ನನ್ನ ಭೂಮಿ ನನ್ನ ಕೇಳುತ್ತಿದೆ
ಯಾವಾಗ ನನ್ನ ಋಣ ತೀರಿಸುವೆ?
ನನ್ನ ಆಗಸ ನನ್ನ ಕೇಳುತ್ತಿದೆ
ಯಾವಾಗ ನಿನ್ನ ಜವಾಬ್ದಾರಿ ನಿಭಾಯಿಸುವೆ?
ಭಾರತಾಂಬೆಗೆ ನನ್ನ ಪ್ರತಿಜ್ಞೆಯಿದು,
ನಿನ್ನ ತಲೆ ತಗ್ಗಿಸಲು ಬಿಡುವುದಿಲ್ಲ
ಈ ಮಣ್ಣಿನ ಮೇಲಾಣೆ
ಈ ದೇಶ ನಾಶವಾಗಲು ಬಿಡುವುದಿಲ್ಲ
ಪ್ರಧಾನಿ ನರೇಂದ್ರ ಮೋದಿಯವರು ಒಮ್ಮೆ ತಮ್ಮ ಪ್ರಚಾರದ ಸಂದರ್ಭದಲ್ಲಿ ಈ ಕವಿತೆ ಹೇಳಿದ್ದರು. ಎಷ್ಟು ಅರ್ಥಪೂರ್ಣ ಕವನ. ಒಬ್ಬ ದೇಶಪ್ರೇಮಿ ತನ್ನ ತಾಯಿ ಭಾರತಿಗೆ ಇಷ್ಟು ಜವಾಬ್ದಾರಿಯುತನಾಗಿ ಇದ್ದರೆ ಅಷ್ಟೇ ಸಾಕು ಅಲ್ಲವೇ? ದೇಶದ ಸೈನಿಕರ ಶವಗಳನ್ನು ಕತ್ತರಿಸಿ ಕಳಿಸಿದಾಗ ಹೋಗಿ ಅಮೇರಿಕಾದ, ವಿಶ್ವಸಂಸ್ಥೆಯ ಬಾಗಿಲು ತಟ್ಟಿ ಬಂದ ಪ್ರಧಾನಿಯು ನಮ್ಮಲ್ಲಿದ್ದರು. ಜಿಡಿಪಿ ಶೇಕಡಾ 5ಕ್ಕೆ ಇಳಿದಾಗ ಹಣಕಾಸು ಸಚಿವರಾಗಿ, ವಿಶ್ವ ಮಟ್ಟದಲ್ಲಿ ಹಣಕಾಸು ತಜ್ಞರೇ ಆಗಿದ್ದ ಪ್ರಧಾನಮಂತ್ರಿ ಮತ್ತು ಅವರ ಸಚಿವಾಲಯ ಐದು ಪರ್ಸೆಂಟ್ ಎಂಬುದು ಒಳ್ಳೆಯ ಸ್ಥಿತಿ ಎಂದಿದ್ದರು. ಅದು ಬಿಡಿ, ಅದ್ಯಾವ ಗಳಿಗೆಯಲ್ಲಿ ತತ್ವಜ್ಞಾನಿ ನಾಸ್ಟ್ರೋಡಮಸ್ ಆ ಮಾತುಗಳನ್ನು ಹೇಳಿದರೋ ಗೊತ್ತಿಲ್ಲ, ಅವರ ಮಾತುಗಳು ಅಕ್ಷರಶಃ ಸತ್ಯವಾದವು “ಇಪ್ಪತ್ತೊಂದನೆಯ ಶತಮಾನದಲ್ಲಿ ಭಾರತವನ್ನು ಪರ್ಯಾಯ ದ್ವೀಪದಂತಹ ಪ್ರದೇಶದಿಂದ ಬಂದ ರಾಜ ಆಗುತ್ತಾನೆ. ಆಗ ಭಾರತ ವಿಶ್ವ ಮಟ್ಟದಲ್ಲಿ ಕಂಗೊಳಿಸಲಿದೆ” ಎಂದಿದ್ದರು. ಆ ಮಾತುಗಳಿಗೆ ಮನಸ್ಸು ಕೊಟ್ಟರೇನೋ ಎಂಬಂತೆ ಪ್ಯಾರೇ ದೇಶವಾಸಿಗಳು ತಮ್ಮ ದೇಶವನ್ನು ಒಂದಲ್ಲ ಎರಡು ಬಾರಿ ಕೊಟ್ಟರು. ಆ ಕ್ಷಣದಿಂದ ಹಿಡಿದು ಇಲ್ಲಿಯ ತನಕ ಆ ರಾಜ ಭಾರತ ತಲೆ ತಗ್ಗಿಸಲು ಅವಕಾಶ ನೀಡಲೇ ಇಲ್ಲ. ಪಾಕಿಸ್ತಾನವು ಇಲ್ಲ ನಮಗೆ ಭಾರತದ ದಾಳಿಯ ಭಯ ಇದೆ ಎಂಬಲ್ಲಿಂದ ಹಿಡಿದು, ಹಳ್ಳಿಯ ಅಜ್ಜಿ ತನ್ನ ಕುರಿ, ಕರು ಮಾರಿ ಶೌಚಾಲಯ ಕಟ್ಟುವ ತನಕ, ವಿಶ್ವ ಸ್ನೇಹಿತರ ದಿನದಂದು ಇಸ್ರೇಲ್ ದೇಶವು ಭಾರತ ನನ್ನ ಜೀವದ ಗೆಳೆಯ ಎನ್ನುವಲ್ಲಿಂದ ಹಿಡಿದು, ಶ್ರೀಲಂಕಾ, ಬಾಂಗ್ಲಾ, ಅಮೇರಿಕ ಅಲ್ಲದೆ ಅರಬ್ ದೇಶಗಳು ಸಹ ಕಾಶ್ಮೀರ ಭಾರತದ ಅಂತರಿಕ ವಿಷಯ ಎನ್ನುವ ತನಕ ಎಲ್ಲವನ್ನೂ ಮೋದಿಯವರೇ ಮಾಡಿದ್ದು ಎನ್ನಲು ಹೆಮ್ಮೆಯಾಗುತ್ತದೆ. ಯಾವ ಕ್ಷಣದಲ್ಲಿ ರಾಜನಾಥ್ ಸಿಂಗ್ ತಡ ಮಾಡದೆ ನಮೋರವರಿಗೆ ದೆಹಲಿಯ ಗದ್ದುಗೆಯನ್ನು ನೀಡಿದರೋ ಅವರು ನಿಜಕ್ಕೂ ದೊಡ್ಡ ಉಪಕಾರ ಮಾಡಿದರು ಎನ್ನಬಹುದು. ಇಲ್ಲದಿದ್ದರೆ ಸಂಸತ್ತಿನಲ್ಲಿ ಸಿನಿಮೀಯ ನಾಟಕವಾಡಿ, ಕಣ್ಣು ಮಿಟುಕಿಸಿ ಅಗೌರವ ತೋರಿದ ವ್ಯಕ್ತಿ ಕೈಯಲ್ಲಿ ಭಾರತವಿರುತ್ತಿತ್ತೋ ಏನೋ? ಈಗ ಆ ವ್ಯಕ್ತಿಯನ್ನು ನೋಡಿ ಭಾರತ ನಗುವಂತೆ, ಆಗ ಭಾರತವನ್ನು ನೋಡಿ ಜಗತ್ತು ನಗುತ್ತಿತ್ತು.
ಅದು ಮೊದಲ ಮಂಗಳಯಾನದ ಸಮಯ. ವಿಶ್ವದಲ್ಲೇ ಮೊದಲ ಬಾರಿಗೆ ಮೊದಲ ಪ್ರಯತ್ನದಲ್ಲಿ ಭಾರತ ಮಂಗಳನ ಅಂಗಳ ಪ್ರವೇಶಿಸಿದ ಕ್ಷಣ. ಆಗ ನರೇಂದ್ರ ಮೋದಿಯವರು “ಇವತ್ತು ಮಂಗಳನಿಗೆ ಅಮ್ಮ(ಮಾಮ್ ಯೋಜನೆ) ಸಿಕ್ಕಳು. ನನಗೆ ಈ ಯೋಜನೆಗೆ ಮಾಮ್ ಎಂದು ಹೆಸರು ಇಟ್ಟಾಗಲೇ ಖಾತ್ರಿಯಾಗಿತ್ತು ಅಮ್ಮ ಎಂದಿಗೂ ನಿರಾಶೆ ಮಾಡುವುದಿಲ್ಲ ಎಂದು. ಜಗತ್ತಿನ ಹಲವು ದೇಶಗಳಿಂದ ಐವತ್ತೊಂದು ಪ್ರಯತ್ನಗಳು, ಯಾರೂ ಮೊದಲ ಪ್ರಯತ್ನದಲ್ಲೇ ಮುಟ್ಟಿದವರು ಇಲ್ಲ. ಹಾಲಿವುಡ್ ಚಿತ್ರದ ಖರ್ಚಿಗಿಂತಲೂ ಕಡಿಮೆ ವೆಚ್ಚದಲ್ಲಿ ನಾವು ಮಂಗಳಯಾನ ಮಾಡಿದೆವು. ಜಗತ್ತಿನ ಐವತ್ತೊಂದು ಪ್ರಯತ್ನಗಳಲ್ಲಿ ಕೇವಲ ಇಪ್ಪತ್ತೊಂದು ಸಫಲವಾಗಿವೆ. ವಿಜ್ಞಾನಿಗಳೇ ಪ್ರಯತ್ನಗಳ ಮಾಡಲು ಅಂಜಬೇಡಿ. ಮಂಗಳಯಾನದ ಸಂದರ್ಭಕ್ಕೆ ನನ್ನ ಕರೆಯುವಾಗ ಇಸ್ರೋ ವಿಜ್ಞಾನಿಗಳು, ಇದು ನಮ್ಮ ಮೊದಲ ಪ್ರಯತ್ನ. ನಿಮ್ಮನ್ನು ಕರೆಯಬೇಕೋ ಬೇಡವೋ ತಿಳಿಯುತ್ತಿಲ್ಲ ಎಂದಿದ್ದರು. ಆದರೆ ನಾನು ಬರುತ್ತೇನೆ. ಗೆಲುವಿನ ಶ್ರೇಯ ಎಲ್ಲರಿಗೂ ಸಲ್ಲಲಿ. ಆದರೆ ಸೋತರೆ ಅದರ ಜವಾಬ್ದಾರಿಯನ್ನು ನಾನು ಹೊರುತ್ತೇನೆ ಎಂದು ಪ್ರಧಾನಿಯವರು ಹೇಳಿದಾಗ ಇಡೀ ಇಸ್ರೋ ಕರತಾಡನದಲ್ಲಿ ಮುಳುಗಿ ಹೋಗಿತ್ತು. ಅದಲ್ಲದೆ ನ್ಯೂಯಾರ್ಕ್ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳಯಾನದ ಕುರಿತು ಪ್ರಸ್ತಾಪಿಸಿದ್ದರು.
