ಪ್ಲಾಸ್ಟಿಕ್ಗೆ ಪರಿಸರ ಸ್ನೇಹಿ ಪರ್ಯಾಯವನ್ನು ಕಂಡುಕೊಳ್ಳುವ ಮೂಲಕ ಒರಿಸ್ಸಾದ ಕಿಯೋಂಜರ್ ಜಿಲ್ಲಾಡಳಿತವು ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಪ್ಲಾಸ್ಟಿಕ್ ಬಟ್ಟಲುಗಳು, ಬಾಟಲಿಗಳು ಮತ್ತು ಕಟ್ಲರಿಗಳನ್ನು ಸಾಲ್ ಎಲೆಗಳಿಂದ ಮಾಡಿದ ಸುಸ್ಥಿರ ಪರ್ಯಾಯಗಳೊಂದಿಗೆ ಬದಲಿಸುವ ಮೂಲಕ ಇದು ಅದ್ಭುತವನ್ನೇ ಸೃಷ್ಟಿಸಿದೆ. ಈ ಪ್ರದೇಶದಲ್ಲಿ ಹೇರಳವಾಗಿರುವ ಅರಣ್ಯ ಸಂಪನ್ಮೂಲಗಳಿಂದ ಸಾಲ್ ಎಲೆಯನ್ನು ಪಡೆದುಕೊಂಡು ಅವುಗಳನ್ನು ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯವನ್ನಾಗಿ ಬಳಕೆ ಮಾಡುತ್ತಿದೆ. ಇದಲ್ಲದೆ, ಸ್ಥಳೀಯ ಬುಡಕಟ್ಟು ಮಹಿಳೆಯರನ್ನು ಸಾಲ್ ಎಲೆಗಳಿಂದ ಪ್ಲೇಟ್ಗಳನ್ನು ತಯಾರಿಸುವ ಕಾರ್ಯಕ್ಕೆ ಹಚ್ಚಲಾಗಿದೆ, ಇದು ಅವರಿಗೆ ಹೊಸ ಆದಾಯದ ಮೂಲವನ್ನು ಕಲ್ಪಿಸಿಕೊಟ್ಟಿದೆ.
ಕಿಯೋಂಜರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶಿಶ್ ಠಾಕ್ರೆ ಅವರು ಈ ಕಾರ್ಯದ ರುವಾರಿಯಾಗಿದ್ದು, ಆಡಳಿತಾತ್ಮಕ ಮಟ್ಟದಲ್ಲಿ ಪರಿಸರ ಸ್ನೇಹಿ ವ್ಯವಸ್ಥೆಯನ್ನು ರೂಪಿಸಲು ಇದು ಸಹಕಾರಿಯಾಗಿದೆ ಎಂಬ ದೃಢ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
“ಪ್ಲಾಸ್ಟಿಕ್ಗೆ ಪರ್ಯಾಯ ಕ್ರಮವನ್ನು ಜಾರಿಗೆ ತರಲು ನಾವು ಹಲವು ಸಮಯಗಳಿಂದ ಪ್ರಯತ್ನಿಸುತ್ತಿದ್ದೇವೆ. ಕಿಯೋಂಜರ್ ಸಾಲ್ ಮರಗಳ ಕಾಡುಗಳಿಗೆ ಹೆಸರುವಾಸಿಯಾಗಿದೆ. ಸಾಲ್ ಎಲೆಯ ಉತ್ಪನ್ನಗಳು ಇಲ್ಲಿನ ಒಂದು ವಿಶೇಷತೆ. ಶುದ್ಧ ಮತ್ತು ಹಸಿರು ಪರ್ಯಾಯಕ್ಕಾಗಿ ನಾವು ಪ್ಲಾಸ್ಟಿಕ್ ಅನ್ನು ನಿರ್ಮೂಲನೆಗೊಳಿಸಬೇಕಾದ ಘಟ್ಟದಲ್ಲಿ ಇದ್ದೇವೆ, ಈ ಸಂದರ್ಭದಲ್ಲಿ ಸಾಲ್ ಎಲೆಗಳು ನಮಗೆ ಉತ್ತಮ ಪರ್ಯಾಯವಾಗಬಲ್ಲದು” ಎಂದಿದ್ದಾರೆ.
