“ಅಯ್ಯೋ ಮಗಳೇ, ಎಷ್ಟು ಓದ್ತಿಯೇ? ಹೋಗಿ ಆಡ್ಕೊ, ಸಿನಿಮಾ ನೋಡು, ನಿನ್ನ ಅಕ್ಕನ ಜೊತೆ ಹರಟೆ ಹೊಡಿ ಹೋಗು” ಅಂತ ನಮ್ಮ ಅಮ್ಮಂದಿರು ಹೇಳಿದ್ದರೆ ನಾವು ಏನು ಮಾಡುತ್ತಿದ್ದೆವು? ಆಮೇಲೆ ಅವರು ಶಾಲೆಯ ಬಯಲಲ್ಲೊ, ಬೀದಿ ಕೊನೆಯಲ್ಲೊ, ಮರದ ಮೇಲೋ ಇದ್ದ ನಮ್ಮನ್ನು ಹುಡುಕ್ತಾ ಬರಬೇಕಿತ್ತು. ಆದರೆ ಆ ಮಗಳು “ಇಲ್ಲಮ್ಮ, ಅದೆಲ್ಲ ಆಮೇಲೆ. ನಾನೀಗ ಓದಬೇಕು, ಕಡೆಗಷ್ಟೆ ಆಟ” ಅಂತಿದ್ಲು. ಅಷ್ಟು ಓದಿನ ಗೀಳು ಹತ್ತಿಸಿಕೊಂಡ ಮಗಳಿಗಾಗಿ ಆ ಅಮ್ಮ ಇವತ್ತು ಅವಳಿಷ್ಟದ ಅಡುಗೆ ಮಾಡಿಕೊಂಡು ಕಾಯುತ್ತಿದ್ದಾರೆ. ಮಗಳು ಜಗತ್ತನ್ನು ಗೆದ್ದು ಬಂಗಾರದ ಪದಕವನ್ನು ಹೊತ್ತು ಬರುತ್ತಿದ್ದಾಳೆ. ಆ ಚಂದದ ಮಗಳು ಚೆನ್ನಾಗಿ ಬ್ಯಾಡ್ಮಿಂಟನ್ ಕಲಿಯಲಿ ಅಂತ ತಮ್ಮ ಉದ್ಯೋಗ ಬಿಟ್ಟು, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದ ಅಮ್ಮನ ಖುಷಿ ಮುಗಿಲು ಮುಟ್ಟಿದೆ. ಇಡೀ ಭಾರತ ಅವಳು ನಮ್ಮ ಮಗಳು ಅನ್ನುತ್ತಿದ್ದಾರೆ. ಕಣ್ಣಂಚಿನಲ್ಲಿ ನೀರು ತುಂಬಿಕೊಂಡು, ಕಟ್ಟಿದ ಗಂಟಲಿಂದ, “ಅಮ್ಮ ಈ ಪದಕ ನಿನ್ನ ಪಾದಕ್ಕೆ, ನಿನ್ನ ಹುಟ್ಟಿದ ದಿನಕ್ಕೆ” ಎಂದಾಗ ಯಾವ ತಾಯಿಗಾದರೂ ಅದು ಸ್ವರ್ಗಸದೃಶ ಕ್ಷಣ. ಅಲ್ಲಿ ಎರಡು ಮಾತಿಲ್ಲ. ಚಿನ್ನದಂತಹ ಅಮ್ಮನಿಗೆ ಚಿನ್ನದಂತಹ ಮಗಳು ಪಿ.ವಿ.ಸಿಂಧು. ಭಾರತ ಕ್ರೀಡಾಲೋಕದ ಮತ್ತೊಂದು ಮಿಂಚು. ಹೆಸರಿನಂತೆಯೇ ಅವರು ಬ್ಯಾಡ್ಮಿಂಟನ್ ಲೋಕದ ಒಂದು ಮಹಾಸಾಗರ.
