ಗಡಿ ರಾಜ್ಯಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯು ದೇಶದ ಭದ್ರತೆಗೆ ಅತೀ ಮುಖ್ಯವಾದುದು. ಆದರೂ ಕೂಡ ಹಿಂದಿನ ಸರ್ಕಾರಗಳು ಕಳೆದ ಆರು ದಶಕಗಳಲ್ಲಿ ಈ ವಿಷಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಲೇ ಬಂದಿತ್ತು. ಕ್ಲಿಷ್ಟ ಭೂಪ್ರದೇಶ ಮತ್ತು ಸುದೀರ್ಘ ಆವಧಿಯ ಹಿಮಪಾತದಿಂದಾಗಿ ಈ ರಾಜ್ಯಗಳಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಕಠಿಣವಾಗಿದೆ. ಆದರೆ ಅಲ್ಲಿ ವಾಸಿಸುವ ಜನರ ಕಾರ್ಯತಂತ್ರದ ಭದ್ರತೆ ಮತ್ತು ಕಲ್ಯಾಣಕ್ಕಾಗಿ ಈ ಪ್ರದೇಶಗಳಿಗೆ ಸಂಪರ್ಕವು ಬಹು ಮುಖ್ಯವಾಗಿದೆ. ಎಂಟು ಈಶಾನ್ಯ ರಾಜ್ಯಗಳು ಮತ್ತು ಲಡಾಖ್ ಪ್ರದೇಶವನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸಲು ಮೋದಿ ಸರ್ಕಾರ ಮಹತ್ತರ ಪ್ರಯತ್ನಗಳನ್ನು ಮಾಡಿದೆ.
ಗಡಿ ಪ್ರದೇಶಗಳಲ್ಲಿನ ಸಂಪರ್ಕವನ್ನು ಸುಧಾರಿಸಲು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿರುವ ಮೋದಿ ಸರ್ಕಾರವು, ವಿಶ್ವದ ಅತೀ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಗ್ಲೇಸಿಯರ್ ಪ್ರದೇಶದ ಎಲ್ಲಾ ರಸ್ತೆಗಳನ್ನು ಆಧುನೀಕರಿಸಲು ಮತ್ತು ಅಲ್ಲಿ ಹೊಸ ರಸ್ತೆಗಳನ್ನು ನಿರ್ಮಿಸಲು ನಿರ್ಧರಿಸಿದೆ. ಇದು ಹಿಮಾಲಯದ ಆಯಕಟ್ಟಿನ ಯುದ್ಧಭೂಮಿಗೆ ಕ್ಷಿಪ್ರಗತಿಯಲ್ಲಿ ಸಶಸ್ತ್ರ ಪಡೆಗಳನ್ನು ರವಾನಿಸಲು ಸಹಾಯ ಮಾಡಲಿದೆ. 1984ರ ನಂತರ ಭಾರತೀಯ ಸೇನೆಯು ಸಿಯಾಚಿನ್ ಗ್ಲೇಸಿಯರಿನಲ್ಲಿ ಬೇಸ್ ಕ್ಯಾಂಪ್ ಅನ್ನು ಹೊಂದಿದೆ, 1984ರಲ್ಲಿ ಈ ಪ್ರದೇಶವನ್ನು ನಿಯಂತ್ರಿಸುವ ಪಾಕಿಸ್ಥಾನದ ಯೋಜನೆಯನ್ನು ಆಪರೇಷನ್ ಮೇಘದೂತ್ ಮೂಲಕ ಭಾರತೀಯ ಸೇನೆ ವಿಫಲಗೊಳಿಸಿತ್ತು.
