ಹೈದರಾಬಾದ್: ಗಣೇಶ ಚತುರ್ಥಿ ಹಬ್ಬ ಸಮೀಪಿಸುತ್ತಿದೆ, ಸಾವಿರಾರು ಬಗೆಯ ಗಣಪನ ಮೂರ್ತಿಗಳು ಭಕ್ತರ ಪೂಜಾ ಕೈಂಕರ್ಯಗಳನ್ನು ಸ್ವೀಕರಿಸಲು ಕಾದು ನಿಂತಿವೆ. ತೆಲಂಗಾಣದ ಖೈರ್ಥಾಬಾದ್ನಲ್ಲಿರುವ ಗಣೇಶ ಉತ್ಸವ ಸಮಿತಿಯ ಗಣೇಶನ ಮೂರ್ತಿಯು 61 ಅಡಿ ಎತ್ತರವಿದ್ದು, ಭಾರತದ ಅತೀ ಎತ್ತರದ ಗಣೇಶನ ವಿಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಮಿತಿಯ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿಂಗಾರಿ ಸುದರ್ಶನ್ ಮುದಿರಾಜ್ ಅವರು ಈ ಗಣಪನ ಬಗ್ಗೆ ಮಾಹಿತಿಯನ್ನು ನೀಡಿದ್ದು, ಗಣೇಶನನ್ನು ದ್ವಾದಶಿ ಆದಿತ್ಯ ಮಹಾ ಗಣಪತಿ ಅವತಾರದಂತೆ ವಿಗ್ರಹದಲ್ಲಿ ಚಿತ್ರಿಸಲಾಗಿದೆ, ಈ ಅವತಾರವು ಉತ್ತಮ ಹವಮಾನ ಮತ್ತು ಸಾಕಷ್ಟು ಮಳೆಯನ್ನು ಆಶೀರ್ವಾದವಾಗಿ ನೀಡಲಿದೆ ಎಂದಿದ್ದಾರೆ.
“ನಮ್ಮ ಗಣೇಶ ಮಂಟಪವನ್ನು 1954 ರಲ್ಲಿ ಕೇವಲ 1 ಅಡಿಗಳಷ್ಟು ಎತ್ತರದ ಸಣ್ಣ ಗಣೇಶನೊಂದಿಗೆ ಪ್ರಾರಂಭಿಸಲಾಯಿತು, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನನ್ನ ಸಹೋದರ ಎಸ್.ಶಂಕರಯ್ಯ ಅವರು ಇದನ್ನು ಪ್ರಾರಂಭಿಸಿದ್ದರು. ವರ್ಷದಿಂದ ವರ್ಷಕ್ಕೆ ನಮ್ಮ ಗಣಪನ ಎತ್ತರವು ಹೆಚ್ಚುತ್ತಲೇ ಹೋಯಿತು ಮತ್ತು 2014 ರಲ್ಲಿ 60 ಅಡಿಗಳಷ್ಟು ಎತ್ತರವಾಯಿತು. ನಂತರ ನಾವು ವಿಗ್ರಹದ ಎತ್ತರವನ್ನು ಜಾಸ್ತಿ ಮಾಡಲಿಲ್ಲ. ಆದರೆ ಈ ವರ್ಷ ಅದನ್ನು 61 ಅಡಿಗಳಿಗೆ ಹೆಚ್ಚಿಸಲು ನಿರ್ಧರಿಸಿದ್ದೇವೆ ” ಎಂದು ಮುದಿರಾಜ್ ಹೇಳಿದ್ದಾರೆ.
“ಈ ವರ್ಷ ಗಣೇಶ ವಿಗ್ರಹವನ್ನು ನಿರ್ಮಿಸಲು 150 ಕಾರ್ಮಿಕರು ನಾಲ್ಕು ತಿಂಗಳುಗಳ ಕಾಲ ಶ್ರಮಿಸಿದ್ದಾರೆ. ಇದರ ನಿರ್ಮಾಣಕ್ಕೆ ತಗುಲಿದ ವೆಚ್ಚ 1 ಕೋಟಿ ರೂಪಾಯಿ. ವಿಗ್ರಕ್ಕೆ ನಿರ್ಮಾಣಕ್ಕಾಗಿ ಬಡಗಿಗಳನ್ನು, ಮೊಲ್ಡರ್ಗಳನ್ನು ಮತ್ತು ಇತರ ಕಾರ್ಮಿಕರನ್ನು ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಹತ್ತಿರದ ಪ್ರದೇಶಗಳಿಂದ ಕರೆತರಲಾಗಿದೆ” ಎಂದಿದ್ದಾರೆ.
“ಈ ಗಣೇಶ ವಿಗ್ರಹವು ವಿವಿಧ ದೇವರುಗಳ ಮಾದರಿಯ 12 ಮುಖಗಳನ್ನು ಹೊಂದಿದೆ, 24 ಕೈಗಳಲ್ಲಿ ವಿಭಿನ್ನ ಆಯುಧಗಳನ್ನು ಹೊಂದಿದೆ ಮತ್ತು ಇದರಲ್ಲಿನ ರಥದಲ್ಲಿ ಏಳು ಕುದುರೆಗಳು ಇವೆ. ಹಬ್ಬದ ಅವಧಿಯಲ್ಲಿ ನಾಲ್ಕರಿಂದ ಐದು ಲಕ್ಷ ಭಕ್ತರು ಈ ಗಣಪನಿಗೆ ಪ್ರಾರ್ಥನೆಯನ್ನು ಸಲ್ಲಿಸುವ ನಿರೀಕ್ಷೆ ಇದೆ”ಎಂದು ಮುದಿರಾಜ್ ಹೇಳಿದ್ದಾರೆ.
ಗಣೇಶ ವಿಗ್ರಹವು ಸುಮಾರು 50 ಟನ್ ತೂಕವಿದೆ ಮತ್ತು ಸೆಪ್ಟೆಂಬರ್ 2 ರ ಮಧ್ಯಾಹ್ನದಿಂದ ಪೂಜೆಗೆ ಅವಕಾಶವಾಗಲಿದೆ. ತೆಲಂಗಾಣ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಮತ್ತು ಅವರ ಪತ್ನಿಯ ಉಪಸ್ಥಿತಿಯಲ್ಲಿ ಚತುರ್ಥಿಯ ದಿನ ಈ ಗಣಪನಿಗೆ ಭವ್ಯ ಆರಾಧನೆ ಜರುಗಲಿದೆ ಎಂದಿದ್ದಾರೆ.
ನಮ್ಮ ಕಾರ್ಯಕ್ರಮಕ್ಕೆ ಸರ್ಕಾರಿ ಸಂಸ್ಥೆಗಳಾದ ಜಿಎಚ್ಎಂಸಿ, ಎಚ್ಎಂಡಿಎ, ವಿದ್ಯುತ್ ಮಂಡಳಿ, ಪೊಲೀಸ್ ಇಲಾಖೆ ಇತ್ಯಾದಿಗಳು ಬೆಂಬಲ ನೀಡಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.