2017 ಮತ್ತು 2018 ರಲ್ಲಿ ಸಾಲು ಸಾಲಾಗಿ ಎರಡು ವರ್ಷ ವಿಶ್ವ ಚಾಂಪಿಯನ್ಷಿಪ್ನ ಕೊನೆ ಹಂತದಲ್ಲಿ ಸೋತ ಸಿಂಧುರವರಿಗೆ ತೆಗಳಿದವರೇ ಹೆಚ್ಚು. ನಿನ್ನ ಕೈಯಲ್ಲಿ ಆಗೋದೆ ಇಷ್ಟು, ನೀನು ಫಿನಿಷರ್ ಅಲ್ಲ, ಚಾಂಪಿಯನ್ ವಸ್ತುವಲ್ಲ. ಒಂದೇ ಎರಡೇ ಹಲವಾರು ವಿಮರ್ಶೆಗಳು. ಅಲ್ಲಿ ಎಲ್ಲರೂ ವಿದ್ವಾಂಸರು. ಪ್ರತಿ ಬಾರಿಯೂ ಇಂತಹ ವಿಮರ್ಶೆಗಳಿಗೆ ಒಳಗಾದಾಗ ಒಬ್ಬ ಆಟಗಾರ್ತಿಯ ಮನಸ್ಸು ಎಂಬ ಕಿಂಚಿತ್ ಜ್ಞಾನವಿಲ್ಲದ ಅರೆಬರೆ ಪಂಡಿತರು. ಆಗೆಲ್ಲಾ ಸಿಂಧುರವರ ಮನಸ್ಸಲ್ಲಿ ಉಳಿದದ್ದು ಬರೀ ನೋವು ಮತ್ತು ಕೋಪ. ಆದರೆ ಅದೆಲ್ಲವನ್ನೂ ಮೆಟ್ಟಿ ನಿಂತು ಅವರು ಇವತ್ತು ಬ್ಯಾಡ್ಮಿಂಟನ್ ಜಗತ್ತನ್ನು ಹಿಂದೆಂದೂ ಕಾಣದ ಪರಿಯಲ್ಲಿ ಗೆದ್ದಿದ್ದಾರೆ. ನಮಗೇನು ಕೆಲಸ? ಸುಮ್ಮನೆ ಅವರ ಬದುಕನ್ನು ಸುತ್ತಿ ಬರೋಣ ಬನ್ನಿ. ಪ್ರತಿಯೊಂದು ದೊಡ್ಡ ಯಶಸ್ಸಿನ ಹಿಂದೆ ಅಲ್ಲಿ ಲೆಕ್ಕವಿಲ್ಲದಷ್ಟು ನೋವಿನ, ನಲಿವಿನ ಮತ್ತು ಶ್ರಮದ ಕ್ಷಣಗಳಿರುತ್ತವೆ.
2000 ನೇ ಇಸವಿಯ ಉತ್ತರಾರ್ಧ, ನಾವು ವೋಟಿನ ಗುಂಡಿಯ ತಡುಕುವ ಮೊದಲೇ ಅವರು ಬ್ಯಾಡ್ಮಿಂಟನ್ ಲೋಕದ ಅತ್ಯುತ್ತಮ ಇಪ್ಪತ್ತರಲ್ಲಿ ಒಬ್ಬರಾಗಿದ್ದರು. ಆಗವರಿಗೆ ವಯಸ್ಸು ಕೇವಲ 17. ಮೊದಲಿಗೆ ಒಂದು ವಿಷಯ ಹೇಳಬೇಕು. ಬರೇ ಎರಡು ವರ್ಷಗಳ ಹಿಂದೆ ಸಿಂಧು ಇದೇ ಒಕುಹರಾ ವಿರುದ್ಧ 110 ನಿಮಿಷಗಳ ಕಾಲ ವೀರೊಚಿತವಾಗಿ ಹೋರಾಡಿ ಸೋತರಲ್ಲ ಅದು ಬ್ಯಾಡ್ಮಿಂಟನ್ ಕ್ರೀಡೆಯ ಇತಿಹಾಸದಲ್ಲಿ ದಿ ಬೆಸ್ಟ್ ಅನ್ನಿಸುವ ಪಂದ್ಯಗಳಲ್ಲಿ ಒಂದು.
