ಕೊನೆಗೂ ಕರಾವಳಿಯಲ್ಲಿ ನರ್ಮ್ ಬಸ್ಸುಗಳು ಓಡಾಡಲು ಕಾಲ ಕೂಡಿ ಬಂದಿದೆ. ಇಲ್ಲಿಯ ತನಕ ನರ್ಮ್ ಬಸ್ಸುಗಳು ಇಡೀ ರಾಷ್ಟ್ರದಲ್ಲಿ ಪ್ರಾಯೋಗಿಕವಾಗಿ ಓಡಾಡಿ ಜನರ ಪ್ರೀತಿ, ವಿಶ್ವಾಸವನ್ನು ಗಳಿಸುತ್ತಾ ಯಶಸ್ವಿಯಾಗಿ ತಮ್ಮ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದರೆ, ಇತ್ತ ಮಂಗಳೂರು ಮತ್ತು ಉಡುಪಿಯಲ್ಲಿ ಅದರ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ. ಅದಕ್ಕೆ ಕಾರಣ ಮಂಗಳೂರಿನಲ್ಲಿ ಇರುವ ಖಾಸಗಿ ಸಿಟಿ ಬಸ್ ಮಾಲೀಕರ ಲಾಬಿ.
ಒಂದಂತೂ ನಿಜ. ಭಾರತದ ಯಾವುದೇ ಭಾಗಕ್ಕೆ ಹೋಲಿಸಿದರೂ ಮಂಗಳೂರಿನಲ್ಲಿ ಖಾಸಗಿ ಬಸ್ ವ್ಯವಸ್ಥೆ ಬಹಳ ಸುವ್ಯವಸ್ಥಿತವಾಗಿ ಇದೆ. ನಿಮಿಷಕ್ಕೊಂದು ಬಸ್ಸುಗಳು ಅದಕ್ಕೆ ಪೂರಕವಾಗಿ ಅಲ್ಲಲ್ಲಿ ಬಸ್ ಸ್ಟಾಪ್ಗಳು ಮತ್ತು ಬಸ್ ಸಂಚಾರವನ್ನು ಸುಗಮಗೊಳಿಸಲು ಟೈಮ್ಕೀಪರ್ಗಳು ಸೇರಿ ಬಸ್ ವ್ಯವಸ್ಥೆಯಲ್ಲಿ ಗೊಂದಲವಿಲ್ಲ. ಆದರೆ ಪ್ರಶ್ನೆ ಇರುವುದು ಬಸ್ ಮಾಲೀಕರ ವ್ಯವಹಾರಿಕ ಮನಸ್ಥಿತಿ.
ಯಾವ ರೂಟ್ಗೆ ಬಸ್ನ್ನು ಹಾಕಿದರೆ ಲಾಭ ಹೆಚ್ಚಾಗಿ ಬರುತ್ತದೋ ಅಂತಹ ರೂಟ್ಗೆ ಹೆಚ್ಚು ಒತ್ತು ಕೊಡುವ ಬಸ್ ಮಾಲೀಕರು ಉಳಿದ ಕಡೆಯಲ್ಲಿ ಗೊತ್ತಿದ್ದೂ ಕುರುಡರಾಗಿರುತ್ತಾರೆ. ಜನಪ್ರಿಯ ರೂಟ್ಗಳಲ್ಲಿ ನಿಮಿಷಕ್ಕೊಂದು ಬಸ್ ಇದ್ದರೆ ಇನ್ನೂ ಕೆಲವು ಏರಿಯಾಗಳಲ್ಲಿ ದಿನಕ್ಕೊಂದು ಬಸ್ ಓಡಾಡಿದರೆ ಅದೇ ಹೆಚ್ಚು. ಕೇಳಿದರೆ ಆ ಕಡೆ ಬಸ್ ಹಾಕಿದರೆ ಲಾಭ ಬರುವುದಿಲ್ಲ ಎನ್ನುವ ಮಾತು. ಅಷ್ಟರಮಟ್ಟಿಗೆ ಬಸ್ ವ್ಯವಸ್ಥೆಗೆ ಕಮರ್ಷಿಯಲ್ ಅಂಶ ಸೇರಿಕೊಂಡಿದೆ. ಅದಕ್ಕಾಗಿ ಈ ಹೊಸದಾಗಿ ಬರಲಿರುವ ನರ್ಮ್ ಬಸ್ಗಳನ್ನು ಯಾವ ಏರಿಯಾದಲ್ಲಿ ಖಾಸಗಿ ಸಿಟಿ ಬಸ್ಗಳು ಕಡಿಮೆ ಇದೆಯೋ ಅಲ್ಲಿ ಓಡಾಡಿಸಲು ಜಿಲ್ಲಾಡಳಿತ ಮನಸ್ಸು ಮಾಡಬೇಕಾಗಿದೆ. ಆದರೆ ಪ್ರಶ್ನೆ ಇರುವುದು ಈಗ ನಮ್ಮ ಮಂಗಳೂರಿಗೆ ಮಂಜೂರಾಗಿರುವ ೩೫ ಸಿಟಿ ನರ್ಮ್ ಬಸ್ಗಳನ್ನು ಯಾವ ಕಡೆ, ಯಾವ ರೂಟ್ಗೆ ಓಡಾಡಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮುಂದಾಗುತ್ತದೆ ಎನ್ನುವುದು.
ಸೋಮವಾರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅಲ್ಲಿ ಅಂತಿಮವಾಗಿ ಬಂದ ನಿರ್ಧಾರದಂತೆ ಎಪ್ರಿಲ್ ೯ ರ ಒಳಗೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಗರಿಷ್ಟ ೨೦ ಕಿ.ಮೀ ಅಂತರದಲ್ಲಿ ವಾಸಿಸುವ ನಾಗರಿಕರ ಮನವಿಯನ್ನು ಸ್ವೀಕರಿಸಿ, ನಂತರ ಎಪ್ರಿಲ್ ೨೦ ರಂದು ಆ ಕುರಿತಾಗಿ ಒಂದು ವಿಶೇಷ ಸಭೆ ಕರೆದು ಜನರ ಮನವಿಯನ್ನು, ಅದಕ್ಕೆ ಪೂರಕವಾದ ಅಂಶಗಳನ್ನು ಚರ್ಚಿಸಿ ಕೊನೆಗೆ ಕೇಂದ್ರ ಸರ್ಕಾರದ ಯೋಜನೆಯನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳಬಹುದು ಎನ್ನುವುದರ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸಲಾಯಿತು. ನರ್ಮ್ ಬಸ್ಸುಗಳಿಗೆ ಕೇಂದ್ರ ಸರ್ಕಾರ ೮೦ ಶೇಕಡಾ ಅನುದಾನ ನೀಡಿದರೆ ರಾಜ್ಯ ಸರ್ಕಾರ ೨೦ ಶೇಕಡಾ ಹಣಕಾಸು ಒದಗಿಸುತ್ತದೆ. ೧೯೯೨ ರಲ್ಲಿ ಜಿಲ್ಲಾ ದಂಡಾಧಿಕಾರಿಗಳ ಅಧಿಸೂಚನೆಯಂತೆ ಮಂಗಳೂರಿನ ಸ್ಟೇಟ್ಬ್ಯಾಂಕ್ನಿಂದ ಹೊಸ ಪರವಾನಿಗೆ ನೀಡುವುದಕ್ಕೆ ಪ್ರತಿಬಂಧನೆ ವಿಧಿಸಿತ್ತು. ಆ ಸಮಯದಲ್ಲಿ ಮಂಗಳೂರಿನ ನಾಗರೀಕರ ಒಟ್ಟು ಸಂಖ್ಯೆ ಮತ್ತು ಬಸ್ಸುಗಳ ಸಂಖ್ಯೆಯ ಅನುಪಾತದಂತೆ ಕ್ರಮ ಕೈಗೊಳ್ಳಲಾಗಿತ್ತು. ಇನ್ನೂ ಮಂಗಳೂರಿನ ನಗರದ ಒಳಗೆ ಬರುವ ರಸ್ತೆಗಳು ಕಿರಿದಾಗಿರುವುದರಿಂದ ಅದನ್ನೆಲ್ಲಾ ಅನುಸರಿಸಿ ಆ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಈಗ ಜಿಲ್ಲಾಡಳಿತ ತೀರ್ಮಾನಿಸಿದಂತೆ ಆ ಅಧಿಸೂಚನೆಯನ್ನು