ಆರೋಗ್ಯವಂತ ವ್ಯಕ್ತಿ ದೇಶದ ಆಸ್ತಿ. ಇಂತಹ ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ರೂಪಿಸುವಲ್ಲಿ ಕ್ರೀಡೆಗಳು ವಹಿಸುವ ಪಾತ್ರ ಮಹತ್ವದ್ದಾಗಿರುತ್ತದೆ. ಕ್ರೀಡೆ ಎಂಬುದು ಮನುಷ್ಯನನ್ನು ದೈಹಿಕವಾಗಿ ಬಲಿಷ್ಠನನ್ನಾಗಿಸುವ ಚಟುವಟಿಕೆ. ಮಾತ್ರವಲ್ಲ, ಮನೋರಂಜನೆಯನ್ನು ಪಡೆಯಲು ಮನುಷ್ಯ ಕಂಡುಕೊಂಡ ಅತ್ಯುತ್ತಮ ಮಾರ್ಗವೂ ಹೌದು. ಕ್ರೀಡೆ ಮನುಷ್ಯನ ಸೋಮಾರಿತನವನ್ನು ತೊಡೆದು ಹಾಕಿ ಮನಸ್ಸು ಮತ್ತು ದೇಹಕ್ಕೆ ಹೊಸ ಚೈತನ್ಯವನ್ನು ತುಂಬುತ್ತದೆ. ಶಿಸ್ತನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತದೆ.
ಇಂದು ರಾಷ್ಟ್ರೀಯ ಕ್ರೀಡಾ ದಿನ. ಶ್ರೇಷ್ಠ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಜನ್ಮದಿನವನ್ನೇ ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. 1905 ರ ಆಗಸ್ಟ್ 29 ರಂದು ಧ್ಯಾನ್ ಚಂದ್ ಅವರು ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯಲ್ಲಿ ಜನಿಸಿದರು. ಧ್ಯಾನ್ಚಂದ್ ಅವರನ್ನು ಹಾಕಿ ಕ್ರೀಡಾ ಇತಿಹಾಸದಲ್ಲೇ ಶ್ರೇಷ್ಠ ಹಾಕಿ ಆಟಗಾರ ಎಂದು ಪರಿಗಣಿಸಲಾಗಿದೆ. ಅವರು 1928, 1932 ಮತ್ತು 1936 ರಲ್ಲಿ ಹಾಕಿಯಲ್ಲಿ ಮೂರು ಒಲಿಂಪಿಕ್ ಚಿನ್ನದ ಪದಕಗಳನ್ನು ಭಾರತಕ್ಕೆ ಜಯಿಸಿಕೊಟ್ಟಿದ್ದಾರೆ. ಅವರ ಕ್ರೀಡಾ ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆಯಾಗಿದೆ.
ಶೈಕ್ಷಣಿಕವಾಗಿ ಮಕ್ಕಳನ್ನು ತುಂಬಾ ಎತ್ತರಕ್ಕೆ ಕೊಂಡೊಯ್ಯಲು ಹಪಹಪಿಸುವ ಇಂದಿನ ಪೋಷಕರಿಗೆ ಕ್ರೀಡೆಯೆಂದರೆ ಅದೇನೋ ನಿರ್ಲಕ್ಷ್ಯ. ಕ್ರೀಡೆಗಳು ಮಕ್ಕಳ ಅಧ್ಯಯನಕ್ಕೆ ತಡೆಯುಂಟು ಮಾಡುತ್ತದೆ, ರ್ಯಾಂಕ್ ಪಡೆಯುವುದರಿಂದ ಅವರನ್ನು ವಂಚಿಸುತ್ತದೆ ಎಂಬ ತಪ್ಪು ಕಲ್ಪನೆ ಬಹುತೇಕರಲ್ಲಿದೆ. ಕ್ರೀಡೆಗಳು ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾಗುತ್ತದೆ. ಕ್ರೀಡೆಯಿಂದ ನಿರಾಸಕ್ತಿ, ಸೋಮಾರಿತನಗಳು ದೂರವಾಗುತ್ತವೆ ಮತ್ತು ಏಕಾಗ್ರತೆ, ಉತ್ಸಾಹಗಳು ಪುಟಿಯುತ್ತವೆ. ಕ್ರೀಡೆಯಿಂದ ಮಕ್ಕಳಿಗೆ ಉತ್ತಮ ಭವಿಷ್ಯ ಸಿಗುವುದಿಲ್ಲ ಎಂಬ ಭಾವನೆಯನ್ನು ತೊಡೆದು ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಕ್ರೀಡಾ ಕ್ಷೇತ್ರಕ್ಕೆ ಧುಮುಕುವಂತೆ ಮಾಡಬೇಕಾಗಿದೆ.