⭕ ಏಷ್ಯನ್ ಗೇಮ್ಸ್ 2014 ಡಬಲ್ಸ್ ಕಂಚು, 2018 ಬೆಳ್ಳಿ
⭕ ಕಾಮನ್ವೆಲ್ತ್ ಕ್ರೀಡಾಕೂಟ 2014 ಕಂಚು, 2018 ಸಿಂಗಲ್ಸ್ ಬೆಳ್ಳಿ, ಮಿಕ್ಸೆಡ್ ಡಬಲ್ಸ್ ಚಿನ್ನ
⭕ ವರ್ಲ್ಡ್ ಚಾಂಪಿಯನ್ಷಿಪ್ಸ್ 2013 ಕಂಚು, 2014 ಕಂಚು, 2017 ಬೆಳ್ಳಿ, 2018 ಬೆಳ್ಳಿ, 2019 ಸ್ವರ್ಣ
⭕ ಒಲಿಂಪಿಕ್ಸ್ 2016 ಬೆಳ್ಳಿ
⭕ ಥಾಯ್ಲೆಂಡ್ ಓಪನ್ ಬೆಳ್ಳಿ
⭕ ಇಂಡಿಯಾ ಓಪನ್ ಬೆಳ್ಳಿ
ಈಗ ವಿಶ್ವ ರ್ಯಾಂಕಿಂಗ್ನ ಮೊದಲ ಐದರಲ್ಲಿ ಸಿಂಧು ವಿರಾಜಮಾನರಾಗಿದ್ದಾರೆ. ಸಧ್ಯಕ್ಕೆ ಇಷ್ಟು ಸಾಕು. ಒಮ್ಮೆ ಗೂಗಲ್ ಮಾಡಿ ಪದಕಗಳ, ಗೆಲುವುಗಳ ದೊಡ್ಡ ಪಟ್ಟಿಯೇ ದೊರಕುತ್ತದೆ. ಇಷ್ಟಾಗಿಯೂ ಅಲ್ಲಿದುದು ಅದೇ ಪ್ರಶ್ನೆ ಚಿನ್ನ ಯಾಕಿಲ್ಲ? ನಿಮಗೆ ಗೊತ್ತಿಲ್ಲದ ಮತ್ತೊಂದು ವಿಷಯ ಸಿಂಧುರವರು ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅತಿ ಹೆಚ್ಚು ಪದಕ ವಿಜೇತರ ಸ್ಥಾನದಲ್ಲಿ ಜಂಟಿ ಮೊದಲಿಗರು. ಇನ್ನೊಬ್ಬರು ಚೀನಾದ ಝಾಂಗ್ ನಿಂಗ್. ವಿಶೇಷವೆಂದರೆ ಸಿಂಧುರವರಂತೆಯೇ ಅವರು ಗೆದ್ದಿದ್ದು ಒಂದು ಚಿನ್ನ, ಎರಡು ಬೆಳ್ಳಿ, ಎರಡು ಕಂಚಿನ ಪದಕಗಳು. ಆದರೆ 2007 ರ ಆ ದಾಖಲೆಯನ್ನು ದಾಟಿ ನಡೆಯಲು ಸಿಂಧುರವರ ಬಳಿ ದೊಡ್ಡ ಪಾಲು ಕ್ರೀಡಾ ಬದುಕು ಹಾಗೇ ಇದೆ. ಅವರ ವಯಸ್ಸು ಇನ್ನು 24.! ಕಾಲೇಜು, ಮನೆ, ಮೊಬೈಲ್ ಅನ್ನುವ ವಯಸ್ಸಿನಲ್ಲಿ ಅವರು ಚಿನ್ನ ಕಚ್ಚಿಕೊಂಡು ಭಾರತಕ್ಕೆ ಓಡೋಡಿ ಬರುತ್ತಿದ್ದಾರೆ.
