆ ವಿದ್ಯುತ್ ಬಿಲ್ಗಳನ್ನು 65% ವರೆಗೆ ಕಡಿತಗೊಳಿಸಲು ಸಹಾಯ ಮಾಡುತ್ತಿದೆ!
ಸುದ್ದಿ ವರದಿಗಳ ಪ್ರಕಾರ, ಇದು ಮಹಾರಾಷ್ಟ್ರದ ಖಾಸಗಿ ವಸತಿ ಸಮುಚ್ಚಯದಲ್ಲಿನ ಮತ್ತು ಭಾರತದಲ್ಲಿನ ಇಂತಹ ಸ್ವರೂಪದ ಮೊದಲ ಯೋಜನೆಯಾಗಿದೆ.
“ಭಾರತದಲ್ಲಿ ಯಾವುದೇ ಸಂಭಾವ್ಯ ಎಲೆಕ್ಟ್ರಿಕ್ ವೆಹ್ಹಿಕಲ್ ಮಾಲೀಕರು ಒಂದು ವಿಷಯದ ಬಗ್ಗೆ ಹೆಚ್ಚು ಭಯಪಡುತ್ತಾರೆ, ಅದೆಂದರೆ ತಮ್ಮ ವಾಹನವನ್ನು ಚಾರ್ಜ್ ಮಾಡುವ ಬಗ್ಗೆ. ಮೊದಲು ಚಾರ್ಜಿಂಗ್ ಮೂಲಸೌಕರ್ಯವನ್ನು ಹೊಂದಬೇಕೇ ಮತ್ತು ನಂತರ ಇವಿ(ಎಲೆಕ್ಟ್ರಾನಿಕ್ ವೆಹ್ಹಿಕಲ್) ಖರೀದಿಸಬೇಕೇ? ಅಥವಾ ಇವಿ ಖರೀದಿಸಿ ನಂತದ ಜಾರ್ಜಿಂಗ್ ಕೇಂದ್ರ ಹೊಂದಬೇಕೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಆ ಅರ್ಥದಲ್ಲಿ, ಷಾ ಕಾಂಪ್ಲೆಕ್ಸ್ IV ಈ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ದೂರದೃಷ್ಟಿತ್ವ ಹೊಂದಿರುವ ವಸತಿ ಸಂಕೀರ್ಣವಾಗಿದೆ. ಈ ಸೌಲಭ್ಯವನ್ನು ಅಳವಡಿಸಿರುವುದರಿಂದ ಇಲ್ಲಿನ ನಿವಾಸಿಗಳು ಸಾಂಪ್ರದಾಯಿಕ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವುದನ್ನು ಗಂಭೀರವಾಗಿ ಪರಿಗಣಿಸಬಹುದು ”ಎಂದು ಮೆಜೆಂತಾ ಪವರ್ನ ಕಾರ್ಯನಿರ್ವಾಹಕ ನಿರ್ದೇಶಕ ಅರುಣ್ ಹರಿಹರ್ ರಾವ್ ಹೇಳುತ್ತಾರೆ.
ಇತರ ಅನೇಕ ಸಂಕೀರ್ಣಗಳಂತೆ, ಷಾ ಕಾಂಪ್ಲೆಕ್ಸ್ IV ಸೌರಶಕ್ತಿಗೆ ತನ್ನನ್ನು ತಾನು ಬದಲಾಯಿಸಿಕೊಳ್ಳಲು ಬಯಸಿತ್ತು. ಹೀಗಾಗಿ ಹೌಸಿಂಗ್ ಸೊಸೈಟಿಯೊಂದಿಗೆ ಕೆಲಸ ಮಾಡುತ್ತಿರುವ ಮೆಜೆಂತಾ ಪವರ್ ಮೊದಲು ಸೌರ ಸ್ಥಾವರವನ್ನು ಸ್ಥಾಪಿಸಿತು. ನಂತದ, ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಅವರ ಆಲೋಚನೆಯು ಮುಂದುವರಿಸಿ ಕಾರ್ಯರೂಪಕ್ಕೆ ತಂದಿತು. ಎರಡೂ ಸೌಲಭ್ಯಗಳನ್ನು ಸ್ಥಾಪಿಸಲು 13 ಲಕ್ಷ ರೂಪಾಯಿಗಳು ವೆಚ್ಚವಾಗಿವೆ.