ಅದು 2014 ರ ಸೆಪ್ಟೆಂಬರ್ ತಿಂಗಳು. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ಭಾರತದ ಪ್ರಧಾನಿಯೊಬ್ಬರು ಮೊದಲ ಬಾರಿಗೆ ಮಾತನಾಡಿದ್ದು ಎಂಬುದು ಒಂದು ವಿಶೇಷ. “ಇಂದು ಅಹಮದಾಬಾದಿನಿಂದ ಒಂದು ಕಿಲೋ ಮೀಟರ್ ದೂರ ಆಟೋದಲ್ಲಿ ತೆರಳಲು ಹತ್ತು ರೂಪಾಯಿ ಬೇಕು. ಆದರೆ ನಾವು ಭಾರತೀಯರು 65615 ಮಿಲಿಯನ್ ಕಿಲೋ ಮೀಟರ್ ಮಂಗಳನ ಯಾತ್ರೆ ಮಾಡಿದೆವು. ಅದು ಸ್ವದೇಶಿ ನಿರ್ಮಿತ ಸಾಮಗ್ರಿಗಳನ್ನು ಬಳಸಿ. ವಿಶೇಷ ಏನು ಗೊತ್ತಾ ಅದು ಕೇವಲ ಏಳು ರೂಪಾಯಿ ಪ್ರತಿ ಕಿ.ಮೀ.ಗೆ. ಅದು ಭಾರತೀಯರ ತಾಕತ್ತು. ಮೊದಲ ಪ್ರಯತ್ನದಲ್ಲೇ ಮಂಗಳ ತಲುಪಿದ ಮೊದಲಿಗರು ನಾವು, ಅದು ಹಾಲಿವುಡ್ನ ಒಂದು ಚಿತ್ರದ ಬಜೆಟ್ಟಿಗಿಂತ ಕಡಿಮೆ ವೆಚ್ಚದಲ್ಲಿ.” ಹೀಗೆ ನಮ್ಮ ಪ್ರಧಾನಿಯೊಬ್ಬರು ವಿದೇಶಕ್ಕೆ ಹೋಗಿ ನಮ್ಮ ದೇಶವನ್ನು ಹೊಗಳಿದ್ದು ಉಂಟೆ? ನೆರೆದ ಅನಿವಾಸಿ ಭಾರತೀಯರಲ್ಲಿ ರೋಮಾಂಚನವಾದ ಅನುಭವ. ನರೇಂದ್ರ ಮೋದಿಯವರು ಜನಸಾಮಾನ್ಯರ ಪ್ರಧಾನಿ ಅನ್ನಿಸುವುದು ಇದೇ ಕಾರಣಕ್ಕಾಗಿ, ಅವರು ಬಳಸುವ ಭಾಷೆ. ಕೀಲಿ ಕೊಟ್ಟ ಬೊಂಬೆಯಂತೆ ಬರೆದು ಕೊಟ್ಟದನ್ನು ಓದಿ, ಇಸ್ರೋ ಇಷ್ಟು ಕಡಿಮೆ ಬಿಲಿಯನ್ ಡಾಲರ್ ಖರ್ಚು ಮಾಡಿ ಹೋಗಿ ಬಂದೆವು ಎಂದರೆ ಯಾರಿಗೆ ತಿಳಿಯುತ್ತಿತ್ತು? ಅವತ್ತು ಮಂಗಳನ ಕಾರ್ಯ ಮಂಗಳವಾಗದೆ ಅಮಂಗಳವಾಗಲು ಸಾಧ್ಯವೇ ಎಂದು ಚಟಾಕಿಯನ್ನು ಹಾರಿಸಿದ್ದರು.
2013-14ರ ಬಜೆಟ್ನಲ್ಲಿ 5615 ಕೋಟಿ ರೂಪಾಯಿಗಳನ್ನು ಮೀಸಲಿರಿಸಿ ಕೊನೆಗೆ 4000 ಕೋಟಿ ರೂಪಾಯಿಗಳ ನೀಡಲಾಗಿತ್ತು. 2014-15ರ ಮೋದಿಯವರ ಮೊದಲ ಸರ್ಕಾರ 6000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟು ಅಲ್ಲದೆ ಚಂದ್ರಯಾನಕ್ಕೆ 60 ಕೋಟಿ ರೂಪಾಯಿಗಳ ತೆಗೆದಿಡಲಾಗಿತ್ತು.
