ಬಂಗಾಳದ ಕ್ರಾಂತಿಕಾರಿಗಳ ಒಂದು ವೈಶಿಷ್ಟ್ಯವೆಂದರೆ, ಧರ್ಮದ ಮೂಲಕ ರಾಷ್ಟ್ರವನ್ನು, ರಾಷ್ಟ್ರದ ಮೂಲಕ ಧರ್ಮವನ್ನು ನೋಡುವ ಅವರ ದೃಷ್ಟಿ. ಅದು ವಿವೇಕಾನಂದರ, ಶ್ರೀ ಅರವಿಂದರ ಪ್ರಭಾವವೇ ಸರಿ…
“ಒಂದು ವೇಳೆ ಜತೀಂದ್ರನ ಯೋಜನೆಗಳು ಫಲಿಸಿದ್ದಿದ್ದರೆ, ಗಾಂಧೀಜಿಯ ಆಗಮನಕ್ಕಿಂತ ಮುಂಚೆಯೇ ಭಾರತ ಸ್ವಾತಂತ್ರವಾಗುತ್ತಿತ್ತು ಮತ್ತು ರಾಷ್ಟ್ರಪಿತನ ಸ್ಥಾನ ಜತೀಂದ್ರನಿಗೆ ಸಲ್ಲುತ್ತಿತ್ತು.”
– ಹೀಗಂತ ಬರೆದಿದ್ದು ಜೆಕ್ ಮೂಲದ, ಅಮೇರಿಕಾದ ಪತ್ರಕರ್ತ ರಾಸ್ ಹೆದ್ವಿಸೆಕ್.
ಇಷ್ಟಕ್ಕೂ, ಹೀಗೆ ಬರೆದಿದ್ದು ಉತ್ಪ್ರೇಕ್ಷೆಯೇನು ಅಲ್ಲ. ಜತೀಂದ್ರನ ಆಲೋಚನೆಗಳೇ ಹಾಗಿದ್ದವು. ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ನಿರಂತರ ತುಡಿತ, ಅದ್ಭುತ ಬುದ್ಧಿಶಕ್ತಿ, ಬಾಹುಬಲ ಇವೆಲ್ಲದರ ಸಂಗಮವಾಗಿದ್ದವನು ಅವನು. ಸುಭಾಶರಿಗಿಂತಲೂ ಮೊದಲೇ, ಅನ್ಯ ದೇಶಗಳ ಸಹಾಯ ಪಡೆದುಕೊಂಡು ಭಾರತದ ನೆಲದಲ್ಲಿ ಬ್ರಿಟಿಷರ ವಿರುದ್ಧ ಸಿಡಿದೇಳುವ ಮಹತ್ ಸಾಹಸಕ್ಕೆ ಕೈಹಾಕಿದ ಧೀರ..!!
ಶ್ರೀ ಬಾಬು ಕೃಷ್ಣಮೂರ್ತಿಯವರು, ಇದೆ ಜತೀಂದ್ರನ ಪೂರ್ಣ ಇತಿಹಾಸವನ್ನು, ‘ರುಧಿರಾಭಿಷೇಕ’ದಲ್ಲಿ ಅದ್ಭುತವಾಗಿ ಲಿಖಿತಗೊಳಿಸಿದ್ದಾರೆ. ಆದರೂ, ಜತೀಂದ್ರನಂತಹ ಮೇರು ವ್ಯಕ್ತಿಯ ಬಗ್ಗೆ ಸ್ವಲ್ಪವಾದರೂ ಬರೆಯುವುದರಿಂದ ನನ್ನ ಲೇಖನಿಗೂ ಪಾವಿತ್ರ್ಯತೆ ಸಿಕ್ಕೀತು ಎಂಬ ಭಾವವೇ ಈ ಬರಹಕ್ಕೆ ಪ್ರೇರಣೆ..!!
