ಒಂದು ಸಾಯಂಕಾಲ. ಮೂರು ವರ್ಷದ ಒಬ್ಬ ಪುಟ್ಟ ಹುಡುಗ ತನ್ನ ತಂದೆಯ ಜೊತೆ ಹೊರಗೆ ತಿರುಗಾಡಲು ಹೋಗಿದ್ದ. ತಂದೆಯೊಡನೆ ಇನ್ನೊಬ್ಬ ಹಿರಿಯರೂ ಇದ್ದರು. ಮೂವರೂ ಮಾತನಾಡುತ್ತಾ ಊರ ಹೊರಗೆ ಬಂದರು. ಅಲ್ಲೆಲ್ಲಾ ಹೊಲ ಗದ್ದೆಗಳು ಹಸಿರು ಬೆಳೆ ತುಂಬಿಕೊಂಡು ನಿಂತಿದ್ದವು. ಹಿರಿಯರು ಗದ್ದೆಯ ಬದುವಿನ ಮೇಲೆ ನಡೆಯುತ್ತಿದ್ದರು. ಹುಡುಗನ ಹೆಜ್ಜೆ ಸದ್ದು ಕೇಳದೆ ತಂದೆ ಹಿಂದೆ ತಿರುಗಿ ನೋಡಿದರು. ಹುಡುಗ ಗದ್ದೆಯಲ್ಲಿ ಒಂದು ಗಿಡದ ಕಂಟೆಯನ್ನು ನೆಡುತ್ತ ಕುಳಿತಿದ್ದ. ನೋಡಿ ತಂದೆಗೆ ಕುತೂಹಲ ಉಂಟಾಯಿತು.
“ಏನು ಮಾಡ್ತಾ ಇದ್ದೀಯೋ?” ಎಂದರು.
“ಮತ್ತೇ…. ನಾನು ಇಲ್ಲಿ ಗದ್ದೆ ತುಂಬ ಬಂದೂಕ ಬೆಳಸ್ತೀನಿ” ಎಂದು ಮುದ್ದಾಗಿ ಹೇಳಿದ ಪುಟ್ಟ ಹುಡುಗ.
ಬಂದೂಕುಗಳನ್ನು ಗದ್ದೆಯಲ್ಲಿ ಬೆಳೆಸುವದು ಖಂಡಿತ ಸಾಧ್ಯ ಎಂಬ ನಂಬಿಕೆ ಅವನ ಕಣ್ಣಲ್ಲಿ ಹೊಳೆಯುತ್ತಿತ್ತು. ಹಿರಯರಿಬ್ಬರೂ ಆ ಪುಟ್ಟ ಹುಡುಗನ ಮಾತಿಗೆ ಆಶ್ಚರ್ಯದಿಂದ ಮೂಕರಾಗಿ ನಿಂತರು.
ಭಾರತಕ್ಕೆ ಸ್ವಾತಂತ್ರ್ಯ ಗಳಿಸಿಕೊಡಲು ಹೋರಾಡಿ ಕೊನೆಗೆ ಜೀವವನ್ನೇ ಅರ್ಪಿಸಿದ ಮಹಾವೀರ ಭಗತ್‌ಸಿಂಗನೇ ಆ ಹುಡುಗ.
ಜನನ
ಪಂಜಾಬ್ ಪ್ರಾಂತದಲ್ಲಿ ಲಾಯಲ್‌ಪುರ ಎಂಬ ಜಿಲ್ಲೆಯಲ್ಲಿ ಬಂಗಾ ಎಂಬ ಒಂದು ಹಳ್ಳಿ. ಅಲ್ಲಿ ಸರದಾರ್‌ಕಿಶನ್‌ಸಿಂಗ್‌ಎಂಬ ವೀರ ವಾಸಿಸುತ್ತಿದ್ದ. ಆತನ ಹೆಂಡತಿ ವಿದ್ಯವಾತಿ. ಕಿಶನ್‌ಸಿಂಗನದು ಧೈರ್ಯ ಸಾಹಸಗಳಿಗೆ ಹೆಸರಾದ ಮನೆತನ. ಇಂಗ್ಲೀಷರ ಕೈಯಿಂದ ಭಾರತವನ್ನು ಬಿಡುಗಡೆ ಮಾಡಲು ಅವನ ವಂಶದ ಹಲವಾರು ವೀರರು ಹೋರಾಡಿದ್ದರು. ಇಂಥ ಹೋರಾಟಗಾರರನ್ನು ಕ್ರಾಂತಿಕಾರಿಗಳು ಎಂದು ಕರೆಯುತ್ತಾರೆ. ಕಿಶನ್‌ಸಿಂಗನೂ ಕ್ರಾಂತಿಕಾರಿಯೇ. ಅಜಿತ್‌ಸಿಂಗ್, ಸ್ವರ್ಣಸಿಂಗ್ ಎಂಬ ಅವನ ತಮ್ಮಂದಿರೂ ಇಂಗ್ಲೀಷರನ್ನು ಭಾರತದಿಂದ ಓಡಿಸಲು ಹೋರಡಿದ್ದರು. ಕಿಶನ್‌ಸಿಂಗ್, ಅಜಿತ್‌ಸಿಂಗ್ ಮತ್ತು ಸ್ವರ್ಣಸಿಂಗ್ ಮೂವರನ್ನೂ ಸರ್ಕಾರ ಸೆರೆಗೆ ಹಾಕಿತ್ತು.
ಆಗ ಭಾರತದಲ್ಲಿ ಎಲ್ಲ ಕಡೆ ಇಂಥ ಕ್ರಾಂತಿ ಹಬ್ಬಿತ್ತು. ಸ್ವಾತಂತ್ರ್ಯ ಪಡೆಯಬೇಕು ಎಂಬ ಹಟ ಜನಗಳಲ್ಲಿ ತುಂಬಿತ್ತು. ಇಂಥ ಸಮಯದಲ್ಲಿ 1907 ರ ಸೆಪ್ಟೆಂಬರ್ 28 ರಂದು ಭಗತ್‌ಸಿಂಗ್ ಜನಿಸಿದ. ಸರದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರ ಮೂರನೆಯ ಮಗ ಅವನು. ಅದೇ ಸಮಯದಲ್ಲಿ ಜೈಲಿನಲ್ಲಿದ್ದ ಕಿಶನ್‌ಸಿಂಗ್ ಮತ್ತು ಚಿಕ್ಕಪ್ಪ ಸ್ವರ್ಣ ಸಿಂಗರ ಬಿಡುಗಡೆಯಾಯಿತು. ಇನ್ನೊಬ್ಬ ಚಿಕ್ಕಪ್ಪ ಅಜಿತ್‌ಸಿಂಗನ ಬಿಡುಗಡೆಯೂ ಆಗುವುದೆಂದು ವರ್ತಮಾನ ತಿಳಿದು ಬಂತು. ಹೀಗೆ ತಾನು ಹುಟ್ಟಿದ ಮನೆಗೆ ಭಾಗ್ಯ ತಂದ ಆ ಮಗುವಿಗೆ ಭಗತ್‌ಸಿಂಗ್ ಎಂದು ಹೆಸರಿಟ್ಟರು. “ಭಗತ್‌ಸಿಂಗ್” ಎಂದರೆ ಭಾಗ್ಯವಂತ ಎಂದು ಅರ್ಥ.
ಎಲ್ಲರ ಸ್ನೇಹಿತ
ಮಗು ತುಂಬ ಮುದ್ದಾಗಿತ್ತು. ಅವನ ನಗುವೇ ಒಂದು ಚೆಂದ. ನೋಡಿದವರೆಲ್ಲ ಇವನು ಮುಂದೆ ಬಹಳ ಖ್ಯಾತನಾಗುತ್ತಾನೆ ಎಂದು ಹೇಳುತ್ತಿದ್ದರು.
ಅವನ ತಾಯಿ ವಿದ್ಯಾವತಿಯದು ಮೊದಲಿನಿಂದಲೂ ದುಃಖದ ಜೀವನವೇ. ಕ್ರಾಂತಿಕಾರಿಯಾದ ಗಂಡ ಯಾವಾಗಲೂ ಮನೆಯಿಂದ ಹೊರಗೇ ಇರುತ್ತಿದ್ದ. ಯಾವಾಗ ಅವನನ್ನು ಜೈಲಿಗೆ ಹಾಕುತ್ತಾರೋ ಎಂಬ ಭೀತಿ ವಿದ್ಯಾವತಿಗೆ ಸದಾ ಕಾಡುತ್ತಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ. ಅವಳ ಮನೆಯ ಒಬ್ಬರಲ್ಲ ಒಬ್ಬರು ಜೈಲಿನಲ್ಲಿ ಇದ್ದೇ ಇರುತ್ತಿದ್ದರು. ಮನೆಯ ಉಸ್ತುವಾರಿಯನ್ನು ವಿದ್ಯಾವತಿಯೇ ನೋಡಿಕೊಳ್ಳಬೇಕಾಗುತ್ತಿತ್ತು. ಇಂಥ ಆತಂಕ ತುಂಬಿದ ಸಮಯದಲ್ಲಿ ಅವಳಿಗೆ ಮಕ್ಕಳೇ ಸಮಾಧಾನ ಹೇಳುತ್ತಿದ್ದರು. ಬುದ್ಧಿವಂತರಾಗಿ, ಧೈರ್ಯವಂತರಾಗಿ ಬೆಳೆಯುತ್ತಿದ್ದ ಮಕ್ಕಳನ್ನು ನೋಡಿಕೊಂಡು ಆಕೆ ತನ್ನ ಕಷ್ಟಗಳನ್ನು ಮರೆಯುತ್ತಿದ್ದಳು. ಭಗತ್‌ಸಿಂಗ್ ಅವಳ ಕಣ್ಮಣಿಯಾಗಿ ಬೆಳೆಯತೊಡಗಿದ.
ಭಗತ್‌ಸಿಂಗನನ್ನು ಪ್ರಾಥಮಿಕ ಶಾಲೆಗೆ ಸೇರಿಸಿದರು. ವಿದ್ಯಭ್ಯಾಸದಲ್ಲಿ ಅವನಿಗೆ ಮೊದಲಿನಿಂದಲೂ ಆಸಕ್ತಿ. ಪಾಠದಲ್ಲಿ ಅವನೇ ಮುಂದು. ಅಕ್ಷರಗಳನ್ನು ಗುಂಡಗೆ ಬರೆಯುತ್ತಿದ್ದ. ಉಪಾಧ್ಯಾಯರ ಅಚ್ಚುಮೆಚ್ಚಿನ ಶಿಷ್ಯ ಅವನು. ಜೊತೆ ಹುಡಗರಿಗೆಲ್ಲ ಅವನ ಮೆಲೆ ತುಂಬ ಪ್ರೀತಿ, ಅವನೇ ಅವರ ನಾಯಕ. ದೊಡ್ಡ ಹುಡುಗರು ನಿತ್ಯ ಭಗತ್‌ಸಿಂಗನನ್ನು ಭುಜದ ಮೆಲೆ ಕೂಡಿಕೊಂಡು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಕರೆದೊಯ್ಯುತ್ತಿದ್ದರು. ಮುಂದೆ ಕ್ರಾಂತಿಕಾರಿಗಳಿಗೆ ಮುಖಂಡನಾಗುವ ಸೂಚನೆ ಭಗತ್‌ಸಿಂಗನ ಬಾಲ್ಯದಲ್ಲಿಯೇ ಕಾಣುತ್ತಿತ್ತು.
ಭಗತ್‌ಸಿಂಗ್ ಎಲ್ಲರನ್ನೂ ಸ್ನೇಹಿತರಂತೆ ಕಾಣುತ್ತಿದ್ದ. ಜೊತೆ ಹುಡುಗರಿರಲಿ, ಊರಿನಲ್ಲಿ ಎಲ್ಲರನ್ನೂ ತನ್ನ ಸ್ನೇಹಿತರಂತೆಯೇ ಕಾಣುತ್ತಿದ್ದ. ಬೀದಿ ಕಸಗುಡಿಸುವವರೂ ಅವನ ಸ್ನೇಹಿತರೇ. ಗಾಡಿ ಹೊಡೆಯುವವರೂ ಅವನ ಸ್ನೇಹಿತರೇ. ಕೂಲಿ ಮಾಡುವವರೂ ಅವನ ಸ್ನೇಹಿತರೆ.
ಒಂದು ಸಲ ಭಗತ್‌ಸಿಂಗನಿಗೆ ಬಟ್ಟೆ ಹೊಲಿಯಲು ಹಾಕಿದ್ದರು. ಮುದುಕ ದರ್ಜಿ ಹೊಲಿದು ಸಿದ್ಧಪಡಿಸಿದ ಬಟ್ಟೆಗಳನ್ನು ಮನೆಗೆ ತಂದುಕೊಟ್ಟು ಹೋದ. ತಾಯಿ ವಿದ್ಯಾವತಿ ಭಗತ್‌ಸಿಂಗನನ್ನು, “ಯಾರು ಬಟ್ಟೆ ತಂದು ಕೊಟ್ಟವರು?” ಎಂದು ಕೇಳಿದಳು.
“ನನ್ನ ಸ್ನೇಹಿತ” ಎಂದು ಭಗತ್‌ಸಿಂಗ್.
“ಏನು, ದರ್ಜಿಯೂ ನಿನ್ನ ಸ್ನೇಹಿತನೆ?” ಎಂದು ಬೆರಗಗಿ ಕೇಳಿದಳು ವಿದ್ಯಾವತಿ.
“ಹೌದು, ಊರಿನಲ್ಲಿರುವ ಎಲ್ಲರೂ ನನ್ನ ಸ್ನೇಹಿತರೇ.” ಎಂದ ಭಗತ್‌ಸಿಂಗ್.
ಜನಗಳ ಹೃದಯವನ್ನು ಸ್ನೇಹದಿಂದ ಗೆಲ್ಲುವ ಗುಣ ಭಗತ್‌ಸಿಂಗ್‌ನಲ್ಲಿ ಹೀಗೆ ಬಾಲ್ಯದಿಂದಲೇ ಬೆಳೆದು ಬಂತು.
ಸಿಂಹದ ಮರಿ
ಭಗತ್‌ಸಿಂಗನಿಗೆ ಇಬ್ಬರು ಚಿಕ್ಕಪ್ಪಂದಿರು. ಅವರಲ್ಲಿ ಸ್ವರ್ಣಸಿಂಗನನ್ನು ಇಂಗ್ಲೀಷರು ಮತ್ತೆ ಸೆರೆಯಲ್ಲಿಟ್ಟಿದ್ದರು. ಸೆರೆಮನೆಯಲ್ಲಿ ಜೀವನ ಆತನಿಗೆ ಬಹು ಕಷ್ಟವಾಗಿ ಕಾಯಿಲೆಬಿದ್ದನು. ಬಿಡುಗಡೆಯಾದ ನಂತರವೂ ಕಾಯಿಲೆ ಇದ್ದು ತಿರಿಕೊಂಡನು. ಅಜಿತ್‌ಸಿಂಗನು ಸೆರೆಯಿಂದ ಹೊರಕ್ಕೆ ಬಂದವನು ದೇಶವನ್ನೇ ಬಿಟ್ಟು ಹೊರಟಹೋದ. ಭಗತ್‌ಸಿಂಗನ ಇಬ್ಬರು ಚಿಕ್ಕಮ್ಮಂದಿರೂ ತಮ್ಮ ಯಜಮಾನರಿಗೆ ಒದಗಿದ ಕಷ್ಟವನ್ನು ನೆನೆದು ನೆನೆದು ಗೋಳಿಡುತ್ತಿದ್ದರು. ಅದನ್ನು ಕಂಡು ಭಗತ್‌ಸಿಂಗ್” ಅಳ್ಬೇಡಾ ಚಿಕ್ಕಮ್ಮ, ನಾನು ದೊಡ್ಡವನಾದ ಮೇಲೆ ಇಂಗ್ಲೀಷರನ್ನು ಓಡಿಸಿ ಚಿಕ್ಕಪ್ಪನ ಹಿಂದಕ್ಕೆ ಕರೆದುಕೊಂಡು ಬರ್ತೀನಿ. ಚಿಕ್ಕಪ್ಪನಿಗೆ ಕಾಯಿಲೆ ಬರೋ ಹಾಗೆ ಮಾಡಿದ ಇಂಗ್ಲೀಷರನ್ನು ಓಡಿಸಿ ಸೇಡು ತೀರಿಸಿಕೊಳ್ತೀನಿ” ಎಂದು ಎದೆ ಉಬ್ಬಿಸಿ ಹೇಳುತ್ತಿದ್ದ. ಪುಟ್ಟ ಹುಡುಗನ ಈ ಶೌರ್ಯದ ಮಾತುಗಳನ್ನು ಕೇಳಿ ಅಳುತ್ತಿದ್ದವರಿಗೆ ಥಟ್ಟನೆ ನಗು ಬಂದುಬಿಡುತ್ತಿತ್ತು. ಆ ಗಳಿಗೆಯಲ್ಲಾದರೂ ಅವರ ದುಃಖ ಮರೆಯಾಗುತ್ತಿತ್ತು.
ನಾಲ್ಕನೆಯ ತರಗತಿಯಲ್ಲಿದ್ದಾಗ ಒಂದು ಸಲ ಭಗತ್‌ಸಿಂಗ್‌ತನ್ನ ಜೊತೆ ಹುಡುಗರನ್ನೆಲ್ಲಾ ಕೇಳಿದ-
“ನೀವೆಲ್ಲಾ ದೊಡ್ಡೋರಾದ ಮೇಲೆ ಮುಂದೆ ಏನು ಆಗಬೇಕೂಂತ ಇದ್ದೀರಿ?”
ಒಬ್ಬೊಬ್ಬ ಒಂದೊಂದು ಉತ್ತರ ಹೇಳಿದ. ಒಬ್ಬ ಡಾಕ್ಟರ್‌ಆಗ್ತೀನಿ ಎಂದ. ಇನ್ನೊಬ್ಬ ಸರ್ಕಾರದ ಅಧಿಕಾರಿ ಆಗ್ತೀನಿ ಎಂದ. ಮತ್ತೊಬ್ಬ ಹೇಳಿದ, ವ್ಯಾಪಾರಿ ಆಗ್ತೀನಿ ಅಂತ. ಒಬ್ಬ ಹುಡುಗನಂತೂ,
“ನಾನು ದೊಡ್ಡವನಾದ ಮೇಲೆ ಮದುವೆ ಆಗ್ತೀನಿ.” ಎಂದು ಬಿಟ್ಟ. ಅದನ್ನು ಕೇಳಿದ ಭಗತ್‌ಸಿಂಗ್,
“ಮದುವೆ ಆಗೋದೇನು ದೊಡ್ಡ ಕೆಲಸವೆ? ಯಾರು ಬೇಕಾದರೂ ಆಗಬಹುದು. ನಾನು ದೊಡ್ಡವನಾದ ಮೇಲೆ ಇಂಗ್ಲೀಷರನ್ನು ಭಾರತದಿಂದ ಓಡಿಸುತ್ತೇನೆ.” ಎಂದ.
ಹೀಗೆ ಚಿಕ್ಕಂದಿನಿಂದಲೇ ಅವನ ರಕ್ತದಲ್ಲಿ ದೇಶಪ್ರೇಮ ಹೊಳೆ ಹರಿಯುತ್ತಿತ್ತು.
ಮಾಧ್ಯಮಿಕ ಶಾಲೆಯ ಓದನ್ನು ಮುಗಿಸುವಷ್ಟರಲ್ಲಿ ತನ್ನ ಮನೆತನದ ಕ್ರಾಂತಿಕಾರರ ವಿಚಾರಗಳನ್ನೆಲ್ಲಾ ಭಗತ್‌ಸಿಂಗ್ ತಿಳಿದುಕೊಂಡಿದ್ದ. ಅವರನ್ನು ಕುರಿತು ಮನೆಯಲ್ಲಿದ್ದ ದಾಖಲೆಗಳನ್ನೆಲ್ಲಾ ಓದಿ ಮುಗಿಸಿದ್ದ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ತಾನೂ ಹೋರಾಡಬೇಕು ಎಂಬ ಬಯಕೆ ಅವನ ಮನಸ್ಸಿನಲ್ಲೇ ಗರಿಕಟ್ಟಿಕೊಳ್ಳುತ್ತಿತ್ತು.
ಬಂಗಾ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸ ಮುಗಿಯಿತು. ಆಮೇಲೆ ಭಗತ್‌ಸಿಂಗ್ ಲಾಹೋರಿನಲ್ಲಿ ಒಂದು ಮಾಧ್ಯಮಿಕ ಶಾಲೆಗೆ ಸೇರಲು ಬಂದ. ದೇಶಭಕ್ತನಾಗಿದ್ದ ಕಿಶನ್‌ಸಿಂಗ್ ತನ್ನ ಮಗನನ್ನು ಇಂಗ್ಲೀಷರ್‌ಭಕ್ತರು ನಡೆಸುತ್ತಿದ್ದ ಸಾಲೆಗೆ ಸೇರಿಸಲು ಒಪ್ಪಲಿಲ್ಲ. ಖಾಸಗಿ ಶಾಲೆಯೊಂದರಲ್ಲಿ ಭಗತ್‌ಸಿಂಗನ ಓದು ಮುಂದುವರಿಯಿತು.
ಭಗತ್‌ಸಿಂಗ್ ಮೊದಲೇ ಹಳ್ಳಿಯ ಹುಡುಗ. ಅವನು ಪಾಠದಲ್ಲಿ ಹಿಂದೆ ಬಿದ್ದಾನು ಎಂದು ಅವನ ತಂದೆ ಮನೆಪಾಠಕ್ಕೆ ಉಪಾಧ್ಯಾಯರನ್ನು ಗೊತ್ತು ಮಾಡಿದ. ಆದರೆ ಎರಡು ದಿನ ಪಾಠ ಹೇಳಿಕೊಡುವಷ್ಟರಲ್ಲಿ ಆ ಉಪಾಧ್ಯಾಯರಿಗೆ ತಮ್ಮ ಶಿಷ್ಯ ಎಷ್ಟು ಬುದ್ಧಿವಂತ ಎಂದು ಗೊತ್ತಾಯಿತು. ಅವರು ಕಿಶನ್‌ಸಿಂಗನ್ ಬಳಿ ಬಂದು ಹೇಳಿದರು- “ಈ ಹುಡುಗನಿಗೆ ನಾನು ಪಾಠ ಹೇಳಿಕೊಡಬಲ್ಲೆ? ನಾನು ಹೇಳಿಕೊಡುವುದಕ್ಕಿಂತ ಮುಂಚೆಯೇ ಎಲ್ಲವನ್ನೂ ಕಲಿತಿದ್ದಾನೆ.”
ಭಗತ್‌ಸಿಂಗ್ ಉತ್ಸಾಹದಿಂದ ಪಾಠಗಳನ್ನು ಕಲಿಯತೊಡಗಿದ. ಅವನ ಚುರುಕು ಬುದ್ಧಿಗೆ ಅಧ್ಯಾಪಕರೆಲ್ಲ ಆಶ್ಚರ್ಯಪಡುತ್ತಿದ್ದರು. ಪರೀಕ್ಷೆಯಲ್ಲಿ ಚರಿತ್ರೆ, ಭೂಗೋಳ, ಲೆಕ್ಕ ಮೊದಲಾದವುಗಳಲ್ಲಿ ಅವನಿಗೆ ಹೆಚ್ಚು ಹೆಚ್ಚು ಅಂಕಗಳು ಬಂದವು. ಆದರೆ ಇಂಗ್ಲೀಷಿನಲ್ಲಿ ಮಾತ್ರ ಕಡಿಮೆ. 150 ಕ್ಕೆ 68. ಇಂಗ್ಲೀಷರ ಬಗೆಗೆ ಅವನಿಗೆ ಮೊದಲಿನಿಂದ ಇದ್ದ ಕೋಪವೇ ಇದಕ್ಕೆ ಕಾರಣ ಇರಬೇಕು. ಭಗತ್‌ಸಿಂಗ್‌ತನ್ನ ತಾತನಿಗೆ ಬರೆದ ಕಾಗದದಲ್ಲಿ, “…. ಇಂಗ್ಲೀಷಿನಲ್ಲಿ 150ಕ್ಕೆ 68 ನಂಬರ್ ಬಂದಿದೆ. 50 ಬಂದರೂ ಪಾಸು. ನಾನು ಚೆನ್ನಾಗಿಯೇ ಪಾಸ್ ಆಗಿದ್ದೇನೆ.” ಎಂದು ತಿಳಿಸಿದ್ದು ಒಳ್ಳೆಯ ಸ್ವಾರಸ್ಯ. ತನಗೆ ಕಡಿಮೆ ಅಂಕ ಬಂದಿರುವುದನ್ನು ಹೀಗೆ ಬಳಸಿ ಹೇಳಿದ ಆ ಚತುರ ಬಾಲಕ.
ಕ್ರಾಂತಿಯ ಕಿಡಿ
1919 ನೆಯ ಇಸವಿ. ಆ ವರ್ಷ ಭಾರತದಲ್ಲಿ ಒಂದು ದೊಡ್ಡ ದುರಂತ ನಡೆಯಿತು. ಜಲಿಯನ್ ವಾಲಾಬಾಗ್ ಎಂಬ ಸ್ಥಳದಲ್ಲಿ ಸೇರಿದ್ದ ಜನರ ಮೇಲೆ ಇಂಗ್ಲೀಷ್ ಸೈನಿಕರು ಒಂದೇ ಸಮನೆ ಗುಂಡು ಹಾರಿಸಿದರು. ತಪ್ಪಿಸಿಕೊಂಡು ಓಡಲು ಸುತ್ತ ಎಲ್ಲೂ ಜಾಗವಿರಲಿಲ್ಲ. ಲೆಕ್ಕವಿಲ್ಲದಷ್ಟು ಜನ ದೊಡ್ಡವರು, ಮಕ್ಕಳು ಗುಂಡಿಗೆ ಬಲಿಯಾಗಿ ಪಟಪಟ ನೆಲಕ್ಕೆ ಬಿದ್ದರು. ರಕ್ತ ಹೊಳೆಯ ಹಾಗೆ ಹರಿಯಿತು. ನೆಲವೆಲ್ಲಾ ರಕ್ತದಿಂದ ಕೆಸರಾಯಿತು. ಈ ಘಟನೆ ದೇಶದ ಮೂಲೆಮೂಲೆಗಳಲ್ಲಿನ ಜನರಲ್ಲಿ ಭೀತಿ, ಕೋಪಗಳನ್ನು ಉಂಟುಮಾಡಿತು. ಪ್ರಪಂಚದ ಎಲ್ಲ ಜನರ ಗಮನ ಸೆಳೆಯಿತು.
ಭಗತ್‌ಸಿಂಗ್ ತಂಗಿಗೆ ತೋರಿಸುತ್ತ “ಇಂಗ್ಲೀಷಿನವರು ಕೊಂದ ನಮ್ಮ ಜನರ ರಕ್ತ ಇದು” ಎಂದ.
