ನವದೆಹಲಿ: ಪ್ರಾಥಮಿಕ ಆರೋಗ್ಯ ಮತ್ತು ರೋಗ ತಡೆಗಟ್ಟುವಿಕೆಗೆ ಹೆಚ್ಚಿನ ಉತ್ತೇಜನವನ್ನು ನೀಡುವ ಸಲುವಾಗಿ ಆಯುಷ್ಮಾನ್ ಯೋಜನೆಯಡಿ ದೇಶದಾದ್ಯಂತ ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರವು ಕಳೆದ ಒಂದು ವರ್ಷದಲ್ಲಿ ರಾಷ್ಟ್ರದಾದ್ಯಂತ ಕನಿಷ್ಠ 20,942 ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ನಿರ್ಮಾಣ ಮಾಡಿದೆ.
ಈ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಪ್ರಧಾನಿ ನರೇಂದ್ರ ಮೋದಿಯವರ ಪ್ರಮುಖ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತ್ನ ಒಂದು ಭಾಗವಾಗಿದೆ. ಈ ಕೇಂದ್ರಗಳು ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸುವ ಮತ್ತು ಸಮುದಾಯ ಮಟ್ಟದಲ್ಲಿ ರೋಗಗಳನ್ನು ತಡೆಗಟ್ಟಿ ಆರೋಗ್ಯ ರಕ್ಷಣೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನೂ ಇವುಗಳು ಮಾಡುತ್ತವೆ.
“2022 ರ ಡಿಸೆಂಬರ್ ವೇಳೆಗೆ 1,50,000 ಉಪ-ಆರೋಗ್ಯ ಕೇಂದ್ರಗಳನ್ನು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನಾಗಿಸುವ ಗುರಿಯನ್ನು ಹೊಂದಲಾಗಿದೆ. 2019 ರ ಸೆಪ್ಟೆಂಬರ್ 12 ರಂದು 20,942 ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ದೇಶಾದ್ಯಂತ ಕಾರ್ಯರೂಪಕ್ಕೆ ತರಲಾಗಿದೆ”ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಂಕಿಅಂಶಗಳ ಪ್ರಕಾರ, ಮಹಾರಾಷ್ಟ್ರವು 2854 ಕೇಂದ್ರಗಳನ್ನು ಹೊಂದಿದೆ, ಇದು ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಅತಿ ಹೆಚ್ಚು. ಆಂಧ್ರಪ್ರದೇಶ 2177, ಉತ್ತರಪ್ರದೇಶದಲ್ಲಿ 2125, ತಮಿಳುನಾಡು 1798, ಗುಜರಾತ್ 1613 ಮತ್ತು ಒರಿಸ್ಸಾದಲ್ಲಿ 1004 ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.