ಜತೀಂದ್ರ ವಿವೇಕಾನಂದರ ಆಶೀರ್ವಾದದೊಂದಿಗೆ, ಶ್ರೀ ಅರವಿಂದರ ಮಾರ್ಗದರ್ಶನದಲ್ಲಿ ಬೆಳೆದವನು. ಸಂಪೂರ್ಣ ಸಮಾಜಸೇವೆಯಲ್ಲಿಯೇ ತೊಡಗಿಸಿಕೊಂಡವನು ಈ ಜತೀನ್. ಬಾಲ್ಯದಲ್ಲಿ, ತಾಯಿ ಹೇಳುತ್ತಿದ್ದ ಮಹಾಭಾರತ, ರಾಮಾಯಣ, ಶಿವಾಜಿಯ ಚರಿತ್ರೆ ಇವನ್ನೆಲ್ಲ ಕೇಳಿ ಮಾನಸಿಕವಾಗಿ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಿದ್ದ. ಶಿವಾಜಿಗೆ ತಾಯಿ ಭವಾನಿಯೇ ಬಂದು ಖಡ್ಗವನ್ನು ಕೊಟ್ಟ ಕಥೆಯನ್ನು ಕೇಳಿದ ಮೇಲಂತೂ, ತನಗೂ ಹಾಗೊಂದು ಖಡ್ಗ ಸಿಗಬಾರದೇ ಅಂತ ಹಂಬಲಿಸುತ್ತಿದ್ದ. ಒಮ್ಮೆ ಊರಿನ ಕಾಳಿಯ ಗುಡಿಯಲ್ಲಿ ಅಡ್ಡಾಡುವಾಗ, ಹರಕೆಗೆಂದು ಇಟ್ಟಿದ್ದ ಕೆಲವು ಕತ್ತಿಗಳು ಕಂಡವು. ತಾಯಿಯೇ ಅದನ್ನು ಅನುಗ್ರಹಿಸಿದಳೆಂದು ಅದರಲ್ಲಿನ ಒಂದನ್ನು ತಾನಿಟ್ಟುಕೊಂಡಿದ್ದ.
ಜತೀಂದ್ರನಿಗೆ ‘ಬಾಘಾ ಜತೀನ್’ ಎಂಬ ಹೆಸರೂ ಇದೆ. ಅದು ಬರಲು ಕಾರಣವೂ ಒಂದು ರೋಚಕ. ಜತೀನ್ ಇದ್ದದ್ದು ಕೋಯಾ ಎಂಬ ಹಳ್ಳಿಯಲ್ಲಿ. ಆಗೆಲ್ಲ ಒಂದು ಹಳ್ಳಿಯಿಂದ ಮತೂಂದು ಹಳ್ಳಿಗೆ ಹೋಗಲು ಕಾಲುನಡಿಗೆಯೇ ಇದ್ದದ್ದು. ಅದೂ ಕಾಡಿನ ದಾರಿಯ ಮಧ್ಯೆ. ಹೇಳಿ ಕೇಳಿ ಬಂಗಾಳದ ಪ್ರಾಂತ ಅದು. ಹುಲಿಗಳ ಪ್ರದೇಶ. ಇವನಿದ್ದ ಹಳ್ಳಿಯ ಸುತ್ತ ಒಂದು ಹುಲಿ ಆತಂಕ ಸೃಷ್ಟಿಸಿತ್ತು. ಅದೊಮ್ಮೆ, ಯಾವುದೇ ಕಾರ್ಯಕ್ಕೆ ಆ ಕಾಡಿನ ಮಾರ್ಗವಾಗಿ ಪಕ್ಕದ ಹಳ್ಳಿಗೆ ಹೋಗುವ ಅನಿವಾರ್ಯ ಸಂದರ್ಭ ಒದಗಿತು. ಅದೂ ರಾತ್ರಿಯಲ್ಲಿ. ಜತೀನ್ ತನ್ನ ಆ ಕತ್ತಿ, ಮತ್ತು ಅಂಚೆಪೇದೆ ಬಳಸುತ್ತಿದ್ದ ಗೆಜ್ಜೆಯ ಕೋಲನ್ನು ತೆಗೆದುಕೊಂಡು ಹೊರಟ. ಕಾಡಿನ ಮಧ್ಯೆ ಹೋಗುವಾಗ, ದೂರದಲ್ಲಿ ಎರಡು ಸಣ್ಣ ಮಿಣುಕು ದೀಪಗಳು ಕಂಡವು. ಯಾರೋ ದೀಪ ಹಚ್ಚಿಕೊಂಡು ಬರುತ್ತಿರಬೇಕೆಂದು ಭಾವಿಸಿದ. ಬರುಬರುತ್ತಾ ದೀಪ ಸಮೀಪ ಬಂದಂತೆ ಅನ್ನಿಸಿತು. ಪೂರ್ಣ ಹತ್ತಿರಕ್ಕೆ ಬಂದಾಗಲೇ ಅವನಿಗೆ ತಿಳಿದದ್ದು, ಅವು ದೀಪವಲ್ಲ, ಹುಲಿಯ ಕಣ್ಣುಗಳೆಂದು.!! ಎದುರಿಗೆ, ನರಭಕ್ಷಕ ಹುಲಿಯನ್ನು ಕಂಡವನಿಗೆ ಹೇಗಾಗಿರಬೇಡ. ಹುಲಿ ಅವನ ಮೇಲರಿಗಿತು. ಅವನೂ ಅದರ ಮೇಲೆ ಪ್ರಹಾರ ಮಾಡಿದ. ಹುಲಿಯ ಪಂಜಿನ ಹೊಡೆತ ತಿಂದ ಮೇಲೆಯೂ ಕೊನೆಗೆ ಆ ಹುಲಿಯನ್ನು ಕೊಲ್ಲುವಲ್ಲಿ ಯಶಸ್ವಿಯಾದ. ಯಾರಿಂದಲೂ ಸಾಧ್ಯವಾಗದ ಹುಲಿಯ ಸಂಹಾರವನ್ನು ಜತೀಂದ್ರ ಮಾಡಿ ಮುಗಿಸಿದ್ದ. ಅಂದಿನಿಂದ ‘ಬಾಘಾ ಜತೀನ್’ ಎಂಬ ಬಿರುದು ಅಂಟಿಕೊಂಡಿತು. ನಂತರ, ಕಲ್ಕತ್ತೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಸ್ವಾಮೀ ವಿವೇಕಾನಂದರ ದರ್ಶನವಾಯಿತು. ಅಲ್ಲಿಂದ ಅವನ ಜೀವನ ಸಂಪೂರ್ಣ ರಾಷ್ಟ್ರಮಯ..!