ಈ ಘಟನೆಯಿಂದ, ಹನ್ನೆರಡು ವರ್ಷದ ಬಾಲಕ ಭಗತ್‌ಸಿಂಗ್‌ನ ಮನಸ್ಸು ಕಲಕಿಹೋಯಿತು. ಮೂರನೆಯ ದಿನ ಸಂಜೆ ಶಾಲೆ ಮುಗಿದ ಮೇಲೆ ಅವನು ಮನೆಗೆ ಬರಲೇ ಇಲ್ಲ. ಮನೆಯವರೆಲ್ಲಾ ಅವನಿಗಾಗಿ ಕಾದು ಕಾದು ಕಂಗಾಲಾದರು.
ಭಗತ್ ಸಿಂಗ್ ಶಾಲೆಗೆ ಹೋಗದೆ ನೇರವಾಗಿ ಹತ್ಯಾಕಾಂಡ ನಡೆದ ಸ್ಥಳಕ್ಕೆ ಹೊರಟ. ಪೊಲೀಸರ ಕಾವಲಿನ ನಡುವೆ ಹೇಗೋ ನುಸುಳಿಕೊಂಡು ಒಳಗೆ ಹೋದ. ಭಾರತೀಯರ ರಕ್ತದಿಂದ ನೆನೆದ ಮಣ್ಣನ್ನು ಒಂದು ಸೀಸೆಯಲ್ಲಿ ತುಂಬಿಕೊಂಡು ಮನೆಗೆ ಮರಳಿದ. ತಡವಾಗಿ ಮನೆಗೆ ಬಂದ ಅವನನ್ನು ನೋಡಿ ಅವನ ತಂಗಿ, “ಇಷ್ಟು ಹೊತ್ತು ಎಲ್ಲಿಗೆ ಹೋಗಿದ್ಯೋ? ಅಮ್ಮ ನಿನಗಾಗಿ ತಿಂಡಿ ಮಾಡಿಟ್ಟುಕೊಂಡು ಕಾಯ್ತಾ ಇದ್ದಾಳೆ” ಎಂದಳು. ಆದರೆ ಭಗತ್ ಸಿಂಗ್‌ನಿಗೆ ಹಸಿವೆಯ ಯೋಜನೆಯೇ ಇಲ್ಲ. ತನ್ನ ಕೈಯಲಿದ್ದ ಸೀಸೆಯನ್ನು ತೋರಿಸುತ್ತಾ, “ಇದನ್ನು ನೋಡು. ಇಂಗ್ಲಿಷಿನವರು ಕೊಂದ ನಮ್ಮ ಜನರ ರಕ್ತ ಇದು. ಇದಕ್ಕೆ ನಮಸ್ಕಾರ ಮಾಡು” ಎಂದ.
ಆಮೇಲೆ ಸೀಸೆಯನ್ನು ಮನೆಯೊಳಗೆ ಒಂದು ಗೂಡಿನಲ್ಲಿಟ್ಟು ಹೂವು ತರಿಸಿ ಪೂಜೆ ಮಾಡಿದ.
ಜಲಿಯನ್ ವಾಲಾಬಾಗಿನಲ್ಲಿ ಜನರ ಕೈಯಲ್ಲಿ ಆಯುಧಗಳು ಇರಲಿಲ್ಲ. ತಪ್ಪಿಸಿಕೊಂಡು ಹೋಗಲು ದಾರಿ ಇರಲಿಲ್ಲ. ಅಂತಹವರನ್ನು ಇಂಗ್ಲಿಷರ ಬಂದೂಕುಗಳು ಕೊಂದಿದ್ದವು! ಇದೇ ಯೋಚನೆ ಭಗತ್ ಸಿಂಗನ ಮನಸ್ಸಿನಲ್ಲಿ ಕೊರೆಯತೊಡಗಿತು. ಏನಾದರೂ ಮಾಡಿ ಇಂಗ್ಲಿಷರನ್ನು ಭಾರತದಿಂದ ಓಡಿಸಬೇಕು ಎಂಬ ಅವನ ನಿರ್ಧಾರ ಗಟ್ಟಿಯಾಯಿತು.
ಕಾಂಗ್ರೆಸ್ ಪಕ್ಷ ದೇಶದ ಬಿಡುಗಡೆಗಾಗಿ ಹೋರಾಡುತ್ತಿದ್ದ ಕಾಲ ಅದು. ಜನಗಳಲ್ಲಿ ದೇಶಭಕ್ತಿಯನ್ನು ಹೆಚ್ಚಿಸುತ್ತ ಎಲ್ಲರನ್ನೂ ಒಂದುಗೂಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿತ್ತು. ಈ ಕಾರ್ಯದಲ್ಲಿ ತಾನೂ ಸೇರಬೇಕು ಎಂದು ಒಂಬತ್ತನೆಯ ತರಗತಿಗೆ ಬರುವಷ್ಟರಲ್ಲೇ ಭಗತ್ ಸಿಂಗ್ ನಿಶ್ಚಯ ಮಾಡಿಬಿಟ್ಟ. ಆಗಿನ್ನೂ ಅವನಿಗೆ 13 ವರ್ಷ.
ಭಗತ್ ಸಿಂಗ್‌ತನ್ನ ನಿರ್ಧಾರವನ್ನು ತಂದೆಗೆ ತಿಳಿಸಿ ಅನುಮತಿ ಕೇಳಿದ. ಸ್ವತಃ ಕ್ರಾಂತಿಕಾರಿ ಆಗಿದ್ದ ಕಿಶನ್ ಸಿಂಗ್ ಸಂತೋಷವಾಗಿ ಒಂದೇ ಮನದಿಂದ ಒಪ್ಪಿಬಿಟ್ಟ. ಭಗತ್ ಸಿಂಗ್‌ಶಾಲೆ ಬಿಟ್ಟು ಚಳುವಳಿ ಸೇರಿದ.
ಆಗ ವಿದೇಶೀ ಬಟ್ಟೆಗಳನ್ನು ತೊಡುವುದನ್ನು ವಿರೋಧಿಸುವ ಚಳವಳಿ ನಡೆಯುತ್ತಿತ್ತು. ವಿದೇಶೀ ಬಟ್ಟೆ ಕೊಂಡರೆ ನಮ್ಮ ಹಣ ಬೇರೆ ದೇಶಗಳಿಗೆ ಹೋಗುತ್ತದೆ. ಅದನ್ನು ತಪ್ಪಿಸಲು ನಮ್ಮ ದೇಶದಲ್ಲೇ ತಯಾರು ಮಾಡಿದ ಖಾದಿ ಬಟ್ಟೆಗಳನ್ನು ತೊಡಬೇಕು. ವಿದೇಶೀ ಬಟ್ಟೆಗಳನ್ನು ಸುಡಬೇಕು. ಭಗತ್ ಸಿಂಗ್ ಈ ಕಾರ್ಯದಲ್ಲಿ ಉತ್ಸಾಹದಿಂದ ಪಾಲುಗೊಂಡ. ಅವನಂತೂ ಮೊದಲಿನಿಂದಲೂ ಖಾದಿ ಬಟ್ಟೆಯನ್ನೇ ತೊಡುತ್ತಿದ್ದ. ಸ್ವದೇಶಿ ಬಟ್ಟೆಯ ಪುರಸ್ಕಾರದ ಪ್ರಚಾರದ ಜೊತೆಗೆ ವಿದೇಶೀ ಬಟ್ಟೆ ಸುಡುವುದರಲ್ಲಿಯೂ ಅವನಿಗೆ ಹೆಚ್ಚು ಉತ್ಸಾಹ. ಪ್ರತಿ ವಾರ ವಿದೇಶಿ ಬಟ್ಟೆ ಸಂಗ್ರಹಿಸಿ ಗುಡ್ಡೆಹಾಕಿ ಬೆಂಕಿ ಹಚ್ಚುತ್ತಿದ್ದ.
ಮೊದಲ ಹೆಜ್ಜೆ
1922 ನೆಯ ಇಸವಿಯಲ್ಲಿ ಗೋರಖ್‌ಪುರ ಜಿಲ್ಲೆಯ ಚೌರಿಚೋರ ಎಂಬ ಊರಿನಲ್ಲಿ ಕಾಂಗ್ರೆಸ್ ಮೆರವಣಿಗೆ ಹೋಗುತ್ತಿತ್ತು. ಆ ಸಮಯದಲ್ಲಿ ಕೆಲವು ಪುಂಡರು ಇಪ್ಪತ್ತೆರಡು ಜನ ಪೊಲೀಸರನ್ನು ಒಂದು ಮನೆಯಲ್ಲಿ ಕೂಡಿಹಾಕಿ ಬೆಂಕಿ ಹಚ್ಚಿ ಸುಟ್ಟರು. ಇದಕ್ಕೆ ಮುಂಚೆ ಬೊಂಬಾಯಿ ಮತ್ತು ಮದರಾಸುಗಳಲ್ಲಿಯೂ ಇಂಥ ಹಿಂಸಾ ಪ್ರಕರಣ ನಡೆದವು. ಇದೆಲ್ಲ ನೋಡಿ ಮಹಾತ್ಮಾ ಗಾಂಧಿಯವರಿಗೆ ತುಂಬ ದುಃಖವಾಯಿತು. ಅವರು ದೇಶದಲ್ಲಿ ಆಗ ನಡೆಯುತ್ತಿದ್ದ ಅಸಹಕಾರ ಆಂದೋಳನವನ್ನೆ ನಿಲ್ಲಿಸುವಂತೆ ಹೇಳಿಬಿಟ್ಟರು.
ಹದಿನೈದರ ಹರಯದಲ್ಲಿದ್ದ ಭಗತ್ ಸಿಂಗ್‌ನಿಗೆ ಇದರಿಂದ ಬಹಳ ನಿರಾಸೆಯಾಯಿತು. ಕೇವಲ 22 ಜನ ಸತ್ತರೆಂದು ಒಂದು ದೊಡ್ಡ ಆಂದೋಳನವನ್ನೇ ನಿಲ್ಲಿಸಿಬಿಡುವುದೆ? ಕರ್ತಾರ ಸಿಂಗ್ ಎಂಬ ಹತ್ತೊಂಬತ್ತರ ಪ್ರಾಯದ ಒಬ್ಬ ಕ್ರಾಂತಿಕಾರಿಗೆ ಬ್ರಿಟಿಷ್ ಸರಕಾರ ಈ ಮೊದಲು ಗಲ್ಲುಶಿಕ್ಷೆ ವಿಧಿಸಿತ್ತು. ಆಗ ಈ ಅಹಿಂಸಾ ವಾದಿಗಳು ಯಾರೂ ಚಕಾರ ಎತ್ತಿರಲಿಲ್ಲ. ಈಗ ಹೇಗೆ ಅಹಿಂಸೆ ಬಂತು ? ಈ ಯೋಚನೆಗಳಿಂದ ಭಗತ್ ಸಿಂಗ್‌ನಿಗೆ ಅಹಿಂಸೆ ಮತ್ತು ಅಸಹಕಾರ ಚಳವಳಿಗಳಲ್ಲಿ ನಂಬಿಕೆ ಕಡಿಮೆ ಆಯಿತು. ಸ್ವಾತಂತ್ರ್ಯವನ್ನು ಗಳಿಸಲು ಆಯುಧಗಳನ್ನು ಹಿಡಿದು ಕ್ರಾಂತಿ ನಡೆಸುವುದೇ ಸರಿಯಾದ ಸಾಧನ ಎಂಬ ನಂಬಿಕೆ ಬರಬರುತ್ತಾ ಅವನಲ್ಲಿ ಗಟ್ಟಿಯಾಯಿತು.
ಐರ್ಲೆಂಡ್, ಇಟಲಿ, ರಷ್ಯಾಗಳ ಕ್ರಾಂತಿಕಾರಿಗಳ ಜೀವನ ಚರಿತ್ರೆಗಳನ್ನು ಆಳವಾಗಿ ಅಭ್ಯಾಸ ಮಾಡಿದ. ಹೆಚ್ಚು ಹೆಚ್ಚು ಓದಿದ ಹಾಗೆಲ್ಲಾ ಯುದ್ಧದಿಂದಲೇ ಸ್ವಾತಂತ್ರ್ಯ ಸಿಗುತ್ತದೆ ಎಂದು ಭಗತ್ ಸಿಂಗ್‌ನಿಗೆ ನಂಬಿಕೆ ಆಳವಾಯಿತು. ಇದಕ್ಕಾಗಿ ತರುಣರನ್ನು ಹುರಿದುಂಬಿಸಬೇಕು. ಬಿಡುಗಡೆಗಾಗಿ ಹೋರಾಡುವ ಹುರುಪನ್ನು ಉಂಟುಮಾಡಬೇಕು ಎಂದು ನಿರ್ಧರಿಸಿ ಭಗತ್ ಸಿಂಗ್ ತರುಣರ ಸಂಘಟನೆಗೆ ಆರಂಭಿಸಿದ.
ಹಿರಿಯ ದೇಶಭಕ್ತ ಲಾಲಾ ಲಜಪತ್ ರಾಯ್ ಮುಂತಾದವರು ಸೇರಿ ಆರಂಭಿಸಿದ್ದ ನ್ಯಾಷನಲ್ ಕಾಲೇಜಿಗೆ ಭಗತ್ ಸಿಂಗ್ ವಿದ್ಯಾಭ್ಯಾಸ ಮುಂದುವರಿಸಲು ಸೇರಿದ. ನಡುವೆ ಕೆಲವು ವರ್ಷ ಶಾಲೆ ಬಿಟ್ಟಿದ್ದರೂ ಅವನಿಗಿದ್ದ ಇತಿಹಾಸ ಹಾಗೂ ರಾಜಕೀಯ ಜ್ಞಾನವನ್ನು ನೋಡಿ ಬೆರಗಾದ ಪ್ರಿನ್ಸಿಪಾಲರು ಅವನು ನೇರವಾಗಿ ಕಾಲೇಜಿಗೇ ಸೇರಬಹುದೆಂದರು.
