ವಿಶ್ವಸಂಸ್ಥೆ: ವಿಶ್ವ ಸಮುದಾಯವು ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿ ಮತ್ತು ಒಮ್ಮತದಿಂದ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ 74ನೇ ಸಾಮಾನ್ಯ ಅಧಿವೇಶನದಲ್ಲಿನ ಭಾಷಣದಲ್ಲಿ ಉಲ್ಲೇಖ ಮಾಡಿದ್ದಾರೆ. ಭಯೋತ್ಪಾದನೆ ಎಂಬುದು ಕೇವಲ ಒಂದು ದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ದೊಡ್ಡ ಸವಾಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
“ಭಯೋತ್ಪಾದನೆ ಒಂದು ದೇಶಕ್ಕೆ ಮಾತ್ರ ಸವಾಲಾಗಿ ಪರಿಣಮಿಸಿಲ್ಲ, ಇಡೀ ವಿಶ್ವಕ್ಕೆ ಮತ್ತು ಮಾನವ ಸಮುದಾಯಕ್ಕೆ ಸವಾಲಾಗಿ ಪರಿಣಮಿಸಿದೆ. ಮನುಕುಲಕ್ಕಾಗಿ ವಿಶ್ವಸಮುದಾಯ ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಿದೆ” ಎಂದು ಮೋದಿ ವಿಶ್ವಸಂಸ್ಥೆಯಲ್ಲಿ ಹೇಳಿದ್ದಾರೆ.
ಪಾಕಿಸ್ಥಾನ ಹೆಸರನ್ನು ಉಲ್ಲೇಖ ಮಾಡದೆಯೇ ಅವರು, ಆ ದೇಶ ನಡೆಸುತ್ತಿರುವ ಭಯೋತ್ಪಾದನೆಯನ್ನು ಖಂಡಿಸಿದರು. “ವಿಶ್ವಕ್ಕೆ ಯುದ್ಧವನ್ನಲ್ಲ, ಬುದ್ಧನನ್ನು ನೀಡಿದ ರಾಷ್ಟ್ರದ ನಿವಾಸಿಗಳು ನಾವು. ಸ್ವಾಮಿ ವಿವೇಕಾನಂದರು ಹಲವು ವರ್ಷಗಳ ಹಿಂದೆ ನೀಡಿದ ಸಂದೇಶ ಸದ್ಭಾವನೆ ಮತ್ತು ಶಾಂತಿ. ಇದುವೇ ಇಂದಿಗೂ ವಿಶ್ವ ಸಮುದಾಯಕ್ಕೆ ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ನೀಡುತ್ತಿರುವ ಸಂದೇಶ. ಇದೇ ಕಾರಣಕ್ಕೆ ಜಾಗತಿಕ ಭಯೋತ್ಪಾದನೆಯ ವಿರುದ್ಧದ ನಮ್ಮ ಧ್ವನಿ ಗಟ್ಟಿಯಾಗಿದೆ ಮತ್ತು ಈ ವಿಷಯದಲ್ಲಿ ನಾವು ಗಂಭೀರವಾಗಿದ್ದೇವೆ” ಎಂದಿದ್ದಾರೆ.
20 ನಿಮಿಷಗಳ ಕಾಲ ಭಾಷಣವನ್ನು ಮಾಡಿದ ಅವರು, ಜಾಗತಿಕ ತಾಪಮಾನ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಬಗ್ಗೆಯೂ ಮಾತನಾಡಿದರು.
“130 ಕೋಟಿ ಭಾರತೀಯರ ಪರವಾಗಿ ವಿಶ್ವಸಂಸ್ಥೆಯ 74ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿರುವುದು ನನಗೆ ಹೆಮ್ಮೆಯ ಕ್ಷಣ. ಈ ವರ್ಷ ಇಡೀ ಜಗತ್ತು ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷವನ್ನು ಆಚರಿಸುತ್ತಿದೆ. ವಿಶ್ವದ ಶಾಂತಿ, ಪ್ರಗತಿ ಮತ್ತು ವಿಕಾಸಕ್ಕಾಗಿ ಮಹಾತ್ಮ ಗಾಂಧೀಜಿಯವರ ಅಹಿಂಸೆ ಮತ್ತು ಸತ್ಯದ ಸಂದೇಶಗಳು ಇಂದಿಗೂ ಪ್ರಸ್ತುತ” ಎಂದರು.
“ಜನರ ಸಹಭಾಗಿತ್ವದಿಂದ ಜನಕಲ್ಯಾಣ ಎಂಬುದು ನಮ್ಮ ತತ್ವ. ಜನಕಲ್ಯಾಣ ಕೇವಲ ಭಾರತದ್ದು ಮಾತ್ರವಲ್ಲ, ಜಗತ್ತಿನ ಕಲ್ಯಾಣವೂ ಹೌದು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬುದು ನಮ್ಮ ಪ್ರೇರಣೆ. ಇದು ಕೇವಲ ಭಾರತದ ಗಡಿಗಳಿಗೆ ಮಾತ್ರ ಸೀಮಿತವಾಗಿಲ್ಲ.ನಮ್ಮ ಪ್ರರಿಶ್ರಮ ದಯೆಯೂ ಅಲ್ಲ, ಪ್ರದರ್ಶನವೂ ಅಲ್ಲ. ಅದು ಕೇವಲ ಕರ್ತವ್ಯದ ಭಾವದಿಂದ ಪ್ರೇರಿತಗೊಂಡಿದೆ” ಎಂದರು.
ಭಾರತದ ಸಂಸ್ಕೃತಿ ಸಾವಿರಾರು ವರ್ಷ ಪುರಾತನವಾದುದು, ಅದು ವಿಶ್ವದ ಕನಸುಗಳನ್ನು ಅದು ತನ್ನೊಳಗೆ ಹುದುಗಿಸಿಕೊಂಡಿದೆ. ನಮ್ಮ ಸಂಸ್ಕಾರ, ನಮ್ಮ ಸಂಸ್ಕೃತಿಯಲ್ಲಿ ನಾವು ದೇವರನ್ನು ಕಾಣುತ್ತೇವೆ. ಜನರ ಸಹಭಾಗಿತ್ವದಿಂದ ಜನರ ಕಲ್ಯಾಣ ಎಂಬುದು ನಮ್ಮ ಮೂಲತತ್ವ. ಜನಕಲ್ಯಾಣ ಕೇವಲ ಭಾರತೀಯರಿಗಾಗಿ ಮಾತ್ರವಲ್ಲ, ಜಗತ್ತಿನ ಕಲ್ಯಾಣ ನಮ್ಮ ಧ್ಯೇಯ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.