ನವದೆಹಲಿ: ಮಂಗೋಲಿಯಾದ ಉಲಾನ್ಬತಾರ್ನ ಗಂಡನ್ ಧಾರ್ಮಿಕ್ ಕೇಂದ್ರದಲ್ಲಿ ನಿರ್ಮಾಣವಾಗಿರುವ ಭಗವಾನ್ ಬುದ್ಧನ ಪ್ರತಿಮೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಮಂಗೋಲಿಯಾ ಅಧ್ಯಕ್ಷ ಖಲ್ಟ್ಮಾಗಿನ್ ಬಟುಲ್ಗಾ ಅವರು ನವದೆಹಲಿಯಿಂದಲೇ ಇಂದು ಅನಾವರಣಗೊಳಿಸಲಿದ್ದಾರೆ.
ಐದು ದಿನಗಳ ಭಾರತ ಪ್ರವಾಸಕ್ಕಾಗಿ ನಿನ್ನೆ ನವದೆಹಲಿಗೆ ಆಗಮಿಸಿದ ಮಂಗೋಲಿಯನ್ ಅಧ್ಯಕ್ಷರು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರನ್ನೂ ಭೇಟಿ ಮಾಡಲಿದ್ದಾರೆ. ಅವರೊಂದಿಗೆ ಉನ್ನತ ಮಟ್ಟದ ಅಧಿಕಾರಿ ಮತ್ತು ವ್ಯಾಪಾರ ನಿಯೋಗ ಕೂಡ ಭಾರತಕ್ಕೆ ಆಗಮಿಸಿದೆ.
ಬಟುಲ್ಗಾ ಮತ್ತು ಕೋವಿಂದ್ ನಡುವಿನ ಸಭೆಯ ವೇಳೆ ಭಾರತ ಮತ್ತು ಮಂಗೋಲಿಯಾ ವಿವಿಧ ಕ್ಷೇತ್ರಗಳಲ್ಲಿ ಒಪ್ಪಂದಗಳಿಗೆ ಸಹಿ ಮತ್ತು ವಿನಿಮಯ ಮಾಡಿಕೊಳ್ಳುವ ನಿರೀಕ್ಷೆಯಿದೆ ಎಂದು ವರದಿಗಳು ಹೇಳುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ ಮಂಗೋಲಿಯನ್ ಅಧ್ಯಕ್ಷರೊಬ್ಬರು ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಮಂಗೋಲಿಯನ್ ಅಧ್ಯಕ್ಷರು ಮತ್ತು ಭಾರತೀಯ ನಾಯಕತ್ವದ ನಡುವಿನ ಸಭೆಗಳಲ್ಲಿ, ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಆಳವಾದ ಚರ್ಚೆಗಳು ನಡೆಯಲಿವೆ.
ಮೂಲಸೌಕರ್ಯ, ಇಂಧನ, ವಿಪತ್ತು ನಿರ್ವಹಣೆ, ರಕ್ಷಣಾ, ಭದ್ರತೆ, ಸಂಸ್ಕೃತಿ ಮತ್ತು ಸಾಮರ್ಥ್ಯ ವೃದ್ಧಿ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಹಕಾರವನ್ನೂ ಅವರು ಪರಿಶೀಲಿಸಲಿದ್ದಾರೆ. ಭಾರತ ಮತ್ತು ಮಂಗೋಲಿಯಾವು 2015 ರಲ್ಲಿ ಪ್ರಧಾನಿ ಮೋದಿಯವರ ಮಂಗೋಲಿಯಾ ಭೇಟಿಯ ಸಂದರ್ಭದಲ್ಲಿ ಕಾರ್ಯತಂತ್ರದ ಸಹಭಾಗಿತ್ವವನ್ನು ಸ್ಥಾಪಿಸಿತ್ತು. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಆದರ್ಶಗಳನ್ನು ಆಧರಿಸಿದ ಮತ್ತು ಪರಸ್ಪರ ಹಂಚಿದ ಬೌದ್ಧ ಪರಂಪರೆಯ ಬಲವಾದ ಅಡಿಪಾಯವನ್ನು ಆಧರಿಸಿದ ದೇಶಗಳ ನಡುವಿನ ಸಹಭಾಗಿತ್ವವು ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ಪ್ರಗತಿಯನ್ನು ಕಂಡಿದೆ.
ಪ್ರಸ್ತುತ ಭಾರತ ಭೇಟಿಯಲ್ಲಿರುವ ಮಂಗೋಲಿಯನ್ ಅಧ್ಯಕ್ಷರು ಆಗ್ರಾಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲಿ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕಕ್ಕೂ ಆಗಮಿಸಲಿದ್ದಾರೆ ಮತ್ತು ರಾಜ್ಯಪಾಲರೊಂದಿಗೆ ಸಭೆ ನಡೆಸಲಿದ್ದಾರೆ. ಅದಕ್ಕೂ ಮೊದಲು ಬೋಧ ಗಯಾಗೆ ಭೇಟಿ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.