ಪರಿಸರ ಸ್ನೇಹಿ ಸಾಲ್ ಎಲೆಗಳ ಪ್ಲೇಟ್ಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ತಮ್ಮ ಕಛೇರಿಯಿಂದಲೇ ಈ ಕಾರ್ಯಕ್ಕೆ ಆರಂಭವನ್ನು ನೀಡಿದ್ದಾರೆ.
ಸುಮಾರು ಒಂದು ದಶಕದ ಹಿಂದೆ, ಒರಿಸ್ಸಾದಲ್ಲಿ ವಿವಾಹದ ಔತಣಕೂಟಗಳು ಸಾಲ್ ಎಲೆಗಳಲ್ಲಿ ಬಡಿಸಲಾದ ರುಚಿಕರವಾದ ಊಟವಿಲ್ಲದೆ ಅಪೂರ್ಣವಾಗಿರುತ್ತಿದ್ದವು. ಸುಂದರವಾದ ಸಾಲ್ ಎಲೆಗಳ ಬಟ್ಟಲುಗಳ ಮೂಲಕ ಊಟವನ್ನು ಅತ್ಯಂತ ಸೊಗಸಾಗಿ ಬಡಿಸಲಾಗುತ್ತಿತ್ತು. ಇದನ್ನು ಸ್ಥಳೀಯವಾಗಿ ‘ಖಾಲಿ’ ಎಂದು ಕರೆಯಲಾಗುತ್ತದೆ. ಖಾಲಿಗಳಲ್ಲಿ ಬಡಿಸಿದ ಊಟಗಳ ಜೊತೆಗೆ ಮಣ್ಣಿನ ಲೋಟದಲ್ಲಿ ನೀರುಗಳನ್ನು ಕೊಡಲಾಗುತ್ತಿತ್ತು. ಇದು ಆರೋಗ್ಯಪೂರ್ಣವೂ ಆಗಿತ್ತು. ಒಣಗಿದ ಅಥವಾ ತಾಜಾ ಹಸಿರು ಸಾಲ್ ಎಲೆಗಳ ನೈಸರ್ಗಿಕ ಸುವಾಸನೆಯು ಅದರಲ್ಲಿ ಬಡಿಸುವ ಆಹಾರದ ರುಚಿಯನ್ನು ಹೆಚ್ಚಿಸುತ್ತವೆ.
ಆದರೆ ಕ್ರಮೇಣ ಎಲ್ಲಾ ಸಮಾರಂಭಗಳನ್ನೂ ಪ್ಲಾಸ್ಟಿಕ್ ಎಂಬ ಮಹಾಮಾರಿ ನುಂಗಿ ಬಿಟ್ಟಿತು. ಲೋಟ, ಬಟ್ಟಲು ಹೀಗೆ ಎಲ್ಲವೂ ಪ್ಲಾಸ್ಟಿಕ್ಮಯವಾದವು. ಏಕ-ಬಳಕೆಯ ಪ್ಲಾಸ್ಟಿಕ್ ಕಟ್ಲರಿಗಳ ಆಗಮನದೊಂದಿಗೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಕಡಿಮೆ ದರ ಎಂಬ ಕಾರಣಕ್ಕೆ ಎಲ್ಲರೂ ಇದನ್ನೇ ನೆಚ್ಚಿಕೊಳ್ಳಲು ಆರಂಭಿಸಿದರು. ನಗರಗಳಿಂದ ಹಿಡಿದು ಗ್ರಾಮೀಣ ಪ್ರದೇಶಗಳವರೆಗೂ ಪ್ಲಾಸ್ಟಿಕ್ ಕ್ರಾಂತಿ ಆಯಿತು. ಇದರಿಂದ ಪರಿಸರ ಮಾಲಿನ್ಯ ಹೆಚ್ಚಿತು. ಎಲ್ಲೆಂದರೆ ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿ ತುಳುಕಾಡಲು ಪ್ರಾರಂಭವಾಯಿತು.
