ನವದೆಹಲಿ: ಅರಣ್ಯ ಬೆಳಸಲು ಉತ್ತೇಜನವನ್ನು ನೀಡುವ ಸಲುವಾಗಿ ಮತ್ತು ಹಸಿರು ಗುರಿಯನ್ನು ಸಾಧಿಸುವ ಸಲುವಾಗಿ ವಿವಿಧ ರಾಜ್ಯಗಳಿಗೆ ಕೇಂದ್ರ ಸರ್ಕಾರವು ರೂ. 47,436 ಕೋಟಿಗಳನ್ನು ಬಿಡುಗಡೆ ಮಾಡಿದೆ.
ಅರಣ್ಯ ಅಭಿವೃದ್ಧಿ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (Compensatory Afforestation Fund Management and Planning Authority (CAMPA)) ಅಡಿಯಲ್ಲಿ ಈ ಹಣವನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯ ಅರಣ್ಯ ಸಚಿವರುಗಳು ಮತ್ತು ಪ್ರಾಧಿಕಾರದ ಸಭೆಯಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವ ಪ್ರಕಾಶ್ ಜಾವ್ಡೇಕರ್ ಈ ಹಣವನ್ನು ರಾಜ್ಯಗಳಿಗೆ ಹಸ್ತಾಂತರಿಸಿದರು. ಪರಿಸರ ಖಾತೆ ರಾಜ್ಯ ಸಚಿವ ಬಾಬುಲ್ ಸುಪ್ರಿಯೋ ಈ ವೇಳೆ ಉಪಸ್ಥಿತರಿದ್ದರು.
ಅರಣ್ಯಗಳಿಗಾಗಿನ ರಾಜ್ಯ ಬಜೆಟ್ಗಳ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ವರ್ಗಾವಣೆಯಾಗಿರುವ ಹಣವು ರಾಜ್ಯ ಬಜೆಟ್ಗೆ ಹೆಚ್ಚುವರಿಯಾಗಿ ಇರುತ್ತದೆ ಎಂದು ಜಾವ್ಡೇಕರ್ ಸಭೆಯಲ್ಲಿ ಹೇಳಿದ್ದಾರೆ.
“ಅರಣ್ಯ ಮತ್ತು ಹಸಿರು ಹೊದಿಕೆಯನ್ನು ಹೆಚ್ಚಿಸುವ ರಾಷ್ಟ್ರೀಯ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ರಾಜ್ಯಗಳು ಈ ನಿಧಿಯನ್ನು ಬಳಸಿಕೊಳ್ಳುತ್ತವೆ ಎಂಬ ಭರವಸೆ ಇದೆ” ಎಂದು ಜಾವ್ಡೇಕರ್ ಹೇಳಿದ್ದಾರೆ.
CAMPA ನಿಧಿಯನ್ನು ಸಂಬಳ, ಪ್ರಯಾಣ ಭತ್ಯೆ ಮತ್ತು ವೈದ್ಯಕೀಯ ವೆಚ್ಚಗಳಿಗೆ ಅಥವಾ ವೇತನಗಳನ್ನು ಪಾವತಿಸಲು ಬಳಸುವಂತಿಲ್ಲ ಎಂದು ಜಾವ್ಡೇಕರ್ ಒತ್ತಿ ಹೇಳಿದ್ದಾರೆ.
ಅರಣ್ಯೀಕರಣ, ಜಲಾನಯನ ಪ್ರದೇಶಗಳ ಸುಧಾರಣೆ, ವನ್ಯಜೀವಿ ನಿರ್ವಹಣೆ, ನೈಸರ್ಗಿಕ ಪುನರುತ್ಪಾದನೆಗೆ ನೆರವು ಮತ್ತು ಕಾಡ್ಗಿಚ್ಚು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಾಚರಣೆಗಳಿಗೆ ಈ ಹಣವನ್ನು ಬಳಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಅರಣ್ಯಗಳಲ್ಲಿನ ಮಣ್ಣು ಮತ್ತು ತೇವಾಂಶ ಸಂರಕ್ಷಣಾ ಕಾರ್ಯಗಳು, ವನ್ಯಜೀವಿಗಳ ಆವಾಸಸ್ಥಾನದ ಸುಧಾರಣೆ, ಜೈವಿಕ ವೈವಿಧ್ಯತೆ ಮತ್ತು ಜೈವಿಕ ಸಂಪನ್ಮೂಲಗಳ ನಿರ್ವಹಣೆ, ಅರಣ್ಯಶಾಸ್ತ್ರದ ಸಂಶೋಧನೆ ಮತ್ತು CAMPA ಕಾರ್ಯಗಳ ಮೇಲ್ವಿಚಾರಣೆಗಳನ್ನೂ ಇದರಡಿಯಲ್ಲಿ ಮಾಡಬಹುದಾಗಿದೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ 2001 ರಲ್ಲಿ ಆದೇಶಿಸಿದಂತೆ CAMPA ನಿಧಿಯನ್ನು ಸ್ಥಾಪನೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.