1916ರ ಅಕ್ಟೋಬರ್ 11ರಂದು ತಮ್ಮ ಸಣ್ಣ ಪಟ್ಟಣ ಕಡೋಲಿಯಲ್ಲಿ ಜನಿಸಿದ ಹುಡುಗ ಒಂದು ದಿನ ಭಾರತದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ದಿಂದ ಪುರಸ್ಕೃತನಾಗುತ್ತಾನೆ ಎಂಬ ಮುನ್ಸೂಚನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಕಡೋಲಿ ಪ್ರದೇಶದ ಜನರಿಗೆ ಇದ್ದಿರಲಿಲ್ಲ. ಆ ಹುಡುಗ ಬೇರೆ ಯಾರೂ ಅಲ್ಲ, ಸಾಮಾಜಿಕ ಕಾರ್ಯಕರ್ತ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ದೀರ್ಘಕಾಲದ ಸದಸ್ಯ ನಾನಾಜಿ ದೇಶ್ಮುಖ್. ನಾನಾಜಿ ದೇಶಮುಖ್ ಅವರ ನಿಜವಾದ ಹೆಸರು ಚಂಡಿಕಾದಾಸ್ ಅಮೃತರಾವ್ ದೇಶಮುಖ್. ಜೆಪಿ ಚಳವಳಿಯಲ್ಲಿ ಇವರ ಪಾತ್ರ ಅಸಾಧಾರಣವಾದುದು.
ಆಗ ಭಾರತವು ನಿಜವಾದ ಭಾರತವಾಗಿರಲಿಲ್ಲ. ಬ್ರಿಟಿಷ್ ಆಡಳಿತದ ಸಂಕೋಲೆಯಲ್ಲಿ ನಲುಗಿತ್ತು. ಸ್ವಾತಂತ್ರ್ಯ ಪಡೆಯಲು 31 ವರ್ಷ ದೂರದಲ್ಲಿತ್ತು.
103 ವರ್ಷಗಳ ನಂತರ, 2019 ರ ಜನವರಿ 25 ರಂದು ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನಾನಾಜೀ ಅವರು ರಾಷ್ಟ್ರಕ್ಕೆ ನೀಡಿದ ಸೇವೆಗಳಿಗಾಗಿ ಭಾರತ ರತ್ನವನ್ನು (ಮರಣೋತ್ತರವಾಗಿ) ಪ್ರದಾನ ಮಾಡಿದರು.
2019ರ ಜನವರಿ 25ರಂದು ದೇಶಮುಖ್ ಅವರಿಗೆ ಭಾರತ ರತ್ನ ಘೋಷಣೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ, “ಗ್ರಾಮೀಣ ಅಭಿವೃದ್ಧಿಗೆ ನಾನಾಜಿ ದೇಶಮುಖ್ ಅವರ ಅಸಾಧಾರಣ ಕೊಡುಗೆಯು ಗ್ರಾಮೀಣ ಜನರ ಸಬಲೀಕರಣಕ್ಕೆ ಹೊಸ ದಾರಿಯನ್ನು ತೋರಿಸಿಕೊಟ್ಟಿದೆ. ದೀನ ದಲಿತರಿಗೆ ನಮ್ರತೆ, ಸಹಾನುಭೂತಿ ಮತ್ತು ಸೇವೆಯ ಪ್ರತಿರೂಪ ಅವರಾಗಿದ್ದರು. ಅವರು ನಿಜವಾದ ಅರ್ಥದಲ್ಲಿ ಭಾರತ ರತ್ನ” ಎಂದಿದ್ದರು.