ಬೆಳಿಗ್ಗೆಯೆಲ್ಲಾ ತರಗತಿಯಲ್ಲಿ ಪಾಠ ಕೇಳುವುದು, ಸಂಜೆಯಾಯಿತೆಂದರೆ ಸ್ನೇಹಿತರನ್ನೆಲ್ಲಾ ಒಂದೆಡೆ ಸೇರಿಸಿ ಕ್ರಾಂತಿ ವಿಚಾರ ಚರ್ಚಿಸುವುದು ಅವನ ಕೆಲಸವಾಯಿತು.
ಕಾಲೇಜಿನಲ್ಲಿ ಹಲವಾರು ನಾಟಕಗಳಲ್ಲಿ ಭಗತ್ ಸಿಂಗ್ ಪಾತ್ರ ವಹಿಸಿದ. “ರಾಣಾ ಪ್ರತಾಪ್”, “ಸಾಮ್ರಾಟ್ ಚಂದ್ರಗುಪ್ತ”, “ಭಾರತ ದುರ್ದಶೆ”, ನಾಟಕಗಳಲ್ಲಿ ಅವನು ವಹಿಸಿದ ನಾಯಕ ಪಾತ್ರಗಳನ್ನು ನೋಡಿ ಅವನ ಅಧ್ಯಾಪಕರೊಬ್ಬರು “ಇವನೊಬ್ಬ ಮಹಾಪುರುಷ ಆಗುತ್ತಾನೆ” ಎಂದು ನುಡಿದರು.
ಮದುವೆ ಬಯಸದ ತರುಣ
ಭಗತ್ ಸಿಂಗ್ ಕೇವಲ ಪುಸ್ತಕಗಳನ್ನು ಓದಿಕೊಳ್ಳುತ್ತಾ ಕೂಡಲಿಲ್ಲ. ಕ್ರಾಂತಿಗೆ ಸಂಬಂಧಿಸಿದಂತೆ ಹೆಚ್ಚು ಹೆಚ್ಚು ತಿಳಿದುಕೊಂಡಂತೆಲ್ಲಾ ತಾನೂ ನೇರವಾಗಿ ಅದರಲ್ಲಿ ಭಾಗವಹಿಸಬೇಕು ಎಂಬ ಆಸೆ ಅವನಲ್ಲಿ ಹೆಚ್ಚಾಯಿತು. ಕ್ರಾಂತಿಯ ತವರುಮನೆ ಆಗಿದ್ದ ಬಂಗಾಳದ ಕಡೆಗೆ ಅವನ ಗಮನ ಬಿತ್ತು. ಅಲ್ಲಿನ ಕ್ರಾಂತಿ ಪಕ್ಷದೊಡನೆ ಸಂಪರ್ಕ ಆರಂಭಿಸಿದ. ಶಚಿಂದ್ರನಾಥ ಸನ್ಯಾಲ್ ಅದರ ಮುಖಂಡ. ಕ್ರಾಂತಿ ಪಕ್ಷಕ್ಕೆ ಸೇರುವವರು ಒಂದು ಕರಾರಿಗೆ ಒಳಪಡಬೇಕಾಗಿತ್ತು. ನಾಯಕ ಯಾವಾಗ ಕರೆದರೆ ಆಗ ಮನೆಬಿಟ್ಟು ಬರಬೇಕು. ಭಗತ್ ಸಿಂಗ್‌ಅದಕ್ಕೆ ಒಪ್ಪಿದ.
ಇದೇ ಸಮಯದಲ್ಲಿ ಭಗತ್ ಸಿಂಗ್‌ನ್ ಮದುವೆ ನಿಶ್ಚಿತಾರ್ಥ ಗೊತ್ತಾಯಿತು, ಅವನ ಅಜ್ಜಿಯ ಒತ್ತಾಯದಿಂದ ಅದು ಏರ್ಪಾಡಾಗಿತ್ತು.
ನಿಶ್ಚಿತಾರ್ಥದ ದಿನ ಹತ್ತಿರ ಬಂತು. ಆದರೆ ಅಷ್ಟರಲ್ಲಿ ಕ್ರಾಂತಿಯ ನಾಯಕನ ಕರೆಯೂ ಬಂತು. ಭಗತ್ ಸಿಂಗ್ ಮನೆ ಬಿಟ್ಟು ಲಾಹೋರಿಗೆ ಹೊರಟುಹೋದ. ಆಮೇಲೆ ಅಲ್ಲಿಂದ ಎಲ್ಲಿಗೆ ಹೋದನೋ ಯಾರಿಗೂ ಗೊತ್ತಿಲ್ಲ.
ಮನೆಬಿಟ್ಟು ಹೋಗುವಾಗ ಭಗತ್ ಸಿಂಗ್ ಒಂದು ಕಾಗದದಲ್ಲಿ, “ನನ್ನ ಜೀವನದ ಗುರಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು. ನನಗೆ ಈ ಲೋಕಕ್ಕೆ ಸಂಬಂಧಿಸಿದ ಸುಖಗಳು ಬೇಕಾಗಿಲ್ಲ. ನನ್ನ ಉಪನಯನದ ಸಮಯದಲ್ಲಿ ನನ್ನ ಚಿಕ್ಕಪ್ಪ ಅಜಿತ್ ಸಿಂಗರು ನಾನು ಈ ದೇಶಕ್ಕಾಗಿ ತ್ಯಾಗ ಮಾಡಬೇಕು ಎಂದು ಮಾತು ತೆಗೆದುಕೊಂಡಿದ್ದರು. ಅದರಂತೆ ಈಗ ನಾನು ದೇಶದ ಹಿತಕ್ಕಾಗಿ ಸ್ವಂತ ಸುಖವನ್ನು ತೊರೆದು ಹೋಗುತ್ತಿದ್ದೇನೆ” ಎಂದು ಬರೆದಿಟ್ಟ.
1929 ನೇ ಏಪ್ರಿಲ್ 8 ರಂದು ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ದೆಹಲಿಯ ಶಾಸನಸಭೆಯಲ್ಲಿ ಬಾಂಬ್ ಎಸೆದರು.
ಭಗತ್ ಸಿಂಗ್ ಕಾನ್‌ಪುರಕ್ಕೆ ಬಂದ. ಅಲ್ಲಿ ಮೊದಲು ಪತ್ರಿಕೆಗಳನ್ನು ಮಾರಿ ಜೀವನ ನಡೆಸಿದ. ಆಮೇಲೆ ಗಣೇಶಶಂಕರ ವಿದ್ಯಾರ್ಥಿ ಎಂಬ ಕ್ರಾಂತಿಕಾರಿಯ ಪರಿಚಯ ಆಯಿತು. ಅವರ “ಪ್ರತಾಪ್” ಎಂಬ ಪತ್ರಿಕೆಯ ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಕ್ರಾಂತಿಯ ಪಾಠಗಳನ್ನೂ ಅಲ್ಲಿ ಕಲಿಯತೊಡಗಿದ. ಕ್ರಾಂತಿಕಾರಿಗಳು ತಮ್ಮ ಗುರುತು ಮರೆಮಾಡಿಕೊಳ್ಳಲು ಹೆಸರು ಬದಲಾಯಿಸಿಕೊಳ್ಳುವುದು ವಾಡಿಕೆ. ಹಾಗೇ ಭಗತ್ ಸಿಂಗ್‌ನೂ ಬಲವಂತ ಸಿಂಗ್ ಎಂದು ಹೆಸರಿಟ್ಟುಕೊಂಡ.
ಊರಿನಲ್ಲಿದ್ದ ತಂದೆ ತಾಯಿಗಳಿಗೆ ಕಣ್ಮರೆಯಾದ ಮಗನದೇ ಚಿಂತೆ. ತುಂಬ ಕಾಯಿಲೆ ಬಿದ್ದಿದ್ದ ಅಜ್ಜಿ ಮೊಮ್ಮಗನನ್ನು ನೋಡಬೇಕೆಂದು ಹಂಬಲಿಸುತ್ತಿದ್ದಳು. ಮನೆಯವರು ಹುಡುಕಿಕೊಂಡು ಹೋಗಿ ಅವನನ್ನು ಊರಿಗೆ ಕರೆದುಕೊಂಡು ಬಂದರು.
ಕ್ರಾಂತಿಯ ಹೊಳೆಯಲ್ಲಿ
ಊರಿನಲ್ಲಿದ್ದಾಗಲೂ ಭಗತ್ ಸಿಂಗ್ ಸುಮ್ಮನೆ ಕುಳಿತಿರಲಿಲ್ಲ. ಸುಮ್ಮನೆ ಕೂಡವ ಸ್ವಭಾವವೇ ಅಲ್ಲ ಅವನದು. ಆ ಸಮಯದಲ್ಲಿ ಅಕಾಲಿದಳದವರು ಒಂದು ಮೆರವಣಿಗೆ ಏರ್ಪಡಿಸಿದ್ದರು. ಆದರೆ ಅದನ್ನು ನಿಲ್ಲಿಸಬೇಕು ಎಂಬ ಉದ್ದೇಶದಿಂದ ಅಲ್ಲಿನ ಜಿಲ್ಲಾಧಿಕಾರಿ ದಿಲ್ ಬಾಗ್ ಸಿಂಗ್ ಒಂದು ಆಜ್ಞೆ ಮಾಡಿದ; ಅಕಾಲಿ ದಳದವರಿಗೆ ಯಾರೂ ತಿನ್ನಲು ಆಹಾರ ಕೊಡಕೂಡದು, ಕುಡಿಯಲು ನೀರೂ ಕೊಡಕೂಡದು.
ಹೀಗೆ ಆಜ್ಞೆ ಮಾಡಿದ ಆ ಜಿಲ್ಲಾಧಿಕಾರಿ ಭಗತ್ ಸಿಂಗ್‌ನ ವಂಶದವನೇ. ಆದರೆ ಸರ್ಕಾರಿ ಅಧಿಕಾರಿಯಾಗಿದ್ದರಿಂದ ಅವನಿಗೆ ಕ್ರಾಂತಿಕಾರಿಗಳನ್ನು ಕಂಡರೆ ದ್ವೇಷ.
ಭಗತ್ ಸಿಂಗ್, ತನ್ನ ಊರಿಗೆ ಬರುವ ಅಕಾಲಿದಳದವರಿಗೆ ಸಹಾಯ ಮಾಡಬೇಕೆಂದು ಯೋಚಿಸಿದ. ಹಳ್ಳಿಯ ಜನರಲ್ಲೆಲ್ಲಾ ಪ್ರಚಾರ ಮಾಡಿ ಅಕಾಲಿ ದಳದವರಿಗೆ ರಾತ್ರಿಯ ಸಮಯದಲ್ಲಿ ಗುಟ್ಟಾಗಿ ಆಹಾರ ಒದಗಿಸುವಂತೆ ಏರ್ಪಾಟು ಮಾಡಿದ. ಒಂದು ವಾರ ಹೀಗೆ ನಡೆಯಿತು. ದಳದವರ ಕಾರ್ಯಕ್ರಮ ನಿಲ್ಲದೆ ಯಶಸ್ವಿಯಾಗಿ ನಡೆಯಿತು. ಹಗಲೆಲ್ಲಾ ದೇಶದ ಸ್ವಾತಂತ್ರ್ಯ, ಜನರ ಕರ್ತವ್ಯ ಮೊದಲಾದ ವಿಷಯ ಕುರಿತು ಭಾಷಣಗಳು ಆಗುತ್ತಿದ್ದವು. ಭಗತ್ ಸಿಂಗ್‌ನೂ ಭಾಷಣ ಮಾಡುತ್ತಿದ್ದ.
ತನ್ನ ಆಜ್ಞೆಯನ್ನು ಮೀರಿಯೂ ಜನರು ದಳದವರಿಗೆ ಸಹಾಯ ಮಾಡಿದ್ದನ್ನು ನೋಡಿ ಜಿಲ್ಲಾಧಿಕಾರಿಗೆ ಕೋಪ ಬಂತು. ಇದಕ್ಕೆಲ್ಲಾ ಕಾರಣನಾದ ಭಗತ್ ಸಿಂಗ್‌ನನ್ನು ಸೆರೆಹಿಡಿಯಲು ನಿರೂಪ ಕಳಿಸಿದ. ಆದರೆ ಭಗತ್‌ಸಿಂಗ್ ವಯಸ್ಕ ಆಗಿಲ್ಲದ್ದರಿಂದ ಸೆರೆ ಹಿಡಿಯುವಂತಿರಲಿಲ್ಲ. ಆಗ ಭಗತ್ ಸಿಂಗ್‌ನಿಗೆ ಕೇವಲ ಹದಿನೇಳು ವರ್ಷ ವಯಸ್ಸಾಗಿತ್ತು.
ಜಿಲ್ಲಾಧಿಕಾರಿಗೆ ಮತ್ತೂ ಕೋಪ ಬಂತು. “ಭಗತ್ ಸಿಂಗ್ ವಯಸ್ಕ ಆಗಿಲ್ಲದಿದ್ದರೇನು, ಅವನ ಬುದ್ಧಿಗೆ ವಯಸ್ಸು ಆಗಿದೆಯಲ್ಲ!” ಎಂದು ಗೊಣಗಿಕೊಂಡು ಸುಮ್ಮನಾದ.
ಬಂಧನ – ಬಿಡುಗಡೆ
ಭಗತ್‌ಸಿಂಗ್ ಉತ್ಸಾಹದ ಕಾರಂಜಿ. ಅವನ ಕಾರ್ಯ ಚಟುವಟಿಕೆಗಳಿಗೆ ಸಣ್ಣ ಊರು ಸಾಲದಾಯಿತು. ಲಾಹೋರಿಗೆ ಹೊರಟ. ಅಲ್ಲಿ “ನೌಜವಾನ್ ಭಾರತ್ ಸಭಾ” ಎಂಬ ಕ್ರಾಂತಿಕಾರಿಗಳ ಸಂಘ ಸ್ಥಾಪನೆಯಾಯಿತು. ಭಗತ್‌ಸಿಂಗ್ ಅದರ ಕಾರ್ಯದರ್ಶಿ ಆದನು.