ಪ್ಲಾಸ್ಟಿಕ್ ಆಗಮನದಿಂದ ಹೆಚ್ಚಿನ ನಷ್ಟವಾಗಿದ್ದು ಕಿಯೋಂಜರ್ ಬುಡಕಟ್ಟು ಜನರಿಗೆ. ಸಾಕಷ್ಟು ಸಾಲ್ ಮರಗಳನ್ನು ಹೊಂದಿದ್ದ ಪ್ರದೇಶದ ಜನರು ಇದರಿಂದ ಬಟ್ಟಲು, ಪ್ಲೇಟ್, ಲೋಟ ಇತ್ಯಾದಿಗಳನ್ನು ತಯಾರಿಸುತ್ತಲೇ ಬದುಕು ಸಾಗಿಸುತ್ತಿದ್ದರು. ಪ್ಲಾಸ್ಟಿಕ್ ಆಗಮನದಿಂದ ಇವರಿಗೆ ಉದ್ಯೋಗವೇ ಇಲ್ಲದಂತಾಯಿತು, ಪೂರ್ವಜರ ಉದ್ಯೋಗವನ್ನು ಇವರು ತೊರೆಯಬೇಕಾಗಿ ಬಂತು.
ಆರೀಗ ಕಿಯೋಂಜರ್ ಜಿಲ್ಲಾಡಳಿತ ಸಾಲ್ ಎಲೆಗಳ ಉತ್ಪನ್ನಗಳನ್ನು ಮತ್ತೆ ಮುನ್ನಲೆಗೆ ತಂದಿದೆ. ಅದರಿಂದ ಮಾಡಿದ ಪ್ಲೇಟು, ಲೋಟ, ಕಪ್ಗಳನ್ನು ಬಳಕೆ ಮಾಡುತ್ತಿದೆ ಮತ್ತು ಇತರರಿಗೆ ಬಳಕೆ ಮಾಡಲು ಉತ್ತೇಜಿಸುತ್ತಿದೆ. ಜಿಲ್ಲಾಡಳಿತದ ಆವರಣದಲ್ಲಿ ಪ್ಲಾಸ್ಟಿಕ್ ಬಾಟಲಿಯನ್ನೂ ನಿಷೇಧ ಮಾಡಲಾಗಿದೆ. ಮನೆಯಿಂದಲೇ ನೀರು ತರುವಂತೆ ಸೂಚನೆ ನೀಡಲಾಗಿದೆ.
ಕಿಯೋಂಜರ್ನ ತೆಲ್ಕೊಯ್, ಬನ್ಸ್ಪಾಲ್ ಮತ್ತು ಹರಿಚಂದನ್ಪುರ ಗ್ರಾಮಗಳಲ್ಲಿ ಹಲವಾರು ಸ್ವ-ಸಹಾಯ ಗುಂಪುಗಳಿಗೆ ಪ್ಲೇಟ್ ಮತ್ತು ಬಟ್ಟಲುಗಳನ್ನು ಸಾಮೂಹಿಕವಾಗಿ ತಯಾರಿಸುವ ಕಾರ್ಯವನ್ನು ವಹಿಸಲಾಗಿದೆ. “500 ಕ್ಕೂ ಹೆಚ್ಚು ಮಹಿಳೆಯರು ಯೋಜನೆಯಲ್ಲಿ ಭಾಗಿಯಾಗುತ್ತಿದ್ದಾರೆ ಮತ್ತು ಮಾಸಿಕ ಆದಾಯವನ್ನು ಗಳಿಸಲು ಆರಂಭಿಸಿದ್ದಾರೆ” ಎಂದು ಯೋಜನೆಯ ಉಸ್ತುವಾರಿ ನೋಡಲ್ ಅಧಿಕಾರಿ ಸ್ವಪನ್ ಗೋಸ್ವಾಮಿ ಹೇಳುತ್ತಾರೆ.
ಪರಿಸರ ಸ್ನೇಹಿ ವಿಧಾನದ ಮೂಲಕ ಪ್ಲಾಸ್ಟಿಕ್ ಹೆಮ್ಮಾರಿಯನ್ನು ನಿರ್ಮೂಲನೆ ಮಾಡುತ್ತಿರುವ, ಬುಡಕಟ್ಟು ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ನೀಡುತ್ತಿರುವ ಕಿಯೋಂಜರ್ ಜಿಲ್ಲಾಡಳಿತದ ಕ್ರಮ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.