ಅಮ್ಮಾ, ನಿಮ್ಮ ಮಗಳು ಚಿನ್ನ ಗೆದ್ದು ಬರುತ್ತಿದ್ದಾಳೆ, ಏನು ಮಾಡಿದೀರಾ ಅಂತ ಸಿಂಧುರವರ ತಾಯಿ ಪಿ ವಿಜಯಾ ಅವರನ್ನು ಕೇಳಿದ್ರೆ ಅವಳಿಗೆ ಇಷ್ಟ ಅಂತ ಫಿಶ್ ಕರ್ರಿ, ಖೀಮಾ ಮಾಡ್ಕೊಂಡು ಕಾಯ್ತಿದಿನಿ ಅಂತ ಹೇಳಿದರು. ಎಷ್ಟಂದರೂ ಅಮ್ಮನ ಕರುಳೇ ಹಾಗೆ. ಜಗತ್ತು ಸಿಂಧು ಯಶಸ್ಸನ್ನು ಕೊಂಡಾಡುತ್ತಾ ಇದ್ದರೆ ತಾಯಿ ಮನಸ್ಸು ಅವಳಿಗೆ ಏನಿಷ್ಟ ಅಂತ ಯೋಚಿಸ್ತಾ ಇರತ್ತೆ. ಅಲ್ವಾ? ಮೊದಲ ಬಾರಿಗೆ ಸ್ವರ್ಣ ಗೆದ್ದ ಭಾರತೀಯಳಾಗಿ ಬರುತ್ತಿರುವ ಮಗಳ ಯಶಸ್ಸಿನ ಹಿಂದಿನ ಶ್ರೇಯವನ್ನು ಸ್ವಲ್ಪವೂ ಬಯಸದ ಪಿ. ವಿಜಯಾ ಹೇಳುವುದೇ ಬೇರೆ, ನಾನೇ ಅವಳು ಚಿಕ್ಕವಳಿದ್ದಾಗ ಆಡು ಹೋಗು, ಫಿಲ್ಮ್ ನೋಡು, ನಿನ್ನ ಅಕ್ಕನ ಜೊತೆ ಹೋಗು ಅಂತಿದ್ದೆ. ಆದರೆ ವಿದ್ಯಾಭ್ಯಾಸ ಮುಗಿದ ಮೇಲೆಯೇ ಅವಳ ಮುಂದಿನ ಕೆಲಸ. ಅಂತಹ ಮಗಳನ್ನು ಪಡೆದ ತಾವು ಧನ್ಯರು. ಗೆಲುವಿನ ಹಿಂದಿನ ಸಂಪೂರ್ಣ ಶ್ರಮ ಅವಳದೇ ಎನ್ನುವ ಈ ಮಾತೃ ಹೃದಯ, ಮಗಳಿಗಾಗಿ ತನ್ನ ಉದ್ಯೋಗವನ್ನು ಬಿಟ್ಟು, ಬೆಂಬಲಿಸಿದ್ದನ್ನು ಹೇಳುವುದೇ ಇಲ್ಲ. ಮೂಲತಃ ಪಿ ವಿಜಯಾ ಅವರು ಕೂಡ ರಾಷ್ಟ್ರಮಟ್ಟದ ವಾಲಿಬಾಲ್ ಪಟು. ಮೊದಲು ರೈಲ್ವೆಸ್ ಪರವಾಗಿ ಹಲವಾರು ಪಂದ್ಯಗಳನ್ನು ಆಡಿದ್ದಾರೆ. ಇನ್ನು ಸಿಂಧುರವರ ತಂದೆ ಅರ್ಜುನ ಪ್ರಶಸ್ತಿ ಪುರಸ್ಕೃತರು ಪಿ ವಿ ರಮಣ, 1986 ರಲ್ಲಿ ಏಷ್ಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ವಾಲಿಬಾಲ್ ಆಟಗಾರ. ತಮಾಷೆಯ ವಿಷಯವೆಂದರೆ ರಮಣ ಮತ್ತು ವಿಜಯಾರವರದು ಹೆಚ್ಚು ಕಡಿಮೆ ಪ್ರೇಮ ವಿವಾಹವೇ. ಅದು ವಾಲಿಬಾಲ್ ಪಂದ್ಯಾವಳಿಗಳಲ್ಲಿ ಪದೇ ಪದೇ ಭೇಟಿಯಾಗಿ ಹುಟ್ಟಿದ ಪ್ರೀತಿ. ಅದಕ್ಕೋ ಏನೋ ಮನೆಯ ತುಂಬ ಬರೀ ಕ್ರೀಡಾಪಟುಗಳು. ಸಿಂಧುರವರ ಅಕ್ಕ ದಿವ್ಯ ರಾಷ್ಟ್ರೀಯ ಮಟ್ಟದ ಹ್ಯಾಂಡ್ಬಾಲ್ ಆಟಗಾರ್ತಿ.