ಬಂಗಾಳದಲ್ಲಿ ಕ್ರಾಂತಿದಳ ಹೇಗೋ ಪಂಜಾಬಿನಲ್ಲಿ ಈ ಹೊಸ ಸಂಘ ಹಾಗೆ ಜನಗಳಲ್ಲಿ ಕ್ರಾಂತಿಯ ತಿಳಿವು ಮಾಡಿಕೊಡಲು ಆರಂಭಿಸಿತು. ಮೇಲುನೋಟಕ್ಕೆ ಇದರ ಉದ್ದೇಶಗಳು ಭಾರತದ ಸಂಸ್ಕೃತಿಯ ಪ್ರಸಾರ, ಯುವಕರನ್ನು ಬಲಶಾಲಿಗಳನ್ನಾಗಿ ಮಾಡುವುದು ಇತ್ಯಾದಿ. ಮೂಲ ಉದ್ದೇಶ ಮಾತ್ರ ದೇಶದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿ ಎಬ್ಬಿಸುವುದು.
ಸ್ವಲ್ಪ ದಿನದಲ್ಲೇ ಇದರ ಶಾಖೆಗಳು ಬೇರೆಬೇರೆ ಕಡೆ ಹರಡಿದವು. ಕ್ರಾಂತಿಕಾರಿಗಳ ಹುಟ್ಟುಹಬ್ಬವನ್ನು ಆಚರಿಸುವುದು ಈ ಸಂಘದ ಒಂದು ಮುಖ್ಯ ಕಾರ್ಯಕ್ರಮ ಆಯಿತು. ಅವರ ಚಿತ್ರಗಳನ್ನು ಮೆರವಣಿಗೆಯಲ್ಲಿ ತರುತ್ತಿದ್ದರು. ಚಿತ್ರಕ್ಕೆ ಖಾದಿ ಹಾರ ಹಾಕುತ್ತಿದ್ದರು. ತಮ್ಮ ಕೈಬೆರಳು ಸೀಳಿ ರಕ್ತದ ತಿಲಕವನ್ನು ಇಡುತ್ತಿದ್ದರು. ಅವರ ವಿಷಯ ಭಾಷಣ ಮಾಡುತ್ತಿದ್ದರು. ಭಗತ್‌ಸಿಂಗನಿಗೆ ಭಾಷಣ ಮಾಡುವುದು ಆಗಲೇ ಚೆನ್ನಾಗಿ ಅಭ್ಯಾಸವಾಯಿತು. ಸ್ವಲ್ಪ ದಿನಗಳಲ್ಲೇ ಅವನು ಒಬ್ಬ ಉತ್ತಮ ಭಾಷಣಕಾರ ಆದ. ನಗರದ ಕಾಲೇಜುಗಳ ವಿದ್ಯಾರ್ಥಿ ಸಂಘಗಳೊಡನೆ ಸಂಪರ್ಕ ಬೆಳೆಸಿದ. ಅಲ್ಲೆಲ್ಲಾ ಕ್ರಾಂತಿಯ ಪ್ರಚಾರ ಮಾಡಿದ.
ಈ ವೇಳೆಗೆ ಆಗಲೇ ಭಗತ್‌ಸಿಂಗ್‌ನ ಮೇಲೆ ಪೋಲಿಸರ ಕಣ್ಣು ಬಿದ್ದಿತ್ತು. ಅವನ ಓಡಾಟಗಳನ್ನೆಲ್ಲಾ ಎಚ್ಚರಿಕೆಯಿಂದ ಪೋಲೀಸ್ ಗೂಢಚಾರರು ಪರೀಕ್ಷಿಸುತ್ತಿದ್ದರು.
ಒಂದು ಸಲ ಅಮೃತಸರದಲ್ಲಿ ರೈಲಿನಿಂದ ಇಳಿಯುತ್ತಿದ್ದ ಹಾಗೇ ಗೂಢಚಾರರು ಭಗತ್‌ಸಿಂಗ್‌ನ ಬೆನ್ನಟ್ಟಿ ಬಂದರು. ಅವನು ಅವರ ಕಣ್ಣು ತಪ್ಪಿಸಿ ಓಡತೊಡಗಿದ. ಯಾವ ಕಡೆಗೆ ಹೋದರೂ ಅವನ ಕಾಟ ತಪ್ಪಲಿಲ್ಲ. ಕೊನೆಗೆ ಒಬ್ಬ ವಕೀಲರ ಮನೆಗೆ ನುಗ್ಗಿ ಪೊಲೀಸರಿಂದ ಪಾರಾದ. ಆಮೇಲೆ ಲಾಹೋರಿಗೆ ಪ್ರಯಾಣ ಮಾಡಿದ. ಲಾಹೋರಿನ ರೈಲುನಿಲ್ದಾಣದಲ್ಲಿ ಇಳಿಯುತ್ತಿದ್ದ ಹಾಗೇ ಪೋಲಿಸರು ಅವನನ್ನು ಹಿಡಿದು ಲಾಹೋರಿನ ಕೋಟೆಯಲ್ಲಿದ್ದ ಬಂಧೀಖಾನೆಗೆ ತಳ್ಳಿದರು.
ಯಾವ ಕಾರಣಕ್ಕಾಗಿ ತನ್ನನ್ನು ಬಂಧಿಸಿದ್ದಾರೆ ಎಂದು ಭಗತ್‌ಸಿಂಗ್‌ನಿಗೆ ಗೊತ್ತಾಗಲಿಲ್ಲ. ಸ್ವಲ್ಪ ದಿನಗಳ ಹಿಂದೆ ದಸರಾ ಉತ್ಸವದ ಸಮಯದಲ್ಲಿ ಮೆರವಣಿಗೆ ಮೇಲೆ ಯಾರೋ ಪುಂಡರು ಬಾಂಬ್‌ಎಸೆದಿದ್ದರು. ಅದರಿಂದ ಕೆಲವರು ಸತ್ತಿದ್ದರು. ಇದು ಕ್ರಾಂತಿಕಾರಿಗಳ ಇರಬೇಕು ಎಂದು ಪೊಲೀಸರಿಗೆ ಅನುಮಾನ. ಅದಕ್ಕೇ ಆ ಆರೋಪವನ್ನು ಇತರ ಕ್ರಾಂತಿಕಾರಿಗಳ ರಹಸ್ಯ ತಿಳಿದುಕೊಳ್ಳಲು ಭಗತ್ ಸಿಂಗನಿಗೆ ನಾನಾ ಹಿಂಸೆ ಮಾಡಿದರು. ಛಡಿಯಿಂದ ಹೊಡೆದರು; ಭರ್ಜಿಯಿಂದ ತಿವಿದರು. ಏನು ಮಾಡಿದರೂ ಭಗತ್ ಸಿಂಗ್ ಬಾಯಿ ಬಿಡಲಿಲ್ಲ.
ಕಡೆಗೆ, ಭಗತ್ ಸಿಂಗನನ್ನು ಬಿಡಲು ಅರವತ್ತು ಸಾವಿರ ರೂಪಾಯಿ ಜಾಮೀನು ಕೊಡಬೇಕು ಎಂದು ನ್ಯಾಯಾಧೀಶರು ತಿಳಿಸಿದರು. ಅಂಥ ಹೊಣೆಯನ್ನು ಯಾರು ಹೊರಲು ಸಿದ್ಧ? ಆದರೆ ಭಗತ್ ಸಿಂಗನ ಮೇಲಿನ ವಿಶ್ವಾಸದಿಂದ ಇಬ್ಬರು ಶ್ರೀಮಂತರು ಮುಂದೆ ಬಂದರು. ಅವರ ಹೆಸರು ದುನೀಚಂದ್ ಮತ್ತು ದೌಲತ್ ರಾಮ್. ಅವರ ಹೊಣೆಯ ಮೇಲೆ ಭಗತ್ ಸಿಂಗನ ಬಿಡುಗಡೆ ಆಯಿತು.
ಜಾಮೀನಿನ ಅವಧಿಯಲ್ಲಿ ಭಗತ್ ಸಿಂಗ್ ಕ್ರಾಂತಿಯ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಜಾಮೀನು ಕೊಟ್ಟು ಇಬ್ಬರು ಶ್ರೀಮಂತರು ಅರವತ್ತು ಸಾವಿರ ರೂಪಾಯಿಯನ್ನು ಸರ್ಕಾರಕ್ಕೆ ತೆರಬೇಕಾಗುತ್ತಿತ್ತು. ತನ್ನಿಂದ ಬೇರೆಯವರಿಗೆ ಕಷ್ಟವಾಗುವುದು ಭಗತ್ ಸಿಂಗನಿಗೆ ಇಷ್ಟವಿರಲಿಲ್ಲ. ಅದಕ್ಕೇ ಜಾಮೀನಿನ ಅವಧಿಯಲ್ಲಿ ಸುಮ್ಮನೆ ಇರಲು ನಿರ್ಧರಿಸಿದ. ಅದಕ್ಕೆ ಸರಿಯಾಗಿ ಅವನ ತಂದೆ ಊರಿನಲ್ಲಿ ಒಂದು ಗೋಶಾಲೆಯನ್ನು ಮಗನಿಗಾಗಿ ಹಾಕಿಕೊಟ್ಟ. ಭಗತ್ ಸಿಂಗ್ ಆ ಕೆಲಸವನ್ನೇ ಶ್ರದ್ಧೆಯಿಂದ ಮಾಡತೊಡಗಿದ.
ಪ್ರತಿದಿನ ಬೆಳಗ್ಗೆ ನಾಲ್ಕು ಗಂಟೆಗೇ ಏಳುವುದು. ಎದ್ದು ಹಸುಗಳಿಗೆ ಮೇವು ಹಾಕಿ ಹಟ್ಟಿಯ ಸೆಗಣಿಯನ್ನೆಲ್ಲಾ ಗುಡಿಸಿ ತೆಗೆದು ಶುಚಿ ಮಾಡುವುದು. ಆಮೇಲೆ ಹಾಲು ಕರೆಯುವುದು, ಮನೆಮನೆಗೆ ತೆಗೆದುಕೊಂಡು ಹೋಗಿ ಮಾರುವುದು. ಈ ಕೆಲಸಗಳನ್ನೆಲ್ಲಾ ಅಚ್ಚುಕಟ್ಟಾಗಿ ಮಾಡತೊಡಗಿದ. ಯಾವ ಕೆಲಸವನ್ನು ಕೈಗೆತ್ತಿಕೊಳ್ಳಲಿ, ಅದನ್ನು ಶ್ರದ್ಧೆಯಿಂದ ಓರಣವಾಗಿ ಮಾಡಿ ಮುಗಿಸುವುದು ಭಗತ್ ಸಿಂಗನ ದೊಡ್ಡ ಗುಣ.
ಹಗಲೆಲ್ಲಾ ಈ ಕೆಲಸಗಳು, ರಾತ್ರಿ ಮಾತ್ರ ಕ್ರಾಂತಿಯದೇ ಯೋಚನೆ, ಅದಕ್ಕಾಗಿ ಸ್ನೇಹಿತರೊಡನೆ ಸಮಾಲೋಚನೆ, ಈ ಸಮಯದಲ್ಲಿಯೇ “ಕೀರ್ತಿ” ಮತ್ತು “ಅಕಾಲೀ” ಪತ್ರಿಕೆಗಳೊಡನೆ ಭಗತ್ ಸಿಂಗ್ ಸಂಪರ್ಕ ಬೆಳೆಸಿದ.
ಅವುಗಳಿಗೆ ಲೇಖನಗಳನ್ನು ಬರೆಯತೊಡಗಿದ. ಗಲ್ಲಿಗೇರಿದವರನ್ನು ಕುರಿತು ಒಂದು ವಿಶೇಷ ಸಂಚಿಕೆಯನ್ನೇ ಒಂದು ಪತ್ರಿಕೆ ಪ್ರಕಟಿಸಿದಾಗ ಅದರಲ್ಲಿ ಹಲವರು ಕ್ರಾಂತಿಕಾರಿಗಳ ಪರಿಚಯವನ್ನು ಭಗತ್ ಸಿಂಗನೇ ಬರೆದ.
ಭಗತ್ ಸಿಂಗನ ಮೇಲಿದ್ದ ದಸರಾ ಬಾಂಬ್ ಆಪಾದನೆಯ ಕೇಸು ಇನ್ನೂ ನಡೆಯುತ್ತಲೇ ಇತ್ತು. ಕಡೆಗೆ ಅವನ ಬಿಡುಗಡೆಯಾಯಿತು. ಜಾಮೀನಿನಿಂದ ಬಿಡುಗಡೆಯೂ ಆಯಿತು. ಕೂಡಲೇ ಭಗತ್ ಸಿಂಗ್ ತನ್ನ ಹಾಲಿನ ಕೇಂದ್ರದ ಕೆಲಸವನ್ನು ನಿಲ್ಲಿಸಿಬಿಟ್ಟ. ಮತ್ತೆ ಕ್ರಾಂತಿಯ ಕೆಲಸ ಆರಂಭಿಸಿದ. ೧೯೨೮ನೆಯ ಇಸವಿಯಲ್ಲಿ ದೆಹಲಿಯಲ್ಲಿ ನಡೆದ ಕ್ರಾಂತಿಕಾರಿಗಳ ಸಭೆಗೆ ಹೋದವನು ಮನೆಗೆ ಮರಳಲೇ ಇಲ್ಲ.
