ನವದೆಹಲಿ: ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಹಲವಾರು ಪ್ರಮಾಣದಲ್ಲಿ ಮಹಿಳಾ ಉದ್ಯಮಿಗಳು ಹೊರಹೊಮ್ಮುತ್ತಿದ್ದಾರೆ. ಮುಂದಿನ ಕೆಲವು ದಶಕಗಳಲ್ಲಿ ಏಷ್ಯಾದ ಉದ್ಯಮದ ಚಿತ್ರಣವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಬಲ್ಲಂತಹ 25 ಸಾಧನೆಗೈದ ಮಹಿಳೆಯರನ್ನು ಹೈಲೈಟ್ ಮಾಡುವ ಫೋರ್ಬ್ಸ್ ಏಷ್ಯಾದ ಪವರ್ ಬ್ಯುಸಿನೆಸ್ ವುಮೆನ್ ಪಟ್ಟಿಯಲ್ಲಿ ನಾಲ್ಕು ಭಾರತೀಯ ಮಹಿಳೆಯರು ಕಾಣಿಸಿಕೊಂಡಿದ್ದಾರೆ.
ಫೋರ್ಬ್ಸ್ ಪ್ರಕಾರ, ಪಟ್ಟಿಯಲ್ಲಿರುವ ಮಹಿಳೆಯರನ್ನು ಅವರ ಸಾಧನೆಗಳಿಗಾಗಿ ಮತ್ತು ಯಶಸ್ಸಿನ ದಾಖಲೆಗಳಿಗಾಗಿ ಆಯ್ಕೆ ಮಾಡಲಾಗುತ್ತದೆ. ಉದ್ಯಮಿಗಳು, ಹೂಡಿಕೆದಾರರು, ಉನ್ನತ ಮಟ್ಟದ ಕಾರ್ಯನಿರ್ವಾಹಕರುಗಳು ಮತ್ತು ಕುಟುಂಬ ಉದ್ಯಮಗಳನ್ನು ಪರಿವರ್ತನೆ ಮಾಡುತ್ತಿರುವ ಮಹಿಳೆಯರನ್ನು ಹೈಲೈಟ್ ಮಾಡುವ ಮೂಲಕ ಏಷ್ಯಾದ ವ್ಯವಹಾರ ಚಿತ್ರಣದಲ್ಲಿನ ವೈವಿಧ್ಯತೆಯನ್ನು ಈ ಪಟ್ಟಿ ಪ್ರತಿಬಿಂಬಿಸುತ್ತದೆ.
ಈ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯ ಮಹಿಳಾ ಉದ್ಯಮಿಗಳೆಂದರೆ ಫಲ್ಗುಣಿ ನಾಯರ್, ಉಪಾಸನಾ ಟಾಕು, ಅನಿತಾ ದೋಂಗ್ರೆ, ಸ್ಮಿತಾ ಜಾಟಿಯಾ.
ಫಲ್ಗುಣಿ ನಾಯರ್ ಅವರು ಕೋಟಕ್ ಮಹೀಂದ್ರ ಕ್ಯಾಪಿಟಲ್ ಕಂಪನಿಯ ಮಾಜಿ ವ್ಯವಸ್ಥಾಪನಾ ನಿರ್ದೇಶಕಿಯಾಗಿದ್ದು, ನೈಕಾ ಡಾಟ್ ಕಾಮ್ ಅವರ ಕನಸಿನ ಉದ್ಯಮವಾಗಿದೆ. ಇವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಗ್ರ ಮಹಿಳಾ ಸಾಧಕರಿಗಾಗಿ ನೀಡುವ ಎಫ್ಐಸಿಸಿಐ ಲೇಡೀಸ್ ಆರ್ಗನೈಸೇಶನ್ (ಎಫ್ಎಲ್ಒ) ಪ್ರಶಸ್ತಿ ಮತ್ತು ಬಿಸಿನೆಸ್ ಟುಡೆ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಂಸೆಗಳನ್ನು ಪಡೆದಿದ್ದಾರೆ.