2013-14 4000Cr
2014-15 6000Cr
2015-16 6959Cr
2016-17 7509Cr
2017-18 8503Cr
2018-19 9918Cr
2019-20 10252Cr
ಒಮ್ಮೆ ಈ ಅಂಕಿ ಅಂಶಗಳನ್ನು ಅವಲೋಕನ ಮಾಡಿ. ಇತಿಹಾಸದಲ್ಲಿ ಮೊದಲ ಬಾರಿಗೆ ಇಸ್ರೋದ ವಾರ್ಷಿಕ ಆಯ ವ್ಯಯ 10000 ಕೋಟಿ ರೂಪಾಯಿಗಳನ್ನು ತಲುಪಿದೆ. ಮೊದಲ ಬಜೆಟ್ಟಿನಿಂದ ಹಿಡಿದು ಈಗಿನ ಆಯ ವ್ಯಯ ಕಡತದ ತನಕ ಕೇಂದ್ರ ಸರ್ಕಾರ ಬಾಹ್ಯಾಕಾಶ ಕೇಂದ್ರದ ಯೋಜನೆಗಳ ಬೆನ್ನಿಗೆ ನಿಂತಿದೆ. ಮುಗ್ಗರಿಸಿದಾಗ ಬೆನ್ನು ತಟ್ಟಿ, ಗೆದ್ದು ಬೀಗಿದಾಗ ಶಹಬ್ಬಾಸ್ಗಿರಿ ನೀಡುತ್ತಾ ಬಂದಿದೆ. ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸಲು ಕೂಡ ಇಸ್ರೋವನ್ನು ಬಳಸಲಾಗಿದೆ ಅನ್ನುವುದು ಹೆಮ್ಮೆಯ ವಿಚಾರ. 2017ರ ಮೇ ತಿಂಗಳಲ್ಲಿ ದಕ್ಷಿಣ ಏಷ್ಯಾ ಸ್ಯಾಟಲೈಟ್ ಹೆಸರಿನಲ್ಲಿ ಭಾರತವು ನೆರೆ ಹೊರೆಯ ರಾಷ್ಟ್ರಗಳಿಗೆ ಉಡುಗೊರೆ ನೀಡಿತು. ಇದಕ್ಕೆ GSLV-F09 ಬಳಸಲಾಗಿತ್ತು. ಅಲ್ಲದೆ PSLV-C37 ನಲ್ಲಿ ಉಡಾವಣೆ ಮಾಡಲಾದ 104 ಉಪಗ್ರಹಗಳಲ್ಲಿ ಅಮೇರಿಕಾದ 96, ಸ್ವಿಡ್ಜರ್ ಲ್ಯಾಂಡ್, ನೆದರ್ ಲ್ಯಾಂಡ್, ಕಜಕಿಸ್ತಾನ, ಯುಎಇ ಮತ್ತು ಇಸ್ರೇಲ್ ದೇಶಗಳ ತಲಾ ಒಂದು ಉಪಗ್ರಹಗಳು ಇದ್ದವು. ಇದರಲ್ಲಿ ನರೇಂದ್ರ ಮೋದಿಯವರ ದೂರದೃಷ್ಟಿ ಗೋಚರವಾಗದೇ ಇರದು. ಅಲ್ಲದೆ ಒಂದೇ ಬಾರಿಗೆ 104 ಉಪಗ್ರಹಗಳನ್ನು ಹಾರಿಸಿದ್ದು ಕೂಡ ಒಂದು ದಾಖಲೆಯೇ.
ಅನ್ಯರ ಉಪಗ್ರಹಗಳಲ್ಲಿ ಚಂದ್ರಯಾನ, ಮಂಗಳಯಾನ ಮಾಡುತ್ತಿದ್ದ ಕಾಲದಿಂದ ಹಿಡಿದು ಒಟ್ಟೊಟ್ಟಿಗೆ 104 ಉಪಗ್ರಹಗಳನ್ನು ಉಡ್ಡಯಿಸುವ ತನಕ ಭಾರತದ ಬಾಹ್ಯಾಕಾಶ ಕೇಂದ್ರಕ್ಕೆ ಗೌರವ ಸಲ್ಲಲೇಬೇಕು. ಇನ್ನು ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆ, 2022 ರ ಒಳಗಾಗಿ ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಸ್ವದೇಶಿ ತಂತ್ರಜ್ಞಾನದಲ್ಲಿ ಕಳಿಸುವ ಯೋಜನೆ. ಇದಕ್ಕಾಗಿ ಮೋದಿಯವರ ಇಮ್ಮಡಿ ಸರ್ಕಾರ 10000 ಕೋಟಿಗಳನ್ನು ಮೀಸಲಾಗಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಮೂವತ್ತಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಅದರಲ್ಲಿ 17 ಲಾಂಚರ್ಗಳು, 16 ಸ್ಯಾಟಲೈಟ್ಗಳು ಮತ್ತು 3 ತಂತ್ರಜ್ಞಾನ ಪ್ರದರ್ಶನ ಯೋಜನೆಗಳು ಜಾರಿಗೊಂಡಿವೆ. ಇನ್ನು 2019 ರಲ್ಲಿ ಜನವರಿ ತಿಂಗಳಲ್ಲಿ ಇಸ್ರೋ ಅಧ್ಯಕ್ಷ ಕೆ ಸಿವನ್ ನೀಡಿದ ಹೊಸ ವರ್ಷದ ಸಂದೇಶದಲ್ಲಿ ಹೀಗೆ ಹೇಳಿದ್ದರು “ಭಾರತಕ್ಕೆ 2019 ತುಂಬಾ ಫಲಪ್ರದ ವರ್ಷವಾಗಿದ್ದು, ಚಂದ್ರಯಾನ 2 ಅಲ್ಲದೆ ಇತರ ಮೂವತ್ತೊಂದು ಯೋಜನೆಗಳಿವೆ. 