ಸೇಡಿಗೆ ಸೇಡು
ದೆಹಲಿಯಲ್ಲಿ ಭಗತ್ ಸಿಂಗನಿಗೆ ಯುವಕ ಕ್ರಾಂತಿಕಾರಿ ಚಂದ್ರಶೇಖರ ಆಜಾದನ ಪರಿಚಯ ಆಯಿತು. ಬೆಂಕಿ ಗಾಳಿ ಎರಡೂ ಒಟ್ಟಿಗೆ ಸೇರಿದ ಹಾಗಾಯಿತು. ಕ್ರಾಂತಿಯ ಚಟುವಟಿಕೆಗಳು ಇನ್ನೂ ಹೆಚ್ಚಾದವು. ಪೊಲೀಸರಿಗೆ ಗುರುತು ಸಿಗಬಾರದೆಂದು ಭಗತ್ ಸಿಂಗ್ ತನ್ನ ಗಡ್ಡವನ್ನು ತೆಗೆದ. ಕ್ರಾಪ್ ಬಿಟ್ಟ. ಇದುವರೆಗೆ “ಸಿಖ್ ವೀರ” ಆಗಿದ್ದವನು ಈಗ “ರಾಷ್ಟ್ರವೀರ” ಆದ.
ಅಲ್ಲಿ ಒಂದು ಕ್ರಾಂತಿ ಪಕ್ಷ ಇತ್ತು. ಅದರ ಹೆಸರು “ಹಿಂದುಸ್ಥಾನ್ ಪ್ರಜಾತಂತ್ರ ಸಂಘ”. ಅದನ್ನು “ಹಿಂದುಸ್ಥಾನ್ ಸಮಾಜವಾದಿ ಪ್ರಜಾತಂತ್ರ ಸಂಘ” ಎಂದು ಬದಲಾಯಿಸಿದರು. ಭಾರತದಲ್ಲಿ ಸಶಸ್ತ್ರ ಕ್ರಾಂತಿಯ ಮೂಲಕ ಗಣರಾಜ್ಯ ಸ್ಥಾಪನೆ ಅದರ ಗುರಿ.
ನೆಲಕ್ಕೆ ಎಸೆದ ಕೂಡಲೆ ಸಿಡಿದು ಕಿವಿ ಒಡೆಯುವಂತೆ ಶಬ್ದ ಮಾಡಿ ತನ್ನ ಸುತ್ತಮುತ್ತಲಿನ ಎಲ್ಲವನ್ನೂ ನಾಶಮಾಡುವ ಅಸ್ತ್ರವೇ ಬಾಂಬ್. ಇಂಗ್ಲಿಷರನ್ನು ಓಡಿಸಲು ಇಂಥ ಬಾಂಬುಗಳು ಎಷ್ಟು ಸಿಕ್ಕರೂ ಬೇಕು ಕ್ರಾಂತಿಕಾರಿಗಳಿಗೆ. ಆದರೆ ಅವರಿಗೆ ಅವು ಎಲ್ಲಿಂದ ಸಿಗಬೇಕು ? ಬಾಂಬ್ ತಯಾರಿಕೆಯನ್ನು ಕಲಿಯುವದಕ್ಕಾಗಿ ಭಗತ್ ಸಿಂಗ್ ಕಲ್ಕತ್ತಕ್ಕೆ ಹೋದ. ಅಲ್ಲಿ ತನಗೆ ಬೇಕಾದಷ್ಟು ಬಾಂಬುಗಳನ್ನು ಕೊಂಡ. ಜೊತೆಗೆ ಜತೀಂದ್ರನಾಥದಾಸ್‌ಎಂಬ ಕ್ರಾಂತಿಕಾರಿಯ ಬಳಿ ಬಾಂಬ್ ತಯಾರಿಕೆಯ ರಹಸ್ಯವನ್ನೂ ಕಲಿತುಕೊಂಡ.
ಆಗ್ರಾದಲ್ಲಿ ಬಾಂಬ್ ತಯಾರಿಕೆಯ ಕಾರ್ಖಾನೆಯನ್ನು ಗುಪ್ತವಾಗಿ ಸ್ಥಾಪಿಸಿದರು. ಆದರೆ ಅದಕ್ಕೆ ಹಣ ಅವರಿಗೆ ಎಲ್ಲಿಂದ ದೊರಕಬೇಕು ? ಕೆಲವು ಸಲವಂತೂ ಮೂರುದಿನಗಟ್ಟಲೆ ಬರೀ ಒಂದು ಲೋಟ ಟೀ ಕುಡಿದೇ ಜೀವ ಹಿಡಿದುಕೊಂಡಿರಬೇಕಾಗುತ್ತಿತ್ತು. ಹಾಸಲು, ಹೊದಿಯಲು ಸರಿಯಾದ ಬಟ್ಟೆಗಳಿಲ್ಲ. ಮೈ ಕೊರೆಯುವ ಚಳಿ. ಅನ್ನವಿಲ್ಲದೆ ಹೊಟ್ಟೆಯಲ್ಲಿ ಸಂಕಟ. ಪೊಲೀಸರ ಯೋಚನೆ. ಇವುಗಳ ನಡುವೆಯೇ ಕ್ರಾಂತಿಕಾರಿಗಳ ತಪಸ್ಸು ನಡೆದಿತ್ತು. ಹಣಕ್ಕಾಗಿ ಕೆಲವು ಸಲ ಸರ್ಕಾರಿ ಕಛೇರಿಗಳನ್ನು ಲೂಟಿ ಮಾಡುತ್ತಿದ್ದರು.
ಅಂತೂ ಬಾಂಬ್ ತಯಾರಿಸಿದ್ದು ಮುಗಿಯಿತು. ಝಾನ್ಸಿಯ ಕೋಟೆಗೆ ಹೋಗಿ ಅವನ್ನು ಪರೀಕ್ಷಿಸಿದ್ದೂ ಆಯಿತು. ಪರೀಕ್ಷೆ ಯಶಸ್ವಿಯೂ ಆಯಿತು.
1928ರ ಫೆಬ್ರವರಿ ತಿಂಗಳಿನಲ್ಲಿ “ಸೈಮನ್ ಕಮಿಷನ್” ಎಂಬ ಸಮಿತಿಯು ಇಂಗ್ಲೆಂಡಿನಿಂದ ಭಾರತಕ್ಕೆ ಬಂದಿತು. ಬಂದ ಉದ್ದೇಶ ಭಾರತೀಯರಿಗೆ ಎಷ್ಟು ಅಧಿಕಾರ ಕೊಡಬಹುದು ಎಂದು ತೀರ್ಮಾನಿಸುವುದು. ಆದರೆ ಆ ಸಮಿತಿಯಲ್ಲಿ ಭಾರತೀಯರು ಯಾರೂ ಇರಲಿಲ್ಲ. ಇದರಿಂದ ಭಾರತೀಯರಿಗೆ ಸಮಿತಿಯನ್ನು ಕಂಡರೆ ಸಿಟ್ಟು. ಅದರ ಕೆಲಸ ನಡೆಯದ ಹಾಗೆ ಅಡ್ಡಿಪಡಿಸಬೇಕು. ಇಂಗ್ಲೆಂಡಿಗೆ ವಾಪಸ್ ಓಡಿಸಬೇಕು. ಸಮಿತಿ ಹೋದ ಕಡೆಯಲ್ಲೆಲ್ಲಾ ಕಪ್ಪುಬಾವುಟ ಹಿಡಿದು ಪ್ರತಿಭಟನೆ ಮಾಡುವುದು, “ಸೈಮನ್‌ಹಿಂದಕ್ಕೆ ಹೋಗು” ಎಂದು ಒಟ್ಟಿಗೇ ಕೂಗುವುದು ಆರಂಭವಾಯಿತು.
ಸೈಮನ್ ಸಮಿತಿ ಅಕ್ಟೋಬರ್ ತಿಂಗಳಿನಲ್ಲಿ ಲಾಹೋರಿಗೆ ಬಂದಾಗ ದೊಡ್ಡ ಪ್ರತಿಭಟನಾ ಮೆರವಣಿಗೆ ಎದುರಾಯಿತು. “ನೌಜವಾನ್ ಭಾರತ ಸಭಾ”ದವರು ಇದನ್ನು ಏರ್ಪಡಿಸಿದ್ದರು. ಸಹಸ್ರಾರು ಜನ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅದಕ್ಕೆ ನಾಯಕರು ಹಿರಿಯರಾದ ಲಾಲಾ ಲಜಪತ್ ರಾಯ್. ರೈಲು ನಿಲ್ದಾಣದ ಬಳಿಯೇ ಗೊಂದಲ ಆರಂಭವಾಯಿತು. ಸೈಮನ್ ಸಮಿತಿ ಮುಂದಕ್ಕೆ ಹೋಗಲು ಕ್ರಾಂತಿಕಾರಿಗಳು ಬಿಡಲೇ ಇಲ್ಲ. ಪೊಲೀಸರ ರಕ್ಷಣೆ ಮುರಿದು ಬಿತ್ತು. ಅಷ್ಟರಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್ ಸ್ಕಾಟ್ ಎಂಬುವನು ಲಾಠಿ ಪ್ರಹಾರಕ್ಕೆ ಆಜ್ಞೆ ಮಾಡಿದ. ಪೊಲೀಸರು ದೊಣ್ಣೆಯಿಂದ ಜನರಿಗೆ ಹೊಡೆಯತೊಡಗಿದರು. ಜನ ಓಡತೊಡಗಿದರು. ಆದರೆ ಲಾಲಾ ಲಜಪತ್ ರಾಯ್ ಮತ್ತು ಸಂಗಡಿಗರು ಅಲುಗಾಡಲಿಲ್ಲ. ಸಾಂಡರ್ಸ್ ಎಂಬ ಪೊಲೀಸ್ ಅಧಿಕಾರಿ ಮುಂದೆ ನುಗ್ಗಿ ಬಂದು ಲಜಪತ್ ರಾಯ್ ಅವರ ಎದೆಗೆ ದೊಣ್ಣೆಯಿಂದ ಬಲವಾಗಿ ಹೊಡೆದ. ಪೆಟ್ಟು ತುಂಬಾ ಜೋರಾಗಿ ಬಿತ್ತು. ಅವರು ಮುದುಕರು, ಆರೋಗ್ಯವೂ ಸರಿಯಾಗಿರಲಿಲ್ಲ. ಈ ಪೆಟ್ಟು ಅವರಿಗೆ ಮರಣವನ್ನೇ ತಂದಿತು. ಮುಂದೆ ಒಂದೇ ತಿಂಗಳಲ್ಲಿ ಲಾಲಾ ಲಜಪತ್ ರಾಯ್ ಸತ್ತರು.
ಅವರ ಸಾವು ಕ್ರಾಂತಿಕಾರಿಗಳಿಗೆ ಒಂದು ದೊಡ್ಡ ನಷ್ಟ. ಅದರ ಸೇಡು ತೀರಿಸಿಕೊಳ್ಳಬೇಕು. ಲಾಠಿ ಪ್ರಹಾರ ಮಾಡಲು ಆಜ್ಞೆಮಾಡಿದ ಸ್ಕಾಟನನ್ನು ಕೊಲ್ಲಬೇಕು ಎಂದು ಕ್ರಾಂತಿಕಾರಿಗಳು ತೀರ್ಮಾನಿಸಿದರು. ಅದಕ್ಕಾಗಿ ಒಂದು ಯೋಜನೆ ಹಾಕಿಕೊಂಡರು. ಸ್ಕಾಟನ ಚಲನವಲನಗಳನ್ನು ಜಯಗೋಪಾಲ್ ಎಂಬ ಕ್ರಾಂತಿಕಾರಿ ಅಭ್ಯಾಸ ಮಾಡಬೇಕು. ಭಗತ್ ಸಿಂಗ್ ಮತ್ತು ರಾಜಗುರು ಗುಂಡು ಹಾರಿಸಿ ಅವನನ್ನು ಕೊಲ್ಲಬೇಕು. ಕೊಲೆಯಾದ ಕೂಡಲೇ ಪಾರಾಗಿ ಹೋಗಲು ಸರಿಯಾದ ಉಪಾಯ ರೂಪಿಸಬೇಕು. ಚಂದ್ರಶೇಖರ ಆಜಾದನ ಮುಂದಾಳುತನದಲ್ಲಿ ಇಷ್ಟು ಯೋಜನೆ ಸಿದ್ಧವಾಯಿತು.
ಆದರೆ ಮೊದಲೇ ಒಂದು ಸಣ್ಣ ತಪ್ಪು ಆಯಿತು. ಸಾಂಡರ್ಸನನ್ನೇ ಸ್ಕಾಟ್‌ಎಂದು ಜಯಗೋಪಾಲ ತಪ್ಪಾಗಿ ಭಾವಿಸಿದ.
