ಕಳೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ದೊಡ್ಡ ಹೊಡೆತವನ್ನೇ ನೀಡಿತ್ತು. ಇದೇ ರೀತಿಯ ಹೊಡೆತವನ್ನು ಅದು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ನೀಡುವ ವಿಶ್ವಾಸದಲ್ಲಿದೆ. ಈಗಾಗಲೇ ಆ ರಾಜ್ಯದ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಬಿಜೆಪಿ 294 ವಿಧಾನಸಭಾ ಕ್ಷೇತ್ರಗಳಿಗೆ ತಲಾ ನಾಲ್ಕು ಅಭ್ಯರ್ಥಿಗಳನ್ನು ಗುರುತಿಸುವ ಕಾರ್ಯವನ್ನು ಈಗಾಗಲೇ ಪ್ರಾರಂಭಿಸಿದೆ ಎಂದು ವರದಿಗಳು ಹೇಳುತ್ತಿವೆ. ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ, ಪ್ರತಿ ಕ್ಷೇತ್ರದ ನಾಲ್ಕು ಸಂಭಾವ್ಯ ಅಭ್ಯರ್ಥಿಗಳ ಪೈಕಿ ಸೂಕ್ತ ಅಭ್ಯರ್ಥಿಗಳನ್ನು ಪಕ್ಷವು ಆಯ್ಕೆ ಮಾಡಲಿದೆ.
ಪಶ್ಚಿಮಬಂಗಾಳದ ರಾಜಕೀಯದಲ್ಲಿ ಅತ್ಯಂತ ಹಿಂದುಳಿದಿದ್ದ ಬಿಜೆಪಿಯು ತೀರಾ ಇತ್ತೀಚಿಗೆ ಭಾರಿ ಜಿಗಿತವನ್ನು ಕಂಡಿತು ಎಂಬುದನ್ನು ನಾವು ಪ್ರಮುಖವಾಗಿ ಗಮನಿಸಬೇಕಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಮಮತಾ ನೇತೃತ್ವದ ಪಕ್ಷಕ್ಕಿಂತ ಕೇವಲ 3 ಶೇಕಡಾಕ್ಕಿಂತ ಕಡಿಮೆ ಅಂದರೆ ಶೇ. 40% ಮತ ಹಂಚಿಕೆಗಳನ್ನು ಗಳಿಸಿತ್ತು. ಈ ರಾಜ್ಯದಲ್ಲಿನ 42 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿಯು 18 ಸ್ಥಾನಗಳನ್ನು ಗೆದ್ದಿದೆ. ಪಶ್ಚಿಮ ಬಂಗಾಳದ ಆಡಳಿತ ಪಕ್ಷಕ್ಕೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮುವ ಸಾಮರ್ಥ್ಯವನ್ನು ಬಿಜೆಪಿ ತೋರಿಸಿದೆ.
ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಭಾರಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಒಂದು ನಿರ್ಣಾಯಕ ಘಟ್ಟದಲ್ಲಿ ಅದು ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿದೆ ಮತ್ತು ಇದು ರಾಜ್ಯದಲ್ಲಿ ಬಿಜೆಪಿಗೆ ಅವಕಾಶಗಳನ್ನು ಮತ್ತಷ್ಟು ಹೆಚ್ಚಿಸಿದೆ. ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು ಜಾದವ್ಪುರ್ ವಿಶ್ವವಿದ್ಯಾಲಯದ ಆವರಣಕ್ಕೆ ಪ್ರವೇಶಿಸದಂತೆ ಹಿಂಸಾತ್ಮಕ ರೀತಿಯಲ್ಲಿ ಕೆಲ ವಿದ್ಯಾರ್ಥಿಗಳು ಪ್ರತಿಭಟನೆಗಳನ್ನು ನಡೆಸಿದ ಸಂದರ್ಭದಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಾವುದೇ ಸೂಕ್ತ ಕ್ರಮ ಕೈಗೊಳನ್ನು ಕೈಗೊಂಡಿಲ್ಲ, ಇದು ಅಲ್ಲಿನ ರಾಜ್ಯ ಸರ್ಕಾರವು ಹೇಗೆ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ ಎಂಬುದಕ್ಕೆ ಇತ್ತೀಚಿನ ಉದಾಹರಣೆ ಎನಿಸಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಅವರು ದೆಹಲಿಯಲ್ಲಿದ್ದರು ಮತ್ತು ಸಚಿವರುಗಳು ಮತ್ತು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ. ಇನ್ನು ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಸ್ಥಳಕ್ಕೆ ಪೊಲೀಸರನ್ನು ಕರೆಯಲು ನಿರಾಕರಿಸಿದರು. ಪೊಲೀಸರನ್ನು ಕರೆಯುವ ಬದಲು ನಾನು ನಿರ್ಗಮಿಸುವುದೇ ಉತ್ತಮ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದರು. ಈ ಎಲ್ಲಾ ಸನ್ನಿವೇಶಗಳು ಆ ರಾಜ್ಯದ ದುರ್ಗತಿ, ದುರಾವಸ್ಥೆಯನ್ನು ತೋರಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರವು ತೀವ್ರ ಏರಿಕೆಯನ್ನು ಕಾಣುತ್ತಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ತನ್ನ ರಾಜಕೀಯ ವಿರೋಧಿಗಳ ವಿರುದ್ಧ ಹಿಂಸಾಚಾರವನ್ನು ಎಸಗುತ್ತಿರುವ ಮತ್ತು ಪ್ರಚೋದಿಸುತ್ತಿರುವ ಆರೋಪಗಳನ್ನು ಎದುರಿಸುತ್ತಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಲ್ಲಿ ಅನೇಕ ಕುಖ್ಯಾತ ಘಟನೆಗಳು ನಡೆದಿವೆ. ಅಮಿತ್ ಶಾ ಅವರ ಸಮಾವೇಶವನ್ನು ರಾಜಕೀಯ ಹಿಂಸಾಚಾರದ ಮೂಲಕ ಅಂತ್ಯಗೊಳಿಸುವ ಪ್ರಯತ್ನಗಳನ್ನೂ ನಡೆಸಲಾಯಿತು. ಬಿಜೆಪಿ ಕಾರ್ಯಕರ್ತರ ವಿರುದ್ಧ ಟಿಎಂಸಿ ಕಾರ್ಯಕರ್ತರು ಸಮರವನ್ನೇ ಸಾರಿದ್ದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಶಕ್ತಿಯಾಗಿ ಬಿಜೆಪಿಯು ಹೊರಹೊಮ್ಮುವುದನ್ನು ತಡೆಯಲು ಟಿಎಂಸಿ ವಿಫಲವಾಯಿತು. ಸಾಹಿತ್ಯ, ಚಲನಚಿತ್ರೋದ್ಯಮ, ಫುಟ್ಬಾಲ್ ಕ್ಲಬ್ಗಳು ಇತ್ಯಾದಿಗಳಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿಯು ಜನಪ್ರಿಯತೆಯನ್ನು ಗಳಿಸುತ್ತಿದೆ. ಇದು ಆ ರಾಜ್ಯದ ಪ್ರಮುಖ ರಾಜಕೀಯ ಬದಲಾವಣೆಯ ಸೂಚಕವಾಗಿದೆ.
ಬಿಜೆಪಿ ಸುಸಂಬದ್ಧವಾದ ರಾಜಕೀಯ ಕಾರ್ಯತಂತ್ರದೊಂದಿಗೆ ತಯಾರಿ ಆರಂಭಿಸಿದೆ. ಆದರೆ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ಎಳೆದು ತಂದರೂ ಕೂಡ ಟಿಎಂಸಿಯ ಪ್ರಯತ್ನಗಳು ನಿರುಪಯುಕ್ತವಾಗುತ್ತಿರುವಂತೆ ಕಂಡುಬರುತ್ತಿದೆ. ಬಿಜೆಪಿ ಭಾರಿ ರಾಜಕೀಯ ಗೆಲುವಿಗೆ ಸಜ್ಜಾಗಿದೆ ಮತ್ತು ಪಕ್ಷದ ನಾಯಕರ ಪ್ರಕಾರ, ಸ್ವತಂತ್ರ ಸಂಸ್ಥೆಗಳು ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಇಂದು ಪಶ್ಚಿಮಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆದರೆ ಪಕ್ಷವು 165 ವಿಧಾನಸಭಾ ಸ್ಥಾನಗಳಲ್ಲಿ ವಿಜಯಶಾಲಿಯಾಗಲಿದೆ. ಇದು 294 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿಯು ಬಹುಮತ ಸಾಧಿಸಲಿದೆ ಎಂಬುದರ ದ್ಯೋತಕವಾಗಿದೆ. ಇದಲ್ಲದೆ, ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷವು 121 ವಿಧಾನಸಭಾ ಚುನಾವಣೆಗಳಲ್ಲಿ ಮುನ್ನಡೆಯನ್ನು ಸಾಧಿಸಿತ್ತು ಎಂಬುದು ಗಮನಾರ್ಹವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.