ಸಿಂಧುರವರ ಸೋಲಿನ ಕ್ಷಣಗಳಲ್ಲಿ ಇದೇ ಅಮ್ಮ ನಗುಮೊಗದಿಂದ, ಶಾಂತಚಿತ್ತದಿಂದ ಬಂದು ಪ್ರತೀ ಮಾಧ್ಯಮಗಳನ್ನು ಎದುರಿಸಿದವರು. ಅವರೇ ಹೇಳುವಂತೆ ಇಂದು ಪ್ರತಿ ಕ್ರೀಡೆಯೂ ಕ್ರಿಕೆಟ್ನಷ್ಟೇ ಬೆಳೆದು ನಿಂತಿವೆ. ಯಾರು ಬೇಕಾದರೂ ಯಾವ ಕ್ರೀಡೆಯನ್ನು ಆರಿಸಿಕೊಳ್ಳುವ ಅವಕಾಶವಿದೆ. ಆದರೆ ನಿಮ್ಮ ಓದು ಮತ್ತು ಆಟದ ನಡುವೆ ಸಮಾನವಾದ ಸಂಪರ್ಕವಿರಲಿ ಎಂಬುದು ಅವರ ಕಿವಿಮಾತು. “ಇವತ್ತು ನಮ್ಮ ಮನೆಯಲ್ಲಿ ಪರಿವಾರದವರು ಸೇರುತ್ತೇವೆ, ಗೆಲುವನ್ನು ಆಚರಿಸುತ್ತೇವೆ. ನನ್ನ ಮಗಳು ಇಷ್ಟು ದಿನ ನನ್ನ ಹುಟ್ಟಿದ ದಿನಕ್ಕೆ ಸೀರೆ, ಒಡವೆ ಹೀಗೆ ಅಮೂಲ್ಯ ಉಡುಗೊರೆಗಳ ನೀಡುತ್ತಿದ್ದಳು. ಆದರೆ ಇಂದು ಚಿನ್ನ ನೀಡಿ ನನ್ನ ಬದುಕಿಗೆ ಅತ್ಯುತ್ತಮ ಕಾಣಿಕೆ ನೀಡಿದ್ದಾಳೆ” ಎನ್ನುವಾಗ ತಾಯಿಯ ಕಣ್ಣಂಚಿನಲ್ಲಿ ಆನಂದಭಾಷ್ಪವಿತ್ತು.
ಕಣ್ಣಲ್ಲಿ ರಾಶಿ ಕನಸುಗಳ ತುಂಬಿಕೊಂಡು ನಾನು ಎರಡು ವರ್ಷಗಳಿಂದ ಸರಿಯಾಗಿ ನಿದ್ರಿಸಿಯೇ ಇಲ್ಲ ಎನ್ನುವ ಸಿಂಧುರವರ ಗೆಲುವಿನ ಹಿಂದೆ ಎಷ್ಟು ಪರಿಶ್ರಮ ಇರಬಹುದು ನೀವೆ ಊಹಿಸಿ. ಅವರ ಈ ಯಶಸ್ಸಿನ ಹಿಂದಿನ ಶ್ರೇಯ ತರಬೇತುದಾರ ಗೋಪಿಚಂದ್, ಶ್ರೀಕಾಂತ್ ವರ್ಮ ಮತ್ತು ಕಿಮ್ ಜಿ ಹ್ಯುನ್ಗೆ ಸೇರಬೇಕು ಎಂದಿದ್ದಾರೆ. ಕಳೆದ ಮಾರ್ಚ್ನಲ್ಲಿ ಭಾರತಕ್ಕೆ ಬಂದಿಳಿದ ದಕ್ಷಿಣ ಕೊರಿಯಾದ ಮಾಜಿ ಚಾಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಕಿಮ್ ಜಿ ಹ್ಯುನ್ ಎದುರು ದೊಡ್ಡ ಸವಾಲಿತ್ತು. ಅವರು ಸಿಂಧು