ಗೊತ್ತುಪಡಿಸಿದ ದಿನ ಬಂದೇ ಬಂತು. ಅಂದು ಸಂಜೆ ಸಾಂಡರ್ಸ್ ಪೋಲೀಸ್ ಠಾಣೆಯಿಂದ ಹೊರಗೆ ಬಂದು ಮೋಟಾರ್ ಸೈಕಲ್ ಹತ್ತಿದ. ಹಿಂದೆಯೇ ಇದ್ದ ಜಯಗೋಪಾಲ್ ಸನ್ನೆ ಮಾಡಿದ. ದಾರಿಯಲ್ಲಿ ಭಗತ್‌ಸಿಂಗ್ ಮತ್ತು ರಾಜಗುರು ಕಾಯುತ್ತಿದ್ದರು. ಮೋಟಾರ್ ಸೈಕಲ್ ಹತ್ತಿರ ಬರುತ್ತಿದ್ದ ಹಾಗೇ ಸಾಂಡರ್ಸ್‌ನ ಮೇಲೆ ರಾಜಗುರು ಪಿಸ್ತೂಲಿನಿಂದ ಗುಂಡು ಹಾರಿಸಿದ. ತಕ್ಷಣ ಭಗತ್‌ಸಿಂಗ್‌ನೂ ಗುಂಡು ಹಾರಿಸಿದ. ಲಜಪತ್‌ರಾಯ್ ಅವರ ಎದೆಗೆ ದೊಣ್ಣೆಯಿಂದ ಹೊಡೆದವನ ಎದೆಗೇ ಈಗ ಗುಂಡಿನ ಏಟು ಬಿತ್ತು. ಸಾಂಡರ್ಸ್ ಸತ್ತುಬಿದ್ದ. ಭಗತ್‌ಸಿಂಗ್ ಮತ್ತು ರಾಜಗುರು ಓಡಿ ಹೋದರು. ಪೋಲೀಸರು ಅಟ್ಟಿಸಿಕೊಂಡು ಬಂದರು. ಇವರಿಬ್ಬರೂ ಹತ್ತಿರವಿದ್ದ ವಸತಿ ಗೃಹದೊಳಕ್ಕೆ ನುಗ್ಗಿದರು. ಆ ಸ್ಥಳದಿಂದ ತಪ್ಪಿಸಿಕೊಂಡು ಹೋದರು.
ಇಡೀ ನಗರದ ತುಂಬ ಸಾಂಡರ್ಸ್‌ನ ಕೊಲೆಯ ಸುದ್ದಿ ತುಂಬಿಹೋಯಿತು. ಪೋಲೀಸ್ ಗೂಢಾಚಾರರು ಕೊಲೆಗಾರರಿಗಾಗಿ ಮೂಲೆ ಮೂಲೆಗಳಲ್ಲಿ ಹುಡುಕ ತೊಡಗಿದರು.
ಮರುದಿನ ಲಾಹೋರಿನ ಬೀದಿಬೀದಿಗಳಲ್ಲಿ ಗೋಡೆಗಳ ಮೆಲೆ ಪತ್ರಗಳು ಕಾಣಸಿಕೊಂಡವು. ಅವುಗಳಲ್ಲಿ “ಲಾಲಾ ಲಜಪತ್‌ರಾಯ್ ಅವರ ಕೊಲೆಯ ಸೇಡು ತೀರಿತು. ಸಾಂಡರ್ಸ್‌ನ ಕೊಲೆಯಾಯಿತು.” ಎಂದು ಬರೆದಿತ್ತು. ಜೊತೆಗೆ ಸರ್ಕಾರಕ್ಕೆ ಎಚ್ಚರಿಕೆಯ ಮಾತೂಗಳೂ ಅದರಲ್ಲಿದ್ದವು. “ಹಿಂದುಸ್ಥಾನ್ ಸಮಾಜವಾದಿ ಪ್ರಜಾತಂತ್ರ ಸೇನೆಯ” ಹೆಸರೂ ಕೆಂಪಕ್ಷರಗಳಲ್ಲಿ ಅದರಲ್ಲಿತ್ತು. ಇದರಿಂದ ಸಾಂಡರ್ಸ್‌ನ ಕೊಲೆ ಮಾಡಿದ ತಂಡ ಯಾವುದು ಎಂದು ಎಲ್ಲರಿಗೂ ತಿಳಿಯಿತು. ಜನತೆಗೆ ಕ್ರಾಂತಿದಳದ ವಿಷಯವಾಗಿ ಇನ್ನಷ್ಟು ಗೌರವ ಹೆಚ್ಚಿತು. ಸಾಂಡರ್ಸ್‌ನ ಕೊಲೆಯಿಂದ ಬ್ರಿಟಿಷ್ ಸರ್ಕಾರ ಅಲ್ಲಾಡಿ ಹೋಯಿತು.
ಭಗತ್‌ಸಿಂಗ್, ರಾಜಗುರು ಮತ್ತು ಚಂದ್ರಶೇಖರ ಆಜಾದದ ಮೂವರೂ ಲಾಹೋರಿನಿಂದ ತಪ್ಪಿಸಿಕೊಂಡು ಹೊರಟರು. ಭಗತ್‌ಸಿಂಗ್‌ಪಾಶ್ಚಾತ್ಯ ಯುವಕನಂತೆ ಉಡುಪು ಧರಿಸಿ, ಹ್ಯಾಟ್‌ಇಟ್ಟುಕೊಂಡ. ಭಗವತೀ ಚರಣ ಎನ್ನುವ ಕ್ರಾಂತಿಕಾರಿಯ ಹೆಂಡತಿ ದುರ್ಗಾ ಭಾಭಿ ಮತ್ತು ಅವರ ಮಗು, ಭಗತ್‌ಸಿಂಗ್‌ರ ಹೆಂಡತಿ ಮತ್ತು ಮಗು ಎನ್ನುವಂತೆ ಹೊರಟರು. ಇವರು ಮೂವರೂ ರೈಲಿನಲ್ಲಿ ಮೊದಲ ತರಗತಿಯ ಡಬ್ಬಿಯಲ್ಲಿ ಪ್ರಯಾಣ ಮಾಡಿದರು. ರಾಜಗುರು ಸಾಮಾನ್ಯ ಕೆಲಸಗಾರರ ವೇಷದಲ್ಲಿ ಹೊಟ. ಆಜಾದದ ಒಬ್ಬ ಪಂಡಿತನಂತೆ ಪ್ರಯಾಣ ಮಾಡಿದ. ಸ್ಟೇಷನ್‌ತುಂಬ ತುಂಬಿದ್ದ ಹದ್ದಿನ ಕಣ್ನಿನ ಗೂಢಚಾರರು ನೋಡುತ್ತಲೇ ಇದ್ದರು, ಮೂವರೂ ಪ್ರಯಾಣ ಮಾಡಿಯೇ ಬಿಟ್ಟರು.
ಬಾಂಬ್ ಎಸೆದರು
ಪೋಲೀಸರು ಎಷ್ಟೇ ಹುಡುಕಿದರೂ ಭಗತ್ ಸಿಂಗ್ ಮತ್ತು ರಾಜಗುರು ಪತ್ತೆಯಾಗಲಿಲ್ಲ. ಹೀಗೇ ಮೂರು ತಿಂಗಳು ಕಳೆದವು.
1919 ನೆಯ ಇಸವಿ ಏಪ್ರಿಲ್ ತಿಂಗಳಿನಲ್ಲಿ ದೆಹಲಿಯಲ್ಲಿ ಕೇಂದ್ರ ಶಾಸನ ಸಭೆ ಸೇರಿತು. ದೇಶದ ಹಿತಕ್ಕೆ ತೊಂದರೆ ಆಗಬಹುದಾದ ಎರಡು ಶಾಸನಗಳನ್ನು ಆ ಸಭೆಯಲ್ಲಿ ಇಂಗ್ಲೀಷ್ ಸರ್ಕಾರ ಇಡಲು ಬಯಸಿತು. ಶಾಸಕರು ಒಪ್ಪದೆ ಹೋದರೂ ವೈಸ್‌ರಾಯ್ ತನಗೆ ಇದ್ದ ವಿಶೇಷ ಅಧಿಕಾರವನ್ನು ಚಲಾಯಿಸಿ ಆ ಶಾಸನಗಳನ್ನು ಕಾನೂನು ಮಾಡಬಹುದಿತ್ತು. ಇದನ್ನು ಪ್ರತಿಭಟಿಸಿಬೇಕೆಂದು “ಹಿಂದುಸ್ಥಾನಿ ಸಮಾಜವಾದಿ ಪ್ರಜಾತಂತ್ರ ಸೇನೆ” ನಿರ್ಧರಿಸಿತು.
ಸಾಂಡರ್ಸ್‌ನ ಕೊಲೆಯಾದ ಮೇಲೆ ಕ್ರಾಂತಿಕಾರಿಗಳೇನೋ ತಪ್ಪಿಸಿಕೊಂಡರು. ಆದರೆ ಲಾಹೋರಿನ ಜನರು ಪೋಲೀಸರ ಹಿಂಸೆಗೆ ಒಳಗಾದರು. ಈ ಸಲ ಹೀಗೆ ಆಗುವದನ್ನು ತಪ್ಪಿಸಬೇಕು. ಇಂಗ್ಲೀಷರನ್ನು ವಿರೋಧಿಸಿ ಸೆರೆ ಸಿಕ್ಕಬೇಕು. ದೇಶದ ಎಲ್ಲಾ ಕಡೆಗಳಿಗೂ ಪ್ರಜಾತಂತ್ರ ಸೇನೆಯ ಉದ್ದೇಶಗಳು ಪ್ರಚಾರವಾಗುವಂತೆ ಮಾಡಬೇಕು. ಈ ಉದ್ದೇಶದಿಂದ ಭಗತ್‌ಸಿಂಗ್‌ಮತ್ತು ಬಟುಕೇಶ್ವರ ದತ್ತರನ್ನು ದೆಹಲಿಗೆ ಕಳುಹಿಸಲು ಸೇನೆ ನಿರ್ಧರಿಸಿತು. ಅವರಿಬ್ಬರೂ ಅಲ್ಲಿಗೆ ಹೋಗಿ ಶಾಸನ ಸಭೆಯಲ್ಲಿ ಬಾಂಬು ಎಸೆಯಬೇಕು ಮತ್ತು ಸೆರೆ ಸಿಕ್ಕಬೇಕು. ಇದಕ್ಕಾಗಿ, ಯಾರಿಗೂ ಹಾನಿ ಆಗದಂತಹ ಎರಡು ಬಾಂಬುಗಳನ್ನು ತಯಾರು ಮಾಡಿದರು.
1929 ನೆಯ ಇಸವಿ ಏಪ್ರಿಲ್ 8 ರಂದು ಇಬ್ಬರೂ ಬಾಂಬುಗಳನ್ನು ತೆಗೆದುಕೊಂಡು ದೆಹಲಿಯ ಶಾಸನಸಭೆ ಪ್ರವೇಶಿಸಿದರು. ಪ್ರೇಕ್ಷಕರ ಮಾಳಿಗೆಯಲ್ಲಿ ಕುಳಿತರು. ಸಭೆ ಆರಂಭವಾಯಿತು. ಸರ್ಕಾರದವರು ಶಾಸನಗಳನ್ನು ಮಂಡಿಸಿದರು. ಶಾಸಕರು ಅದಕ್ಕೆ ಒಪ್ಪಿಗೆ ಕೊಡಲಿಲ್ಲ. ಕೊನೆಗೆ ವೈಸ್‌ರಾಯಿಯೇ ತನ್ನ ವಿಶೇಷ ಅಧಿಕಾರ ಉಪಯೋಗಿಸಿದ ಎಂದು ಪ್ರಕಟಣೆ ಕೊಡಲು ಸರ್ಕಾರದ ಸದಸ್ಯನೊಬ್ಬ ಪ್ರಾರಂಭಿಸಿದ. ಒಡನೆಯೇ ಮೇಲಿನಿಂದ ಒಂದು ಬಾಂಬ್‌ಬಿದ್ದು ದೊಡ್ಡ ಶಬ್ದ ಮಾಡುತ್ತಾ ಸಿಡಿಯಿತು. ಕೂಡಲೇ ಇನ್ನೊಂದು ಬಾಂಬು ಬಿತ್ತು. ಪಿಸ್ತೂಲಿನ ಗುಂಡುಗಳ ಸದ್ದೂ ಕೇಳಿಸಿತು. ಸಭಾ ಭವನವೆಲ್ಲ ಹೊಗೆಯಿಂದ ತುಂಬಿ ಹೋಯಿತು. ಜನರೆಲ್ಲಾ ದಿಕ್ಕಾಪಾಲಾಗಿ ಓಡಿದರು. ಕೆಲವರು ಹೆದರಿ ಮೂರ್ಛೆಹೋದರು. ಇಷ್ಟರಲ್ಲಿ ಪ್ರೇಕ್ಷಕರ ಮಾಳಿಗೆಯಿಂದ ಕೆಂಪು ಬಣ್ಣದ ಕರಪತ್ರಗಳು ಬಿದ್ದವು. ಅವುಗಳಲ್ಲಿ ಪ್ರಜಾತಂತ್ರ ಸೇನೆಯ ವಿವರ ಮತ್ತು ಸರ್ಕಾರದ ಖಂಡನೆ ಇತ್ತು. “ಕ್ರಾಂತಿಯು ಚಿರಾಯುವಾಗಲಿ” ಎಂಬ ಘೋಷಣೆ ಭವನವನ್ನೆಲ್ಲ ತುಂಬಿತು.
ಪೋಲೀಸರು ಓಡಿಬಂದರು. ಮಹಡಿಯಲ್ಲಿ ಭಗತ್‌ಸಿಂಗ್ ಮತ್ತು ಬಟುಕೇಶ್ವರ ದತ್ ಇಬ್ಬರೇ ಇದ್ದರು. ಅವರ ಕೈಯಲ್ಲಿ ಪಿಸ್ತೂಲುಗಳು ಇದ್ದವು. ಪೋಲೀಸರು ಹೆದರಿ ಹಿಂದೆ ಸರಿದರು. ಆದರೆ ಅವರಿಬ್ಬರೂ ಪಿಸ್ತೂಲುಗಳನ್ನು ಕೆಳಕ್ಕೆ ಎಸೆದು ತಾವೇ ಬೇಡಿ ಹಾಕಿಕೊಂಡರು.