‘ಆಲಿಪುರ ಬಾಂಬ್ ಪ್ರಕರಣ’ದ ನಂತರ, ಅರವಿಂದರ ಸಹೋದರ, ಬಾರೀಂದ್ರಕುಮಾರ್ ಘೋಷ್ ಶಿಕ್ಷೆಗೆ ಗುರಿಯಾದ ಮೇಲೆ, ಬಂಗಾಳದ “ಅನುಶೀಲನ ಸಮಿತಿ”ಯು, ಸಮರ್ಥ ನಾಯಕನಿಲ್ಲದೇ ಶಿಥಿಲವಾಗತೊಡಗಿತ್ತು. ಆಗ ಅರವಿಂದರ ಕಣ್ಣಿಗೆ ಬಿದ್ದವನೇ ಈ ಜತೀನ್. ತನ್ನ ಧೈರ್ಯ-ಸಾಹಸಗಳಿಂದ, ಅಪ್ರತಿಮ ದೇಶಭಕ್ತಿಯಿಂದ, ಎಲ್ಲರೊಡನೆ ಬೆರೆಯುವ ಸರಳತೆಯಿಂದ ಎಲ್ಲರಿಗೂ ಅಚ್ಚುಮೆಚ್ಚಿನವನಾದ್ದರಿಂದ, ಸಹಜವಾಗಿಯೇ ಉಳಿದೆಲ್ಲ ಯುವಕ್ರಾಂತಿಕಾರಿಗಳು, ಅವನ ನಾಯಕತ್ವಕ್ಕೆ ಸಮ್ಮತಿ ಸೂಚಿಸಿದರು. ಜತೀನ್ ಒಬ್ಬ ಅತ್ಯುತ್ತಮ ಸಂಘಟನಾಕಾರ. ಅಲ್ಲೊಂದು ಛಾತ್ರಭಂಡಾರ ಅನ್ನೋ ಅಂಗಡಿ ಇತ್ತು. ಅದೇ ಈ ಕ್ರಾಂತಿಕಾರಿಗಳ training center. ಅದು ನೋಡ್ಲಿಕ್ಕೆ ಒಂದು ಬಟ್ಟೆ ಅಂಗಡಿ, ಆದ್ರೆ ಅದರ ನೆಲಮಾಳಿಗೆಯಲ್ಲಿ ಪ್ರತಿನಿತ್ಯ ಕ್ರಾಂತಿಕಾರಿಗಳ ಸಭೆ ಸೇರ್ತಿತ್ತು. ಅಲ್ಲಿ ದಿನಾ ಉಪನ್ಯಾಸ ನೀಡುತ್ತಿದ್ದವನು ಈ ಜತೀನನೆ. ನಡೆಯುತ್ತಿದ್ದಿದ್ದು ಗೀತೆಯ ಉಪನ್ಯಾಸ. ಪ್ರತಿನಿತ್ಯ ಗೀತೆಯ ಶ್ಲೋಕಗಳನ್ನು ಮನನ ಮಾಡುತ್ತಾ, ಅದರ ಅರ್ಥವನ್ನು ರಾಷ್ಟ್ರೀಯವಾಗಿ ಮಾರ್ಪಡಿಸಿ, ಯುವಕರಲ್ಲಿ ದೇಶಭಕ್ತಿಯ ಕೆಚ್ಚನ್ನು ಮೂಡಿಸುವ ಚಾಕಚಕ್ಯತೆ ಜತೀನನಲ್ಲಿತ್ತು. “ಆಮ್ರೋ ಮಾರ್ಬೋ, ಜಾತ ಜಾಗ್ಬೆ”-(ನಮ್ಮ ಆಹುತಿ, ರಾಷ್ಟದ ಜಾಗೃತಿ ) ಎಂಬ ಘೋಷಣೆಯನ್ನು ಸಹ ಕ್ರಾಂತಿಕಾರಿಗಳ ಮಂತ್ರವನ್ನಾಗಿಸಿದ್ದ. ಹೀಗೆ ‘ಅನುಶೀಲನ ಸಮಿತಿ’ಯನ್ನು ಮತ್ತೆ ಕಟ್ಟಿ, ಒಂದುಗೊಡಿಸಿದ್ದು ಕ್ರಾಂತಿಕಾರಿಗಳಲ್ಲಿ ನವಚೈತನ್ಯವನ್ನು ಮೂಡಿಸಿತ್ತು.
ಅವು ಮೊದಲನೇ ಪ್ರಪಂಚದ ಮಹಾಯುದ್ಧದ ದಿನಗಳು. ಜರ್ಮನಿ ಮತ್ತು ಇಂಗ್ಲೆಂಡ್ ವಿರುದ್ಧ ಬಣಗಳಲ್ಲಿದ್ವು ಅದೇ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಜತೀನ್ ಒಂದು ಉಪಾಯ ಮಾಡಿದ. ಜರ್ಮನಿಯ ಕ್ರಾಂತಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಅಲ್ಲಿಂದ ಆಯುಧಗಳನ್ನು ಆಮದುಮಾಡಿಕೊಂಡು, ಭಾರತದಲ್ಲಿ ದೊಡ್ಡ ಸಶಸ್ತ್ರಕ್ರಾಂತಿಯನ್ನು ಮಾಡಬೇಕು ಅಂತ. ಅದಕ್ಕಾಗಿ ‘ವೀರೇಂದ್ರನಾಥ್ ಚಟ್ಟೋಪಾಧ್ಯಾಯ’ ಎಂಬ ಕ್ರಾಂತಿಕಾರಿಯ ಮುಂದಾಳತ್ವದಲ್ಲಿ “ಬರ್ಲಿನ್ ಕಮಿಟಿ’ ಯನ್ನು ಸ್ಥಾಪಿಸಿ, ಜರ್ಮನಿಗೆ ಕಳಿಸಿದ್ದೂ ಆಯಿತು. ಎಲ್ಲ ಮಾತುಕತೆ ನಡೆದು, ಇನ್ನೇನು ಶಸ್ತ್ರಗಳು ಭಾರತಕ್ಕೆ ಬರಬೇಕು ಅನ್ನುವಷ್ಟರಲ್ಲಿ, ಅದ್ಹೇಗೋ ಜತೀನನ ಈ master plan, ಜೆಕ್ ಕ್ರಾಂತಿಕಾರಿಗಳ ಮುಖಾಂತರ ಬ್ರಿಟಿಷರಿಗೆ ಗೊತ್ತಾಗಿ ಹೋಯಿತು. ತಕ್ಷಣ ಕಾರ್ಯಪ್ರವೃತ್ತರಾದ ಬ್ರಿಟಿಷರು, ಜತೀನನ ಮೇಲೆ, ಅವನ ‘ಅನುಶೀಲನ ಸಮಿತಿ’ ಹಾಗೂ ಅದರ ಅಂಗವಾದ ‘ಯುಗಾಂತರ’ ಸಂಘಟನೆಗಳ ಕಣ್ಣಿಡಲು ಶುರುಮಾಡಿದರು. ಇದರ ವಾಸನೆಯನ್ನು ಅರಿತ ಜತೀನ್ ಕೂಡಲೇ ಭೂಗತನಾಗಿ ಹೋದ. ಜೊತೆಗಿದ್ದ ರಾಸಬಿಹಾರಿ ಬೋಸ್ ಕೂಡ ಜಪಾನಿಗೆ ಹೋಗಿಬಿಟ್ಟಿದ್ರು.
ಜತೀನ್ ಇದ್ದಿದ್ದು ಕಪ್ತಿಪಾಡಾ ಎಂಬಲ್ಲಿನ ಆಶ್ರಮದಲ್ಲಿ. ಕ್ರಾಂತಿಕಾರಿಗಳ ಮೇಲೆ ತೀವ್ರನಿಗಾ ಇಟ್ಟಿದ್ದ ಆಂಗ್ಲರು, ಬಾರಿಸೋಲ್ ನಗರದಲ್ಲಿನ “ಯುನಿವರ್ಸಲ್ ಎಂಪೋರಿಯಂ”ನ ಮೇಲೆ ದಾಳಿ ಮಾಡಿದಾಗ ಜತೀನನ ಬಗ್ಗೆ ಸುಳಿವು ಸಿಕ್ಕತು. ತಕ್ಷಣ ಕಪ್ತಿಪಾಡಾಕ್ಕೆ ಬ್ರಿಟಿಶ್ ಪಡೆ ಹೊರಟಿತು.