ಮತ್ತು ಸೈನಾರನ್ನು ದೊಡ್ಡ ಗೆಲುವಿಗೆ ತಯಾರು ಮಾಡಬೇಕಿತ್ತು. ಅದಕ್ಕಾಗಿ ಕಿಮ್ ಗಾಚಿಬೌಲಿಗೆ ದೃಢ ಮನಸ್ಸು ಮಾಡಿಕೊಂಡು ಬಂದಿದ್ದರು. ಆದರೆ ಸೈನಾ ತಮ್ಮ ತರಬೇತಿಗೆ ಪತಿ ಪಿ ಕಶ್ಯಪ್ರನ್ನು ಆರಿಸಿಕೊಂಡಿದ್ದು ಕಿಮ್ರ ಕೆಲಸವನ್ನು ಸುಲಭ ಮಾಡಿತು ಎನ್ನಬಹುದು. ತಮ್ಮ ಎಲ್ಲಾ ಶಕ್ತಿ, ಸಾಮರ್ಥ್ಯ ಮತ್ತು ಅನುಭವವನ್ನು ಧಾರೆ ಎರೆಯಲು ಕಿಮ್ ಅವರು ಸಿಂಧುರವರ ಕೇಳಿದ್ದು ಒಂದೇ ಮಾತು, ‘ಸಿಂಧು ನೀ ನನ್ನ ಕಣ್ಮುಚ್ಚಿ ನಂಬಬೇಕು’. ಸಿಂಧು ಅದಾಗಲೇ ಕಿಮ್ರನ್ನು ಗುರುವಾಗಿಯಲ್ಲದೆ, ಸ್ಫೂರ್ತಿಯಾಗಿ ತೆಗೆದುಕೊಂಡಿದ್ದರು. ಆ ನಂಬಿಕೆ ಇಂದು ಸಿಂಧುರವರ ಗೆಲುವಿನ ರೂಪದಲ್ಲಿ ಹೊರ ಬಂದಿದೆ. ಸಿಂಧು ಆಟವನ್ನು ಅರಿತಿದ್ದ ಕಿಮ್, “ನನಗೆ ಗೊತ್ತಿತ್ತು ಅವರು ಅದ್ಭುತ ಆಟಗಾರ್ತಿ ಎಂದು. ಆದರೆ ಉನ್ನತ ಸ್ಥಾನವನ್ನು ಅಲಂಕರಿಸಲು ಅದು ಸಾಕಾಗಿರಲಿಲ್ಲ. ಈ ಆಟ ತಂತ್ರಗಾರಿಕೆ, ಹೊಡೆತ ಮತ್ತು ಬುದ್ಧಿಮತ್ತೆಯ ಒಂದು ಸರಿಯಾದ ಸಂಯೋಜನೆ. ಅದಕ್ಕಾಗಿ ತಾವು ಮತ್ತು ಗೋಪಿಚಂದ್ ಮತ್ತು ಸಿಂಧು ನಿಧಾನಗತಿಯ ಆರಂಭ ತರವಲ್ಲ. ಆದ್ದರಿಂದ ಅದರ ಬಗ್ಗೆ ಹೆಚ್ಚಿನ ಗಮನ ಹರಿಸಿದೆವು” ಎಂದಿದ್ದರು. ಅಂತೆಯೇ ಮೊನ್ನೆ ವಿಶ್ವ ಚಾಂಪಿಯನ್ಷಿಪ್ನಲ್ಲಿ ಒಕುಹರಾ ವಿರುದ್ಧ ಗೆಲುವಿನ ಪತಾಕೆ ಹಾರಿಸಿದಾಗ ಸಿಂಧುರವರ ಆಟವೇ ಹಾಗಿತ್ತು. ಆರಂಭದಿಂದಲೂ ಆಕ್ರಮಣಕಾರಿಯಾಗಿ ಆಡಿದ ಅವರು ತಮ್ಮ ಒಕುಹರಾ ವಿರುದ್ಧದ ಹಿಂದಿನ ಸೋಲಿನ ಸೇಡನ್ನು ತೀರಿಸಿಕೊಂಡರು ಎನ್ನಬಹುದು.