ಸೌರ ವಿದ್ಯುತ್ ಸ್ಥಾವರವು ಅಲ್ಲಿನ ನಿವಾಸಿಗಳ ವಿದ್ಯುತ್ ಬಿಲ್ಗಳನ್ನು ಶೂನ್ಯಕ್ಕೆ ತರಲು ಸಹಾಯ ಮಾಡಿದೆ. ಈ ಮೊದಲು ಕಟ್ಟಡದ ಸರಾಸರಿ ಮಾಸಿಕ ಬಿಲ್ ರೂ. 22,000 ರಿಂದ ರೂ. 25,000 ಆಗಿತ್ತು.
ಈ ನಡುವೆ, ಪ್ರತಿ ಚಾರ್ಜಿಂಗ್ ಕೇಂದ್ರವು 3.3 ಕಿಲೋವ್ಯಾಟ್ ಸಾಮರ್ಥ್ಯವನ್ನು ಹೊಂದಿದೆ. ಇವು ಸಮುದಾಯ ಬಳಕೆಗಾಗಿ ಉದ್ದೇಶಿಸಲಾದ ಎಸಿ ಚಾರ್ಜರ್ಗಳಾಗಿವೆ. ರಾತ್ರಿಯ ಚಾರ್ಜಿಂಗ್ಗಾಗಿ ನಿವಾಸಿಗಳು ತಮ್ಮ ವಾಹನವನ್ನು ಪ್ಲಗ್ ಮಾಡಬಹುದು. ಹೆಚ್ಚುವರಿ ಸೌಕರ್ಯ ಮತ್ತು ಅನುಕೂಲತೆಯ ಹೊರತಾಗಿ, ಸುತ್ತಮುತ್ತಲ ಪ್ರದೇಶದಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳಿಲ್ಲದ ಕಾರಣ ಸಂಕೀರ್ಣವು ಇದರಿಂದ ಹೆಚ್ಚುವರಿ ಆದಾಯವನ್ನು ಗಳಿಸಲು ಪ್ರಾರಂಭಿಸಿದೆ.
“ಜವಾಬ್ದಾರಿಯುತ ಸಮಾಜವಾಗಿ, ನಮ್ಮ ಮಕ್ಕಳಿಗಾಗಿ ವಾಸಯೋಗ್ಯ ಭೂಮಿಯನ್ನು ನಿರ್ಮಿಸಲು ನಾವು ಸೌರಶಕ್ತಿಗೆ ಬದಲಾಗಲು ನಿರ್ಧರಿಸಿದ್ದೇವೆ. ನಾವು ಈಗ ಶೂನ್ಯ ಬಿಲ್ ಪಡೆಯುತ್ತಿದ್ದೇವೆ ಎಂಬುದು ನಮಗೆ ದೊಡ್ಡ ಬೋನಸ್ ಆಗಿದೆ. ಭವಿಷ್ಯದ ಎಲೆಕ್ಟ್ರಾನಿಕ್ ವಾಹನಗಳ ಬಗ್ಗೆ ಅರಿತುಕೊಂಡ ನಂತರ, ಇವಿ ಚಾರ್ಜಿಂಗ್ ಕೇಂದ್ರಗಳಿಗೆ ವಿದ್ಯುತ್ ನೀಡಲು ಸೌರ ಸ್ಥಾವರವನ್ನು ಸ್ಥಾಪಿಸಲು ನಾವು ನಿರ್ಧರಿಸಿದ್ದೇವೆ. ಈ ಸಾಧನೆ ಮಾಡಿದ ಭಾರತದ ಮೊದಲ ಕೆಲವು ವಸತಿ ಸಂಕೀರ್ಣಗಳ ಪೈಕಿ ನಾವು ಎಂಬುದು ನಮಗೆ ಸಂತೋಷವನ್ನು ನೀಡಿದೆ” ಎಂದು ಷಾ ಕಾಂಪ್ಲೆಕ್ಸ್ IV ನ ಕಾರ್ಯದರ್ಶಿ ವೆಂಕಟೇಶ್ವರನ್ ಹೇಳುತ್ತಾರೆ.
ನಿವಾಸಿಗಳು ಈ ಕ್ರಮಗಳನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ ಎಂದು ಅವರು ಹೇಳುತ್ತಾರೆ.
