ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳು ಅಮೆರಿಕದ ಟೆಕ್ಸಾಸ್ನ ಹೋಸ್ಟನ್ಗೆ ಭೇಟಿ ನೀಡಲು ಸಜ್ಜಾಗುತ್ತಿದ್ದಾರೆ, ಅಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು ಅವರಿಗೆ ಬೃಹತ್ ಸ್ವಾಗತವನ್ನು ನೀಡಲು ಸಿದ್ಧರಾಗುತ್ತಿದ್ದಾರೆ. ಮೋದಿ ಸ್ವಾಗತಕ್ಕಾಗಿ ‘ಹೌಡಿ ಮೋದಿ’ ಎಂದು ಸಮಾರಂಭವನ್ನು ಹೋಸ್ಟನ್ನಲ್ಲಿ ಆಯೋಜನೆಗೊಳಿಸುತ್ತಿದ್ದಾರೆ. ‘ಹೌಡಿ’ ಎನ್ನುವುದು ‘ಹಲೋ’ ಅಥವಾ ‘ನೀವು ಹೇಗಿದ್ದೀರಿ?’ ಎಂಬ ಆಡುಮಾತಿನ ಅಭಿವ್ಯಕ್ತಿಯಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸುಮಾರು 50 ಸಾವಿರ ಜನರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ವಿಶ್ವದ ರಾಜಕೀಯ ಮುಖಂಡರೊಬ್ಬರು ನಡೆಸುತ್ತಿರುವ ಅತಿದೊಡ್ಡ ಸಭೆ ಇದೆಂದು ವಿಶ್ಲೇಷಿಸಲಾಗಿದೆ. ಅಮೆರಿಕಾದ ಅನೇಕ ಜನಪ್ರತಿನಿಧಿಗಳು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಟೆಕ್ಸಾಸ್ನಲ್ಲಿ ನಡೆಯುವ ಬೃಹತ್ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸದಸ್ಯೆ ಮತ್ತು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ತುಳಸಿ ಗಬ್ಬಾರ್ಡ್ ಮತ್ತು ಭಾರತೀಯ-ಅಮೆರಿಕನ್ ಕಾಂಗ್ರೆಸ್ ಸದಸ್ಯ ರಾಜಾ ಕೃಷ್ಣಮೂರ್ತಿ ಸೇರಿದಂತೆ ಅಮೆರಿಕದ 60 ಕ್ಕೂ ಹೆಚ್ಚು ಪ್ರಮುಖ ಸಂಸದರು ಭಾಗವಹಿಸಲಿದ್ದಾರೆ ಎಂಬ ಬಗ್ಗೆ ವರದಿಗಳು ಬರುತ್ತಿವೆ.
ಭಾರತೀಯ ಅಮೆರಿಕನ್ ಸಮುದಾಯವು ಪ್ರೀತಿಯ ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳನ್ನು ಆಲಿಸಲು ಅತ್ಯುತ್ಸಾಹವಾಗಿದೆ. ಈಗಾಗಲೇ ನೋಂದಾಯಿಸಿರುವ 50,000 ಜನರಲ್ಲದೆ, ಇನ್ನೂ 8,000 ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಲು ವೇಟಿಂಗ್ ಲಿಸ್ಟ್ನಲ್ಲಿ ಇದ್ದಾರೆ. ಅತೀ ದೊಡ್ಡ ಸಮಾರಂಭಗಳನ್ನು ಏರ್ಪಡಿಸುವ ಜಗತ್ತಿನ ಸೆಲೆಬ್ರಿಟಿ ಎಂದರೆ ಅದು ರೋಮನ್ ಕ್ಯಾಥೊಲಿಕ್ ಧಾರ್ಮಿಕ ಮುಖಂಡ ಪೋಪ್ ಫ್ರಾನ್ಸಿಸ್. “ಪೋಪ್ ಅವರನ್ನು ಹೊರತುಪಡಿಸಿ ಅಮೆರಿಕಾಗೆ ಭೇಟಿ ನೀಡುವ ಆಹ್ವಾನಿತ ವಿದೇಶಿ ನಾಯಕ ನಡೆಸುತ್ತಿರುವ ಅತೀದೊಡ್ಡ ಸಭೆ ಇದಾಗಿದೆ” ಎಂದು ಟೆಕ್ಸಾಸ್ ಇಂಡಿಯಾ ಫೋರಂ (ಟಿಐಎಫ್) ಸದಸ್ಯ ಜುಗಲ್ ಮಾಲಿನಿ ಹೇಳಿದ್ದಾರೆ. ಅವರು ಈ ಕಾರ್ಯಕ್ರಮದ ಮುಖ್ಯ ಸಂಘಟಕರೂ ಹೌದು.