ಪನಾಮಿಕ್ನಿಂದ ಸಿಯಾಚಿನ್ ಬೇಸ್ ಕ್ಯಾಂಪ್ವರೆಗಿನ ರಸ್ತೆಗಳನ್ನು ಬಾರ್ಡರ್ ರೋಡ್ಸ್ ಆರ್ಗನೈಝೇಶನ್ (ಬಿಆರ್ಒ), ವಿಜಯಕ್ ಎಂಬ ಯೋಜನೆಯ ಅಡಿಯಲ್ಲಿ ನಿರ್ಮಿಸಲಿದೆ. ಸಿಯಾಚಿನ್ ಪ್ರದೇಶವು ಹವಾಮಾನ ವೈಪರೀತ್ಯವನ್ನು ಹೊಂದಿದೆ, ಮತ್ತು ಈ ಯೋಜನೆಗಳ ಸುಸ್ಥಿರತೆಗೆ ಆಧುನಿಕ ತಂತ್ರಜ್ಞಾನದ ಅಗತ್ಯವಿದೆ. “ಈ ಹವಾಮಾನ ಪರಿಸ್ಥಿತಿಗಳಲ್ಲಿ, ಬೇಸಿಗೆಯಲ್ಲಿ ತಾಪಮಾನವು ಮೈನಸ್ 10-15 ಡಿಗ್ರಿಗಳಿಗೆ ಇಳಿಯುವ ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸುವುದು ಮತ್ತು ನಿರ್ಮಾಣ ಚಟುವಟಿಕೆಗಳನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಿರ್ಮಾಣ ಸಲಕರಣೆಗಳ ಸಾಗಾಣೆಗಾಗಿ ಬಿಆರ್ಒ ಹೊಸ ಸೇತುವೆಗಳನ್ನು ನಿರ್ಮಿಸಲಿದೆ. ಕಳೆದ ವರ್ಷ, ಸಿಯಾಚಿನ್ ಬೇಸ್ ಕ್ಯಾಂಪ್ಗೆ ವಾಹನ ಸಂಚಾರವನ್ನು ಸುಲಭಗೊಳಿಸಲು ಬಿಆರ್ಒ ಪ್ರಾಜೆಕ್ಟ್ ಹಿಮಾಂಕ್ ಅಡಿಯಲ್ಲಿ 35 ಮೀಟರ್ ಉದ್ದದ ‘ಚಮಸಾನ್’ ಸೇತುವೆಯನ್ನು ನಿರ್ಮಾಣ ಮಾಡಿತು.
ಈ ಹಿಂದೆ, ಭಾರತೀಯ ಸೇನೆಯು ಲಡಾಖ್ ಪ್ರದೇಶದಲ್ಲಿ ಅತಿ ಉದ್ದದ ತೂಗು ಸೇತುವೆಯನ್ನು 40 ದಿನಗಳಲ್ಲಿ ನಿರ್ಮಿಸಿತ್ತು. ಸಿಂಧೂ ನದಿಯ ಮೇಲೆ 260 ಅಡಿ ಉದ್ದದ ಸೇತುವೆಯನ್ನು ನಿರ್ಮಿಸಲಾಗಿದೆ ಮತ್ತು ಮೈತ್ರಿ ಸೇತುವೆ ಎಂದು ಇದಕ್ಕೆ ಹೆಸರಿಸಲಾಗಿದೆ. ಈ ಸೇತುವೆಯನ್ನು ಭಾರತೀಯ ಸೇನೆಯು ಚೋಗ್ಲಾಮ್ಸರ್, ಸ್ಟೋಕ್ ಮತ್ತು ಚುಚೋಟ್ ನಿವಾಸಿಗಳಿಗೆ ಸಹಾಯ ಮಾಡುವ ಸಲುವಾಗಿ ನಿರ್ಮಾಣ ಮಾಡಲಾಗಿದೆ.
ಲಡಾಖ್ ಪ್ರದೇಶವು ಚೀನಾದೊಂದಿಗಿನ ಗಡಿ ಪ್ರದೇಶವಾಗಿರುವ ಕಾರಣ ಕಾರ್ಯತಾಂತ್ರಿಕವಾಗಿ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹೀಗಾಗಿ ಸ್ಥಳೀಯ ಜನಸಂಖ್ಯೆ ಮತ್ತು ಸಶಸ್ತ್ರ ಪಡೆಗಳಿಗೆ ಸಹಾಯ ಮಾಡಲು ಉತ್ತಮ ಸಂಪರ್ಕದ ಅಗತ್ಯವಿದೆ. ಮೈತ್ರಿ ಸೇತುವೆ ಭಾರತೀಯ ಸೇನೆಯ ಸಾಮರ್ಥ್ಯವನ್ನೂ ಪ್ರತಿಬಿಂಬಿಸುತ್ತದೆ.