ಹಿಂದಕ್ಕೆ ಪಡೆದುಕೊಂಡು ಆ ರೂಟ್ನಲ್ಲಿ ನರ್ಮ್ ಬಸ್ಸುಗಳನ್ನು ಓಡಿಸಲು ಯೋಜನೆ ಹಾಕಿಕೊಂಡಿದೆ. ಆದರೆ ಪ್ರಶ್ನೆ ಇರುವುದು ಯಾವ ರೂಟ್ನಲ್ಲಿ ಬಸ್ಸುಗಳ ಅಗತ್ಯ ಇದೆ ಮತ್ತು ಸಾರಿಗೆ ಪ್ರಾಧಿಕಾರ ಯಾವ ರೂಟ್ಗೆ ಅನುಸರಿಸಿ ಬಸ್ಸುಗಳ ಪರವಾನಿಗೆಗೆ ಅನುಮತಿಯನ್ನು ಕೇಳಿದೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.
ನರ್ಮ್ ಬಸ್ಸುಗಳ ಸಂಚಾರವನ್ನು ತಪ್ಪಿಸಲು ಮಂಗಳೂರಿನ ಸಿಟಿ ಬಸ್ಸ್ ಮಾಲೀಕರು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರಿಗೂ ಪತ್ರ ಬರೆದಿದ್ದರು. ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ ಎಂದು ಗೊತ್ತಾದಾಗ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆಯನ್ನು ಹಾಕಲಾಯಿತು. ಆದರೆ ಈ ಯೋಜನೆಯಿಂದ ಬರುವ ಬಸ್ಸುಗಳು ನಾಗರಿಕರ ಮೂಲಭೂತ ವ್ಯವಸ್ಥೆಯ ಭಾಗವಾಗಿರುವುದರಿಂದ ಅದನ್ನು ನಿಬಂಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಕೂಡ ಅಭಿಪ್ರಾಯಪಟ್ಟಿತ್ತು. ಅಂತಿಮವಾಗಿ ನರ್ಮ್ ಬಸ್ಸುಗಳು ಮಂಗಳೂರು ಮತ್ತು ಉಡುಪಿಯ ಬೀದಿಗಳಲ್ಲಿ ಇಳಿಯಲು ತಯಾರಿ ನಡೆಸಿವೆ. ನಿಮಗೆ ನಿಮ್ಮ ಏರಿಯಾದಲ್ಲಿ ಬಸ್ಸುಗಳ ಕೊರತೆ ಇದೆ ಎಂದು ಆದರೆ ತಕ್ಷಣ ಜಿಲ್ಲಾಧಿಕಾರಿ ಕಚೇರಿಗೆ ಒಂದು ಮನವಿಯನ್ನು ಬರೆದು ಹಾಕಿ. ಇನ್ನೂ ಖಾಸಗಿ ಸಿಟಿ ಬಸ್ಸಿನಲ್ಲಿ ನಿರ್ವಾಹಕರ ವರ್ತನೆ,
ಮಕ್ಕಳನ್ನುಮ ಮಹಿಳೆಯರನ್ನು ಹೀಯಾಳಿಸುವ ಬಗ್ಗೆ ಏನಾದರೂ ದೂರುಗಳಿದ್ದರೆ ಅದಕ್ಕೂ ಪರಿಹಾರ ಸಿಗಬಹುದು. ಅಂತಿಮವಾಗಿ ಜನ ಬಯಸುವುದು ಬಸ್ಗಳು ಯಾವುದೇ ಇರಲಿ, ಅವು ಉತ್ತಮ ಸೇವೆಯನ್ನು ನೀಡಲಿ ಎಂಬುಉ ಮಾತ್ರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.