ಆರ್ಎಸ್ಎಸ್ನೊಂದಿಗಿನ ನಾನಾಜೀ ಸಂಬಂಧ
ನಾನಾಜೀ ದೇಶ್ಮುಖ್ ತಮ್ಮ 13 ನೇ ವಯಸ್ಸಿನಲ್ಲಿ ಆರ್ಎಸ್ಎಸ್ಗೆ ಸೇರಿದರು. ಜೂನ್ 1996 ರಲ್ಲಿ ಇಂಡಿಯಾ ಟುಡೆ ನಿಯತಕಾಲಿಕೆಗೆ ಸಂದರ್ಶನ ನೀಡಿದ್ದ ಅವರು, 1926ರ ನಾಗ್ಪುರ ಗಲಭೆಯ ವೇಳೆ ಸಂಘವು ಹಿಂದೂಗಳನ್ನು ರಕ್ಷಿಸಿದ ವಿಧಾನದಿಂದ ಪ್ರೇರಿತಗೊಂಡು ಸಂಘಕ್ಕೆ ಸೇರ್ಪಡೆಗೊಂಡಿದ್ದಾಗಿ ಹೇಳಿದ್ದರು. ತನ್ನ ಆರಂಭಿಕ ವರ್ಷಗಳನ್ನು ಬ್ರಿಟಿಷ್ ರಾಜ್ ಅಡಿಯಲ್ಲಿ ಕಳೆದ ಇವರು, ಸಂಘವು ಭಾರತದ ಸ್ವಾತಂತ್ರ್ಯವನ್ನು ಸಾಧಿಸುವ ಮಾಧ್ಯಮವಾಗಿದೆ ಎಂಬ ನಂಬಿಕೆಯೊಂದಿಗೆ ಬೆಳೆದರು.
1997 ರಲ್ಲಿ ಇಂಡಿಯಾ ಟುಡೆ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ, ನಾನಾಜಿ, “ಆರ್ ಎಸ್ ಎಸ್ ಇಲ್ಲದೇ ಇರುತ್ತಿದ್ದರೆ ನಾನು ದೇಶದ ಬಗ್ಗೆ ಯೋಚಿಸುತ್ತಿರಲಿಲ್ಲ ಮತ್ತು ಅದಕ್ಕಾಗಿ ನನ್ನ ಜೀವನವನ್ನು ಮುಡಿಪಾಗಿರುತ್ತಿರಲಿಲ್ಲ. ನಾನಾಜಿ ದೇಶಮುಖ್ ಇಂದು ಏನೇ ಆಗಿದ್ದರು ಅದಕ್ಕೆ ಆರ್ ಎಸ್ ಎಸ್ ಕಾರಣ” ಎಂದು ಹೇಳಿದ್ದರು.
ಹಿಂದೂ-ಮುಸ್ಲಿಮರ ಸಂಬಂಧಗಳ ಬಗ್ಗೆ ಅವರ ದೃಷ್ಟಿಕೋನ
ನಾನಾಜೀ ದೇಶ್ಮುಖ್ ದೀರ್ಘಕಾಲದ ಆರ್ಎಸ್ಎಸ್ ಸದಸ್ಯರಾಗಿದ್ದರು ಮತ್ತು ಜನ ಸಂಘದ ಸ್ಥಾಪಕ ಸದಸ್ಯರಾಗಿದ್ದರು. ನಿಮ್ಮ ಅಜೆಂಡಾ ಸಾಮಾಜಿಕ ಉನ್ನತಿಯೋ ಅಥವಾ ಹಿಂದೂ ರಾಷ್ಟ್ರವೋ, ಆರ್ ಎಸ್ ಎಸ್ ತತ್ವ ಮೂಲಭೂತವಾಗಿ ಮುಸ್ಲಿಂ ವಿರೋಧಿಯಲ್ಲವೇ, ಹಿಂದೂ-ಮುಸ್ಲಿಂ ಸಂಬಂಧಗಳ ಬಗ್ಗೆ ಹೇಳಿ ಎಂದು ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ ಅವರು, “ನಮ್ಮ ದೇಶದಲ್ಲಿ ಯಾವುದೇ ರೀತಿಯ ಹಿಂದೂ-ಮುಸ್ಲಿಂ ಸಮಸ್ಯೆ ಇಲ್ಲ. ಇದೆಲ್ಲವೂ ರಾಜಕಾರಣಿಗಳಿಂದ ಸೃಷ್ಟಿಸಲ್ಪಟ್ಟಿದೆ. ನಾನು ರಾಜಕೀಯವನ್ನು ತ್ಯಜಿಸಲು ಇದು ಒಂದು ಕಾರಣವಾಗಿದೆ” ಎಂದಿದ್ದರು.