ಅಧ್ಯಕ್ಷ ಟ್ರಂಪ್ 2020 ರಲ್ಲಿ ಅಮೆರಿಕಾ ಅಧ್ಯಕ್ಷ ಸ್ಥಾನಕ್ಕೆ ಮರುಚುನಾವಣೆಗೊಳ್ಳಲು ಎದುರು ನೋಡುತ್ತಿದ್ದಾರೆ. ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಹಾಜರಾದರೆ ಅವರ ಚುನಾವಣಾ ಪ್ರಚಾರಕ್ಕೂ ಹೆಚ್ಚಿನ ಪ್ರಯೋಜನವಾಗಲಿದೆ ಎಂಬ ಲೆಕ್ಕಚಾರಗಳು ಇವೆ. ಹೋಸ್ಟನ್ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಅಮೆರಿಕಾದ ಶೇಕಡಾ 1 ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತೀಯ ಅಮೇರಿಕನ್ ಸಮುದಾಯದ ಅತಿದೊಡ್ಡ ಸಮಾರಂಭವಾಗಿದೆ. ಭಾರತೀಯ ಅಮೆರಿಕನ್ ಸಮುದಾಯವು ಅಮೆರಿಕಾದ ಅತ್ಯಂತ ಶ್ರೀಮಂತ ಮತ್ತು ಅತ್ಯಂತ ಯಶಸ್ವಿ ಸಮುದಾಯಗಳಲ್ಲಿ ಒಂದಾಗಿದೆ. ಭಾರತೀಯ ಅಮೆರಿಕನ್ನರು ಅಮೆರಿಕಾದ ಬೆಳೆಯುತ್ತಿರುವ ರಾಜಕೀಯ ಶಕ್ತಿಯಾಗಿದ್ದು, ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಗಳ ಪ್ರಚಾರಕ್ಕೆ ದೇಣಿಗೆಯನ್ನೂ ಸಾಕಷ್ಟು ಪ್ರಮಾಣದಲ್ಲಿ ನೀಡುತ್ತಾರೆ. ಲಾಸ್ ಏಂಜಲೀಸ್ ಟೈಮ್ಸ್ನ ವರದಿಯ ಪ್ರಕಾರ, 2020 ರ ಅಧ್ಯಕ್ಷೀಯ ಪ್ರಚಾರಕ್ಕಾಗಿ ಭಾರತೀಯ ಅಮೆರಿಕನ್ನರು ಈಗಾಗಲೇ 3 ಮಿಲಿಯನ್ಗಿಂತ ಹೆಚ್ಚಿನ ಹಣವನ್ನು ನೀಡಿದ್ದಾರೆ. ಇದು ಹಾಲಿವುಡ್ ಕೊಡುಗೆಗಿಂತಲೂ ಹೆಚ್ಚಾಗಿದೆ. ಆದ್ದರಿಂದ, ಟೆಕ್ಸಾಸ್ನ ಹೋಸ್ಟನ್ನಲ್ಲಿ ನಡೆಯಲಿರುವ ‘ಹೌಡಿ ಮೋದಿ’ಯಲ್ಲಿ ಭಾಗಿಯಾಗುವ ಮೂಲಕ ಟ್ರಂಪ್ ಮತಗಳನ್ನು ಮಾತ್ರವಲ್ಲ, ಭಾರತೀಯ ಅಮೆರಿಕನ್ ಸಮುದಾಯದಿಂದ ತಮ್ಮ ರಾಜಕೀಯ ಅಭಿಯಾನಕ್ಕೆ ಭಾರಿ ದೇಣಿಗೆಯನ್ನೂ ಪಡೆದುಕೊಳ್ಳಬಹುದು.