14 ಲಾಂಚರ್ಗಳು, 17 ಸ್ಯಾಟಲೈಟ್ಗಳು ಮತ್ತು 1 ತಂತ್ರಜ್ಞಾನ ಪ್ರದರ್ಶನ ಯೋಜನೆಗಳು ಇವೆ” ಎಂದಿದ್ದರು. ಇದರಲ್ಲಿ ಏನಿದೆ ವಿಶೇಷ ಅನ್ನಿಸಬಹುದು. ಆದರೆ ಮೊದಲ ಚಂದ್ರಯಾನದ ರೂವಾರಿ ಮಾಧವನ್ ನಾಯರ್ “ಇಮ್ಮಡಿ ಚಂದ್ರಯಾನವನ್ನು ನಾವು 2012 ರ ಕೊನೆಯ ಭಾಗದಲ್ಲಿ ಮಾಡಲು ತಯಾರಿದ್ದೇವು. ಆದರೆ ಆಗಿನ ಸರ್ಕಾರ ಚುನಾವಣಾ ದೃಷ್ಟಿಯಿಂದ ನಮಗೆ ಸಮ್ಮತಿ ನೀಡಲಿಲ್ಲ. ಅವರಿಗೆ 2014 ರ ಲೋಕಸಭಾ ಚುನಾವಣೆಯ ಕಾರಣಕ್ಕೆ ಹೊಸದೊಂದು ಮಹತ್ವದ ಸಾಹಸ ಮಾಡಿ ತೋರಿಸಬೇಕಿತ್ತು. ಆದ್ದರಿಂದ ನಮ್ಮ ಆಕಾಂಕ್ಷೆಗಳ ಬಿಟ್ಟು ಆತುರದಲ್ಲಿ ಮಂಗಳಯಾನ ಮಾಡಿದೆವು” ಎಂದು ಸತ್ಯವನ್ನು ಬಿಚ್ಚಿಟ್ಟಿದ್ದರು. ಪ್ರತಿ ಹೊಸ ಯೋಜನೆಗಳಿಗೂ, ಕನಸುಗಳಿಗೂ ಈಗ ಕೇಂದ್ರದ ಬಾಗಿಲು ತಟ್ಟುವ ಜರೂರತ್ತಿಲ್ಲ. ಅದು ಮೊನ್ನೆಯ ಚಂದ್ರಯಾನದ ಸಂದರ್ಭದಲ್ಲೂ ಗೋಚರವಾಯಿತು.
ಈಗಿನ ಚಂದ್ರಯಾನ-2ರ ಕುರಿತು ಹೇಳಲೇಬೇಕು. ಭಾರತದಾದ್ಯಂತ ಹಲವಾರು ಜನ ಮೋದಿಯವರಿಗೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಇಮ್ಮಡಿ ಚಂದ್ರಯಾನದ ಕುರಿತು ಮಾತನಾಡಲು ಕೋರಿದರು. ಅದರಂತೆ “2019ರ ಈ ವರ್ಷ ಭಾರತಕ್ಕೆ ತುಂಬಾ ಫಲಪ್ರದವಾಗಿದೆ. ಮಾರ್ಚ್ ತಿಂಗಳಲ್ಲಿ A-SAT ಮಾರ್ಚ್ ತಿಂಗಳಲ್ಲಿ ಪ್ರಯೋಗ ಮಾಡಲಾಗಿತ್ತು. ಇದರಿಂದ ಸುಮಾರು 300 ಕಿಲೋ ಮೀಟರ್ ದೂರದ ಶತ್ರುಗಳ ಸ್ಯಾಟಲೈಟ್ಗಳನ್ನು ಕೇವಲ ಮೂರು ನಿಮಿಷಗಳಲ್ಲಿ ನಾಶಪಡಿಸಬಹುದು. ಈ ಶಕ್ತಿಯನ್ನು ಹೊಂದಿದ ಜಗತ್ತಿನ ಕೇವಲ ನಾಲ್ಕನೆಯ ದೇಶ ಭಾರತ. ಇನ್ನು ಇಮ್ಮಡಿ ಚಂದ್ರಯಾನ. ಈ ಚಂದ್ರಯಾನ ಹಲವು ವಿಷಯಗಳಿಗೆ ಮಹತ್ವಪೂರ್ಣ. ನನ್ನ ಪ್ರಕಾರ ಪ್ರಮುಖವಾಗಿ ಎರಡು ವಿಷಯಗಳು ನಂಬಿಕೆ ಹಾಗೂ ನಿರ್ಭಯತೆ. ನಾವು ನಮ್ಮ ಪ್ರತಿಭೆಗಳಲ್ಲಿ ನಂಬಿಕೆಯಿಡೋಣ. ಇದು ಸಂಪೂರ್ಣ ದೇಶೀ ನಿರ್ಮಾಣ. ನಮ್ಮ ವಿಜ್ಞಾನಿಗಳು ಅದ್ವಿತೀಯರು, ಅವರು ಅತ್ಯುತ್ತಮರು ಮತ್ತು ಅವರು ವಿಶ್ವ ಮಟ್ಟದವರು.