“ನಾವು ಮೊದಲು ಎರಡು ವರ್ಷಗಳ ಹಿಂದೆ ಸೌರ ಸ್ಥಾವರವನ್ನು ಸ್ಥಾಪಿಸುವ ಸಾಮರ್ಥ್ಯವನ್ನು ಅನ್ವೇಷಿಸಿದ್ದೇವೆ. ಹೆಚ್ಚಿನ ಪರಿಶೀಲನೆಯ ನಂತರ, ನಾವು ಮೆಜೆಂತಾ ಪವರ್ ಅನ್ನು ಸಂಪರ್ಕಿಸಿದೆವು. ಅವರು ಮೊದಲು ಸೌರಶಕ್ತಿಗೆ ಬದಲಾಗುವ ಸಾಮರ್ಥ್ಯದ ಬಗ್ಗೆ ನಿವಾಸಿಗಳೊಂದಿಗೆ ಮಾತನಾಡಲು ತಂಡವನ್ನು ಕಳುಹಿಸಿದರು. ಈ ಮಾತುಕತೆಯು ಹೆಚ್ಚಿನ ಉತ್ಸಾಹವನ್ನು ಉಂಟುಮಾಡಿತು, ಅದರ ನಂತರ ನಾವು ಯೋಜನೆಯೊಂದಿಗೆ ಮುಂದೆ ಹೋದೆವು, ”ಎಂದು ಅವರು ಹೇಳುತ್ತಾರೆ.
ಈ ವಸತಿ ಸಂಕೀರ್ಣದಲ್ಲಿ 56 ಕುಟುಂಬಗಳಿವೆ, ಇದು ಸುಮಾರು 200 ಕ್ಕೂ ಹೆಚ್ಚು ನಿವಾಸಿಗಳನ್ನು ಹೊಂದಿದೆ. ಸಂಕೀರ್ಣದಲ್ಲಿನ ಜನರು ಸೌರ ವಿದ್ಯುತ್ ಗೆ ಬದಲಾಗಲು ಪ್ರೋತ್ಸಾಹಿಸಿದರೆ, ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೂ ಉತ್ಸುಹುಕತೆಯನ್ನು ತೋರಿಸಿದರು ಎಂದು ಅವರು ಹೇಳುತ್ತಾರೆ.
“ಬೇಡಿಕೆಯು ಮತ್ತಷ್ಟು ಹೆಚ್ಚಾದಂತೆ, ನಾವು ಈ ಚಾರ್ಜಿಂಗ್ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳುತ್ತಾರೆ.
ಸದ್ಯಕ್ಕೆ, ಮೆಜೆಂತಾ ಪವರ್ ಸೌರ ವಿದ್ಯುತ್ ಸ್ಥಾವರಗಳು ಮತ್ತು ಇವಿ-ಚಾರ್ಜಿಂಗ್ ಕೇಂದ್ರಗಳನ್ನು ನವೀ ಮುಂಬೈ ಮತ್ತು ಉತ್ತರ ಮುಂಬೈನ ಕಂಡಿವಾಲಿಯಲ್ಲದೆ ಅಂಧೇರಿ ಸೇರಿದಂತೆ ನಗರದ ಪಶ್ಚಿಮ ಉಪನಗರಗಳಲ್ಲಿ ಕನಿಷ್ಠ 10-15 ವಸತಿ ಸಂಕೀರ್ಣಗಳಿಗೆ ಸ್ಥಾಪಿಸುವ ಆಲೋಚನೆಯನ್ನು ಮುಂದಿಟ್ಟಿದೆ.
ಭಾರತವು 100% ಸೌರ ವಿದ್ಯುತ್ಗೆ ಬದಲಾದರೆ, ಹೆಚ್ಚಿನ ಚಾರ್ಜಿಂಗ್ ಕೇಂದ್ರಗಳನ್ನು ಮನೆಗಳಲ್ಲಿನ ಖಾಸಗಿ ಪಾರ್ಕಿಂಗ್ ಸೌಲಭ್ಯಗಳಲ್ಲಿ ಸ್ಥಾಪನೆ ಮಾಡಬಹುದು.
ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಶಾ ಸಂಕೀರ್ಣದ ಮಾದರಿಯನ್ನು ಎಲ್ಲಾ ವಸತಿ ಸಂಕೀರ್ಣಗಳು ಅನುಸರಿಸಬೇಕಾದುದು ಅನಿವಾರ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.