ಚಂದದ ಚಿನ್ನದ ಪದಕ ಏರಿಸಿಕೊಂಡು ಆಕಾಶದತ್ತ ನೋಡುತ್ತಾ ರಾಷ್ಟ್ರಗೀತೆ ಹಾಡುವಾಗ ಸಿಂಧುರವರನ್ನು ನೋಡುತ್ತಿದ್ದರೆ ರೋಮಾಂಚನವಾದ ಅನುಭವ. ಉದ್ಯೋಗ ಮಾಡಲು ಕಷ್ಟ, ಮಕ್ಕಳೇ ಬೇಡ ಎನ್ನುವ ಜಗತ್ತಿನಲ್ಲಿ ಅವಳಿಗಾಗಿ ಉದ್ಯೋಗ ಬಿಟ್ಟು, ಮಗಳ ಕನಸುಗಳ ಜೀವಿಸಿದ ತಾಯಿಗೆ ಅಮ್ಮ ನಿನಗೆ ಈ ಪದಕ ಅರ್ಪಣೆ ಎಂದಾಗ ವಿಜಯಾರಿಗೆ ಎಷ್ಟು ಖುಷಿಯಾಗಿರಬೇಡ.! ವಿದೇಶ ಪ್ರವಾಸವನ್ನು ಮುಗಿಸಿ ಬಂದ ಪ್ರಧಾನಿ ಮೋದಿಯವರು ಒಡನೆಯೇ ಸಿಂಧುರವರನ್ನು ಹೃತ್ಪೂರ್ವಕವಾಗಿ ಶ್ಲಾಘಿಸಿದ್ದಾರೆ. ನಿಜಕ್ಕೂ ಕ್ರಿಕೆಟ್ ಮೇಲೆ ಜಾಸ್ತಿ ಆಸಕ್ತಿ ಇರಿಸಿಕೊಂಡು ಭೇಷ್ ಅನ್ನುತ್ತಿದ್ದ ಭಾರತ ಬದಲಾಗುತ್ತಿದೆ. ಪ್ರತಿ ಕ್ರೀಡೆಗೂ ಒಳ್ಳೆಯ ಅವಕಾಶಗಳು ದೊರಕುತ್ತಿವೆ. ಅಲ್ಲದೆ ಸಿಂಧು ಎಲ್ಲಾ ವಿಮರ್ಶಕರಿಗೂ ತಮ್ಮ ಆಟದಿಂದಲೇ ಉತ್ತರಿಸಿದ್ದಾರೆ. ಈಗ ವಿಮರ್ಶಕರು ಹಲ್ಲು ಕಿರಿದು ಕೇಳುವ ಪ್ರಶ್ನೆ, ‘ಸಿಂಧುರವರೆ, 2020 ರ ಒಲಿಂಪಿಕ್ಸ್ಗೆ ಎಂತ?’ ಅಯ್ಯೋ, ಅವರಿಗೆ ಅವರ ಗೆಲುವನ್ನು ಆಸ್ವಾದಿಸಲು ಬಿಡಿ. ಅವರಿಗೂ ಒಂದು ಬದುಕಿದೆ. ಅಲ್ಲಿ ಶ್ರಮ, ಕನಸು ಮತ್ತು ಆಟ ಇದ್ದ ಹಾಗೆ ಒಂದು ಕುಟುಂಬ, ಖಾಸಗಿ ಬದುಕು ಎಲ್ಲ ಇದೆ. ಅದನ್ನು ಅವರೊಮ್ಮೆ ನೋಡಿ ಬರಲಿ. ಅಲ್ಲವೇ? ಪುಗಸಟ್ಟೆ ಪಂಡಿತರ ಬದುಕೇ ಅಷ್ಟು ಬಿಡಿ. ನೆರೆಗೆ ನಿಂದಕರಿರಬೇಕು. ಹೆಣ್ಣು ಮಕ್ಕಳು ಹೊರಗೆ ಹೊರಟರೆ ‘ಅವಳಿಗೆ ಓದೇ ಸಾಕು, ಆಟ ಓಟ ಯಾಕೆ?’ ಅನ್ನುತ್ತಿದ್ದ ಅಕ್ಕಪಕ್ಕದ ಮನೆಯವರು ಬಾಯಿ ಮುಚ್ಚಿಕೊಳ್ಳುವಂತೆ ಭಾರತದ ಮೂಲೆ ಮೂಲೆಗಳಿಂದ ಮಹಿಳಾ ಪ್ರತಿಭೆಗಳು ಧುಮ್ಮಿಕ್ಕುತ್ತಿದ್ದಾರೆ. ಇಂತಹ ಪ್ರತಿಯೊಂದು ವಿಶೇಷ ಗೆಲುವುಗಳು ನೂರಾರು ಹೊಸ ಕನಸುಗಳಿಗೆ ಬಲ ತುಂಬಲಿದೆ. ಹಾಗಾಗಿ ಸಿಂಧುರವರ ಸಂತತಿ ಮಹಾಸಿಂಧುವಾಗಲಿ. ತಾಯಿ ಭಾರತಿ ಅವರನ್ನು ಮನದುಂಬಿ ಹರಸಲಿ.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.