ನವದೆಹಲಿ: ಏಕ-ಬಳಕೆಯ ಪ್ಲಾಸ್ಟಿಕ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕರೆಗೆ ಓಗೊಟ್ಟಿರುವ ಭಾರತೀಯ ರೈಲ್ವೇಯು, ದೇಶದ 400 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಚಹಾ, ಲಸ್ಸಿ ಮತ್ತು ಇತರ ಆಹಾರ ಪದಾರ್ಥಗಳನ್ನು ಮಣ್ಣಿನ ಪಾತ್ರೆಗಳಲ್ಲಿ ಪೂರೈಕೆ ಮಾಡಲು ನಿರ್ಧರಿಸಿದೆ.
ಮಣ್ಣಿನ ಮಡಕೆ ಮಾತ್ರವಲ್ಲದೇ, ಗ್ಲಾಸ್, ಕುಲ್ಹಡ್ಸ್ ಮತ್ತು ಪ್ಲೇಟ್ ಮುಂತಾದ ವಸ್ತುಗಳನ್ನೂ ಅದು ಆಹಾರ ಪೂರೈಸಲು ಬಳಕೆ ಮಾಡಿಕೊಳ್ಳಲಿದೆ. ಈ ಕಾರ್ಯಕ್ಕಾಗಿ ಭಾರತೀಯ ರೈಲ್ವೆಯು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಯೊಂದಿಗೆ ಕೈಜೋಡಿಸಿದೆ. ಕೆವಿಐಸಿಯು ರಾಷ್ಟ್ರದಾದ್ಯಂತ ಕುಂಬಾರರಿಗೆ ಉದ್ಯೋಗವನ್ನು ಹೆಚ್ಚಿಸಲು ಮತ್ತು ಅವರಿಗೆ ಗಳಿಸುವ ಅವಕಾಶವನ್ನು ಕಲ್ಪಿಸಲು ‘ಕುಂಬಾರ್ ಸಶಕ್ತಿಕರಣ್ ಯೋಜನಾ’ದಂತಹ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಸೆಪ್ಟೆಂಬರ್ 9 ರಂದು ಹೊರಡಿಸಲಾದ ಪತ್ರವೊಂದರಲ್ಲಿ ಭಾರತೀಯ ರೈಲ್ವೇಯು, ಸ್ಥಳೀಯವಾಗಿ ಉತ್ಪಾದಿಸುವ ಪರಿಸರ-ಸ್ನೇಹಿ ಉತ್ಪನ್ನಗಳನ್ನು ಅಡುಗೆ ಪದಾರ್ಥಗಳ ಪೂರೈಕೆಗೆ ಬಳಸಬೇಕು ಎಂದು ವಿವಿಧ ರೈಲ್ವೆ ವಲಯಗಳ ಎಲ್ಲಾ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಿಗೆ (ಪಿಸಿಸಿಎಂ) ಮತ್ತು IRCTC ಸಿಎಂಡಿಗಳಿಗೆ ಸೂಚನೆಯನ್ನು ನೀಡಿತ್ತು.
ಈ ಯೋಜನೆಯ ಅನುಷ್ಠಾನಕ್ಕಾಗಿ ರೈಲ್ವೆಗಳು ತಮ್ಮ ವಲಯ ರೈಲ್ವೆಯಲ್ಲಿ ಕ್ರಮವಾಗಿ 25 ರೈಲ್ವೆ ನಿಲ್ದಾಣಗಳನ್ನು ಗುರುತಿಸುವಂತೆಯೂ ಸೂಚನೆಗಳನ್ನು ನೀಡಿತ್ತು.
ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯಾದ 2019ರ ಅಕ್ಟೋಬರ್ 2 ರೊಳಗೆ ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಲ್ಲಿಸಬೇಕು ಎಂದು ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಉಲ್ಲೇಖ ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.