ನವದೆಹಲಿ: ಭಾರತದ ಜನಸಂಖ್ಯೆಯನ್ನು ಅಳೆಯಲು 2021ರಲ್ಲಿ ನಡೆಯಲಿರುವ ಜನಗಣತಿಯು ‘ಡಿಜಿಟಲ್ ಜನಗಣತಿಯಾಗಲಿದೆ, ಇದರಲ್ಲಿ ದತ್ತಾಂಶಗಳನ್ನು ಸಂಗ್ರಹಿಸಲು ಮೊಬೈಲ್ ಆ್ಯಪ್ ಅನ್ನು ಬಳಕೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. ಅಲ್ಲದೇ, ಪಾಸ್ಪೋರ್ಟ್, ಆಧಾರ್ ಮತ್ತು ವೋಟರ್ ಐಡಿಯನ್ನು ಒಳಗೊಂಡ ಏಕ ಬಹು ಉದ್ದೇಶ ಐಡಿ ಕಾರ್ಡ್ ಅನ್ನು ಹೊಂದುವ ಯೋಚನೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ.
ಭಾರತದಲ್ಲಿ ಕೊನೆಯ ಬಾರಿಗೆ 2011ರಲ್ಲಿ ಜನಗಣತಿಯನ್ನು ನಡೆಸಲಾಗಿದೆ. ಆ ವೇಳೆ ಭಾರತದ ಜನಸಂಖ್ಯೆ 121 ಕೋಟಿಯಾಗಿತ್ತು. 2021ರ ಜನಗಣತಿಯು ವಿಶ್ವದ ಅತೀದೊಡ್ಡ ಜನಗಣತಿಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
“ಮೊಬೈಲ್ ಅಪ್ಲಿಕೇಶನ್ ಅನ್ನು ಜನಗಣತಿ 2021 ರಲ್ಲಿ ಬಳಸಲಾಗುವುದು. ಇದು ಕಾಗದದ ಜನಗಣತಿಯಿಂದ ಡಿಜಿಟಲ್ ಜನಗಣತಿಗೆ ಪರಿವರ್ತನೆಯಾಗಲಿದೆ” ಎಂದು ಶಾ ದೆಹಲಿಯಲ್ಲಿ ಜನಗಣತಿ ಪ್ರಾಧಿಕಾರದ ಕಚೇರಿಯಾದ ಜನ್ಗಣನ ಭವನಕ್ಕೆ ಅಡಿಪಾಯ ಹಾಕಿದ ವೇಳೆ ತಿಳಿಸಿದ್ದಾರೆ. “ನಾವು ಆಧಾರ್, ಪಾಸ್ಪೋರ್ಟ್, ಬ್ಯಾಂಕ್ ಖಾತೆ, ಚಾಲನಾ ಪರವಾನಗಿ, ಮತದಾರರ ಕಾರ್ಡ್ನಂತಹ ಎಲ್ಲಾ ಉಪಯುಕ್ತತೆಗಳಿಗೆ ಕೇವಲ ಒಂದು ಕಾರ್ಡ್ ಹೊಂದುವುದು ಇನ್ನು ಮುಂದೆ ಸಾಧ್ಯವಾಗಬಹುದು” ಎಂದು ಅವರು ಹೇಳಿದ್ದಾರೆ.
ಒಬ್ಬ ವ್ಯಕ್ತಿಯು ಸತ್ತ ಮಾಹಿತಿಯನ್ನು ಜನಸಂಖ್ಯೆಯ ದತ್ತಾಂಶದಲ್ಲಿ ಸ್ವಯಂಚಾಲಿತವಾಗಿ ನವೀಕರಿಸುವ ವ್ಯವಸ್ಥೆಯೂ ಇರಬೇಕು ಎಂದು ಗೃಹ ಸಚಿವರು ಪ್ರತಿಪಾದಿಸಿದ್ದಾರೆ.
ದತ್ತಾಂಶವನ್ನು ಸಂಗ್ರಹಿಸಲು ಆಂಡ್ರಾಯ್ಡ್ ಫೋನ್ಗಳಲ್ಲಿ ಅಪ್ಲಿಕೇಶನ್ ಅನ್ನು ದೇಶೀವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
2021 ರ ಜನಗಣತಿಯಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದ ಶಾ, ಇದು ದೇಶದಲ್ಲಿ ಬದಲಾವಣೆಯನ್ನು ತರಲಿದೆ ಎಂದಿದ್ದಾರೆ. ಡಿಜಿಟಲ್ ಜನಗಣತಿಯಲ್ಲಿ ಅನೇಕ ಪ್ರಯೋಜನಗಳಿವೆ. ಒಂದು ಮಗು ಜನ್ಮ ಪಡೆದು 18 ವರ್ಷಕ್ಕೆ ಕಾಲಿಟ್ಟಾಗ ಅದಕ್ಕೆ ವೋಟರ್ ಐಡಿಗೆ ಅರ್ಜಿ ಹಾಕದೆಯೇ ಮತದಾನ ಮಾಡುವಂತಹ ಹಕ್ಕು ಬರಬೇಕು ಎಂದರು. ಇದರಿಂದ ಕಾನೂನು ಸುವ್ಯವಸ್ಥೆ, ಲಿಂಗ ಸಮಾನತೆಯಂತಹ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಿದೆ ಎಂದೂ ಹೇಳಿದ್ದಾರೆ.
ದೇಶದ ಮೊದಲ ಡಿಜಿಟಲ್ ಜನಗಣತಿಗಾಗಿ 12,000 ಕೋಟಿ ಖರ್ಚು ಮಾಡಲಾಗುತ್ತಿದೆ, ಈ ಜನಗಣತಿ ದೇಶದ ಹದಿನಾರನೇ ಜನಗಣತಿ ಮತ್ತು ಸ್ವಾತಂತ್ರ್ಯದ ನಂತರ ಎಂಟನೇಯದು ಎಂದಿದ್ದಾರೆ.
2021ರ ಆಗಸ್ಟ್ 12ರಿಂದ ಜನಗಣತಿ ಆರಂಭವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.