ವಿಸ್ತೀರ್ಣ ಮತ್ತು ಜನಸಂಖ್ಯೆ ಎರಡರಲ್ಲೂ ದೊಡ್ಡದಾಗಿರುವ ಭಾರತ ಒಲಿಂಪಿಕ್ಸ್ನಂತಹ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಮಾಡುವ ಸಾಧನೆ ತುಂಬಾ ಕಡಿಮೆ. ಕ್ರೀಡೆಯ ಬಗೆಗಿನ ಅರಿವಿನ ಕೊರತೆ, ಸೂಕ್ತ ತರಬೇತಿ ಪಡೆಯಲು ಸಾಧ್ಯವಾಗದೆ ಇರುವುದು, ಪ್ರೋತ್ಸಾಹಗಳು ಇಲ್ಲದೇ ಇರುವುದು ಭಾರತದ ಕಡಿಮೆ ಸಾಧನೆಗೆ ಪ್ರಮುಖ ಕಾರಣಗಳಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಸ್ತುತ ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯೋನ್ಮುಖಗೊಂಡಿವೆಯಾದರೂ ಇನ್ನಷ್ಟು ಶ್ರಮಗಳನ್ನು ಹಾಕುವುದು ಅತ್ಯಗತ್ಯವಾಗಿದೆ.
ಭಾರತದಲ್ಲಿ ಬಹುತೇಕ ಕ್ರೀಡಾ ಪ್ರತಿಭೆಗಳು ಗ್ರಾಮೀಣ ಭಾಗದಲ್ಲಿ ಹುಟ್ಟುತ್ತವೆ. ಆದರೆ ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಅವರಿಗೆ ಸೂಕ್ತವಾದ ತರಬೇತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ನಿಜಕ್ಕೂ ಅವರು ಭವ್ಯ ಭಾರತದ ಕ್ರೀಡಾ ರತ್ನಗಳಾಗಿ ಬೆಳೆಯುತ್ತಾರೆ.
ಪಿ.ವಿ ಸಿಂಧು, ಹಿಮಾ ದಾಸ್, ಸೈನಾ ನೆಹ್ವಾಲ್, ಸಾನಿಯಾ ಮಿರ್ಜಾ, ಅಭಿನವ್ ಬಿಂದ್ರಾ, ಮೇರಿ ಕೋಮ್, ವಿಜೇಂದರ್ ಸಿಂಗ್, ಯೋಗೇಶ್ವರ್ ದತ್ತ್ ಮುಂತಾದ ಅನೇಕ ಕ್ರೀಡಾಪಟುಗಳು ಭಾರತದ ಕೀರ್ತಿಯನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬೆಳಗಿಸಿದ್ದಾರೆ. ಭಾರತದ ಕ್ರಿಕೆಟ್ ತಂಡ ವಿಶ್ವದ ಅಗ್ರಗಣ್ಯ ತಂಡಗಳಲ್ಲಿ ಒಂದಾಗಿದೆ. ಮಹಿಳಾ ಕ್ರಿಕೆಟ್ ತಂಡವೂ ಮಿಂಚುತ್ತಿದೆ. ಭಾರತದ ಹಾಕಿ ತಂಡ ಕೂಡ ಮಹತ್ತರವಾದ ಸಾಧನೆಗಳನ್ನು ಮಾಡುತ್ತಿದೆ. ಹೀಗಿರುವಾಗ ಕ್ರೀಡೆಯಲ್ಲಿ ಉತ್ತಮ ಭವಿಷ್ಯವಿಲ್ಲ ಎಂದು ಮರುಗುವ ಬದಲು, ತಾವೇ ಕ್ರೀಡೆಯ ಭವಿಷ್ಯವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚನೆ ಮಾಡಬೇಕಿದೆ.
ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನದ ಆಚರಣೆಯನ್ನು ಪ್ರೇರಣಾದಾಯಕವಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಪ್ರತಿಷ್ಠಿತ ಪ್ರಶಸ್ತಿಗಳಾದ ಅರ್ಜುನ ಪ್ರಶಸ್ತಿ, ಧ್ಯಾನ್ ಚಂದ್ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗಳನ್ನು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಷ್ಟ್ರಪತಿಗಳು ನೀಡುತ್ತಾರೆ. ಅನೇಕ ಕ್ರೀಡಾಕೂಟಗಳು ದೇಶಾದ್ಯಂತ ಈ ದಿನ ನಡೆಯುತ್ತವೆ. ಮುಖ್ಯವಾಗಿ, ದೇಶಾದ್ಯಂತದ ಹಲವು ಶಾಲೆಗಳು ತಮ್ಮ ವಾರ್ಷಿಕ ಕ್ರೀಡಾ ದಿನವನ್ನು ಈ ದಿನದಂದೇ ಆಚರಿಸುತ್ತವೆ. ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಕ್ರೀಡೆಯ ಬಗ್ಗೆ ಗೌರವ ಮತ್ತು ಕುತೂಹಲವನ್ನು ಹುಟ್ಟುಹಾಕುವ ಉದ್ದೇಶದಿಂದ ಕ್ರೀಡಾ ದಿನದ ಆಚರಣೆ ಮಹತ್ವದ್ದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.