ಇಸ್ಲಾಮಾಬಾದ್: ಸಿಂಧ್ ಮತ್ತು ಪಾಕಿಸ್ಥಾನದ ಇತರ ಭಾಗಗಳಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಬೇಕು ಎಂದು ಸಿಂಧಿ ಫೌಂಡೇಶನ್ ಮತ್ತು ಪಾಕಿಸ್ಥಾನದ ಖ್ಯಾತ ಹೋರಾಟಗಾರ ಮುನಾವರ್ ಸೂಫಿ ಲಘರಿ ಅವರು ಒತ್ತಾಯಿಸಿದ್ದಾರೆ.
42ನೇ ಮಾನವ ಹಕ್ಕುಗಳ ಮಂಡಳಿಯ ಅಧಿವೇಶನದಲ್ಲಿ ಪಾಕಿಸ್ಥಾನದ ಅಲ್ಪಸಂಖ್ಯಾತ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಬಗ್ಗೆ ಮಾತನಾಡಿದ ವೇಳೆ ಅವರು ಈ ಮನವಿಯನ್ನು ಮಾಡಿಕೊಂಡಿದ್ದಾರೆ.
“ಸಿಂಧಿಯ ಸಂಕಷ್ಟವೆಂದರೆ ಭಯ. ಭಯವನ್ನು ಎದುರಿಸುವುದೇ ಅಲ್ಲಿನ ಜನರ ಅತೀ ದೊಡ್ಡ ಸವಾಲು. ಸಿಂಧಿಯ ಒಳಗಡೆ ಭಯವನ್ನು ಮೆಟ್ಟಿ ನಿಲ್ಲಲು ಸಾಧ್ಯವೇ ಇಲ್ಲ, ಹೀಗಾಗಿ ಭರವಸೆ ಹೊರಗಿನಿಂದಲೇ ಬರಬೇಕು. ಹೀಗಾಗಿ ಯುಎನ್ ಮತ್ತು ಅಮೆರಿಕಾದಂತಹ ದೇಶಗಳಿಗೆ ನಾನು ಮನವಿ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರು ಯುಎನ್ನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಬೇಕು ಎಂದು ನಾವು ಕೇಳಿಕೊಳ್ಳುತ್ತೇವೆ. ಯಾಕೆಂದರೆ ಸಿಂಧ್ನಿಂದಲೇ ಭಾರತ ತನ್ನ ಒಂದು ಹೆಸರನ್ನು ಪಡೆದುಕೊಂಡಿದೆ. ಸಿಂಧಿಗಳು ಭಾರತದಲ್ಲೂ ವಾಸಿಸುತ್ತಿದ್ದಾರೆ, ಹೊರಗಡೆಯೂ ವಾಸಿಸುತ್ತಿದ್ದಾರೆ” ಎಂದು ಲಘರಿ ಹೇಳಿದ್ದಾರೆ.
“ಮೋದಿಯವರು ಕನಿಷ್ಠಪಕ್ಷ ಮಾನವ ಹಕ್ಕುಗಳ ಬಗ್ಗೆ ಮಾತನಾಡಬಹುದು, ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಮಾತನಾಡಬಹುದು. ಅಮೆರಿಕಾವೂ ಈ ಬಗ್ಗೆ ಮಾತನಾಡುತ್ತದೆ. ಇತ್ತೀಚಿಗೆ ವಾಷಿಂಗ್ಟನ್ ಡಿಸಿಯಲ್ಲೂ ಮಾನವ ಹಕ್ಕುಗಳ ಕಾನ್ಫರೆನ್ಸ್ ಜರುಗಿತ್ತು” ಎಂದು ಅವರು ಹೇಳಿದ್ದಾರೆ.
ಪಾಕಿಸ್ಥಾನ ಆಕ್ರಮಿತ ಕಾಶ್ಮೀರ, ಬಲೂಚಿಸ್ತಾನ್ ಮತ್ತು ಅಫ್ಘಾನಿಸ್ತಾನದ ಹಲವಾರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಲೂಚಿಸ್ತಾನದ ಮಾನವ ಹಕ್ಕುಗಳ ಮಂಡಳಿಯ ಮುಖ್ಯಸ್ಥ ತಾಜ್ ಬಲೂಚ್ ಅವರು ಮಾತನಾಡಿ, “ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯವು ಮೌನವಾಗಿರುವುದರಿಂದ ಪರಿಸ್ಥಿತಿ ಹದಗೆಟ್ಟಿದೆ. ಆರಂಭದಲ್ಲಿ ಅಲ್ಲಿ ಅಪಹರಣಗಳು ನಡೆಯುತ್ತಿದ್ದವು, ಈಗ ಕೊಲೆ ಮತ್ತು ದರೋಡೆಗಳು ನಡೆಯುತ್ತಿವೆ. ನರಮೇಧವನ್ನು ನಡೆಸಿ ಅದಕ್ಕೆ ಜನಾಂಗೀಯ ಶುದ್ಧೀಕರಣ ಎಂದು ಕರೆಯಲಾಗುತ್ತಿದೆ. ಜನರು ತಮ್ಮ ‘ಬದುಕುವ ಹಕ್ಕಿನಿಂದ’ ವಂಚಿತರಾಗಿದ್ದಾರೆ. ಅವರನ್ನು ಎತ್ತಿಕೊಂಡು ಹೋಗಿ ಕೊಲ್ಲಲಾಗುತ್ತಿದೆ. ಇತ್ತೀಚಿಗೆ ಸಾಮೂಹಿಕ ಹತ್ಯೆಯ ಮಟ್ಟಕ್ಕೂ ಅದು ಹೋಗುತ್ತಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.