ನವದೆಹಲಿ: ಭಯೋತ್ಪಾದನೆಯನ್ನು ಭಾರತದ ವಿರುದ್ಧ ರಾಜತಾಂತ್ರಿಕ ಸಾಧನವನ್ನಾಗಿ ಮಾಡಿಕೊಂಡಿರುವ ಪಾಕಿಸ್ಥಾನದ ವಿರುದ್ಧ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕಿಡಿಕಾರಿದ್ದಾರೆ. ಅಲ್ಲದೇ ಪಾಕಿಸ್ಥಾನದ ಈ ಧೋರಣೆಯನ್ನು ಅವರು ವಿಚಿತ್ರ ವಿದ್ಯಮಾನ ಎಂದು ವಿಶ್ಲೇಷಿಸಿದ್ದಾರೆ. ಪಾಕಿಸ್ಥಾನ ಭಯೋತ್ಪಾದನೆಯನ್ನು ತನ್ನ ದೇಶದ ನೀತಿಯನ್ನಾಗಿಸಿಕೊಂಡಿದೆ ಮತ್ತು ಪ್ರಾದೇಶಿಕವಾಗಿ ವ್ಯಾಪಾರ ಮತ್ತು ಸಂಪರ್ಕಕ್ಕೆ ಅಡ್ಡಿಯುಂಟುಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ರಷ್ಯಾದ ಮಾಸ್ಕೋದಲ್ಲಿ ಮಾತನಾಡಿದ ಅವರು, “ಪಾಕಿಸ್ಥಾನದೊಂದಿಗಿನ ಸಮಸ್ಯೆ ತುಂಬಾ ವಿಭಿನ್ನವಾಗಿದೆ. ಇಂದು ನೀವು ಅಂತಾರಾಷ್ಟ್ರೀಯ ಸಂಬಂಧಗಳತ್ತ ನೋಡಿದರೆ, ಭಯೋತ್ಪಾದನೆಯನ್ನು ತನ್ನ ನೆರೆಯವರ ವಿರುದ್ಧ ರಾಜತಾಂತ್ರಿಕ ಸಾಧನವಾಗಿ ಬಳಸಿಕೊಂಡ ವಿಶ್ವದ ಯಾವುದೇ ದೇಶವನ್ನು ಕಾಣಲು ಸಾಧ್ಯವಿಲ್ಲ. ಆದರೆ ಪಾಕಿಸ್ಥಾನ ಭಾರತದ ವಿರುದ್ಧ ಭಯೋತ್ಪಾದನೆಯನ್ನು ರಾಜತಾಂತ್ರಿಕ ಸಾಧನವನ್ನಾಗಿ ಮಾಡಿಕೊಂಡಿದೆ, ಇದು ಬಹಳ ವಿಚಿತ್ರವಾದ ವಿದ್ಯಮಾನವಾಗಿದೆ” ಎಂದಿದ್ದಾರೆ.
ಜೈಶಂಕರ್ ಪ್ರಸ್ತುತ ಎರಡು ದಿನಗಳ ಮಾಸ್ಕೋ ಪ್ರವಾಸದಲ್ಲಿದ್ದು, ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಉತ್ತೇಜಿಸಲು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮುಂಬರುವ ರಷ್ಯಾ ಪ್ರವಾಸಕ್ಕೆ ವೇದಿಕೆಯನ್ನು ಸಿದ್ಧಪಡಿಸಲು ಅವರು ಈ ಪ್ರವಾಸವನ್ನು ಕೈಗೊಂಡಿದ್ದಾರೆ. ಬುಧವಾರ ಅವರು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರನ್ನು ಭೇಟಿ ಮಾಡಲಿದ್ದಾರೆ.
ವಾಲ್ಡೈ ಡಿಸ್ಕಶನ್ ಕ್ಲಬ್ನಲ್ಲಿ ಮಾತನಾಡಿದ ಅವರು, ಭಾರತ ಪಾಕಿಸ್ಥಾನಕ್ಕೆ ಪರಮಾಪ್ತ ಸ್ಥಾನಮಾನವನ್ನು ನೀಡಿದ್ದರೂ ಕೂಡ ಪಾಕಿಸ್ಥಾನ ಮಾತ್ರ ಭಾರತಕ್ಕೆ ಪರಮಾಪ್ತ (ಮೋಸ್ಟ್ ಫೇವರ್ಡ್ ನೇಷನ್) ಸ್ಥಾನಮಾನವನ್ನು ನೀಡಲು ನಿರಾಕರಿಸಿದ್ದ ಬಗ್ಗೆ ಅವರು ಇಲ್ಲಿ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಫೆಬ್ರವರಿ 14 ರಂದು ಪಾಕಿಸ್ಥಾನ ಮೂಲದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ನಡೆಸಿದ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಭಾರತ ಪಾಕಿಸ್ಥಾನಕ್ಕೆ ನೀಡಿದ್ದ ಈ ಸ್ಥಾನಮಾನವನ್ನು ಹಿಂತೆಗೆದುಕೊಂಡಿತ್ತು.
ಭಾರತ ಮತ್ತು ಅಫ್ಘಾನಿಸ್ಥಾನದ ನಡುವಿನ ಸಂಪರ್ಕಕ್ಕೂ ಪಾಕಿಸ್ಥಾನ ಅಡ್ಡಿಯಾಗುತ್ತಿದೆ ಎಂದು ಜೈಶಂಕರ್ ಆರೋಪಿಸಿದ್ದಾರೆ. ತಮ್ಮ ನಡುವಣ ಸಂಪರ್ಕವನ್ನು ಹೆಚ್ಚಿಸಲು ಭಾರತ ಮತ್ತು ಅಫ್ಘಾನಿಸ್ಥಾನವು ಏರ್ ಕಾರಿಡಾರ್ ಅನ್ನು ಪ್ರಾರಂಭಿಸಿದ್ದು, ಇದನ್ನು ಎರಡೂ ದೇಶಗಳ ಅನೇಕ ನಗರಗಳಿಗೆ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
“ಹೀಗಾಗಿ, ನಿಮ್ಮೊಂದಿಗೆ ಸಹಜವಾಗಿ ವ್ಯಾಪಾರ ಮಾಡದ, ಸಂಪರ್ಕವನ್ನು ಅನುಮತಿಸದ, ಭಯೋತ್ಪಾದನೆಯನ್ನು ನಿಮ್ಮ ಮೇಲೆ ಒತ್ತಡ ಹೇರುವ ಸಾಧನವಾಗಿ ಬಳಸುವ ನೆರೆಹೊರೆಯವರನ್ನು ನೀವು ಹೊಂದಿದ್ದೀರಿ ಎಂದರೆ ಅದು ಸಾಮಾನ್ಯ ವಿಷಯವಲ್ಲ. ನಮಗೆ ಅಲ್ಲಿ ಕೆಲವು ವಿಶಿಷ್ಟ ಸಮಸ್ಯೆಗಳು ಇವೆ. ನಾವು ಅದರೊಂದಿಗೆ ವ್ಯವಹರಿಸುವ ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.