ಈ ಹಿಂದೆ ನರೇಂದ್ರ ಮೋದಿ ಅವರು 2014 ರ ಸೆಪ್ಟೆಂಬರ್ನಲ್ಲಿ ನ್ಯೂಯಾರ್ಕ್ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಭರ್ಜರಿಯಾಗಿ ಭಾಷಣ ಮಾಡಿದ್ದರು, ಇದರಲ್ಲಿ 20,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಒಂದು ವರ್ಷದ ನಂತರ, ಅವರು ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಿದ್ದರು, ಈ ವೇಳೆಯೂ ಅವರ ಸ್ವಾಗತಕ್ಕಾಗಿ ಅನಿವಾಸಿ ಭಾರತೀಯರು ಕಾರ್ಯಕ್ರಮ ಆಯೋಜನೆಗೊಳಿಸಿದ್ದರು ಮತ್ತು ಇದರಲ್ಲಿ 20,000ಕ್ಕೂ ಹೆಚ್ಚಿನ ಜನರು ಭಾಗಿಯಾಗಿದ್ದರು. ಹೋದಲ್ಲಿ ಬಂದಲ್ಲಿ ರಾಕ್ಸ್ಟಾರ್ ಮಾದರಿಯ ಸ್ವಾಗತವನ್ನು ಮೋದಿ ಪಡೆಯುತ್ತಾರೆ ಎಂಬುದಕ್ಕೆ ಇದು ನಿದರ್ಶನವಾಗಿದೆ.
ನ್ಯೂಯಾರ್ಕ್ನಲ್ಲಿ ಸೆಪ್ಟೆಂಬರ್ 20 ರಿಂದ 23ರ ವರೆಗೆ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ನರೇಂದ್ರ ಮೋದಿ ಅಮೆರಿಕಾಗೆ ಭೇಟಿ ನೀಡಲಿದ್ದಾರೆ. ವಿಶ್ವದ ಇಂಧನ ರಾಜಧಾನಿಯಾದ ಟೆಕ್ಸಾಸ್ನಲ್ಲಿ ‘ಹೌಡಿ, ಮೋದಿ’ ಕಾರ್ಯಕ್ರಮದಲ್ಲಿ ಅವರು ಮಾಡಲಿರುವ ಭಾಷಣವು ಇಂಧನ ಸುರಕ್ಷತೆ ಮತ್ತು ನಾವೀನ್ಯತೆ ಪ್ರಧಾನ ಮಂತ್ರಿಯ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿರುವ ಸಮಯದಲ್ಲಿ ಜರಗುತ್ತಿದೆ ಎಂಬುದು ವಿಶೇಷ. ಟೆಕ್ಸಾಸ್ ಅನಿವಾಸಿ ಭಾರತೀಯರು, ಭಾರತ ಸರ್ಕಾರ ಮತ್ತು ಅಮೆರಿಕಾದ ನಡುವೆ ಇಂಧನ ಸುರಕ್ಷತೆಯ ವಿಷಯದಲ್ಲಿ ಹೆಚ್ಚಿನ ಸಹಯೋಗವನ್ನು ನಿರೀಕ್ಷಿಸುತ್ತಿದ್ದಾರೆ.