ಯಾವತ್ತೂ ಭರವಸೆ ಕಳೆದುಕೊಳ್ಳಬಾರದು. ಅವರು ಎಂತಹ ಸಮಸ್ಯೆಗಳನ್ನು ಚಿಟಿಕೆಯಲ್ಲಿ ನಿವಾರಿಸುವುದು ಕಲಿತಿದ್ದಾರೆ. ಹಲವಾರು ತೊಂದರೆಗಳ ನಡುವೆಯೂ ಅವರು ಚಂದ್ರಯಾನ ತಡವಾಗಲು ಅವರು ಬಿಡಲಿಲ್ಲ. ಅವರ ಸಾಮರ್ಥ್ಯಕ್ಕೆ ಇದು ಕೈಗನ್ನಡಿ. ಈ ಯಾನಗಳ ಕುರಿತು ನಮ್ಮ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಒಂದು ಕ್ವಿಜ್ ಕಾರ್ಯಕ್ರಮ ಆಯೋಜಿಸಲಿದ್ದೇವೆ. ಬಾಹ್ಯಾಕಾಶ, ಭಾರತೀಯ ಯೋಜನೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಇವು ರಸಪ್ರಶ್ನೆ ಕಾರ್ಯಕ್ರಮದ ವಿಷಯಗಳು. ಇದನ್ನು Mygov ನಲ್ಲಿ ವಿವರಿಸಲಾಗಿದೆ. ಹೆಚ್ಚು ಅಂಕಗಳನ್ನು ಪಡೆಯುವವರನ್ನು ಚಂದ್ರಯಾನ ಎರಡರ ಕಾರ್ಯಕ್ರಮಕ್ಕೆ ಸರ್ಕಾರ ತನ್ನದೇ ಖರ್ಚಿನಲ್ಲಿ ಆಹ್ವಾನಿಸಲಿದೆ.” ನೋಡಿ ಒಬ್ಬ ಪ್ರಧಾನಮಂತ್ರಿ ಇಂದಿನ ವಿದ್ಯಾರ್ಥಿ ಮತ್ತು ಯುವ ಸಮುದಾಯದಲ್ಲಿ ವಿಜ್ಞಾನದ ಕುರಿತು ಆಸಕ್ತಿ ತರಲು ಒಂದು ಮಹತ್ವದ ಕಾರ್ಯಕ್ರಮವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂದು. ಅಂತಹ ಬಿಡುವಿಲ್ಲದ ಬದುಕಿನಲ್ಲಿ ಅವರು ವಿದ್ಯಾರ್ಥಿಗಳನ್ನು ಮರೆಯಲಿಲ್ಲ.
ಚಂದ್ರಯಾನದ ಲ್ಯಾಂಡಿಂಗ್ನ ಸಂದರ್ಭ. ಆಗ ರಷ್ಯಾ ಪ್ರವಾಸದಿಂದ ಮರಳುತ್ತಿದ್ದಂತೆಯೇ ಸೀದಾ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಹಾಜರಾದರು. ಬೆಳಗಿನ ಜಾವ ನಾಲ್ಕರ ತನಕ ಅಲ್ಲಿಯೇ ಇದ್ದು, ನಂತರ ಕೊಠಡಿಗೆ ತೆರಳಿದರು. ಮತ್ತೆ ಎಂಟು ಗಂಟೆಗೆ ಬಂದು ಆತ್ಮವಿಶ್ವಾಸವನ್ನು ತುಂಬಿದರು. ಅಲ್ಲಿಂದ ಮುಂಬೈಗೆ ತೆರಳಿ ಭಾರತದ ಮೊದಲ ಮೇಕ್ ಇನ್ ಇಂಡಿಯಾ ಮೆಟ್ರೋ ಕೋಚ್ ಉದ್ಘಾಟಿಸಿ ನಂತರ ದೆಹಲಿಗೆ ತೆರಳುತ್ತಾರೆ. ಇವರು ನಮ್ಮ ಪ್ರಧಾನಿ. ಅವರಿಗೆ ಇಲ್ಲಿಗೆ ಬರುವ ಅವಶ್ಯಕತೆ ಇರಲಿಲ್ಲ. ಆದರೆ ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾಗಲು ಬಂದರು. ವಿಫಲತೆಯ ಆ ಕ್ಷಣಕ್ಕೆ ಬೇಜಾರು ಮಾಡಿಕೊಂಡಂತೆ ಕಂಡರೂ ನಂತರ ಅವರ ಮಾತುಗಳು ಯಾರಲ್ಲಿಯೂ ಸ್ಫೂರ್ತಿ ತುಂಬುವಂತವಾಗಿದ್ದವು. “ಯಾವಾಗಲೂ ಪ್ರಯತ್ನಗಳು ಮೌಲ್ಯಯುತ ಮತ್ತು ಅಂತೆಯೇ ಅದರ ಹಿಂದಿನ ಶ್ರಮ ಮತ್ತು ಹಾದಿ. ನಮ್ಮ ಭಾರತೀಯರಿಗೆ ಗೊತ್ತಿದೆ ಇನ್ನೂ ಒಳ್ಳೆಯ ಕ್ಷಣಗಳನ್ನು ಸವಿಯಲಿದ್ದೇವೆ ಎಂದು. ಇವತ್ತು ಏನು ಕಲಿತಿದ್ದೇವೋ ಅದರಿಂದ ಉತ್ತಮ ನಾಳೆಗಳನ್ನು ಕಟ್ಟೋಣ. ನಿಮ್ಮ ಕುಟುಂಬಗಳಿಗೂ ನನ್ನ ಧನ್ಯವಾದಗಳು. ಅವರ ಕೊಡುಗೆಯೂ ಅಪಾರ. ನಿಮ್ಮ ಕನಸುಗಳು ನನ್ನದಕ್ಕಿಂತ ಉನ್ನತವಾದವು. ಅದರಲ್ಲಿ ನನಗೆ ತುಂಬಾ ನಂಬಿಕೆಯಿದೆ. ನಾನು ನಿಮ್ಮನ್ನು ಭೇಟಿಯಾಗುವುದು ನವ ಚೈತನ್ಯಕ್ಕಾಗಿ. ನೀವು ಸ್ಫೂರ್ತಿಯ ಕಡಲು ಮತ್ತು ವಿಶ್ವಾಸದ ಜೀವಂತ ಸಾಕ್ಷಿ.” ಎಂದು ಪ್ರಧಾನಿ ಮೋದಿಯವರು ಹೇಳುತ್ತಿದ್ದರೆ ಕೇಳುಗರಿಗೆ ರೋಮಾಂಚನವಾಗುತ್ತಿತ್ತು. ಅದಕ್ಕೆ ಟ್ವಿಟರ್ನಲ್ಲಿ ನನ್ನ ಪ್ರಧಾನಿ ಮಾನವತೆಯ ಪ್ರತೀಕ ಎಂದು ಟ್ರೆಂಡ್ ಶುರುವಾಗಿತ್ತು. ಸೋಲಿಗೆ ಕಿಂಚಿತ್ತೂ ಗಮನ ಹರಿಸದೆ ಸಿವನ್ರನ್ನು ತಬ್ಬಿಕೊಂಡು ಸಂತೈಸುವಾಗ ಇಡೀ ವಿಶ್ವವೇ ಅದನ್ನು ಕೊಂಡಾಡಿತ್ತು.
ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೀಗೆ ಅಂದಿದ್ದು, “ನಾನೊಬ್ಬ ಪೋಲೀಸ್ ಕಮಿಷನರ್ ಆಗಿ, ಶಿವನ್ರನ್ನು ಸಂತೈಸುವಾಗ ಅಲ್ಲಿ ನಾಯಕತ್ವ, ಪ್ರಶಾಂತತೆ, ವೈಜ್ಞಾನಿಕ ಬಳಗಕ್ಕೆ ಆತ್ಮವಿಶ್ವಾಸ ತುಂಬುವುದು, ದೇಶಕ್ಕೆ ಭರವಸೆ ಮತ್ತು ಪ್ರಗತಿ ಸೃಷ್ಟಿಸುವುದು ಇದನ್ನು ನಮ್ಮ ಪ್ರಧಾನಿಗಳಿಂದ ಕಲಿತ ಪಾಠ ಇಂದು.”
ಇಸ್ರೋ ಅಧ್ಯಕ್ಷ ಕೆ ಸಿವನ್, “ಪ್ರಧಾನಿ ನಮಗೆ ಸ್ಫೂರ್ತಿ ಮತ್ತು ಅಭಯದ ಚಿಲುಮೆ. ಅವರ ಮಾತುಗಳು ನಮ್ಮಲ್ಲಿ ಹೊಸ ಉತ್ಸಾಹ ತುಂಬುತ್ತವೆ. ಅದರಲ್ಲೂ ಅವರ ಭಾಷಣದಲ್ಲಿ ಗಮನಿಸಿದ ಅಂಶವೆಂದರೆ ‘ವಿಜ್ಞಾನವನ್ನು ಎಂದಿಗೂ ಫಲಿತಾಂಶಗಳಿಂದ ನೋಡಬಾರದು, ಅದನ್ನು ಪ್ರಯೋಗಗಳಿಂದಷ್ಟೇ ನೋಡಬೇಕು. ಅವು ನಮ್ಮನ್ನು ಫಲಿತಾಂಶದ ಕಡೆಗೆ ಒಯ್ಯುತ್ತವೆ’ ಎನ್ನುವುದು.” ಒಬ್ಬ ವಿಜ್ಞಾನಿಗೆ ಇದಕ್ಕಿಂತ ಏನು ಬೇಕು ಹೇಳಿ?
