ಒಇಸಿಡಿ ಮಾಹಿತಿಯ ಪ್ರಕಾರ ಭಾರತೀಯ ಮಹಿಳೆಯು ದಿನಕ್ಕೆ 352 ನಿಮಿಷಗಳ ಕಾಲ ವೇತನರಹಿತ ಮನೆಗೆಲಸವನ್ನು ಮಾಡುತ್ತಾಳೆ. ಪುರುಷರಿಗೆ ಹೋಲಿಸಿದರೆ ಇದು ಶೇಕಡಾ 577 ರಷ್ಟು ಹೆಚ್ಚಾಗಿದೆ, ಪುರುಷ ಕೇವಲ 52 ನಿಮಿಷಗಳ ಕಾಲ ಮಾತ್ರ ಮನೆ ಕೆಲಸ ಮಾಡುತ್ತಾನೆ. ಪಿತೃಪ್ರಧಾನ ಸಮಾಜದಲ್ಲಿ ಮಹಿಳೆ ಅದರಲ್ಲೂ ಬಡ ವರ್ಗದಿಂದ ಬಂದಂತಹ ಮಹಿಳೆ ಹಲವಾರು ಕೌಟುಂಬಿಕ ದೌರ್ಜನ್ಯಗಳಿಗೆ ಒಳಗಾಗುತ್ತಾಳೆ, ಆಕೆಯ ಘನತೆಗೆ ಕುಂದು ಬರುವಂತಹ ವಿಷಯಗಳು ನಿತ್ಯ ನಡೆಯುತ್ತಿರುತ್ತವೆ. ಒಂದು ವೇಳೆ ಇಂತಹ ಮಹಿಳೆಯರನ್ನು ಸಬಲೀಕರಣಗೊಳಿಸುವ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿದರೆ ಅವರಿಗೆ ಬದುಕಿನಲ್ಲಿ ಹೊಸ ಭರವಸೆ ಮೂಡುತ್ತದೆ. ಇಂತಹ ಒಂದು ಪ್ರಯತ್ನವನ್ನು ಸಾಮಾಜಿಕ ಕಾರ್ಯಕರ್ತೆ ಜಯಲಕ್ಷ್ಮಿ ಅವರು ಬೆಂಗಳೂರಿನ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ ಸಹಾಯದೊಂದಿಗೆ ಮಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಜಯಲಕ್ಷ್ಮಿ ಅವರಿಗೆ ಹಲವಾರು ಗೃಹಣಿಯರಿಂದ ಉದ್ಯೋಗವಕಾಶ ಕೊಡುವಂತೆ ಬೇಡಿಕೆಗಳು ಬರುತ್ತಿತ್ತು, ಹೀಗಾಗಿ ಅವರು ಮುಂದಾದರು.
ಬಡತನ ಮತ್ತು ಕೌಟುಂಬಿಕ ದೌರ್ಜನ್ಯವನ್ನು ಎದುರಿಸಿದಂತಹ ಹಲವಾರು ಮಹಿಳೆಯರೊಂದಿಗೆ ಕೆಲಸ ಮಾಡಿದ ಜಯಲಕ್ಷ್ಮಿ ಅವರಿಗೆ, ಹಲವಾರು ಮಹಿಳೆಯರು ಉದ್ಯೋಗವನ್ನು ಮಾಡಿ ಆದಾಯವನ್ನು ಗಳಿಸಲು ಇಚ್ಛಿಸುತ್ತಿದ್ದಾರೆ ಎಂಬುದು ಅರಿವಾಯಿತು. ಉದ್ಯೋಗಗಳು ತಮ್ಮನ್ನು ದೌರ್ಜನ್ಯದಿಂದ ಮುಕ್ತಗೊಳಿಸುತ್ತದೆ ಮತ್ತು ಸ್ಥಿರವಾಗಿ ಬದುಕಲು ಸಹಾಯ ಮಾಡುತ್ತದೆ ಎಂಬುದನ್ನು ಈ ಮಹಿಳೆಯರು ದೃಢವಾಗಿ ನಂಬಿದ್ದರು. “ನಮ್ಮ ಸಮಾಜದಲ್ಲಿ ಹಲವಾರು ಮಹಿಳೆಯರು ನಿತ್ಯ ದೌರ್ಜನಕ್ಕೆ ಒಳಗಾಗುತ್ತಾರೆ ಮತ್ತು ಹಿಂಸಾ ಪ್ರವೃತ್ತಿಯ ಪತಿಯಂದಿರಿಂದ ಹೊರಹಾಕಲ್ಪಡುತ್ತಾರೆ. ಅಂತಹ ಹಲವಾರು ಮಹಿಳೆಯರು ನನ್ನ ಬಳಿಗೆ ಬಂದು ಉದ್ಯೋಗವನ್ನು ದೊರಕಿಸಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅವರಿಗೆಲ್ಲ ನಾನು ಪೊಲಿಟಿಕಲ್ ಆ್ಯಕ್ಷನ್ ಕಮಿಟಿಯ ಸಹಾಯದೊಂದಿಗೆ ಉದ್ಯೋಗವನ್ನು ದೊರಕಿಸಿಕೊಡುವ ಪ್ರಯತ್ನ ಮಾಡಿದ್ದೇನೆ” ಎಂದು ಜಯಲಕ್ಷ್ಮಿ ಹೇಳುತ್ತಾರೆ.