“ನಮ್ಮ ಪ್ರದೇಶ ಮತ್ತು ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ‘ಹೊಸ ಭಾರತ’ದ ಆಕಾಂಕ್ಷೆಗಳ ನಡುವೆ ಅಭೂತಪೂರ್ವ ಸಮನ್ವಯ ಇದೆ. ಅಮೆರಿಕನ್ನರ ಕನಸು ಉದಯೋನ್ಮುಖ ಭಾರತೀಯ ಕನಸಿನೊಂದಿಗೆ ಅನೇಕ ಹೋಲಿಕೆಗಳನ್ನು ಹೊಂದಿದೆ’ ಎಂದು ಮಲಾನಿ ಹೇಳುತ್ತಾರೆ. “ಹಂಚಿದ ಕನಸುಗಳು, ಪ್ರಕಾಶಮಾನವಾದ ಭವಿಷ್ಯಗಳು ಅಮೆರಿಕಾ ಮತ್ತು ಭಾರತದ ಶ್ರೇಷ್ಠ ಪ್ರಜಾಪ್ರಭುತ್ವಗಳನ್ನು ಒಟ್ಟುಗೂಡಿಸುವ ಮತ್ತು ಸಾಮಾನ್ಯ ಆಕಾಂಕ್ಷೆಗಳನ್ನು ನಿರ್ಮಿಸುವ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ” ಎಂದಿದ್ದಾರೆ.
ನರೇಂದ್ರ ಮೋದಿ ಅವರು ವಿಶ್ವದಾದ್ಯಂತದ ಎನ್ಆರ್ಐ ಮತ್ತು ಪಿಐಒ ಸಮುದಾಯದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದಾರೆ. ದೊಡ್ಡ ಪ್ರಮಾಣದ ಭಾರತೀಯ ವಲಸೆಗಾರರನ್ನು ಹೊಂದಿರುವ ಅಮೆರಿಕಾಗೆ, ಇಂಗ್ಲೆಂಡಿಗೆ ಅವರು ಭೇಟಿ ನೀಡಿದಾಗಲೆಲ್ಲಾ ಅಪಾರ ಪ್ರಮಾಣದ ಜನರು ಅವರ ಸ್ವಾಗತಕ್ಕೆ ಬಂದು ನಿಲ್ಲುತ್ತಾರೆ. ಡೊನಾಲ್ಡ್ ಟ್ರಂಪ್ ಅವರು 2020 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಲು ನರೇಂದ್ರ ಮೋದಿಯವರ ಜನಪ್ರಿಯತೆಯ ಲಾಭವನ್ನು ಪಡೆದುಕೊಳ್ಳುವ ಲೆಕ್ಕಾಚಾರ ಹಾಕುತ್ತಿದ್ದಾರೆ. ದೇಶೀಯ ಚುನಾವಣೆಯಲ್ಲಿ ಗೆಲ್ಲಲು ವಿದೇಶಿ ಮುಖಂಡರು ಪ್ರಧಾನಿ ನರೇಂದ್ರ ಮೋದಿಯವರ ಸಹಾಯವನ್ನು ಪರೋಕ್ಷವಾಗಿ ಪಡೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲಿ ಚುನಾವಣೆಯ ವೇಳೆ ನರೇಂದ್ರ ಮೋದಿಯವರ ಬೆಂಬಲವನ್ನು ಕೋರಿದ್ದರು. ಮಾತ್ರವಲ್ಲದೇ, ಯಶಸ್ವಿ ವಿದೇಶಾಂಗ ನೀತಿಯ ಸಂಕೇತವಾಗಿ ನೆತನ್ಯಾಹು ಮತ್ತು ಮೋದಿಯನ್ನು ಹೊಂದಿದ್ದ ದೊಡ್ಡ ಬ್ಯಾನರ್ಗಳನ್ನು ಹಾಕಿದ್ದರು. ನರೇಂದ್ರ ಮೋದಿಯವರ ಜನಪ್ರಿಯತೆ ಮತ್ತು ವಿದೇಶಿ ನಾಯಕರು ಅವರ ಮೇಲೆ ಇಟ್ಟಿರುವ ವಿಶ್ವಾಸವು ಕಳೆದ ಕೆಲವು ವರ್ಷಗಳಲ್ಲಿ ಭಾರತದ ವಿದೇಶಾಂಗ ನೀತಿಯು ಅಂತಹ ಮಹತ್ವದ ಸುಧಾರಣೆಯನ್ನು ಯಾಕೆ ದಾಖಲಿಸಿದೆ ಎಂಬುದಕ್ಕೆ ಉತ್ತರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.