ಶಾಸನ ಸಭೆಯಲ್ಲಿ ಬಾಂಬ್ ಹಾಕಿದ್ದರಿಂದ ಯಾರೂ ಸಾಯಲಿಲ್ಲ. ನಾಲ್ಕು-ಐದು ಜನರಿಗೆ ಸಣ್ಣಪುಟ್ಟ ಗಾಯಗಳಾದವು, ಅಷ್ಟೆ. ಯಾರನ್ನೂ ಕೊಲ್ಲುವುದು ಕ್ರಾಂತಿಕಾರಿಗಳ ಉದ್ದೇಶ ಆಗಿರಲಿಲ್ಲ. ಈ ಘಟನೆ ಇಡೀ ಪ್ರಪಂಚದ ಗಮನವನ್ನೇ ಸೆಳೆಯಿತು. ಕ್ರಾಂತಿ ದಳದ ಹೆಸರು ಮನೆಮಾತಾಯಿತು. ಬ್ರಿಟಿಷ್ ಸರ್ಕಾರ ನಡುಗಿ ಹೋಯಿತು.
ಈ ಘಟನೆ ನಡೆದ ಮೇಲೆ ಸರ್ಕಾರಕ್ಕೆ ಲಾಹೋರಿನ ಬಾಂಬ್ ಕಾರ್ಖಾನೆಯ ಸುಳಿವು ಸಿಕ್ಕಿತು. ಏಳು ಸಾವಿರ ಬಾಂಬುಗಳನ್ನು ತಯಾರಿಸುವಷ್ಟು ಸಾಮಗ್ರಿ ಸರ್ಕಾರದ ವಶವಾಯಿತು. ಸಹರಾನ್‌ಪುರದ ಇನ್ನೊಂದು ದೊಡ್ಡ ಬಾಂಬ್‌ಕಾರ್ಖಾನೆಯೂ ಸರ್ಕಾರಕ್ಕೆ ಸಕ್ಕಿಬಿತ್ತು. ಸ್ವಲ್ಪ ದಿನಗಳಲ್ಲಿಯೇ ಕ್ರಾಂತಿದಳದ ಬಹಳ ಜನ ನಾಯಕರೆಲ್ಲ ಇಂಗ್ಲಿಷರ್ ಬಂಧನಕ್ಕೆ ತುತ್ತಾದರು. ಅವರ ಮೇಲೆ ಲಾಹೋರ ಒಳಸಂಚಿನ ಮೊಕದ್ದಮೆ ಹೂಡಿ ಸರ್ಕಾರ ಕೇಸ್ ಹಾಕಿತು. ಭಗತ್‌ಸಿಂಗ್‌ಮತ್ತು ಸಂಗಡಿಗರನ್ನು ಲಾಹೋರಿನ ಜೈಲಿನಲ್ಲಿಟ್ಟರು.
ನೇಣಿಗೆ ಕೊರಳೊಡ್ಡಿದರು
ಅಪರಾಧಿಗಳ ವಿಚಾರಣೆ ಆರಂಭವಾಯಿತು. ಆಗ ಜೈಲಿನಲ್ಲಿದ್ದ ರಾಜಕೀಯ ಕೈದಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಅವರಿಗೆ ಸರಿಯಾದ ಆಹಾರ ಕೊಡುತ್ತಿರಲಿಲ್ಲ. ಬೇರೆ ಯಾವ ವ್ಯವಸ್ಥೆಗಳೂ ಚೆನ್ನಾಗಿರಲಿಲ್ಲ ಇದರ ವಿರುದ್ಧ ಜೈಲಿನಲ್ಲಿಯೇ ಹೋರಾಡಬೇಕು ಎಂದು ಭಗತ್‌ಸಿಂಗ್ ಮತ್ತು ಸಂಗಡಿಗರು ನಿರ್ಧರಿಸಿದರು. ತನಗೇನೋ ಗಲ್ಲು ಶಿಕ್ಷೆ ಖಂಡಿತ ಎಂದು ಭಗತ್‌ಸಿಂಗ್‌ನಿಗೆ ಗೊತ್ತಿತ್ತು. ಆದರೆ ಉಳಿದ ರಾಜಕೀಯ ಕೈದಿಗಳಿಗಾದರೂ ಅನುಕೂಲವಾಗಲಿ ಎಂದು ಯೋಚಿಸಿದ. ಕ್ರಾಂತಿಕಾರಿಗಳೆಲ್ಲ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಇದು ಎರಡು ತಿಂಗಳು ನಡೆದ ಮೇಲೆ, ಅವರ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಸರ್ಕಾರ ಹೇಳಿತು. ಹಲವರು ಉಪಾಸ ನಿಲ್ಲಿಸಿದರು. ಆದರೆ ಜತೀನ್‌ದಾಸ್ ಮಾತ್ರ ಉಪವಾಸವನ್ನು ನಿಲ್ಲಿಸಲೇ ಇಲ್ಲ. ಯಾರು ಎಷ್ಟು ಹೇಳಿದರೂ ಕೇಳಲಿಲ್ಲ. ಉಪವಾಸದ 64 ನೆಯ ದಿನ ಆತ ದಿವಂಗತನಾದ. ಆದಾದ ನಂತರ ಮೂವತ್ತೆರಡು ದಿನ ಉಪವಾಸ ಮಾಡಿ ನಿಲ್ಲಿಸಿದ ಭಗತ್‌ಸಿಂಗ್.
ಪ್ರಪಂಚದ ಮೂಲೆಮೂಲೆಗಳ ಜನರ ಗಮನ ಸೆಳೆದ ಭಗತ್‌ಸಿಂಗ್ ಮತ್ತು ಸಂಗಡಿಗರ ವಿಚಾರಣೆ ನ್ಯಾಯಾಲಯದಲ್ಲಿ ಆರಂಭವಾಯಿತು. ಎಲ್ಲ ಕಡೆಯೂ ಪೋಲಿಸರ ಕಾವಲು. ಪ್ರೇಕ್ಷಕರನ್ನೂ ನ್ಯಾಯಾಲಯದ ಒಳಗೆ ಬಿಟ್ಟಿರಲಿಲ್ಲ. ಕೈದಿಗಳನ್ನು ವಿಚಾರಣೆಗೆ ಕರೆದುಕೊಂಡು ಬರುವಾಗ ಸರಪಳಿಗಳಿಂದ ಬಿಗಿದಿರುತ್ತಿದ್ದರು. ಅವರೋ, “ಕ್ರಾಂತಿ ಚಿರಾಯುವಾಗಲಿ” ಎಂದು ಕೂಗಿಕೊಂಡೇ ಒಳಗೆ ಬರುತ್ತಿದ್ದರು.
ಭಗತ್ ಸಿಂಗ್‌ಮತ್ತು ಬಟುಕೇಶ್ವರ ದತ್ ಒಂದು ಹೇಳಿಕೆಯನ್ನು ಕೊಟ್ಟರು. ಅದರಲ್ಲಿ “ಕಿವುಡರಿಗೆ ಕೇಳಿಸಬೇಕಾದರೆ ದೊಡ್ಡ ಸದ್ದನ್ನೇ ಮಾಡಬೇಕಾಗುತ್ತದೆ. ನಾವು ಯಾರನ್ನೂ ಕೊಲ್ಲಬೇಕೆಂದು ಬಾಂಬ್‌ಹಾಕಲಿಲ್ಲ. ಬ್ರಿಟಿಷ್ ಸರ್ಕಾರದ ಮೇಲೆ ಬಾಂಬ್ ಹಾಕಿದ್ದೇವೆ. ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿ ದೇಶಕ್ಕೆ ಸ್ವಾತಂತ್ರ್ಯವನ್ನು ಕೊಡಬೇಕು” ಎಂದು ತಿಳಿಸಿದರು. ತಮ್ಮ ಸಂಘದ ಉದ್ದೇಶಗಳನ್ನೂ ಹೇಳಿದರು. ಪತ್ರಿಕೆಗಳ ವರದಿಗಳಿಂದ ಅವರ ಗುರಿ ಮತ್ತು ಕಾರ್ಯಗಳು ಪ್ರಪಂಚಕ್ಕೆಲ್ಲ ತಿಳಿದವು.
ಕೊನೆಗೂ ತೀರ್ಪೂ ಹೊರಬಿತ್ತು. ಭಗತ್‌ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಗಲ್ಲಿನ ಶಿಕ್ಷೆ. ಉಳಿದ ಕೆಲವರಿಗೆ ಜೀವಾವಧಿ ಜೈಲು ಶಿಕ್ಷೆ; ಮತ್ತೆ ಕೆಲವರಿಗೆ ಐದು, ಏಳು, ಹತ್ತು ವರ್ಷಗಳ ಜೈಲುವಾಸ.
ಭಗತ್ ಸಿಂಗ್‌ನಿಗೆ ಮರಣದಂಡನೆ ವಿಧಿಸಿದ್ದು ತಿಳಿದು ದೇಶದ ಜನರೆಲ್ಲಾ ಹುಚ್ಚೆದ್ದರು. ಶಿಕ್ಷೆಯನ್ನು ಬದಲಾಯಿಸಬೇಕೆಂದು ಸಾವಿರಾರು ಮನವಿಗಳು ಬಂದವು. ಅದಕ್ಕಾಗಿ ಎಷ್ಟೋ ರಾಜಕಾರಣಿಗಳೂ ಪ್ರಯತ್ನಸಿದರು. ಯಾವುದರಿಂದಲೂ ಅವರ ಶಿಕ್ಷೆ ಬದಲಾಗಲಿಲ್ಲ. 1931 ನೆಯ ಇಸವಿ ಮಾರ್ಚ್ 24 ರಂದು ಗಲ್ಲಿಗೇರಿಸಬೇಕೆಂದು ನಿಶ್ಚಯವಾಯಿತು. ಕೈದಿಗಳನ್ನು ನೋಡಲು ಮನೆಯವರನ್ನೂ ಬಿಡಲಿಲ್ಲ. ಅಲ್ಲದೆ ಒಂದು ದಿನ ಮೊದಲೇ ಅಂದರೆ ಮಾರ್ಚ್ 23 ರಂದು ಸಂಜೆಯೇ ಭಗತ್‌ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು ಗಲ್ಲಿಗೇರಿಸಿದರು.
ಗಲ್ಲಿಗೇರುವ ದಿನ ಅವರು ಸ್ವಲ್ಪವೂ ಭೀತಿ ಇರಲಿಲ್ಲ. ಸಂತೋಷವಾಗಿಯೇ ಇದ್ದರು. ನಾನು ಮೊದಲು ತಾನು ಮೊದಲು ಎಂದು ಗಲ್ಲುಗಂಬದ ಬಳಿಗೆ ಬಂದರು. ಮೊದಲು ಸುಖದೇವ್, ಆಮೇಲೆ ಭಗತ್‌ಸಿಂಗ್, ಕೊನೆಗೆ ರಾಜಗುರು ಗಲ್ಲಿಗೇರಬೇಕೆಂದು ಗೊತ್ತಾಯಿತು. ಮೂವರೂ ವೇದಿಕೆಯನ್ನು ಹತ್ತಿದರು ನೇಣಿನ ಹಗ್ಗಕ್ಕೆ ಮುತ್ತು ಕೊಟ್ಟು ಕೊರಳಿಗೆ ಹಾಕಿಕೊಂಡರು. ಭಾರತ ಮಾತೆಯ ಹೆಸರನ್ನು ಘೋಷಿಸುತ್ತಾ ಪ್ರಾಣಬಿಟ್ಟರು. ಮೂವರು ಸ್ವಾತಂತ್ರ್ಯ ವೀರರ ಕೊನೆ ಹೀಗಾಯಿತು.
ಸೆರೆಮನೆಯಲ್ಲಿ ಆ ದಿನ ಒಬ್ಬರೂ ಊಟ ಮಾಡಲಿಲ್ಲ. ಎಲ್ಲರೂ ಅಳುತ್ತಾ ಕುಳಿತಿದ್ದರು. ಮಾರನೆಯ ದಿನ ಭೇಟಿಗೆಂದು ಬಂಧುಗಳು ಬಂದರು. ಆದರೆ ಒಂದು ದಿನ ಮುಂಚಿತವಾಗಿ ಹಿಂದಿನ ರಾತ್ರಿಯೇ ಎಲ್ಲಾ ಮುಗಿದು ಹೋಗಿತ್ತು. ಹುತಾತ್ಮರ ಶವಗಳನ್ನು ಗುಟ್ಟಾಗಿ ಸಟ್ಲೆಜ್ ನದಿಯ ದಂಡೆಯ ಮೇಲೆ ಸುಟ್ಟುಬಿಟ್ಟಿದ್ರು. ಸುಳಿವು ತಿಳಿದ ಸಾವಿರಾರು ಜನ ಅಲ್ಲಿಗೆ ಓಡಿಹೋದರೆ ಬರೀ ಬೂದಿ ಉಳಿದಿತ್ತು. ಅದನ್ನೇ ಹಿಡಿಹಿಡಿಯಾಗಿ ಕೈಗೆತ್ತಿಕೊಂಡು ಬಿಕ್ಕಿಬಿಕ್ಕಿ ಅತ್ತರು.
ಹುತಾತ್ಮ ಸರ್ದಾರ್ ಭಗತ್‌ಸಿಂಗ್‌ನ ಮೇಲೆ ಜನ ನೂರಾರು ವೀರಗೀತೆಗಳನ್ನು ಕಟ್ಟಿ ಹಾಡಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣವನ್ನೇ ಅರ್ಪಿಸಿದ ಆ ವೀರನ ಗುಣಗಾನ ಮಾಡಿದರು. ಇಂದಿಗೂ ಭಗತ್‌ಸಿಂಗ್‌ನ ವೀರ ಚೇತನ ನಾಡಿನ ತರುಣರಿಗೆ ಸ್ಫೂರ್ತಿಯ ಸೆಲೆ ಆಗಿದೆ. ಅವನ ಧೈರ್ಯ, ಸಾಹಸ, ದೇಶಭಕ್ತಿಗಳು ಮಾರ್ಗದರ್ಶಿ ಆಗಿವೆ.
ಕೃಪೆ : ಕಣಜ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.