ಮಹಾಬಲಿಪುರಂ : ಭಾರತದ ಅತ್ಯದ್ಭುತವಾದ ಸಾಂಸ್ಕೃತಿಕ ತಾಣ ತಮಿಳುನಾಡಿನ ಮಹಾಬಲಿಪುರಂನಲ್ಲಿ ಶುಕ್ರವಾರ ಮೊದಲ ದಿನದ ಚೀನಾ ಮತ್ತು ಭಾರತದ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆಗೆ ಸಾಕ್ಷಿಯಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಸಭೆ ನಡೆಸಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು, ಉಭಯ ನಾಯಕರುಗಳು ಐತಿಹಾಸಿಕ ಪರಂಪರೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸುಮಾರು ಐದು ಗಂಟೆಗಳ ಕಾಲ ಮಾತುಕತೆಯನ್ನು ನಡೆಸಿದ್ದಾರೆ ಎಂದಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅದ್ದೂರಿಯ ಸ್ವಾಗತವನ್ನು ಕಂಡು ಮೂಕವಿಸ್ಮಿತನಾಗಿರುವುದಾಗಿ ಕ್ಸಿ ಜಿನ್ಪಿಂಗ್ ಅವರು ಮೋದಿಯ ಬಳಿ ಹೇಳಿಕೊಂಡಿದ್ದಾರೆ. ಎರಡು ಗಂಟೆಗಳ ಕಾಲ ಜರುಗಿದ ಊಟದ ಸಂದರ್ಭದಲ್ಲಿ, ಹೂಡಿಕೆ ಅವಕಾಶಗಳು, ವ್ಯಾಪಾರ ಉತ್ತೇಜನ, ಆರ್ಥಿಕತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
ಉಭಯ ನಾಯಕರು ಜಾಗತಿಕ ಸಮಸ್ಯೆಯಾದ ಭಯೋತ್ಪಾದನೆ ಮತ್ತು ಮೂಲಭೂತವಾದೀಕರಣ ಸಮಸ್ಯೆಗಳ ಬಗ್ಗೆ ಮಾತುಕತೆಯನ್ನು ನಡೆಸಿದ್ದಾರೆ ಮತ್ತು ಇವುಗಳು ಉಭಯ ದೇಶಗಳು ಎದುರಿಸುತ್ತಿರುವ ಸವಾಲುಗಳು ಎಂದು ಪರಿಗಣಿಸಿದ್ದಾರೆ. ಅಲ್ಲದೆ ಭಯೋತ್ಪಾದನೆ ಮತ್ತು ಮೂಲಭೂತವಾದೀಕರಣ ನಮ್ಮ ಸಮಾಜದ ಮೂಲ ಅಂಶಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದ್ದಾರೆ.
ಶನಿವಾರ ನಡೆಯಲಿರುವ ಎರಡನೇ ದಿನದ ಅನೌಪಚಾರಿಕ ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರುಗಳು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಸಲಿದ್ದಾರೆ ಎಂದು ವಿಜಯ್ ಗೋಖಲೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.