ಕಪ್ತಿಪಾಡಾಕ್ಕೆ ಬ್ರಿಟಿಶ್ ಸೈನ್ಯ ಬರುತ್ತಿದೆ ಎಂಬ ಮಾಹಿತಿ ಸಿಕ್ಕಾಕ್ಷಣ ಪರಿಸ್ಥಿತಿಯ ವೈಷಮ್ಯವನ್ನು ತಿಳಿದ ಕೂಡಲೇ, ಜತೀನ್ ಅಲ್ಲಿದ್ದ ಕೆಲವರನ್ನು ಸೇರಿಸಿ ಸಭೆ ನಡೆಸಿದ. ರಾತ್ರೋರಾತ್ರಿ ‘ತಲಿದಾಹಾ’ಕ್ಕೆ ತೆರಳಿದ ಜತೀನ್ ಅಲ್ಲಿ ಇನ್ನಿಬ್ಬರು ತನ್ನ ಗೆಳೆಯರನ್ನು ಕೂಡಿಸಿ ತಿರುಗಿ ಕಪ್ತಿಪಾಡಾಕ್ಕೆ ಬಂದ. ಈಗ ಅವನೊಟ್ಟಿಗಿದ್ದಿದ್ದು, ಪಟ್ಟ ಶಿಷ್ಯರಾದ, “ಚಿತ್ತಪ್ರಿಯರಾಯ್ ಚೌಧರಿ”, “ಮನೋರಂಜನ್ ಸೇನಗುಪ್ತ”, “ನೀರೆಂದ್ರ ದಾಸಗುಪ್ತ”, ಮತ್ತು “ಜ್ಯೋತಿಶ್ ಚಂದ್ರ ಪಾಲ್”. ಮೌಸೆರ್ ಪಿಸ್ತೂಲ್, ಇನ್ನೊಂದಿಷ್ಟು ಆಯುಧಗಳನ್ನು ತೆಗೆದುಕೊಂಡು ಬಾರಿಸೋಲ್ನತ್ತ ಹೊರಟರು. ಆದರೆ ಅಲ್ಲಿಯೂ ಪರಿಸ್ಥಿತಿ ಸರಿಯಿರಲಿಲ್ಲ. ಕ್ರಾಂತಿಕಾರಿಗಳು ಡಕಾಯಿತರು ಎಂಬ ಭಾವನೆಯನ್ನು ಆಂಗ್ಲರು ಅಲ್ಲಿನ ಜನರಲ್ಲಿ ಬಿತ್ತಿದ್ದರಿಂದ ಜತೀನನಿಗೆ ಅಲ್ಲಿ ಕಷ್ಟವಾಗಿದ್ದರಿಂದ, ಅವರೆಲ್ಲ ಚಾಸಖಂದದ ಗುಡ್ಡಗಾಡಿನ ಪ್ರದೇಶಕ್ಕೆ ಹೊರಟರು. ದುರ್ದೈವದಿಂದ ಬ್ರಿಟಿಶ್ ಪಡೆ ಎಡೆಬಿಡದೆ ಜತೀನನನ್ನು ಬೆನ್ನಟ್ಟಿತ್ತು. ಚಾಸಖಂದದ ಗುಡ್ಡದ ಆಯಕಟ್ಟಿನ ಪ್ರದೇಶಗಳಲ್ಲಿ ಅಡಗಿ ಕುಳಿತರು ಜತೀನ್ ಮತ್ತು ಗೆಳೆಯರು, ಆಂಗ್ಲರನ್ನು ಕಾಯುತ್ತಾ….
ಗುಡ್ಡದ ಕೆಳಗೆ, ರುದರಫೋರ್ದ್ ಮತ್ತು ಕಿಲ್ಬಿಯ ಮುಂದಾಳತ್ವದಲ್ಲಿ ಬ್ರಿಟಿಷ ಪಡೆ ಬಂದು ನಿಂತಿತು. ಆಗ ಸೆಪ್ಟೆಂಬರ್ 9 ರ ಸಂಜೆ. ಬ್ರಿಟಿಷರ ಮತ್ತು ಜತೀನ್ ತಂಡದ ನಡುವೆ ಅಲ್ಲೊಂದು ಭೀಕರ ಕಾಳಗಕ್ಕೆ ಸಂಜೆಯ ಸೂರ್ಯ ಸಾಕ್ಷಿಯಾದ. ಹೋರಾಟದಲ್ಲಿ ಚಿತ್ತಪ್ರಿಯ ಹುತಾತ್ಮನಾಗಿ ಹೋದ. ಉಳಿದ ಮೂವರು ಮತ್ತು ಜತೀನ್ ಮೈಯೆಲ್ಲಾ ಗುಂಡೇಟಿನಿಂದ ಜರ್ಜ್ಹರಿತರಾಗಿ ಪ್ರಜ್ಞೆ ತಪ್ಪಿದರು. ಕೂಡಲೇ ಆಸ್ಪತ್ರೆಗೆ ಅವರನ್ನು ಸಾಗಿಸಿ, ರಾತ್ರಿಯೇ ಶಸ್ತ್ರಚಿಕಿತ್ಸೆ ಮಾಡಿದರು. ಜತೀನ್ ಬದುಕುಳಿದ.