ಜೆಪಿ ಚಳುವಳಿಯಲ್ಲಿನ ಪಾತ್ರ
ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಜೆಪಿ ನಡೆಸಿದ್ದ ಚಳುವಳಿಯಲ್ಲಿ ನಾನಾಜೀ ದೇಶಮುಖ್ ಪ್ರಮುಖ ಪಾತ್ರ ವಹಿಸಿದ್ದಾರೆ. ಲೋಕ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್ ನಾರಾಯಣ್ ಅವರ ಒಟ್ಟು ಕ್ರಾಂತಿಯ ಆಂದೋಲನದ ಹಿಂದೆ ದೇಶಮುಖ್ ಮುಖ್ಯ ಶಕ್ತಿಯಾಗಿದ್ದರು.
1975ರ ಜುಲೈ 29ರಂದು, ದಕ್ಷಿಣ ದೆಹಲಿಯಿಂದ ಅವರನ್ನು ಆಶ್ಚರ್ಯಕರವಾಗಿ ಬಂಧಿಸಲಾಯಿತು. ನಾನಾಜೀ ದೇಶಮುಖ್ ಅವರು ಪೊಲೀಸ್ ರಾಡಾರ್ ಅಡಿಯಲ್ಲಿದ್ದರು, ಇದಕ್ಕೆ ಕಾರಣ ಒಂದು ತಿಂಗಳ ಹಿಂದೆ (ಜೂನ್ 25-26) ಅವರು ತುರ್ತು ಪರಿಸ್ಥಿತಿ ವಿರೋಧಿ ನಾಯಕರಾದ ಸುಬ್ರಮಣ್ಯಂ ಸ್ವಾಮಿ, ಎಂ.ಎಲ್.ಖೋರಾನಾ, ರವೀಂದ್ರ ವರ್ಮಾ, ದತ್ತೋಪಂತ್ ತೆಂಗಡಿ ಮುಂತಾದವರನ್ನು ಒಟ್ಟುಗೂಡಿಸಿದ್ದು. ಅವರನ್ನು ಉದ್ದೇಶಿಸಿ ದೇಶಮುಖ್ ಅವರು ಸರ್ಕಾರದ ವಿರುದ್ಧ ಹೋರಾಡಿ ಎಂಬ ಸ್ಪಷ್ಟ ಮತ್ತು ಸರಳವಾದ ಸೂಚನೆಯನ್ನು ನೀಡಿದ್ದು.
ಇದು “ಆಪರೇಷನ್ ಟೇಕೋವರ್”ನ ಪ್ರಾರಂಭವಾಗಿತ್ತು ಮತ್ತು ಇದರ ಭಾಗವಾಗಿ ನಾನಾಜಿ ಅವರು ಜುಲೈ 29, 1975 ರಂದು ಬಂಧಿಸಲ್ಪಡುವವರೆಗೂ ವಿವಿಧ ರಾಜ್ಯ ರಾಜಧಾನಿಗಳಿಗೆ ತೆರಳಿ ಹೋರಾಟದಲ್ಲಿ ಭಾಗಿಯಾಗಿದ್ದರು.
1997 ರ ಆಗಸ್ಟ್ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ದೇಶಮುಖ್, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 17 ತಿಂಗಳು ಕಳೆದ ನಂತರ ನನ್ನನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ನನ್ನ ಬಿಡುಗಡೆಗಾಗಿ ನನ್ನ ಗೆಳೆಯ ಇಂಡಿಯನ್ ಎಕ್ಸ್ಪ್ರೆಸ್ ಸಮೂಹದ ಸಂಸ್ಥಾಪಕ ರಾಮ್ ನಾಥ್ ಗೋಯೆಂಕಾ ಅವರು ಇಂದಿರಾ ಗಾಂಧಿಯೊಂದಿಗೆ ಮಾತುಕತೆಯನ್ನು ನಡೆಸಿದ್ದರು ಎಂದು ಹೇಳಿದ್ದಾರೆ. ಅವರೇ 1977 ರಲ್ಲಿ ಚುನಾವಣೆಗೆ ನಿಲ್ಲುವಂತೆ ನನ್ನನ್ನು ಮನವೊಲಿಸಿದ್ದು ಎಂಬುದಾಗಿಯೂ ದೇಶಮುಖ್ ಹೇಳಿಕೊಂಡಿದ್ದರು.