“ಮೊದಲ ಪ್ರಯತ್ನದಲ್ಲಿ ಮಂಗಳನ ಅಂಗಳ ಪ್ರವೇಶಿಸಿ ತ್ರಿವರ್ಣಧ್ವಜ ಹಾರಿಸಿದ ವಿಶ್ವದ ಮೊದಲಿಗರು ನೀವು. ಒಂದೇ ಬಾರಿಗೆ ಒಂದು ನೂರಕ್ಕೂ ಹೆಚ್ಚಿನ ಉಪಗ್ರಹ ಉಡಾವಣೆ ಮಾಡಿ ವಿಶ್ವ ದಾಖಲೆ ಬರೆದವರು ನೀವು. ಇಡೀ ದೇಶವೇ ನಿಮ್ಮೊಂದಿಗಿದೆ. ಧೃತಿಗೆಡಬೇಡಿ. ಭಾರತೀಯರದ್ದು ಅಮೃತ ಸಂತಾನ. ನಮಗೆ ಸೋಲೂ ಇಲ್ಲ, ನಿರಾಸೆಯೂ ಇಲ್ಲ ಮತ್ತು ವಿಜ್ಞಾನದಲ್ಲಿ ಸೋಲೆಂಬುದೇ ಇಲ್ಲ.” ಒಮ್ಮೆಯಲ್ಲ ಎರಡೆರಡು ಬಾರಿ ಓದಿ. ಎಂತಹ ಆತ್ಮವಿಶ್ವಾಸದ, ಆಪ್ತತೆಯ ಮಾತುಗಳು. ಓದಿದ ನಮಗೆ ಹೀಗೆ ಆಗುತ್ತಿರುವಾಗ ನಮ್ಮ ವಿಜ್ಞಾನಿಗಳು ಎಷ್ಟು ಖುಷಿಯಾಗಿರಬೇಡ. ದೇಶದ ಪ್ರಧಾನಿ, ನಮ್ಮಲ್ಲೆರ ಮುಖ್ಯಸ್ಥ ಹೀಗೆ ಬೆನ್ನಿಗೆ ನಿಂತು ಗೆದ್ದು ಬನ್ನಿ, ನಾವು ನಿಮ್ಮೊಂದಿಗೆ ಇದ್ದೇವೆ ಎನ್ನುತ್ತಿದ್ದರೆ, ಯಜಮಾನ ಅಣ್ಣನಂತೆ ಆಲಿಂಗಿಸಿ ಸಂತೈಸುತ್ತಿದ್ದರೆ ಇಸ್ರೋ ಮುಂದಿನ ಯೋಜನೆಯಲ್ಲಿ ಸೂರ್ಯನತ್ತ ಕೈ ಚಾಚಿದರೂ ಅಚ್ಚರಿ ಏನಿಲ್ಲ. ಒಮ್ಮೊಮ್ಮೆ ಅನಿಸುತ್ತದೆ ಮೋದಿಯವರು ಯಾಕಾದರೂ ಇಷ್ಟು ತಡವಾಗಿ ಪ್ರಧಾನಿ ಆದರೋ ಎಂದು. ವಿದೇಶ ಪರದೇಶಗಳನ್ನು ಬುಟ್ಟಿ ತುಂಬಿ ತಂದ, ಕರ್ಮಾಚಾರಿಯ ಪಾದ ತೊಳೆದ, ಕೆಂಪು ಕೋಟೆಯ ಮೇಲಿಂದ ಶೌಚಾಲಯ ಕಟ್ಟಲು ಕರೆ ಕೊಟ್ಟ, ಬಗಲ ವೈರಿಯ ಬುಡದಲ್ಲಿ ಭಯ ಹುಟ್ಟಿಸಿ ವೀರ ಯೋಧನ ಹೋದಂತೆಯೇ ಕರೆ ತಂದ, ಕಾಶ್ಮೀರದ ಬಾಗಿಲನ್ನು ತೆರೆದ ನಾಯಕನನ್ನು ಬರಿ ಗುಜರಾತ್ ದೊಡ್ಡ ಪಾಲು ಇಟ್ಟುಕೊಂಡಿತ್ತಲ್ಲ ಎಂದು ಅಸೂಸೆಯೂ ಆಗುತ್ತದೆ. ವಿಜ್ಞಾನ ಎಂದರೆ ಸೈನ್ಸ್ ಎಂದರ್ಥವಲ್ಲ. ಅದು ವಿಶೇಷವಾದ ಜ್ಞಾನ. ಪುರಾಣಗಳ ಕಾಲದಿಂದಲೂ ಭಾರತೀಯರು ಗಣಿತ, ವೈದ್ಯಕೀಯ, ಸಾಹಿತ್ಯ, ಬಾಹ್ಯಾಕಾಶ, ವೈಮಾನಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ವಿಶೇಷವಾದ ಸಿದ್ಧಿ ಪಡೆದಿದ್ದಾರೆ. ಅದಕ್ಕೊಂದು ಆಲಿಂಗಿಸುವ ಶಕ್ತಿ ಬೇಕಿತ್ತು. ಆ ಶಕ್ತಿ ಸರಿ ಸುಮಾರು ಆರು ವರ್ಷಗಳಿಂದ ಭಾರತವನ್ನು ಕಾಯುತ್ತಿದೆ. ಹಾಗಾಗಿ ಇಂತಹ ಪ್ರಧಾನಿಯಿದ್ದರೆ ಸಾವಿರ ಚಂದ್ರಯಾನಗಳಲ್ಲದೆ, ಮೇಲೊಂದಿಷ್ಟು ಸೂರ್ಯಯಾನವನ್ನು ಮಾಡಬಹುದು.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.