ಇಂತಹ ಹಲವಾರು ಮಹಿಳೆಯರನ್ನು ಗಮನಿಸಿರುವ ಜಯಲಕ್ಷ್ಮಿ ಅವರು, ಅನೇಕ ಮಹಿಳೆಯರಿಗೆ ದ್ವಿಚಕ್ರ ವಾಹನ ಓಡಿಸಲು ಬರುತ್ತಿಲ್ಲ ಎಂಬುದನ್ನು ಅರಿತುಕೊಂಡಿದ್ದಾರೆ. ಅವರೆಲ್ಲರೂ ಸಂಚಾರಕ್ಕಾಗಿ ಬಸ್ಸನ್ನೇ ಅವಲಂಬಿಸುತ್ತಿರುವುದನ್ನು ಗಮನಿಸಿದ್ದಾರೆ. ” ಒಬ್ಬಳು ಮಹಿಳೆ ಒಂದು ಮನೆಯಲ್ಲಿ ಮನೆಗೆಲಸ ಮಾಡುತ್ತಾರೆ, ಅಲ್ಲಿಂದ ಆಕೆಗೆ ಇನ್ನೊಂದು ಕಡೆಗೆ ಹೋಗಿ ಮನೆಗೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಇಂತಹ ಸಮಯದಲ್ಲಿ ಆಕೆ ಬಸ್ ಅನ್ನು ನೆಚ್ಚಿಕೊಂಡು ಎಷ್ಟು ತಾನೆ ಕೆಲಸ ಮಾಡಲು ಸಾಧ್ಯವಾಗುತ್ತದೆ, ಕೇವಲ ಒಂದು ಮನೆಯಲ್ಲಿ ದುಡಿದರೆ ಜೀವನ ನಿರ್ವಹಿಸಲು ಸಾಧ್ಯವಾಗುತ್ತದೆಯೇ? ” ಎಂದು ಹೇಳುವ ಜಯಲಕ್ಷ್ಮಿ ಅವರು, ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಇದಕ್ಕಾಗಿ ಅವರು ಮಹಿಳೆಯರಿಗೆ ದ್ವಿಚಕ್ರ ವಾಹನ ತರಬೇತಿ ಶಾಲೆಯನ್ನು ಆರಂಭಿಸಿದ್ದಾರೆ. ಬೆಂಗಳೂರು ಪೊಲಿಟಿಕಲ್ ಆ್ಯಕ್ಷನ್ ಕಮಿಟಿ ಸಂಸ್ಥೆಯ ಸಹಾಯದಿಂದ ಅವರು 60 ಮಂದಿಗೆ ತರಬೇತಿಯನ್ನು ನೀಡುತ್ತಿದ್ದಾರೆ. ಈಗಾಗಲೇ 35 ಮಂದಿ ಮಹಿಳೆಯರು ತರಬೇತಿಯನ್ನು ಪಡೆದು ಕೊಂಡಿದ್ದಾರೆ. ಈ ಮಹಿಳೆಯರು ಈಗ ಸುಸೂತ್ರವಾಗಿ ದ್ವಿಚಕ್ರ ವಾಹನವನ್ನು ಚಾಲನೆ ಮಾಡುತ್ತಾರೆ. ಪರವಾನಗಿಯನ್ನೂ ಪಡೆದುಕೊಂಡಿದ್ದಾರೆ.
ಈ ಮಹಿಳೆಯರಿಗೆ ಜಯಲಕ್ಷ್ಮಿ ಅವರು ಝೀರೊ ಡೌನ್ ಪೇಮೆಂಟ್ನಲ್ಲಿ ದ್ವಿಚಕ್ರವಾಹನವನ್ನು ತೆಗೆಸಿಕೊಟ್ಟಿದ್ದಾರೆ. ಇವರಲ್ಲಿ ತರಬೇತಿಯನ್ನು ಪಡೆದ ಕೆಲವು ಮಹಿಳೆಯರು ಅಮೇಜಾನ್, ಸ್ವಿಗ್ಗಿ ಮುಂತಾದ ಡೆಲಿವರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
“ಈ ಮಹಿಳೆಯರು ಅತೀ ಹಿಂದುಳಿದ ಹಿನ್ನಲೆಯವರಾಗಿದ್ದಾರೆ. ಕಡಿಮೆ ಜ್ಞಾನ ಮತ್ತು ವಿದ್ಯೆಯ ಕಾರಣದಿಂದಾಗಿ ಬದುಕಲ್ಲಿ ಮೇಲೇಳಲು ಸಾಧ್ಯವಿಲ್ಲ ಎಂದು ಹತಾಶೆಯನ್ನು ಇಟ್ಟುಕೊಂಡವರಾಗಿದ್ದಾರೆ. ಅಂತಹ ಯೋಚನೆಯನ್ನು ಅವರಿಂದ ದೂರವಾಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಮತ್ತು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಪ್ರಯತ್ನವನ್ನು ನಡೆಸುತ್ತಿದ್ದೇವೆ” ಎಂದು ಜಯಲಕ್ಷ್ಮಿ ಹೇಳುತ್ತಾರೆ.
ಕಳೆದ 7-8 ವರ್ಷಗಳಿಂದ ಜಯಲಕ್ಷ್ಮೀ ಅವರು ಮಹಿಳಾ ಸುರಕ್ಷತೆಯ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು 5000 ನೊಂದ ಮಹಿಳೆಯರಿಗೆ ಅವರು ಕೌನ್ಸೆಲಿಂಗ್ ಅನ್ನೂ ನೀಡಿದ್ದಾರೆ. ಮಹಿಳೆಯರಿಗೆ ಹೊಸ ಬದುಕನ್ನು ಕಲ್ಪಿಸಿಕೊಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.