ಬಾಘಾ ಜತೀನ್
ಅದು ಸೆಪ್ಟೆಂಬರ್ 10 ರ ಬೆಳಿಗ್ಗೆ. ಎಚ್ಚರಗೊಂಡಿದ್ದ ಜತೀನ್ ಮನಸ್ಸೆಲ್ಲ ತನ್ನ ಪೂರ್ಣ ಜೀವನದ ಅವಲೋಕನ ಮಾಡುತ್ತಿತ್ತು. ಆಗ ಅವನಕ್ಕ ವಿನೋದಬಾಲಾ ಹೇಳಿದ ಮಾತುಗಳು ನೆನಪಾದವು. ಎಂದಿಗೂ ಬ್ರಿಟಿಷರ ಗುಲಾಮನಾಗಿ ಬದುಕಬಾರದೆಂದು ಹೇಳಿಕೊಟ್ಟ ಸಾಲುಗಳು ಸ್ಮರಣೆಯಾದ ತಕ್ಷಣ, ಜತೀನ್ ಮೈಮೇಲಿದ್ದ ಬ್ಯಾಂಡೇಜ್ಗಳನ್ನೆಲ್ಲ ಕಿತ್ತುಕೊಂಡುಬಿಟ್ಟ. ಧಾರಾಕಾರವಾಗಿ ರಕ್ತ ಸುರಿಯಲಾರಂಭಿಸಿತು. ನೋಡುನೋಡುತ್ತಲೇ ಜತೀನನ ಪ್ರಾಣಪಕ್ಷಿ ಹಾರಿಹೋಗಿತ್ತು. ಜತೀನ್ ಭಾರತಮಾತೆಗೆ ಅಕ್ಷರಶಃ ‘ರುಧಿರಾಭಿಷೇಕ’ ಮಾಡಿ ಹುತಾತ್ಮನಾಗಿದ್ದ. ನಂತರ ಬಂದ ಆಂಗ್ಲ ಅಧಿಕಾರಿಗಳು ಆ ಸಂದರ್ಭಕ್ಕೆ ಮೂಕವಿಸ್ಮಿತರಾಗಿ ನಿಂತರಷ್ಟೇ.
ಮನೆಯಲ್ಲಿ ಮುದ್ದಾದ ಹೆಂಡತಿ, ಮಕ್ಕಳಿದ್ದರೂ, ಕೇವಲ ಸಂಸಾರಕ್ಕೆಂದು ಬದುಕದೆ, ಎಲ್ಲವನ್ನೂ ಬಿಟ್ಟು, ನೈಜ ರಾಷ್ಟ್ರಸನ್ಯಾಸಿಯಾಗಿ ನಾಡಿನ ಸ್ವಾತಂತ್ರ್ಯಕ್ಕಾಗಿ ತನ್ನ ಬಲಿದಾನ ಕೊಟ್ಟಿದ್ದ.
ಇವತ್ತು ಬಾಘಾ ಜತೀನ್ ಸ್ಮೃತಿ ದಿನ ! ನೆನಪಿಸಿಕೊಳ್ಳಲು ಈ ನೆಪ ಸಾಕಲ್ಲವೇ…
ಕೃಪೆ : ಬಾಬೂ ಕೃಷ್ಣ ಮೂರ್ತಿಯವರ ರುಧಿರಾಭಿಷೇಕದಿಂದ ಆಯ್ದ ಬರಹ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.