ಚುನಾವಣಾ ರಾಜಕೀಯ
ಜೈಲಿನಿಂದ ಬಿಡುಗಡೆಯಾದ ನಂತರ, ನಾನಾಜೀ ಚುನಾವಣೆಯಲ್ಲಿ ಸ್ಪರ್ಧಿಸಿದರು. ಉತ್ತರ ಪ್ರದೇಶದ ಬಲರಾಂಪುರದ ಲೋಕಸಭಾ ಸಂಸದರಾಗಿದ್ದ ಅವರು ಜನ ಸಂಘವನ್ನು ಜನತಾ ಪಕ್ಷದೊಂದಿಗೆ ವಿಲೀನಗೊಳಿಸುವ ಪ್ರಮುಖರಲ್ಲಿ ಒಬ್ಬರಾದರು. ಆದರೂ ಅವರು ಮೊರಾರ್ಜಿ ದೇಸಾಯಿ ಅವರ ಸಂಪುಟಕ್ಕೆ ಸೇರಲು ನಿರಾಕರಿಸಿದರು.
ಅದಾದ ತಕ್ಷಣ ಅವರು ಸಾರ್ವಜನಿಕ ಜೀವನವನ್ನು ತೊರೆದು ಸಮಾಜ ಸೇವಕರಾಗಿ ಕೆಲಸ ಪ್ರಾರಂಭಿಸಿದರು.
1997 ರಲ್ಲಿ, ರಾಜಕೀಯವನ್ನು ತೊರೆಯುವ ಅವರ ಹಠಾತ್ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು, “ನಾವು ಸೃಷ್ಟಿಸುತ್ತಿರುವುದು ತಲೆ ಕೆಳಗಾದ ಜಗತ್ತನ್ನು. ಜನರು ಮತ್ತು ನೈಸರ್ಗಿಕ ಸಂಪನ್ಮೂಲಗಳ ವಿಷಯದಲ್ಲಿ ಭಾರತದ ಸಂಪತ್ತು ಅದರ ಗ್ರಾಮಗಳಲ್ಲೇ ಇದೆ. ಆದರೆ ಸರ್ಕಾರವು ಅದನ್ನು ನಿರ್ಲಕ್ಷಿಸುತ್ತಿದೆ. ಅದು ನಗರಗಳನ್ನು ಮಾತ್ರ ಅಭಿವೃದ್ಧಿಪಡಿಸುತ್ತಿದೆ ಮತ್ತು ಗ್ರಾಹಕೀಕರಣವನ್ನು ಉತ್ತೇಜಿಸುತ್ತಿದೆ. ರಾಜಕಾರಣಿಗಳ ಬಗ್ಗೆ ಅಸಹ್ಯಪಟ್ಟುಕೊಂಡ ನಾನು, ಹಳ್ಳಿಗಳಲ್ಲಿ ಏನು ಮಾಡಬಹುದೆಂದು ನೋಡಲು ಯುವಕರನ್ನು ಬಳಸಸಿಕೊಳ್ಳಲು ನಿರ್ಧರಿಸಿದೆ” ಎಂದಿದ್ದರು.
ಶಿಕ್ಷಣ, ಆರೋಗ್ಯ, ಗ್ರಾಮ ಸ್ವಾವಲಂಬನೆ ಕ್ಷೇತ್ರಗಳಲ್ಲಿ ನಾನಾಜಿ ಅವರ ಸಾಧನೆ ಅಪಾರವಾದದ್ದು. ಅವರು 2010ರ ಫೆಬ್ರವರಿ 27 ರಂದು ತಮ್ಮ 95ನೇ ವರ್ಷದಲ್ಲಿ ನಿಧನರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.