ನವದೆಹಲಿ: 150 ರೈಲುಗಳು ಮತ್ತು 50 ರೈಲ್ವೆ ನಿಲ್ದಾಣಗಳ ಕಾರ್ಯಾಚರಣೆಯನ್ನು ‘ಸಮಯಕ್ಕೆ ಅನುಗುಣವಾಗಿ’ ಖಾಸಗಿ ನಿರ್ವಾಹಕರಿಗೆ ಹಸ್ತಾಂತರಿಸಲು ಕೇಂದ್ರ ಸರ್ಕಾರ ಚಿಂತನೆಯನ್ನು ನಡೆಸುತ್ತಿದೆ. ಈ ನಿಟ್ಟಿನ ನೀಲನಕ್ಷೆಯನ್ನು ಸಿದ್ಧಪಡಿಸುವ ಸಲುವಾಗಿ ಕಾರ್ಯಪಡೆಯನ್ನು ರಚಿಸುವ ಪ್ರಕ್ರಿಯೆಯನ್ನು ಅದು ಈಗಾಗಲೇ ಆರಂಭಿಸಿದೆ.
ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು, ರೈಲ್ವೆ ಮಂಡಳಿಯ ಅಧ್ಯಕ್ಷ ವಿ. ಕೆ. ಯಾದವ್ ಅವರಿಗೆ ಬರೆದ ಪತ್ರದಲ್ಲಿ, ನೀಲ ನಕ್ಷೆಯನ್ನು ಸಿದ್ಧಪಡಿಸಲು ಸಶಕ್ತ ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.
ಯಾದವ್ ಮತ್ತು ಕಾಂತ್ ಅವರಲ್ಲದೇ, ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸಶಕ್ತ ಕಾರ್ಯಪಡೆಯ ಭಾಗವಾಗಲಿದ್ದಾರೆ.
ವಿಶ್ವ ದರ್ಜೆಯ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸುವ ಸಲುವಾಗಿ 400 ರೈಲ್ವೆ ನಿಲ್ದಾಣಗಳನ್ನು ರೈಲ್ವೆ ಕೈಗೆತ್ತಿಕೊಂಡಿದೆ, ಇಲ್ಲಿಯವರೆಗೆ ಕೆಲವೇ ಕೆಲವು ರೈಲು ನಿಲ್ದಾಣಗಳನ್ನು ಮಾತ್ರ ನವೀಕರಿಸಲಾಗಿದೆ ಎಂದು ಅಮಿತಾಬ್ ಕಾಂತ್ ಹೇಳಿದ್ದಾರೆ.
“ನಾನು ರೈಲ್ವೆ ಸಚಿವರೊಂದಿಗೆ ವಿಸ್ತೃತವಾದ ಚರ್ಚೆಯನ್ನು ನಡೆಸಿದ್ದೇನೆ, ಆದ್ಯತೆಗೆ ಅನುಗುಣವಾಗಿ ಕನಿಷ್ಠ 50 ನಿಲ್ದಾಣಗಳಲ್ಲಿಯಾದರೂ ಖಾಸಗಿಯವರಿಗೆ ಕಾರ್ಯಾಚರಣೆಯನ್ನು ನೀಡುವ ಅವಶ್ಯಕತೆಯಿದೆ ಎಂದು ನಿರ್ಧರಿಸಲಾಗಿದೆ. ಆರು ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಿದ ಇತ್ತೀಚಿನ ಅನುಭವದ ಹಿನ್ನಲೆಯಲ್ಲಿ ರೈಲು ನಿಲ್ದಾಣದ ಕಾರ್ಯಾಚರಣೆಯನ್ನು ಖಾಸಗಿಯವರಿಗೆ ನೀಡುವ ಚಿಂತನೆಯನ್ನು ನಡೆಸಲಾಗಿದೆ” ಎಂದಿದ್ದಾರೆ.
ಈಗಾಗಲೇ ಸೆಮಿ ಸ್ಪೀಡ್ ತೇಜಸ್ ಎಕ್ಸ್ಪ್ರೆಸ್ ರೈಲಿನ ಕಾರ್ಯಾಚರಣೆಯ ಜವಾಬ್ದಾರಿಯನ್ನು ಖಾಸಗಿಯವರಿಗೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.