ಮೋದಿ ಸರ್ಕಾರವು ಈಶಾನ್ಯ ಮತ್ತು ಜಮ್ಮು ಮತ್ತು ಕಾಶ್ಮೀರದ ಸೂಕ್ಷ್ಮ ಪ್ರದೇಶಗಳಲ್ಲಿ ಮೂಲಸೌಕರ್ಯ ವೆಚ್ಚವನ್ನು ಹೆಚ್ಚಿಸಿದೆ. ಚೀನಾ ಮತ್ತು ಪಾಕಿಸ್ಥಾನ ಎಂದಿಗಿಂತಲೂ ಹೆಚ್ಚು ಆಕ್ರಮಣಕಾರಿಯಾಗಿ ಈಗ ವರ್ತಿಸುತ್ತಿವೆ, ಹೀಗಾಗಿ ಭಾರತವು ಎರಡು ಬದಿಯ ಯುದ್ಧಕ್ಕೆ ಸಿದ್ಧವಾಗುವುದು ಅನಿವಾರ್ಯವಾಗಿದೆ. ಎರಡು-ಬದಿಯ ಯುದ್ಧವನ್ನು ಹೋರಾಡಲು ಕೇವಲ ಸಶಸ್ತ್ರ ಪಡೆಗಳು ಪ್ರಬಲವಾಗಿದ್ದರೆ ಸಾಲದು, ಗಡಿ ಪ್ರದೇಶಗಳ ಸಂಪರ್ಕವು ಪ್ರಬಲವಾಗಿರುವುದು ಅತೀ ಮುಖ್ಯವಾಗಿದೆ. ಭಾರತದ ಕಾರ್ಯತಾಂತ್ರಿಕ ಹಿತಾಸಕ್ತಿಯನ್ನು ಭದ್ರಪಡಿಸಿಕೊಳ್ಳಲು ಮೂಲಸೌಕರ್ಯಗಳ ಮೇಲಿನ ಖರ್ಚು ನಿರ್ಣಾಯಕವಾಗುತ್ತದೆ.
ಸಶಸ್ತ್ರ ಪಡೆಗಳ ಸಾಗಾಣೆಗಾಗಿ ಗಡಿ ಪ್ರದೇಶದಲ್ಲಿ ದೃಢವಾದ ಮೂಲಸೌಕರ್ಯವನ್ನು ಹೊಂದಿದ್ದರೆ ಮಾತ್ರ ಭಾರತವು ಚೀನಾಕ್ಕೆ ಸೂಕ್ತವಾದ ಉತ್ತರವನ್ನು ನೀಡಬಲ್ಲದು. ಈ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಯು ನಾಗರಿಕ ದೃಷ್ಟಿಕೋನದಿಂದಲೂ ಬಹು ಮುಖ್ಯವಾಗಿದೆ, ಇದರಿಂದ ಆ ಪ್ರದೇಶಗಳಲ್ಲಿ ವಾಸಿಸುವ ಜನರ ಜೀವನ ಸ್ವಲ್ಪಮಟ್ಟಿಗಾದರೂ ಸುಲಲಿತಗೊಳ್ಳುತ್ತದೆ. ಗಡಿ ಪ್ರದೇಶಗಳ ಜನರು ತುಂಬಾ ಕಷ್ಟದ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ, ಆದ್ದರಿಂದ ಇಲ್ಲಿ ಸರ್ಕಾರದ ಹೂಡಿಕೆ ಅಗತ್ಯ. ಈ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಯು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಇದು ಗಡಿ ರಾಜ್ಯಗಳಲ್ಲಿ ವಾಸಿಸುವ ಜನರಿಗೆ ಆರ್ಥಿಕ ಸಮೃದ್ಧಿಯನ್ನೂ ತಂದುಕೊಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.