ಉಪಾಸನಾ ಅವರು ಮೊಬಿಕ್ವಿಕ್ ಸಹ-ಸಂಸ್ಥಾಪಕರಾಗಿದ್ದಾರೆ. 2008 ರಲ್ಲಿ ಗ್ರೀನ್ ಕಾರ್ಡ್ ಮತ್ತು ಪೇಪಲ್ನಲ್ಲಿ ಉದ್ಯೋಗವನ್ನು ತೊರೆದು ಸಿಲಿಕಾನ್ ವ್ಯಾಲಿಯಿಂದ ಭಾರತಕ್ಕೆ ಮರಳಿದರು. ಇವರು ಪೇಪಲ್ (eBay ಕಂಪನಿ)ಯ ಹಿರಿಯ ಉತ್ಪನ್ನ ನಿರ್ವಾಹಕರಾಗಿದ್ದರು.
ಅನಿತಾ ದೋಂಗ್ರೆ ಅವರು ಹೌಸ್ ಆಫ್ ಅನಿತಾ ದೋಂಗ್ರೆಯ ಸಹ-ಸಂಸ್ಥಾಪಕಿ ಮತ್ತು ಸಿಇಓ. ಅನಿತಾ 1995 ರಲ್ಲಿ ತನ್ನ ಸಹೋದರಿ ಮೀನಾ ಸೆಹ್ರಾ ಅವರೊಂದಿಗೆ ಮುಂಬೈ ಅಪಾರ್ಟ್ಮೆಂಟಿನಲ್ಲಿ ಕೇವಲ ಎರಡು ಹೊಲಿಗೆ ಯಂತ್ರಗಳೊಂದಿಗೆ ಫ್ಯಾಶನ್ ಸಾಮ್ರಾಜ್ಯವನ್ನು ಪ್ರಾರಂಭಿಸಿದರು. ಇಂದು, ಹೌಸ್ ಆಫ್ ಅನಿತಾ ದೋಂಗ್ರೆ ಮಾರಿಷಸ್ನಿಂದ ಮ್ಯಾನ್ಹ್ಯಾಟನ್ವರೆಗೆ 272 ಮಳಿಗೆಗಳನ್ನು ಹೊಂದಿದ್ದು, ಸುಸ್ಥಿರ ಸಿದ್ಧ ಉಡುಪುಗಳಿಗಾಗಿ ಪ್ರಸಿದ್ಧಿ ಪಡೆದುಕೊಂಡಿದೆ.
ಸ್ಮಿತಾ ಜಾಟಿಯಾ ಅವರು ಹಾರ್ಡ್ಕ್ಯಾಸಲ್ ರೆಸ್ಟೋರೆಂಟ್ ಪ್ರೈ. ಲಿಮಿಟೆಡ್ (ಎಚ್ಆರ್ಪಿಎಲ್)ನ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ. ಎಚ್ಆರ್ಪಿಎಲ್ ಮಾಸ್ಟರ್ ಫ್ರಾಂಚೈಸಿ ಆಗಿದ್ದು, ಇದು ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಮೆಕ್ಡೊನಾಲ್ಡ್ಸ್ ಬ್ರಾಂಡ್ ರೆಸ್ಟೋರೆಂಟ್ಗಳನ್ನು ನಿರ್ವಹಿಸುತ್ತದೆ. ಮೆಕ್ಡೊನಾಲ್ಡ್ಸ್ ಕಾರ್ಪೊರೇಶನ್ನೊಂದಿಗಿನ ಮಾಸ್ಟರ್ ಫ್ರಾಂಚೈಸಿ ವ್ಯವಸ್ಥೆಯಡಿಯಲ್ಲಿ, ರಿಯಲ್ ಎಸ್ಟೇಟ್ ಹಿತಾಸಕ್ತಿ ಸೇರಿದಂತೆ ಎಲ್ಲಾ ವ್ಯವಹಾರ ಕಾರ್ಯಾಚರಣೆಗಳಿಗೆ ಬಂಡವಾಳವನ್ನು ಒದಗಿಸುವ ಜವಾಬ್ದಾರಿಯನ್ನು ಎಚ್ಆರ್ಪಿಎಲ್ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.